ಪವನ್ ಲವ್​ಸ್ಟೋರಿಯಲ್ಲಿ ಇಶಾನ್ ಆಶಿಕಾ

ಬೆಂಗಳೂರು: ‘ನಟಸಾರ್ವಭೌಮ’ ಸಿನಿಮಾ ಬಳಿಕ ನಿರ್ದೇಶಕ ಪವನ್ ಒಡೆಯರ್ ಏನು ಮಾಡುತ್ತಿದ್ದಾರೆ ಎಂಬುದಕ್ಕೆ ಇತ್ತೀಚೆಗಷ್ಟೇ ಉತ್ತರ ಸಿಕ್ಕಿತ್ತು. ನಿರ್ವಪಕ ಸಿ.ಆರ್. ಮನೋಹರ್ ಸಂಬಂಧಿ ಇಶಾನ್​ಗೆ ಪವನ್ ಸಿನಿಮಾ ಮಾಡಲಿದ್ದಾರೆ ಎಂಬ ವಿಷಯ ಬಹಿರಂಗವಾಗಿತ್ತು. ಈಗ ಆ ಚಿತ್ರಕ್ಕೆ ನಾಯಕಿ ಆಯ್ಕೆಯೂ ಅಂತಿಮವಾಗಿದೆ. ಹಲವು ಸಿನಿಮಾಗಳಲ್ಲಿ ಬಿಜಿ ಆಗಿರುವ ನಟಿ ಆಶಿಕಾ ರಂಗನಾಥ್ ಮೊದಲ ಬಾರಿ ಪವನ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದು, ಇಶಾನ್​ಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಅಂದಹಾಗೆ, ನಿರ್ದೇಶಕ ಪವನ್ ‘ಗೂಗ್ಲಿ’ ಬಳಿಕ ಪೂರ್ಣ ಪ್ರಮಾಣದ ಲವ್​ಸ್ಟೋರಿ ಮಾಡಿಲ್ಲವಂತೆ. ಅಂಥ ಸಿನಿಮಾ ಮಾಡುವಂತೆ ಹಲವರಿಂದ ಸಲಹೆಗಳು ಬಂದಿದ್ದರಿಂದಲೇ ಈಗ ಲವ್​ಸ್ಟೋರಿಯನ್ನೇ ಆಯ್ದುಕೊಂಡಿದ್ದಾರೆ. ‘ಆರು ವರ್ಷದ ಹಿಂದೆ ‘ಗೂಗ್ಲಿ’ ಸಿನಿಮಾ ತೆರೆಕಂಡಿತ್ತು. ಅದಾದ ಬಳಿಕ ನಾನು ಲವ್​ಸ್ಟೋರಿ ಬದಿಗಿಟ್ಟು ಬೇರೆ ಬೇರೆ ಶೈಲಿಯ ಸಿನಿಮಾ ಮಾಡಿದೆ. ಈಗ ಮತ್ತೆ ಪ್ರೀತಿ ಪ್ರೇಮದ ಬಗ್ಗೆ ಫ್ರೆಶ್ ಕಥೆ ಆಯ್ದುಕೊಂಡಿದ್ದೇನೆ’ ಎನ್ನುವ ಪವನ್, ಸಿನಿಮಾಕ್ಕೆ ಸಂಬಂಧಿಸಿದ ಚಿತ್ರೀಕರಣ ಪೂರ್ವ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಕಥೆಯನ್ನೂ ಅಂತಿಮ ಮಾಡಿಕೊಂಡಿದ್ದು, ಚಿತ್ರಕಥೆ ಜತೆಗೆ ಸಂಭಾಷಣೆ ಬರೆಯುವುದರಲ್ಲಿ ನಿರತರಾಗಿದ್ದಾರೆ.

ತುಂಬ ಅದ್ದೂರಿಯಾಗಿ ಮೂಡಿಬರಲಿರುವ ಈ ಚಿತ್ರವನ್ನು ಕೇವಲ ಭಾರತದಲ್ಲಷ್ಟೇ ಅಲ್ಲ ಲಂಡನ್, ಸಿಂಗಪೂರ್ ಸೇರಿ ಹಲವು ದೇಶಗಳಲ್ಲಿ ಶೂಟಿಂಗ್ ಮಾಡುವ ಪ್ಲಾ್ಯನ್ ನಿರ್ದೇಶಕರದ್ದು. ಹಾಗಂತ ಕೇವಲ ಹಾಡುಗಳಿಗಾಗಿ ವಿದೇಶಕ್ಕೆ ತೆರಳುತ್ತಿಲ್ಲ. ಚಿತ್ರದ ಬಹುಪಾಲು ಮಾತಿನ ಭಾಗದ ಚಿತ್ರೀಕರಣ ವಿದೇಶದಲ್ಲಿಯೇ ನಡೆಯಲಿದೆಯಂತೆ.

ಚಿತ್ರದಲ್ಲಿ ಇಶಾನ್ ಮತ್ತು ಆಶಿಕಾ ಪಾತ್ರದ ಬಗ್ಗೆಯೂ ಮಾಹಿತಿ ಬಿಟ್ಟುಕೊಡದ ಪವನ್, ‘ಈಗಿನ್ನೂ ಪ್ರಾಥಮಿಕ ಹಂತದಲ್ಲಿರುವುದರಿಂದ ನಾಯಕಿಯಾಗಿ ಆಶಿಕಾ ಆಯ್ಕೆಯಾಗಿದ್ದಾರೆ ಎಂಬುದಷ್ಟೇ ಹೊಸ ವಿಷಯ. ಅವರ ಪಾತ್ರ ಮತ್ತು ತಾಂತ್ರಿಕ ವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬ ವಿಚಾರವನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ’ ಎಂದು ಗೌಪ್ಯತೆ ಕಾಯ್ದುಕೊಳ್ಳುತ್ತಾರೆ. ಹಾಗಾದರೆ ಸಿನಿಮಾ ಸೆಟ್ಟೇರುವುದು ಯಾವಾಗ? ನಿರ್ದೇಶಕರೇ ಹೇಳುವಂತೆ ಜುಲೈ ಅಂತ್ಯಕ್ಕೆ ಸಿನಿಮಾ ಶುರುವಾಗಲಿದೆ. ಸಿ.ಆರ್. ಮನೋಹರ್ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.

ಬೇರೆ ಶೈಲಿಯ ಸಿನಿಮಾ ಹೇಗೋ ಮಾಡಿಬಿಡಬಹುದು. ಆದರೆ, ಲವ್​ಸ್ಟೋರಿ ತುಂಬ ಕಷ್ಟ. ಸಣ್ಣ ದೃಶ್ಯವೂ ನೋಡುಗರಿಗೆ ರಿಪೀಟ್ ಅಂತ ಅನಿಸಬಾರದು. ಅದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ. ಕಥೆ ತುಂಬ ಫ್ರೆಶ್ ಆಗಿದೆ.

| ಪವನ್ ಒಡೆಯರ್, ನಿರ್ದೇಶಕ

Leave a Reply

Your email address will not be published. Required fields are marked *