ಪವನಪುತ್ರನಿಗೆ ಭಕ್ತಿಯ ಆರತಿ

ಗದಗ: ಗದಗ-ಬೆಟಗೇರಿ ಅವಳಿನಗರ ಸೇರಿ ಜಿಲ್ಲಾದ್ಯಂತ ಶುಕ್ರವಾರ ದವನದ ಹುಣ್ಣಿಮೆಯಂದು ರಾಮಭಕ್ತ ಹನುಮ ಜಯಂತಿಯನ್ನು ಭಕ್ತರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಗುರುವಾರ ರಾತ್ರಿಯೇ ಮಾರುತಿ ದೇವಸ್ಥಾನಗಳಿಗೆ ತಳಿರು-ತೋರಣಗಳಿಂದ ಸಿಂಗರಿಸಿ, ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದರು. ಶುಕ್ರವಾರ ಬೆಳಗ್ಗೆಯಿಂದ ವಾಯುಪುತ್ರನಿಗೆ ಮಹಾಭಿಷೇಕ, ರುದ್ರಾಭಿಷೇಕ, ತೊಟ್ಟಿಲೋತ್ಸವ, ಹೋಮ-ಹವಣ, ತುಳಸಿ ಅರ್ಚನೆ ಹಾಗೂ ಮಹಾಮಂಗಳಾರತಿ ಪೂಜೆ ಜರುಗಿದವು.

ಕುಟುಂಬ ಸಮೇತರಾಗಿ ದೇವಸ್ಥಾನಗಳಿಗೆ ತೆರಳಿದ ಭಕ್ತರು ಹೂ-ಹಣ್ಣು, ಕಾಯಿ ಅರ್ಪಿಸಿ, ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಮಧ್ಯಾಹ್ನ ಪ್ರತಿ ದೇವಸ್ಥಾನಗಳಲ್ಲಿ ಅನ್ನ ಸಂತರ್ಪಣೆ ಜರುಗಿತು.

ವಿವಿಧೆಡೆ ವಿಶೇಷ ಪೂಜೆ: ನಗರದ ಕಿಲ್ಲಾ ಬಳಿಯಿರುವ ಪುರಾತನ ಜೋಡಮಾರುತಿ ದೇವಸ್ಥಾನ, ವಿವೇಕಾನಂದ ನಗರದ ವೀರಾಂಜನೇಯ ದೇವಸ್ಥಾನ, ನರಸಾಪುರದ ಗುಂಡದ ಮಾರುತಿ ದೇವಸ್ಥಾನ, ಬಸವೇಶ್ವರ ನಗರದ ಜೋಡ ಹನುಂತದೇವರ ಗುಡಿ, ಹೆಲ್ತ್​ಕ್ಯಾಂಪ್​ನ ಮಾರುತಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಜರುಗಿದವು.

ಗಂಗಾಪುರ ಪೇಟೆಯ ಬಾಲ ಮಾರುತಿ ದೇವಸ್ಥಾನದಲ್ಲಿ ರಾಜರಾಜೇಶ್ವರಿ ಮಹಿಳಾ ಮಂಡಳದ ಸದಸ್ಯರು, ಮರಾಠಿ ವಾಙ್ಮಯಿ ಪ್ರೇಮಿಮಂಡಳದಲ್ಲಿ ವಿಪ್ರ ಬಾಂಧವರು ಶ್ರದ್ಧೆ ಭಕ್ತಿಯಿಂದ ಹನುಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಿದರು. ಸಿದ್ಧಲಿಂಗ ನಗರದಲ್ಲಿರುವ ಜಾಗೃತ ಆಂಜನೇಯ ದೇವಸ್ಥಾನದಲ್ಲಿ ಬಾಲ ಮಾರುತಿಯನ್ನು ತೊಟ್ಟಿಲಿಗೆ ಹಾಕಿ, ಜೋಗುಳ ಗೀತೆಗಳನ್ನು ಹಾಡುವ ಮೂಲಕ ಉತ್ಸಾಹದಿಂದ ತೊಟ್ಟಿಲು ತೂಗಿ ಕೃತಾರ್ಥರಾದರು.

ಬೆಟಗೇರಿ ಕನ್ಯಾಳ ಅಗಸಿಯ ಧೂಳಿಕಟ್ಟಿ ಮಾರುತಿ ದೇವಸ್ಥಾನದ ಮಾರುತಿ ದೇವರ ಬೆಳ್ಳಿ ಕವಚಕ್ಕೆ ಪಂಚಾಮೃತ ಅಭಿಷೇಕ, ತೊಟ್ಟಿಲ ಕಾರ್ಯಕ್ರಮ, ಸತ್ಯನಾರಾಯಣ ಪೂಜೆ ಹಾಗೂ ಧರ್ಮಸಭೆ ಜರಗಿತು. ರೈಲ್ವೆ ನಿಲಾಣ ರಸ್ತೆಯ ಮಾರುತಿ ದೇವಸ್ಥಾನ, ಶರಣಬಸವೇಶ್ವರ ನಗರದ ಆಂಜನೇಯ ದೇವಸ್ಥಾನ ಹಾಗೂ ಹುಡ್ಕೋದ ಬಯಲಾಂಜನೇಯ ದೇವಸ್ಥಾನದಲ್ಲಿ ಜರುಗಿದ ಧಾರ್ವಿುಕ ಕಾರ್ಯಕ್ರಮಗಳಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು.

ಮಾರುತೇಶ್ವರನಿಗೆ ರುದ್ರಾಭಿಷೇಕ

ತಾಲೂಕಿನ ಹಿರೇಹಂದಿಗೋಳ ಗ್ರಾಮದ ಹೊರವಲಯದಲ್ಲಿರುವ ಪುರಾತನ ಜಾಗೃತ ಮಾರುತೇಶ್ವರ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಯಿಂದ ಹನುಮ ಜಯಂತಿ ಆಚರಿಸಲಾಯಿತು. ಬೆಳಗ್ಗೆ ಮಾರುತೇಶ್ವರ ದೇವರಿಗೆ ಶಿವಯೋಗಿಸ್ವಾಮಿ ಹಿರೇಮಠ, ವೀರಯ್ಯ ಹೊಸಮಠ, ಮೃತ್ಯುಂಜಯ ಯಲಬುರ್ಗಿಮಠ ಅವರಿಂದ ರುದ್ರಾಭಿಷೇಕ ಜರುಗಿತು. ಶಿಲ್ಪಾ ಬಾರಕೇರ ಅವರಿಂದ ಮಾರುತೇಶ್ವರ ದೇವರಿಗೆ ವಿಶೇಷ ಪೂಜೆ ಅಲಂಕಾರ ಜರುಗಿತು. ಮಾರುತೇಶ್ವರ ದೇವಸ್ಥಾನ ಜೀಣೋದ್ಧಾರ ಸೇವಾ ಸಮಿತಿ ಅಧ್ಯಕ್ಷ ಅಶೋಕ ಅನವಾಲದ, ಕಾರ್ಯದರ್ಶಿ ಶಿವಶಂಕರಪ್ಪ ಆರಟ್ಟಿ, ಮುತ್ತಣ್ಣ ಹೂಗಾರ, ನರಕೇಶಕುಮಾರ ಬಡಿಗೇರ, ಚನ್ನಬಸಯ್ಯ ಕಮಡೊಳ್ಳಿಮಠ, ಸುರೇಶ ಹೂಗಾರ, ಪಂಚಪ್ಪ ಬ್ಯಾಹಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *