ಪರೀಕ್ಷೆಗೆ 265 ವಿದ್ಯಾರ್ಥಿಗಳು ಗೈರು

ಶಿರಸಿ:ಎಸ್ಸೆಸ್ಸೆಲ್ಸಿ ಪ್ರಥಮ ಭಾಷೆ ಪರೀಕ್ಷೆ ಗುರುವಾರ ನಡೆದಿದ್ದು, ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 8936 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 265 ವಿದ್ಯಾರ್ಥಿಗಳು ಗೈರಾಗಿದ್ದಾರೆ.

ಹಳಿಯಾಳ ತಾಲೂಕಿನಲ್ಲಿ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡ 2399 ವಿದ್ಯಾರ್ಥಿಗಳಲ್ಲಿ 2333 ವಿದ್ಯಾರ್ಥಿಗಳು ಹಾಜರಾಗಿದ್ದರು. ಜೊಯಿಡಾ ತಾಲೂಕಿನಲ್ಲಿ 706 ವಿದ್ಯಾರ್ಥಿಗಳ ಪೈಕಿ 692, ಮುಂಡಗೋಡ ತಾಲೂಕಿನಲ್ಲಿ 1084 ವಿದ್ಯಾರ್ಥಿಗಳಲ್ಲಿ 1045, ಸಿದ್ದಾಪುರ ತಾಲೂಕಿನಲ್ಲಿ 1281 ವಿದ್ಯಾರ್ಥಿಗಳಲ್ಲಿ 1238 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಶಿರಸಿ ತಾಲೂಕಿನಲ್ಲಿ 2727ರಲ್ಲಿ 2649 ವಿದ್ಯಾರ್ಥಿಗಳು, ಯಲ್ಲಾಪುರ ತಾಲೂಕಿನಲ್ಲಿ 1004ರಲ್ಲಿ 979 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಶಿರಸಿಯಲ್ಲಿ ಹೋಳಿ ಆಚರಣೆ ಇದ್ದ ಕಾರಣ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಬಣ್ಣ ಹಚ್ಚದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿತ್ತು. ಶಾಲೆಯ ಎದುರು ಮತ್ತು ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದರಿಂದ ವಿದ್ಯಾರ್ಥಿಗಳು ನಿರಾತಂಕದಿಂದ ಪರೀಕ್ಷಾ ಕೇಂದ್ರಕ್ಕೆ ತೆರಳಿದರು.

ಮೊದಲ ದಿನ ಸುಸೂತ್ರ

ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಮೊದಲ ದಿನ ಸುಸೂತ್ರವಾಗಿ ನಡೆದಿದೆ. ಜಿಲ್ಲೆಯ 38 ಪರೀಕ್ಷಾ ಕೇಂದ್ರಗಳಲ್ಲಿ ಗುರುವಾರ 9,361 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಪ್ರಥಮ ಭಾಷೆಗೆ 9,531 ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದರು. 170 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ವ್ಯವಸ್ಥಿತವಾಗಿ ಪರೀಕ್ಷೆ ನಡೆದಿದೆ ಎಂದು ಡಿಡಿಪಿಐ ಎ.ಮಂಜುನಾಥ ತಿಳಿಸಿದ್ದಾರೆ.

ಮುಂಡಗೋಡ: ಸರ್ಕಾರಿ ಪ.ಪೂ. ಕಾಲೇಜ್​ನ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಪರಿಶೀಲನೆಗೆ ಶಿರಸಿ ಶೈಕ್ಷಣಿಕ ಜಿಲ್ಲೆಯ ಶಿರಸಿಯ ಡಿಡಿಪಿಐ ಕಚೇರಿ ಅಧಿಕಾರಿಗಳಾದ ಸಿ.ಎಸ್. ನಾಯ್ಕ , ವಿ.ಎಸ್.ಪಟಗಾರ, ಜಿ.ಎಸ್. ಭಟ್, ಮಂಗಲಾ ಬಗಲಿ ಭೇಟಿ ನೀಡಿ ಪರಿಶೀಲಿಸಿದರು.