More

    ಪಶು ಆಸ್ಪತ್ರೆಗಳಲ್ಲಿ ಔಷಧ ಕೊರತೆ:ಸದನದಲ್ಲಿ ಗಮನ ಸೆಳೆದ ಶಾಸಕ ಸ್ವರೂಪ್ ಪ್ರಕಾಶ್

    ಹಾಸನ: ಹಾಸನ ಜಿಲ್ಲೆ ಎಂಟು ತಾಲೂಕುಗಳಿಗೆ ಕಳೆದ ಸೆಪ್ಟೆಂಬರ್‌ನಲ್ಲಿ ಪಶು ಆಸ್ಪತ್ರೆಗಳಿಗೆ ಅಗತ್ಯ ಔಷಧಗಳನ್ನು ಸರಬರಾಜು ಮಾಡಲಾಗಿದೆ. ಜಿಲ್ಲೆಯ ಪಶು ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಇರುವುದು ಸರ್ಕಾರದ ಗಮನಕ್ಕೆ ಬಂದಿಲ್ಲ ಎಂದು ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ತಿಳಿಸಿದರು.
    ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಶಾಸಕ ಸ್ವರೂಪ್ ಪ್ರಕಾಶ್ ಅವರು, ಹಾಸನ ಜಿಲ್ಲೆಯಾದ್ಯಂತ ಇರುವ ಪಶು ಆಸ್ಪತ್ರೆಗಳಲ್ಲಿ ಔಷಧ ಕೊರತೆ ಇರುವುದು ನಿಜವೇ? ಪ್ರತಿಯೊಂದು ಪಶು ಆಸ್ಪತ್ರೆಗೆ ಕಳೆದ 6 ತಿಂಗಳಿಂದ ಸರಬರಾಜು ಮಾಡಿರುವ ಔಷಧಗಳ ಎಷ್ಟು ಎಂದು ಕೇಳಿದ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿದ್ದಾರೆ.
    ಜಿಲ್ಲೆಯಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡ ಹಿನ್ನೆಲೆ ಸದರಿ ರೋಗ ನಿಯಂತ್ರಣ ಮಾಡಲು ಹಾಗೂ ದಿನನಿತ್ಯದ ತುರ್ತು ಚಿಕಿತ್ಸೆಗೆ ಅವಶ್ಯವಿದ್ದ ಬೇವಿನ ಎಣ್ಣೆ, ಹೊಂಗೆ ಎಣ್ಣೆ ಮತ್ತು ಮಿನರಲ್ ಸಪ್ಲಿಮೆಂಟ್‌ಗಳನ್ನು ಜಿಲ್ಲೆಯ 8 ತಾಲೂಕುಗಳಿಗೆ ಕಳೆದ ಜೂನ್‌ನಲ್ಲೇ ಸರಬರಾಜು ಮಾಡಲಾಗಿದೆ ಎಂದರು.
    ಜಾನುವಾರು ಆರೋಗ್ಯ ಶಿಬಿರಗಳಿಗೆ ಕಳೆದ ಅಕ್ಟೋಬರ್‌ನಲ್ಲಿ ಎಂಟು ತಾಲೂಕುಗಳಿಗೂ ಔಷಧ ವಿತರಿಸಲಾಗಿದೆ. ಜಿಲ್ಲಾ ಪಂಚಾಯತಿ ಅನುದಾನದಡಿ ಎರಡು ತ್ರೈಮಾಸಿಕದಲ್ಲಿ 90 ಲಕ್ಷ ರೂ. ಅನುದಾನದಲ್ಲಿ ಜಿಲ್ಲೆಯ ಎಲ್ಲಾ ಪಶು ವೈದ್ಯಕೀಯ ಸಂಸ್ಥೆಗಳ ದಿನನಿತ್ಯದ ಹಾಗೂ ತುರ್ತು ಚಿಕಿತ್ಸೆಗೆ ಅವಶ್ಯವಿರುವ ಔಷಧ ಖರೀದಿಸಲು ಅನುಮೋದನೆ ದೊರೆತಿದ್ದು, ಔಷಧಗಳ ಸರಬರಾಜಿಗೆ ಆದೇಶ ಸಹ ನೀಡಲಾಗಿದೆ. ಈ ಪೈಕಿ ಶೇ.80ರಷ್ಟು ಔಷಧ ಸರಬರಾಜಾಗಿದೆ. ಸದರಿ ಔಷಧಗಳನ್ನು ಶೀಘ್ರದಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
    ಜಿಲ್ಲೆಯ ಔಷಧ ಕೊರತೆ ಹಾಗೂ ಸಮರ್ಪಕ ಸಿಬ್ಬಂದಿ ವ್ಯವಸ್ಥೆ ಮಾಡಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂಬ ಶಾಸಕರ ಮತ್ತೊಂದು ಪ್ರಶ್ನೆಗೆ, 2023-24 ನೇ ಸಾಲಿನಲ್ಲಿ ನಿಗದಿಯಾಗಿರುವ 1285 ಲಕ್ಷ ರೂ. ಅನುದಾನ ಹಾಗೂ ಜಿಪಂ ಲೆಕ್ಕ ಶೀರ್ಷಿಕೆಯಡಿ ನಿಗದಿಯಾಗಿರುವ 5647 ಲಕ್ಷ ಅನುದಾನದಲ್ಲಿ ರಾಜ್ಯದ ಎಲ್ಲಾ ಪಶು ವೈದ್ಯ ಸಂಸ್ಥೆಗಳಿಗೆ ಔಷಧ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಖಾಲಿ ಇರುವ ಪಶು ವೈದ್ಯರ ಹುದ್ದೆಗಳಿಗೆ ಅಧಿಕ ಪ್ರಭಾರ ವ್ಯವಸ್ಥೆ ಮಾಡಿ ರೈತರಿಗೆ ತೊಂದರೆ ಆಗದ ರೀತಿಯಲ್ಲಿ ಸೇವೆ ನೀಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
    ಇಲಾಖೆಯಲ್ಲಿ 400 ಪಶು ವೈದ್ಯಾಧಿಕಾರಿಗಳ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಸರ್ಕಾರ, ಕಳೆದ ಜೂನ್ 30 ರಂದು ಕರ್ನಾಟಕ ಲೋಕಾ ಸೇವಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಬಗ್ಗೆ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದ್ದು, ಅದು ಇತ್ಯರ್ಥವಾದ ಕೂಡಲೇ ಆದ್ಯತೆ ಮೇರೆಗೆ ಭರ್ತಿ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
    ಹಾಗೆಯೇ ಹಾಸನ ಜಿಲ್ಲೆಗೆ 13 ಕಿರಿ ಪಶು ವೈದ್ಯಕೀಯ ಪರೀಕ್ಷಕರ ಹುದ್ದೆ ಭರ್ತಿ ಮಾಡಲಾಗಿದೆ. ಹಿರಿಯ ಪಶು ವೈದ್ಯಕೀಯ ಪರೀಕ್ಷಕರು ಮತ್ತು ಪಶು ವೈದ್ಯಕೀಯ ಪರೀಕ್ಷಕರ ಹುದ್ದೆಗಳನ್ನು ಮುಂಬಡ್ತಿ ಮೂಲಕ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಖಾಲಿ ಇರುವ ಡಿ ದರ್ಜೆ ಹುದ್ದೆಗಳಿಗೆ ಬದಲಾಗಿ ಜಿಲ್ಲೆಗೆ ಸಂಬಂಧಿಸಿದಂತೆ 141 ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಪಡೆಯಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts