ಪರೋಪಕಾರದಿಂದ ಸಂತೃಪ್ತಿ

ದರ್ಜಿಯೋರ್ವ ತನ್ನ ಹೊಲಿಗೆಯ ಕೌಶಲದಿಂದ ಊರಿನಲ್ಲಿ ಹೆಸರುವಾಸಿಯಾಗಿದ್ದ. ಯಾವುದೇ ಹಬ್ಬ, ಕಾರ್ಯಕ್ರಮ, ಊರ ಜಾತ್ರೆಯಿರಲಿ ಹೆಚ್ಚಾಗಿ ರ್ದಜಿ ಸೋಮೇಶನೇ ಸಿದ್ಧಪಡಿಸಿದ ಉಡುಗೆಗಳಿಂದ ಜನರು ಕಂಗೊಳಿಸುತ್ತಿದ್ದರು. ಆತ ಜನರ ಇಂಗಿತವನ್ನು ಅರಿತು ಹಗಲು-ರಾತ್ರಿಯೆನ್ನದೆ ತನ್ನ ಕಾರ್ಯದಲ್ಲಿಯೇ ನಿರತನಾಗಿರುತ್ತಿದ್ದ. ಪರಿಶ್ರಮದಿಂದ ಆರ್ಥಿಕವಾಗಿ ಉತ್ತಮ ಸ್ಥಿತಿ ತಲುಪಿದನಲ್ಲದೆ, ತನ್ನೊಡಗೂಡಿ ಕೆಲಸ ಮಾಡಲು ಇಬ್ಬರು ಹುಡುಗರನ್ನು ನೇಮಕಮಾಡಿಕೊಂಡ. ದಿನಗಳೆದಂತೆ ಜನರು ಸೋಮೇಶನ ಬಗ್ಗೆ ಅನುಮಾನ ಪಟ್ಟು ಟೀಕಿಸತೊಡಗಿದರು. ‘ಹೊಲಿಯಲು ಕೊಟ್ಟ ಬಟ್ಟೆಯಿಂದ ಒಂದಿಷ್ಟು ಬಟ್ಟೆ ಉಳಿಸಿಕೊಂಡು ಆತ ತನ್ನ ಮಕ್ಕಳಿಗೆ ಬಟ್ಟೆ ಹೊಲಿಯುತ್ತಾನೆ’ ಎಂದು ಆಪಾದನೆ ಶುರುವಿಟ್ಟರು. ಈ ಮಾತು ಬಹುತೇಕ ಜನರಿಂದ ಕೇಳಿಬರುತ್ತಿತ್ತು. ಆದರೆ ಎಂದಿನಂತೆ ಆತನ ಹೊಲಿಗೆ ಅಚ್ಚುಕಟ್ಟಾಗಿರುತ್ತಿತ್ತು. ಆದರೂ ದಿನೇದಿನೆ ರ್ದಜಿಯ ಮೇಲೆ ಜನರ ಟೀಕೆ ಮುಂದುವರಿದಿತ್ತು.

