ಪರೋಪಕಾರ ನಿಮಿತ್ತಂ ಬಹುಕೃತ ವೇಷಂ!

‘ಉದರ ನಿಮಿತ್ತಂ ಬಹುಕೃತ ವೇಷಂ’ ಎಂಬುದು ತುಂಬಾ ಜನಪ್ರಿಯ ನಾಣ್ಣುಡಿ. ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ ಯಾವ್ಯಾವುದೋ ವೇಷ ಹಾಕುವುದು ಇಂದು ಮಾಮೂಲಾಗಿದೆ. ಆದರೆ ಇಲ್ಲೊಬ್ಬ ಯುವಕ, ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ನೆರವಾಗುವ ಉದ್ದೇಶದಿಂದ ವಿಧವಿಧ ವೇಷ ತೊಟ್ಟು, ಹಣ ಸಂಗ್ರಹಿಸಿ ಪರೋಪಕಾರ ಮೆರೆಯುತ್ತಿದ್ದಾರೆ.

|ಸಂತೋಷ್ ರಾವ್ ಪೆಮುಡ

ಸುಮಾರು ಐದು ವರ್ಷಗಳ ಹಿಂದಿನ ಮಾತು. ಸೆಂಟ್ರಿಂಗ್ ಮತ್ತು ಗಾರೆ ಕೆಲಸ ಮಾಡುತ್ತಿರುವ ಉಡುಪಿ ಜಿಲ್ಲೆಯ ಕಟಪಾಡಿಯ ನಿವಾಸಿ ರವಿ ಅವರ ಸಂಬಂಧಿಕರ ಮಗುವೊಂದು ವೈದ್ಯರ ನಿರ್ಲಕ್ಷ್ಯದಿಂದ ಬಲಗೈ ಕಳೆದುಕೊಂಡಿತು. ಎಡಗೈ ಕೂಡ ಸ್ವಾಧೀನಹೀನವಾಯಿತು. ಬಡಕುಟುಂಬವಾದ್ದರಿಂದ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಲು ಹಣವಿರಲಿಲ್ಲ. ಸಿರಿವಂತರನ್ನು ಕಾಡಿ ಬೇಡಿದರೂ ಪುಡಿಗಾಸು ಹುಟ್ಟಲಿಲ್ಲ. ಆಗಲೇ ರವಿಯವರು ಯೋಚಿಸಿದ್ದು ಬಹುಕೃತ ವೇಷ!

