ಪಶು ವೈದ್ಯಕೀಯ ಪಾಲಿ ಕ್ಲಿನಿಕ್ ಶೀಘ್ರ

ಶಿವರಾಜ ಎಂ. ಬೆಂಗಳೂರು

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸುಸಜ್ಜಿತ ಪಶು ವೈದ್ಯಕೀಯ ಪಾಲಿ ಕ್ಲಿನಿಕ್ ಆರಂಭಕ್ಕೆ ಹಿಡಿದಿದ್ದ ಗ್ರಹಣ ದೂರವಾಗಿದೆ. ಜಿಲ್ಲೆಯ ಜನರ ಬಹುದಿನದ ಬೇಡಿಕೆಗೆ ಜಿಲ್ಲಾಡಳಿತ ಸ್ಪಂದಿಸಿದ್ದು, ಕ್ಲಿನಿಕ್ ಆರಂಭಕ್ಕೆ ರೂಪುರೇಷೆ ಸಿದ್ಧವಾಗುತ್ತಿದೆ.

ಜಿಲ್ಲೆಯಲ್ಲಿ ಹೈಟೆಕ್ ಪಶು ವೈದ್ಯಕೀಯ ಪಾಲಿ ಕ್ಲಿನಿಕ್ ತೆರೆಯಬೇಕೆಂದು ರೈತರು ಪಶುಪಾಲನಾ ಮತ್ತು ಪಶುಸಂಗೋಪನಾ ಇಲಾಖೆ ಕದ ತಟ್ಟುತ್ತಲೇ ಇದ್ದರೂ ಕಾರ್ಯರೂಪಕ್ಕೆ ಬರಲು ಸಾಕಷ್ಟು ಅಡೆತಡೆಗಳು ಎದುರಾಗಿದ್ದವು. ಟೆಂಡರ್ ಪ್ರಕ್ರಿಯೆಯಲ್ಲಿ ತೊಡಕು, ಸ್ಥಳಾವಕಾಶದ ಕೊರತೆ ಮತ್ತಿತರ ಕಾರಣಗಳಿಂದ ಯೋಜನೆ ನನೆಗುದಿಗೆ ಬಿದ್ದಿತ್ತು. ಈಗ ದೇವನಹಳ್ಳಿ-ಸೂಲಿಬೆಲೆ ರಸ್ತೆಯಲ್ಲಿ ಸ್ಥಳ ಗುರುತಿಸಲಾಗಿದ್ದು, ಜಿಲ್ಲಾಧಿಕಾರಿಗಳಿಂದಲೂ ಗ್ರಿನ್ ಸಿಗ್ನಲ್ ದೊರೆತಿದೆ. ಪಶುಪಾಲನೆ ಮತ್ತು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಕ್ಲಿನಿಕ್ ಆರಂಭಕ್ಕೆ ರೂಪುರೇಷೆ ಸಿದ್ಧಪಡಿಸುತ್ತಿದ್ದು, ಶೀಘ್ರದಲ್ಲೇ ಜಿಲ್ಲೆಗೆ ಮೊದಲ ಪಾಲಿ ಕ್ಲಿನಿಕ್ ಕಾಲಿಡುವ ಶುಭಗಳಿಗೆ ಹತ್ತಿರವಾಗುತ್ತಿದೆ.

3 ಕೋಟಿ ರೂ. ಅನುದಾನ: ಪಶು ವೈದ್ಯಕೀಯ ಪಾಲಿ ಕ್ಲಿನಿಕ್​ನಲ್ಲಿ ಇದಕ್ಕೆಂದೇ ಪ್ರತ್ಯೇಕ ಉಪನಿರ್ದೇಶಕರ ಜತೆಗೆ ಮುಖ್ಯ ಪಶು ವೈದ್ಯಾಧಿಕಾರಿ, ವೈದ್ಯಕೀಯ ಪರೀಕ್ಷಕರು ಸೇರಿ ಸುಮಾರು ಐವರು ಸಿಬ್ಬಂದಿ ನಿಯೋಜನೆಗೊಳ್ಳಲಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಸುಸಜ್ಜಿತ ಪಶುವೈದ್ಯಕೀಯ ಪಾಲಿ ಕ್ಲಿನಿಕ್ ತೆರೆಯಲು 3 ಕೋಟಿ ರೂ. ಅನುದಾನವಿದ್ದು, ಸುಸಜ್ಜಿತ ಲ್ಯಾಬ್, ಎಕ್ಸ್​ರೇ ಕೊಠಡಿ, ಔಷಧ ಸ್ಟೋರೇಜ್, ರೋಗಪತ್ತೆ ಸಾಧನ, ಶಸ್ತ್ರಚಿಕಿತ್ಸೆ ಮತ್ತಿತರ ಸಕಲ ಸೌಲಭ್ಯ ಕಲ್ಪಿಸುವ ಯೋಜನೆಗೆ ನೀಲಿನಕ್ಷೆ ಸಿದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮರು ಟೆಂಡರ್: ಈ ಹಿಂದೆ ದೇವನಹಳ್ಳಿ ತಾಲೂಕು ತೆಲ್ಲೋಹಳ್ಳಿಯಲ್ಲಿ ಪಶು ವೈದ್ಯಕೀಯ ಪಾಲಿ ಕ್ಲಿನಿಕ್ ಆರಂಭಿಸುವ ಬಗ್ಗೆ ಸಿದ್ಧತೆ ನಡೆದಿತ್ತು. ಆದರೆ ಇಲ್ಲಿ ಗುರುತಿಸಿದ ಜಾಗ ಕೇವಲ 6 ಗುಂಟೆಯಾದ್ದರಿಂದ ಸುಸಜ್ಜಿತ ಪಾಲಿ ಕ್ಲಿನಿಕ್ ಆರಂಭಕ್ಕೆ ಸ್ಥಳಾವಕಾಶದ ಕೊರತೆಯಾಗಿತ್ತು. ಕನಿಷ್ಠ 9 ಗುಂಟೆಯಾದರೂ ಅಗತ್ಯವಿರುವುದರಿಂದ ಜಾಗ ಹುಡುಕಾಟ ಮುಂದುವರಿದಿತ್ತು. ಈ ವೇಳೆ ಟೆಂಡರ್ ಕರೆಯಲಾಗಿತ್ತಾದರೂ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು. ಈಗ ಜಾಗ ಗುರುತಿಸಲಾಗಿದ್ದು, ಮರು ಟೆಂಡರ್ ಕರೆಯಲು ಇಲಾಖೆ ಸಿದ್ಧತೆ ನಡೆಸಿದೆ.

