ಪಶ್ಚಿಮಘಟ್ಟಕ್ಕೆ ಉರುಳು

ಮಂಗಳೂರು: ರಾಜ್ಯ ಸರ್ಕಾರದ ವರದಿ ಪರಿಗಣಿಸದೆ ಪಶ್ಚಿಮಘಟ್ಟ ವ್ಯಾಪ್ತಿಗೆ ಒಳಪಡುವ ಜನವಸತಿ ಪ್ರದೇಶವನ್ನೂ ‘ಪರಿಸರ ಸೂಕ್ಷ್ಮ ಪ್ರದೇಶ’ವೆಂದು ಗುರುತಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಕರಡು ಅಧಿಸೂಚನೆ ಪಶ್ಚಿಮಘಟ್ಟದ 10 ಜಿಲ್ಲೆಗಳ ಜನರಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ. ಆತಂಕಕ್ಕೊಳಗಾಗಿರುವ ಜನ ಹೋರಾಟಕ್ಕೆ ಸಿದ್ಧರಾಗುತ್ತಿದ್ದಾರೆ.

ಕೇಂದ್ರ ಪರಿಸರ, ಅರಣ್ಯ, ಹವಾಮಾನ ಬದಲಾವಣೆ ಸಚಿವಾಲ ಯವು ಫೆ.27 ರಂದು ಈ ಅಧಿಸೂಚನೆ ಪ್ರಕಟಿಸಿದೆ. ರಾಜ್ಯದ 1553ಕ್ಕೂ ಹೆಚ್ಚು ಹಳ್ಳಿಗಳ 20,668 ಚದರ ಕಿ.ಮೀ. ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶ(ಇಎಸ್​ಎ)ದಲ್ಲಿ ಸೇರಿದೆ. ಮೊದಲ ಎರಡು ಕರಡು ಅಧಿಸೂಚನೆಯಲ್ಲಿ ಕೇರಳ ರಾಜ್ಯವೂ ಇಎಸ್​ಎ ಪಟ್ಟಿಯಲ್ಲಿತ್ತು. ಆದರೆ ಮೂರನೇ ಬಾರಿ ಹೊರಡಿಸಿರುವ ಅಧಿಸೂಚನೆಯಲ್ಲಿ ಕೇರಳ ಇಲ್ಲ. ಇದಕ್ಕೆ ಕಾರಣ, ಅಲ್ಲಿನ ಸರ್ಕಾರ ಸಲ್ಲಿಸಿರುವ ಮ್ಯಾಪ್​ಸಹಿತ ವಿಸõತ ವರದಿ ಮತ್ತು ಈ ಸಂಬಂಧ ರಾಜಕೀಯ ಒತ್ತಡ ಹೇರಿತ್ತು. ಆದರೆ ಕರ್ನಾಟಕ ಸರ್ಕಾರ ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಸಿಲ್ಲ. ಕೆಲವೇ ಪುಟಗಳ ವರದಿಯನ್ನು ಕಾಟಾಟಾರಕ್ಕೆಂಬಂತೆ ವಿಳಂಬವಾಗಿ ಸಲ್ಲಿಸಿದೆ ಎಂಬ ಆರೋಪ ಹಿಂದಿನಿಂದಲೂ ಇದೆ.

ಮತ್ತೆ ಆಕ್ಷೇಪಣೆ: ಈ ಅಧಿಸೂಚನೆ ವಿರುದ್ಧ ಕೇಂದ್ರಕ್ಕೆ ಮತ್ತೆ ಆಕ್ಷೇಪಣೆ ಸಲ್ಲಿಸಲಾಗುವುದು. ಜನತೆಗೆ ತೊಂದರೆಯಾಗದಂತೆ ರಾಜ್ಯ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.

ಬೀಸೋ ದೊಣ್ಣೆ ತಪ್ಪಿಸುವ ಯತ್ನವೇ?: ಕೇಂದ್ರ ಸರ್ಕಾರ ಮೊದಲ ಕರಡು ಅಧಿಸೂಚನೆ ಹೊರಡಿಸಿದ್ದು 2014ರ ಮಾ.10ರಂದು. ನಂತರ ಎರಡನೇ ಕರಡು ಅಧಿಸೂಚನೆಯನ್ನು 2015ರ ಸೆ.4ರಂದು ಹೊರಡಿಸಿತ್ತು. ಮೂರನೇ ಕರಡು ಅಧಿಸೂಚನೆಯನ್ನು 2017ರ ಫೆ.27ರಂದು ಹೊರಡಿಸಿದೆ. ಇಷ್ಟಾದರೂ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸುತ್ತಿಲ್ಲ. ಜನವಿರೋಧ ಕಟ್ಟಿಕೊಳ್ಳುವ ಬದಲು 545 ದಿನಗಳ ಗಡುವು ಸಮೀಪಿಸುತ್ತಿದ್ದಂತೆ ಹೊಸ ಕರಡು ಅಧಿಸೂಚನೆ ಹೊರಡಿಸಲಾಗುತ್ತಿದೆ.

ಅಧಿಸೂಚನೆಯಲ್ಲೇನಿದೆ?