ಅದು ಶ್ರೀಕೃಷ್ಣ ಜನಾಷ್ಟಮಿ ಸಮಯ. ಜನ್ಮಾಷ್ಟಮಿ ಸೇರಿದಂತೆ ಹಿಂದೂ ಹಬ್ಬಗಳ ಸಮಯದಲ್ಲಿ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ಸಾಮಾನ್ಯವಾಗಿ ದುಡ್ಡು ಸಂಗ್ರಹ ಮಾಡಲು ಹಲವರು ದೇವರ ವೇಷ ತೊಟ್ಟು ಹೋಗುವುದು ಮಾಮೂಲು. ಉಡುಪಿಯಲ್ಲಿ ಕೂಡ ಈ ಸಂಪ್ರದಾಯವಿದೆ. ಜನರು ಈ ವೇಷಧಾರಿಗಳಿಗೆ ದುಡ್ಡನ್ನು ಕಾಣಿಕೆಯಾಗಿ ನೀಡುತ್ತಾರೆ. ಇಂತಹ ಸಂದರ್ಭದಲ್ಲಿ ತಾವೂ ವಿಭಿನ್ನವಾದ ವೇಷ ಧರಿಸಿದರೆ ಸಾಕಷ್ಟು ಹಣವನ್ನು ಗಳಿಸಬಹುದು ಮತ್ತು ಆ ಹಣವನ್ನು ಮಗುವಿನ ಚಿಕಿತ್ಸೆಗೆ ನೀಡಬಹುದು ಎಂದು ರವಿ ನಿರ್ಧರಿಸಿದರು. ಆದರೆ ಮಾಮೂಲಿನಂತೆ ದೇವತಾ ವೇಷ ತೊಡುವ ಬದಲು ಭಿನ್ನದಾಗಿ ವೇಷ ಹಾಕಿಕೊಂಡರೆ ಹೆಚ್ಚಿನ ಧನಸಹಾಯ ದೊರಕಬಹುದು ಎಂಬ ಆಸೆಯಿಂದ ಅನ್ಯಗ್ರಹದ ಜೀವಿಗಳಂತೆ ವೇಷ ತೊಟ್ಟು ಜನರಿಂದ ಹಣ ಸಂಗ್ರಹಕ್ಕೆ ಮುಂದಾದರು. ಅಚ್ಚರಿ ಎಂಬಂತೆ ಒಂದು ಲಕ್ಷ ರೂಪಾಯಿಗೂ ಹೆಚ್ಚಿನ ಹಣದ ನೆರವು ಸಿಕ್ಕಿತು. ‘ನನ್ನ ಬದುಕಿನಲ್ಲಿ ಇಷ್ಟು ದೊಡ್ಡ ಮೊತ್ತದ ದುಡ್ಡನ್ನೇ ನೋಡಿರಲಿಲ್ಲ’ ಎನ್ನುವ ರವಿ, ಆ ಸಂಪೂರ್ಣ ಹಣವನ್ನು ಮಗುವಿನ ಚಿಕಿತ್ಸೆಗಾಗಿ ಅದರ ಪಾಲಕರಿಗೆ ನೀಡಿದರು. ಚಿಕಿತ್ಸೆಯ ನಂತರ ಆ ಮಗುವು ಇಂದು ಸಂಪೂರ್ಣ ಗುಣಮುಖವಾಗಿದೆ. ಆ ಮಗುವಿನ ನಗುವನ್ನು ಕಂಡ ರವಿಯವರಿಗೆ ತಾನು ಏಕೆ ಇಂಥ ಸತ್ಕಾರ್ಯವನ್ನೇ ಮುಂದುವರಿಸಬಾರದು ಎಂಬ ಯೋಚನೆ ಬಂತು. ಅಲ್ಲಿಂದ ಅವರು ಪ್ರತಿ ವರ್ಷ ಜನ್ಮಾಷ್ಟಮಿ ದಿವಸ ಬೇರೆ ಬೇರೆ ಬಗೆಯ ವೇಷ ತೊಟ್ಟು ಹಣ ಸಂಗ್ರಹಿಸುತ್ತಿದ್ದಾರೆ. ಅದರಿಂದ ಬಂದ ಸಂಪೂರ್ಣ ಹಣವನ್ನು ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಬಡ ಮಕ್ಕಳ ವೈದ್ಯಕೀಯ ಚಿಕಿತ್ಸೆಗಾಗಿ ನೀಡುತ್ತಿದ್ದಾರೆ.

‘ವೇಷವನ್ನು ಧರಿಸಿದ ನಂತರ ಸಂಪೂರ್ಣವಾಗಿ ವೇಷಕ್ಕೆ ನನ್ನನ್ನು ನಾನು ಸಮರ್ಪಿಸಿಕೊಂಡಿರುತ್ತೇನೆ ಮತ್ತು ಎಲ್ಲಿಯೂ ಹೋಗುವುದಿಲ್ಲ’ ಎನ್ನುವ ರವಿ, ಜೀವನಪೂರ್ತಿ ಸಮಸ್ಯೆಯನ್ನು ಎದುರಿಸಬೇಕಿರುವ, ಸವಾಲಿನ ಸಮಸ್ಯೆಯಿರುವ ಮಕ್ಕಳನ್ನು ಸೇವೆಗಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.