ಪ್ರತಿ ಜಿಲ್ಲಾ ಕೇಂದ್ರಕ್ಕೂ ಕ್ಲಿನಿಕ್: 2012ರ ಡಿಸೆಂಬರ್​ನಲ್ಲಿ ಪಶು ಸಂಗೋಪನಾ ಇಲಾಖೆಯಿಂದ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಪಾಲಿ ಕ್ಲಿನಿಕ್ ಆರಂಭಿಸಲು ಸರ್ಕಾರ ಯೋಜನೆ ರೂಪಿಸಿತ್ತು. ಪಶು ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದಂತೆ ಪ್ರತಿ ಜಿಲ್ಲೆಯಲ್ಲೂ ಸುಸಜ್ಜಿತ ಕ್ಲಿನಿಕ್ ತೆರೆದು ಜಾನುವಾರುಗಳ ಆರೈಕೆ, ರೋಗಪತ್ತೆ ಜತೆಗೆ ಶಸ್ತ್ರಚಿಕಿತ್ಸೆ ಮತ್ತಿತರ ಸೇವೆಯ ಮಹತ್ವಾಕಾಂಕ್ಷೆ ಹೊಂದಿತ್ತು.

ಪ್ರಾಣಿ ದೇಹದ ಭಾಗಗಳ ಎಕ್ಸ್​ರೇ ತೆಗೆದು ಅವುಗಳ ನೋವಿಗೆ ನಿಖರ ಕಾರಣ ಅರಿಯಲು ಸಾಧ್ಯವಾಗಲು ಪ್ರತಿ ಕ್ಲಿನಿಕ್​ನಲ್ಲಿ ದೊಡ್ಡ ಎಕ್ಸ್​ರೇ ಘಟಕ ಕಲ್ಪಿಸಲು ಉದ್ದೇಶಿಸಲಾಗಿದೆ. ರಕ್ತ ಸಂಬಂಧಿ ಕಾಯಿಲೆ ಪತ್ತೆಗೆ ಪ್ರಯೋಗಾಲಯ, ಶಸ್ತ್ರಚಿಕಿತ್ಸೆ ಕೊಠಡಿ ಮತ್ತಿತರ ಸೌಲಭ್ಯ ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

 

ಕ್ಲಿನಿಕ್ ಆರಂಭಕ್ಕೆ ದೇವನಹಳ್ಳಿಯಿಂದ ಸುಮಾರು 1.5 ಕಿಮೀ ದೂರದ ಸೂಲಿಬೆಲೆ ಮಾರ್ಗದಲ್ಲಿ ಸ್ಥಳ ಗುರುತಿಸಲಾಗಿದ್ದು, ಮುಂದಿನ ಕ್ರಮಕೈಗೊಳ್ಳಲಾಗುತ್ತಿದೆ.

| ಬಾಲಚಂದರ್, ಉಪ ನಿರ್ದೇಶಕ, ಪಶುಪಾಲನ ಮತ್ತು ಪಶುಸಂಗೋಪನಾ ಇಲಾಖೆ

ಪಶು ವೈದ್ಯಕೀಯ ಪಾಲಿ ಕ್ಲಿನಿಕ್ ತೆರೆಯಲು ಕನಿಷ್ಠ 9 ಗುಂಟೆ ಸ್ಥಳಾವಕಾಶದ ಅವಶ್ಯಕತೆ ಇದೆ. ಪ್ರಸ್ತುತ ದೇವನಹಳ್ಳಿಯ ತೆಲ್ಲೋಹಳ್ಳಿಯಲ್ಲಿ 6 ಗುಂಟೆಯಷ್ಟೆ ಇದೆ. ಆದ್ದರಿಂದ ಬೇರೆ ಕಡೆ ಪಾಲಿ ಕ್ಲಿನಿಕ್ ಆರಂಭಕ್ಕೆ ಕ್ರಮಕೈಗೊಳ್ಳಲಾಗುತ್ತಿದೆ.

| ಡಾ.ರಮೇಶ್, ಸಹಾಯಕ ನಿರ್ದೇಶಕ, ಪಶುಪಾಲನ ಮತ್ತು ಪಶುಸಂಗೋಪನಾ ಇಲಾಖೆ, ದೇವನಹಳ್ಳಿ ತಾಲೂಕು

Leave a Reply

Your email address will not be published. Required fields are marked *