  • ಸೂಕ್ಷ್ಮಪ್ರದೇಶವೆಂದು ಗುರುತಿಸಲಾಗಿರುವ ಪಶ್ಚಿಮಘಟ್ಟದಲ್ಲಿ ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಮರಳು ಗಣಿಗಾರಿಕೆಗಳಿಗೆ ಪೂರ್ಣ ನಿಷೇಧ. ಇರುವ ಗಣಿಗಾರಿಕೆ ಮುಚ್ಚಲು 5 ವರ್ಷ ಕಾಲಾವಕಾಶ.
  • ಕೆಂಪು ವಲಯದ ಕೈಗಾರಿಕೆಗಳಿಗೆ ಪೂರ್ಣ ನಿಷೇಧ. ಕಿತ್ತಳೆ ವಲಯ ಕೈಗಾರಿಕೆಗಳಲ್ಲಿ ಆಹಾರ, ಹಣ್ಣು ಸಂಸ್ಕರಣಾ ಕೈಗಾರಿಕೆಗಳಿಗೆ ವಿನಾಯಿತಿ.
  • 20 ಸಾವಿರ ಚದರ ಮೀಟರ್​ಗಿಂತ ಅಧಿಕ ವಿಸ್ತಾರದ ಬಡಾವಣೆ, ಟೌನ್​ಶಿಪ್ ಮತ್ತು ಕಟ್ಟಡಗಳಿಗೆ ನಿಷೇಧ.
  • ಉಷ್ಣ ಸ್ಥಾವರಗಳಿಗೆ ಅವಕಾಶವಿಲ್ಲ, ಕೆಲವು ಷರತ್ತುಗಳ ಮೇಲೆ ಜಲವಿದ್ಯುತ್ ಯೋಜನೆಗಳಿಗೆ ಅವಕಾಶ.
  • ಕಡಿಮೆ ನೀರಿನ ಹರಿವು ಸಮಯದಲ್ಲಿ ಕೂಡ ಶೇ.30 ಜೀವಿ ಪರಿಸರಾತ್ಮಕ ಹರಿವಿರುವಂತೆ ನೋಡಿಕೊಳ್ಳುವುದು.
  • ನದಿಯ ಹರಿವು, ಅರಣ್ಯ, ಜೀವ ವೈವಿಧ್ಯತೆಯ ಮೇಲೆ ಬೀರುವ ಪರಿಣಾಮ, ನಷ್ಟದ ಬಗ್ಗೆ ಅಧ್ಯಯನ ಬಳಿಕವೇ ಯಾವುದೇ ಯೋಜನೆಗೆ ಅವಕಾಶ.

ಉತ್ತರಕನ್ನಡ ಜಿಲ್ಲೆಯಲ್ಲೇ 600 ಹಳ್ಳಿ!

ಕಾರವಾರ: ಉತ್ತರಕನ್ನಡ ಜಿಲ್ಲೆಯ 600ಕ್ಕೂ ಅಧಿಕ ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೊಷಿಸಿ ಕೇಂದ್ರ ಪರಿಸರ ಮಂತ್ರಾಲಯ ಕರಡು ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆ ಜಾರಿಯಾದಲ್ಲಿ ಜಿಲ್ಲೆಯಲ್ಲಿ ಯಾವುದೇ ಕೈಗಾರಿಕೆಗಳು ಬರಲು ಸಾಧ್ಯವಿಲ್ಲ. ರಸ್ತೆ, ಕಟ್ಟಡಗಳ ನಿರ್ವಣಕ್ಕೂ ಪರವಾನಗಿ ಪಡೆಯುವ ಅನಿವಾರ್ಯತೆ ಎದುರಾಗಲಿದೆ. ಪರಿಸರ ಪ್ರವಾಸೋದ್ಯಮಕ್ಕೂ ಹಿನ್ನಡೆಯಾಗುವ ಆತಂಕ ಕಾಡಿದೆ. ಕಾರವಾರ ತಾಲೂಕಿನ 43, ಭಟ್ಕಳದ 26, ಅಂಕೋಲಾದ 43, ಹೊನ್ನಾವರದ 44, ಜೊಯಿಡಾದ 96, ಶಿರಸಿಯ 123, ಸಿದ್ದಾಪುರದ 103, ಯಲ್ಲಾಪುರದ 88. ಕುಮಟಾದ 36 ಗ್ರಾಮಗಳು ಸೇರಿವೆ.

 ಪ್ರಾಣಿ, ಪಕ್ಷಿ, ಮರಗಳಂತೆ ಮನುಷ್ಯನಿಗೂ ಜೀವನ ನಡೆಸಲು ಅವಕಾಶವಿರಬೇಕು. ಕಸ್ತೂರಿರಂಗನ್ ವರದಿ ಜಾರಿಯಾದರೆ ಕಾಡಿನಲ್ಲೇ ವಾಸಿಸುವ ಮಲೆನಾಡಿಗರ ಬದುಕನ್ನೇ ಕಸಿದುಕೊಂಡಂತಾಗುತ್ತದೆ. ಹೀಗೆ ಮಾಡುವ ಬದಲು ನಮ್ಮನ್ನು ಸಮುದ್ರಕ್ಕೆ ನೂಕಲಿ. ವರದಿ ಅನುಷ್ಠಾನ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ರೂಪಿಸಲಾಗುವುದು.

| ಕಾಗೋಡು ತಿಮ್ಮಪ್ಪ, ಕಂದಾಯ ಸಚಿವ

 

ಕೇಂದ್ರದ ಕರಡು ಅಧಿಸೂಚನೆಯಲ್ಲಿ ಜಿಲ್ಲೆಯ ಜನರಿಗೆ ಸಮಸ್ಯೆಯಾಗುವ ಅಂಶಗಳಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಕೇಂದ್ರಕ್ಕೆ ನಿಯೋಗ ತೆರಳಿ ವಾಸ್ತವ ಸಂಗತಿ ಮನವರಿಕೆ ಮಾಡಿಕೊಡಲಾಗುವುದು. ರಾಜ್ಯದ ವರದಿ ಪರಿಗಣಿಸದಿರಲು ಕಾರಣ ತಿಳಿಯಬೇಕಾಗಿದೆ.

| ನಳಿನ್​ಕುಮಾರ್ ಕಟೀಲು ಸಂಸದ

Leave a Reply

Your email address will not be published. Required fields are marked *