‘ಜನ್ಮಾಷ್ಟಮಿಯ ಅವಧಿಯಲ್ಲಿ ನಾನು ಆಹಾರವನ್ನು ಬಿಟ್ಟರೂ ಏನೂ ತೊಂದರೆಯಾಗುವುದಿಲ್ಲ, ತೂಕ ಸ್ವಲ್ಪ ಕಮ್ಮಿಯಾಗುತ್ತದಷ್ಟೇ. ಒಳ್ಳೆಯ ಉದ್ದೇಶದಿಂದ ನಾನು ಹಾಕುವ ವೇಷಕ್ಕೆ ಸಾರ್ವಜನಿಕರು ದುಡ್ಡನ್ನು ನೀಡುತ್ತಾರೆ. ದುಡ್ಡನ್ನು ನೀಡಿದಾಗ ತಾವು ನೀಡಿದ ಮೊತ್ತ ಒಂದು ಒಳ್ಳೆಯ ಉದ್ದೇಶಕ್ಕೆ ಬಳಕೆಯಾಗುತ್ತಿದೆಯೆಂಬ ಧನ್ಯತಾ ಭಾವ ಅವರಲ್ಲಿರುತ್ತದೆ. ಇದು ನನಗೆ ಮತ್ತಷ್ಟು ಉತ್ತೇಜನವನ್ನು ನೀಡುತ್ತದೆ’ ಎನ್ನುತ್ತಾರೆ ಅವರು.

ಹಲವಾರು ಪ್ರಶಸ್ತಿ: ಇವರ ವಿಭಿನ್ನವಾದ ಸೇವೆಯನ್ನು ಗಮನಿಸಿ ರಾಜ್ಯ ಸರ್ಕಾರ ಇವರಿಗೆ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 2018ರಲ್ಲಿ ರವಿ ಅವರು 5.35 ಲಕ್ಷ ಮೊತ್ತವನ್ನು ತನ್ನ ವೇಷದ ಮೂಲಕ ಸಂಗ್ರಹಿಸಿದ್ದು, ಇದರ ಹಣದಿಂದ ನಾಲ್ಕು ಮಕ್ಕಳಿಗೆ ಚಿಕಿತ್ಸೆ ಕೊಡಿಸಿದ್ದಾರೆ. ವಿವಿಧ ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳಲ್ಲಿ ಇವರ ವಿಭಿನ್ನ ಸೇವೆಯನ್ನು ನೋಡಿದ ದಾನಿಗಳು ಇವರ ವಿಳಾಸಕ್ಕೆ ಹಾಗೂ ಬ್ಯಾಂಕ್ ಖಾತೆಗೆ ವಂತಿಗೆಯನ್ನು ಕಳುಹಿಸುತ್ತಿದ್ದಾರೆ. ಈ ರೀತಿಯಾಗಿ ಒಟ್ಟು -ಠಿ; 32 ಲಕ್ಷ ಮೊತ್ತವು ಸಂಗ್ರಹವಾಗಿದ್ದು, ಈ ಮೊತ್ತವನ್ನು ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ನೀಡಿದ್ದಾರೆ.

‘ಮಿಲಾನ್’ ಎಂಬ ಸ್ವಯಂ ಸೇವಾ ಸಂಸ್ಥೆಯು ಇವರ ವೇಷ ಹಾಗೂ ಚಟುವಟಿಕೆಗಳ ಚಿತ್ರೀಕರಣವನ್ನು ನಡೆಸಿ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ. ಇದನ್ನು ಒಟ್ಟು 1.10 ಕೋಟಿ ಮಂದಿ ವೀಕ್ಷಿಸಿದ್ದು, ದೇಶ ವಿದೇಶಗಳಿಂದ ಇವರಿಗೆ ವಂತಿಗೆಯು ಬಂದಿದೆ. ಈ ಹಣದಿಂದ ಗಂಭೀರವಾದ ಕಾಯಿಲೆಯಿಂದ ಬಳಲುತ್ತಿರುವ ಐದು ಮಕ್ಕಳಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಬಂದ ಹಣವನ್ನು ಕೇವಲ ಮಕ್ಕಳಿಗಾಗಿ ಮೀಸಲಿಸಿರುವ ರವಿ ಅವರು ಜೀವನೋಪಾಯಕ್ಕಾಗಿ ಇಂದಿಗೂ ಕೆಂಪುಕಲ್ಲಿನ ಕೆಲಸ, ಗಾರೆ ಕೆಲಸ ಮತ್ತು ಸೆಂಟ್ರಿಂಗ್ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.

