ಪರೋಪಕಾರದಿಂದ ಜೀವನ ಸಿದ್ಧಿ

ಗದಗ: ಸದ್ಗುಣಗಳಿಂದ ಜೀವನ ನಡೆಸಿದರೆ ಮಾತ್ರ ಜನ್ಮ ಸಾರ್ಥಕ. ಪರೋಪಕಾರದಿಂದ ಜೀವನ ಸಿದ್ಧಿಸುತ್ತದೆ. ಆದರ್ಶಮಯ ಹಾಗೂ ಪುಣ್ಯಪ್ರದವಾದ ಕಾಯಕದಿಂದಾಗಿ ಸಂತರು, ಮಹಂತರು, ಮಹರ್ಷಿಗಳು ತಮ್ಮ ಜೀವನ ಸಾರ್ಥಕಪಡಿಸಿಕೊಂಡಿದ್ದಾರೆ ಎಂದು ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರು ಹೇಳಿದರು.

ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂಚಾಕ್ಷರ ಗವಾಯಿಗಳ 75ನೇ, ಪುಟ್ಟರಾಜ ಗವಾಯಿಗಳ 9ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಮಂಗಳವಾರ ಜರುಗಿದ ಜಾತ್ರಾ ಮಹೋತ್ಸವದ ಉದ್ಘಾಟನೆ, ಧರ್ಮಸಭೆ ಹಾಗೂ ಕೀರ್ತನ ಸಮ್ಮೇಳನದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಭಾರತವು ಧರ್ಮಭೂಮಿ, ಪುಣ್ಯಭೂಮಿ, ದೇವಭೂಮಿಯಾಗಿದ್ದು, ಈ ನೆಲದ ಗುಣವೇ ಅದ್ಭುತ. ಭಾರತೀಯರ ಜೀವನಾಡಿಗಳಲ್ಲಿ ದೈವಪ್ರೇಮ, ಭಕ್ತಿ, ಆದರ್ಶಗಳು ಮೈದುಂಬಿಕೊಂಡಿವೆ ಎಂದರು.

ಹುಕ್ಕೇರಿಯ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಪುಟ್ಟರಾಜ ಗವಾಯಿಗಳು ಸಮನ್ವಯ ಮೂರ್ತಿಗಳು, ಸಾವಿರಾರು ಅಂಧ ಅನಾಥರ ಮಕ್ಕಳಿಗೆ ದಾರಿದೀಪವಾದ ಮಹನೀಯರು. ಅಂತಹ ಮಹನೀಯರು ಬೆಳೆಸಿದ ವೀರೇಶ್ವರ ಪುಣ್ಯಾಶ್ರಮವನ್ನು ಉಳಿಸಲು ಭಕ್ತರು ಕಂಕಣ ಬದ್ಧರಾಗಬೇಕು. ಹಾನಗಲ್ಲ ಕುಮಾರೇಶ್ವರ ಸ್ವಾಮೀಜಿ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕು ಎಂದರು.

ಕುಮಾರಸ್ವಾಮಿ ಹಿರೇಮಠ ಅವರು ರಚಿಸಿದ ‘ಸಂಗೀತ ಲೋಕದ ಮಹಾತಪಸ್ವಿಗಳು’ ಕೃತಿ ಲೋಕಾರ್ಪಣೆಗೊಂಡಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೊಟ್ಟೊರೇಶ್ವರ ಸ್ವಾಮೀಜಿ, ಈರಪ್ಪ ಹೂಗಾರ, ಯಲ್ಲಪ್ಪ ಹೂಗಾರ, ಸುಭಾಸ ಶಿವಸಿಂಪಿ, ಬಸಯ್ಯ ಗುತ್ತೇದಾರ, ಚನ್ನಪ್ಪ ದ್ಯಾವಣಸಿ, ಬಾಲಚಂದ್ರ ಹೂಗಾರ, ವಿಠಲ ಹೊಂಬಳ ಸೇರಿ 20 ಸಾಧಕರಿಗೆ ಕುಮಾರಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬಾಲೆಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಅಡ್ನೂರು ಪಂಚಾಕ್ಷರಿ ಸ್ವಾಮೀಜಿ, ಕೊಟ್ಟೂರೇಶ್ವರ ಸ್ವಾಮೀಜಿ, ಸಿದ್ಧೇಶ್ವರ ಸ್ವಾಮೀಜಿ, ಲಕ್ಕುಂಡಿ ಚಂದ್ರಶೇಖರ ಸ್ವಾಮೀಜಿ, ಕಲ್ಲಯ್ಯಜ್ಜನವರು ಸಮ್ಮುಖ ವಹಿಸಿದ್ದರು. ಎಸ್.ಎಸ್. ಕೆಳದಿಮಠ, ಬಿ.ಸಿ. ಹಿರೇಮಠ, ಬೆಟದಯ್ಯ ಹಿರೇಮಠ, ಬಸವರಾಜ ಶಾಬಾದಿಮಠ, ವೀರೇಶ ಕೂಗು, ಬಾಬಣ್ಣ ಶಾಬಾದಿಮಠ, ನಿಂಗಪ್ಪ ಕೆಂಗಾರ, ಬಸವರಾಜಸ್ವಾಮಿ ಹಿಡ್ಕಿಮಠ ಹಾಗೂ ಮತ್ತಿತರರು ಇದ್ದರು. ಮಲ್ಲಯ್ಯಸ್ವಾಮಿ ಹಿರೇಮಠ ಪ್ರಾರ್ಥಿಸಿದರು. ಚಂದ್ರು ಬಾಳಿಹಳ್ಳಿಮಠ ಸ್ವಾಗತಿಸಿದರು.

ಪಂಡಿತ ಪಂಚಾಕ್ಷರ ಹಾಗೂ ಪುಟ್ಟರಾಜ ಗವಾಯಿಗಳ ಕಾಯ ಅಳಿದರೂ ಕಾಯಕದ ಕೀರ್ತಿ ಅಜರಾಮರ. ಲಕ್ಷಾಂತರ ಅಂಧ, ಅನಾಥ, ಬಡ, ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯವನ್ನಿತ್ತು ಅವರ ಬದುಕಿಗೆ ಆಧಾರವಾಗಿ ಎಲ್ಲರ ಬಾಳಿನ ಆಶಾಕಿರಣವಾಗಿದ್ದಾರೆ.
ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರು

ಕೀರ್ತನ ಸಮ್ಮೇಳನ 19ರಂದು:ಜೂ. 19ರಂದು ಕೀರ್ತನ ಸಮ್ಮೇಳನ ಹಾಗೂ ಅಂಧರ ಗೋಷ್ಠಿ ನಡೆಯಲಿದ್ದು, ಶಿವಯೋಗ ಮಂದಿರ ಅಧ್ಯಕ್ಷ, ಹಾಲಕೇರಿ ಅನ್ನದಾನೇಶ್ವರ ಸಂಸ್ಥಾನಮಠದ ಡಾ. ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಡೋಣಿ-ಗದಗ ನಂದಿವೇರಿಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಎಪಿಎಂಸಿ ಕಾರ್ಯದರ್ಶಿ ಎಂ. ಮಂಜುನಾಥ ಪಾಲ್ಗೊಳ್ಳುವರು.

Leave a Reply

Your email address will not be published. Required fields are marked *