ಒಮ್ಮೆ ಸೋಮೇಶನ ಸ್ನೇಹಿತ ಏನೋ ಹೊಲಿಸಲೆಂದು ಅಂಗಡಿಗೆ ಹೋದಾಗ ಆತ ಬೇರೆಬೇರೆ ಬಣ್ಣದ ಬಟ್ಟೆಗಳ ರಾಶಿ ಹಾಕಿಕೊಂಡು ಏನನ್ನೋ ಹೊಲಿಯುತ್ತಿದ್ದ. ಜನರ ಅಭಿಪ್ರಾಯ ಖಚಿತವೆಂದರಿತ ಆತನ ಸ್ನೇಹಿತ, ‘ಮಕ್ಕಳಿಗೆ ಬಟ್ಟೆ ಹೊಲಿಯುತ್ತಿರುವೆಯಾ’ ಎಂದು ಕೇಳಿದ. ‘ಹೌದು’ ಎಂದು ಉತ್ತರಿಸಿದ. ಮತ್ತೆ ಮುಂದುವರಿದು, ‘ನನ್ನ ಮಕ್ಕಳಿಗಲ್ಲ, ಇಲ್ಲೇ ಸಮೀಪದಲ್ಲಿರುವ ಅನಾಥಾಶ್ರಮದ ಮಕ್ಕಳಿಗೆ’ ಎಂದ. ‘ಜನ ಹೊಲಿಯಲು ಕೊಡುವ ಬಟ್ಟೆಯಲ್ಲಿ ಉಳಿದ ತುಂಡುಬಟ್ಟೆಗಳನ್ನು ನಾನು ಮಕ್ಕಳಿಗೆಂದೇ ಹೊಲಿಯಲು ತಂದ ಬಟ್ಟೆಯಕಾಲರು, ತೋಳು, ಅಂಚಿಗೆ ಹಚ್ಚಿ ಚೆಂದವಾಗಿ ಕಾಣುವಂತೆ ಮಾಡಿ ಹೊಲಿಯುತ್ತೇನೆ. ಈ ಸಿದ್ಧಪಡಿಸಿದ ಬಟ್ಟೆಗಳನ್ನು ಅನಾಥಾಶ್ರಮದ ಮಕ್ಕಳಿಗೆ ನೀಡುತ್ತೇನೆ. ಇದಕ್ಕಾಗಿ ನಾನು ಬಟ್ಟೆ ಕದಿಯೋದಿಲ್ಲ, ಬದಲಾಗಿ ತಾನಾಗಿ ಉಳಿದ ನಿರುಪಯೋಗಿ ಬಟ್ಟೆಯ ತುಂಡುಗಳನ್ನು ಉಪಯೋಗಿಸಿಕೊಳ್ಳುತ್ತೇನೆ ಅಷ್ಟೇ; ಈ ಉಡುಪುಗಳನ್ನು ಹೊಲಿಯಲು ಕೆಲಸ ಮಾಡುವವರಿಗೆ ನೀಡದೇ ನಾನೇ ಸ್ವತಃ ತಯಾರಿಕೆಯಲ್ಲಿ ತೊಡಗುತ್ತೇನೆ, ಇದರಿಂದ ಸಂತೃಪ್ತ ಭಾವನೆ ಮೂಡುತ್ತದೆ’ ಎಂದು ನುಡಿದ. ಸೋಮೇಶನನ್ನು ಎಲ್ಲರೂ ತಪ್ಪಾಗಿ ತಿಳಿದಿದ್ದಕ್ಕೆ ಆ ಸ್ನೇಹಿತನಿಗೆ ವ್ಯಥೆಯಾಯಿತಲ್ಲದೆ, ಅವನ ಔದಾರ್ಯ ತಿಳಿದು ಹೆಮ್ಮೆಯಾಯಿತು.

ಈ ರೂಪಕದಲ್ಲಿ ಜನರ ಟೀಕೆ ಮತ್ತು ರ್ದಜಿಯ ಔದಾರ್ಯ ಕಾಣಬಹುದು. ವಾಸ್ತವವನ್ನರಿಯದೆ, ತಮ್ಮ ಮೂಗಿನ ನೇರಕ್ಕೆ ಮಾತ್ರ ವಿಚಾರ ಮಾಡಿ, ಎದುರಿನ ವ್ಯಕ್ತಿಯದು ನೂರಕ್ಕೆ ನೂರು ಪ್ರತಿಶತ ತಪ್ಪೇ ಎಂದು ತೀರ್ವನಕ್ಕೆ ಬಂದು ಬಿಡುವುದು ಮತ್ತು ಇನ್ನೊಂದು ಮಗ್ಗುಲಲ್ಲಿ ರ್ದಜಿಯ ಸಹೃದಯತೆಯ ಅನಾಮಧೇಯ ಸಾಧನೆಯನ್ನು ಕಾಣಬಹುದು. ಇನ್ನೊಬ್ಬರನ್ನು ದೂಷಿಸದೆ, ಕನಿಷ್ಠಪಕ್ಷ ನಿಜದ ಅರಿವಾದಾಗ ಅದನ್ನು ಒಪ್ಪಿಕೊಳ್ಳುವ ಮನೋವೈಶಾಲ್ಯ ಹೊಂದಬೇಕು. ‘ಮರ್ತಯ ಜೀವನ ಸಾರ್ಥಕಗೊಳ್ಳಲು ಕೀರ್ತಿಯೇ ಬೇಕೆಂದೆನಬೇಡ’ ಎಂಬ ಕವಿವಾಣಿಯಂತೆ ಸಾಮಾನ್ಯರಾಗಿದ್ದು ಸಮಾಜಕ್ಕೆ ಒಳಿತಾಗುವಂತೆ ಸಹಾಯಹಸ್ತ ನೀಡೋಣ.

|ಶಿಲ್ಪಾ ಕುಲಕರ್ಣಿ

(ಲೇಖಕಿ ಇಂಜಿನಿಯರ್ ಹಾಗೂ ಹವ್ಯಾಸಿ ಬರಹಗಾರ್ತಿ) 

Leave a Reply

Your email address will not be published. Required fields are marked *