22 ಗಂಟೆಗಳ ಮೇಕಪ್!

ಇವರು ಪ್ರತೀ ವರ್ಷವೂ ಕಾಲ್ಪನಿಕ ಜೀವಿಯನ್ನು ಹೋಲುವಂತಹ ವಿಭಿನ್ನವಾದ ವೇಷಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದಕ್ಕಾಗಿ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡು ಅಗತ್ಯ ವೇಷಭೂಷಣಗಳನ್ನು ಉಡುಪಿ ಮತ್ತು ಮಂಗಳೂರಿನಿಂದ ಹೊಂದಿಸಿಕೊಳ್ಳುತ್ತಾರೆ. ವೇಷಕ್ಕೆ ಬಣ್ಣವನ್ನು ಬಳಿಯಲು ಇವರ ಗೆಳೆಯರ ಬಳಗದಲ್ಲೇ ನುರಿತ ಕಲಾವಿದರಿದ್ದು, ವೇಷಕ್ಕೆ ಸೂಕ್ತವಾದ ಬಣ್ಣ ಮತ್ತು ಗ್ರಾಫಿಕ್ಸ್ ಅಳವಡಿಸಿ ಎಲ್ಲರೂ ಈ ವೇಷದೆಡೆಗೆ ಆಕರ್ಷಿಸಲ್ಪಡುವಂತೆ ಮಾಡುತ್ತಿದ್ದಾರೆ. ಅವರು ಹಾಕುವ ವೇಷಗಳು ಅತ್ಯಂತ ವಿಭಿನ್ನವಾದ ಹಾಗೂ ಸವಾಲಿನಿಂದ ಕೂಡಿದ್ದಾಗಿರುತ್ತದೆ. ವೇಷವನ್ನು ಧರಿಸಲು ಕನಿಷ್ಠ 22 ಗಂಟೆಗಳನ್ನು ಮೀಸಲು ಇಡುತ್ತಾರೆ. ಒಮ್ಮೆ ವೇಷ ಧರಿಸಿದರೆಂದರೆ ಮುಂದಿನ ಒಂದೆರಡು ದಿನಗಳವರೆಗೆ ಅವರು ನಿದ್ದೆಯನ್ನೂ ಮಾಡುವುದಿಲ್ಲ ಹಾಗೂ ಏನನ್ನೂ ತಿನ್ನುವುದಿಲ್ಲ. ಕೇವಲ ಪೈಪ್ ಮೂಲಕ ದ್ರವ ಆಹಾರವನ್ನಷ್ಟೇ ತೆಗೆದುಕೊಳ್ಳುತ್ತಾರೆ. ಘನ ಆಹಾರವನ್ನೇನಾದರೂ ತಿಂದಲ್ಲಿ ಶೌಚಾಲಯಕ್ಕೆ ಹೋಗಬೇಕಾದ ಅನಿವಾರ್ಯತೆ ಬರುತ್ತದೆ. ವೇಷವನ್ನು ಧರಿಸಿದ ನಂತರ ಮಲಗುವುದಾಗಲೀ, ಬಾಯಿಯನ್ನು ತೆರೆದು ಏನನ್ನಾದರೂ ತಿನ್ನುವುದಾಗಲೀ, ಶೌಚಾಲಯಕ್ಕೆ ಹೋಗುವುದಾಗಲಿ ಮಾಡಲು ಸಾಧ್ಯವೇ ಇಲ್ಲವೆಂದು ರವಿ ಹೇಳುತ್ತಾರೆ.

Leave a Reply

Your email address will not be published. Required fields are marked *