More

    ಪರಿಹಾರ ವಿತರಣೆಗೆ ಆಗ್ರಹಿಸಿ ಧರಣಿ

    ಕುಂದಗೋಳ: ನೆರೆ ಸಂತ್ರಸ್ತರಿಗೆ ಪರಿಹಾರ, ಬೆಂಬಲ ಬೆಲೆಯಲ್ಲಿ ಶೇಂಗಾ, ಹತ್ತಿ ಖರೀದಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪಟ್ಟಣದ ಗಾಳಿಮರೆಮ್ಮ ದೇವಸ್ಥಾನ ಬಳಿ ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆಯಲ್ಲಿ ಎರಡು ತಾಸು ವಾಹನಗಳ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು.

    ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದ ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ಧ ಘೊಷಣೆ ಕೂಗಿದರು. ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ಬಸವರಾಜ ಮೆಳವಂಕಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಕಾಂಗ್ರೆಸ್ ಯುವ ಮುಖಂಡ ಮುತ್ತು ಶಿವಳ್ಳಿ ಮಾತನಾಡಿ, ರಾಜ್ಯ ಸರ್ಕಾರ ಪ್ರಕೃತಿ ವಿಕೋಪ ನಿಧಿ ಬಿಡುಗಡೆಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ತಹಸೀಲ್ದಾರ್ ಜನರ ಕಷ್ಟ ಕೇಳದೆ ವಿರೋಧ ಪಕ್ಷದ ನಾಯಕರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

    ಅತಿವೃಷ್ಟಿಯಿಂದ ತಾಲೂಕಿನಲ್ಲಿ ಮನೆಗಳು ಬಿದ್ದು ಅನೇಕ ಕುಟುಂಬಗಳು ಬೀದಿಗೆ ಬಂದಿವೆ. ಅರ್ಹರಿಗೆ ನೀಡಬೇಕಾದ ಪರಿಹಾರ ಹಣವನ್ನು ಅಧಿಕಾರಿಗಳು ಅನರ್ಹರಿಗೆ ವಿತರಿಸುತ್ತಿದ್ದಾರೆ. ಈ ಕುರಿತು ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ತಹಸೀಲ್ದಾರ್ ಬಸವರಾಜ ಮೆಳವಂಕಿ ಸ್ಪಂದಿಸುತ್ತಿಲ್ಲ. ಮನಬಂದಂತೆ ಆಡಳಿತ ನಡೆಸುತ್ತಿದ್ದಾರೆ ಎಂದು ದೂರಿದರು.

    ಬೆಂಬಲ ಬೆಲೆ ಯೋಜನೆಯಡಿ ಶೇಂಗಾ, ಹತ್ತಿ ಖರೀದಿಸಬೇಕು. ಅತಿವೃಷ್ಟಿಯಿಂದ ಸಾಕಷ್ಟು ಕೃಷಿ ಭೂಮಿ ಹಾಳಾಗಿದೆ. ಬದುವು ನಿರ್ವಿುಸಿಕೊಳ್ಳಲು ಅನುದಾನ ಬಿಡುಗಡೆಗೊಳಿಸಬೇಕು. ಪ್ರತಿ ಹೆಕ್ಟೇರ್ ಬೆಳೆ ಹಾನಿಗೆ 50 ಸಾವಿರ ರೂ. ಪರಿಹಾರಧನ ನೀಡಬೇಕು. 50 ವರ್ಷಗಳಿಂದ ತಾಲೂಕಿನ ಸಂಶಿ, ಶಿರೂರ, ಗುಡಗೇರಿ, ಕಮಡೊಳ್ಳಿ, ತರ್ಲಘಟ್ಟ, ಹಿರೇಹರಕುಣಿ, ಹಿರೇಗುಂಜಳ, ಬೆಟದೂರ ಮತ್ತಿತರ ಗ್ರಾಮಗಳಲ್ಲಿ ಸರ್ಕಾರಿ ಜಾಗದಲ್ಲಿ ಮನೆ ನಿರ್ವಿುಸಿಕೊಂಡ ಕುಟುಂಬಗಳಿಗೆ ಪಟ್ಟಾ ವಿತರಿಸಿ, ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಈ ಬೇಡಿಕೆಗಳನ್ನು ವಾರದೊಳಗೆ ಈಡೇರಿಸದಿದ್ದರೆ ಫಲಾನುಭವಿಗಳೊಂದಿಗೆ ಸೇರಿ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

    ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಘಟಕ ಅಧ್ಯಕ್ಷ ಅನಿಲಕುಮಾರ ಪಾಟೀಲ, ಅಡಿವೆಪ್ಪ ಶಿವಳ್ಳಿ, ಜೆ.ಡಿ. ಘೊರ್ಪಡೆ, ಬಾಬಾಜಾನ್ ಮುಲ್ಲಾ, ವೀರೇಶ ತರ್ಲಘಟ್ಟ, ಮಲ್ಲಯ್ಯ ಮಾಸಮರಡಿ, ಸಲೀಂ ಕಡ್ಲಿ, ಹನುಮಂತಪ್ಪ ತಂಬೂರ, ಹನುಮಂತಪ್ಪ ಪಾಟೀಲ, ಚಂದ್ರು ಕಾಳೆ, ಗುರು ಚಲವಾದಿ, ಬಸವರಾಜ ಶಿರಸಂಗಿ, ಎನ್.ಎಸ್. ನಲವಡಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts