ಪರಿಹಾರ್ ಸಾಫ್ಟ್​ವೇರ್ ಅಪ್​ಡೇಟ್

ಶಿವಮೊಗ್ಗ: ಬೆಳೆ ಹಾನಿ ಪರಿಹಾರ ಕೋರಿ 19 ಸಾವಿರ ರೈತರು ಅರ್ಜಿ ಸಲ್ಲಿಸಿದ್ದು, ಪರಿಹಾರ್ ಸಾಫ್ಟ್​ವೇರ್​ಗೆ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. 1,710 ಹೆಕ್ಟೇರ್ ಬೆಳೆ ಹಾನಿಗೆ ಈಗಾಗಲೇ ಪರಿಹಾರ ವಿತರಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣ್​ಕುಮಾರ್ ತಿಳಿಸಿದರು.

ಜಿಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಈ ವರ್ಷ ಜಿಲ್ಲೆಯಲ್ಲಿ ಪ್ರವಾಹದಿಂದ 15,573 ಹೆಕ್ಟೇರ್ ಕೃಷಿ ಭೂಮಿಯಲ್ಲಿನ ಬೆಳೆ ನಾಶವಾಗಿದೆ. ಇದುವರೆಗೆ ಬೆಳೆ ಹಾನಿಗೆ ಸಂಬಂಧಿಸಿ 1.46 ಕೋಟಿ ರೂ. ಪರಿಹಾರವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ತಿಳಿಸಿದರು.

ಕಳೆದ ತಿಂಗಳು ಶಿಕಾರಿಪುರದಲ್ಲಿ ರಸಗೊಬ್ಬರ ಕೊರತೆ ಎದುರಾಗಿತ್ತು. ಮಳೆ ಕಾರಣ ಸೂಕ್ತ ಸಮಯದಲ್ಲಿ ಜಿಲ್ಲೆಗೆ ರಸಗೊಬ್ಬರ ಪೂರೈಕೆಯಾಗಿರಲಿಲ್ಲ. ಎರಡೇ ದಿನಗಳಲ್ಲಿ ಸಮಸ್ಯೆ ಪರಿಹರಿಸಲಾಗಿದ್ದು, ಈಗ ಜಿಲ್ಲೆಯಲ್ಲಿ ರಸಗೊಬ್ಬರಕ್ಕೆ ಕೊರತೆಯಿಲ್ಲ ಎಂದು ಹೇಳಿದರು.

ಪಡಿತರ ಕಾರ್ಡ್ ಕೇಳಬೇಡಿ: ಜಿಲ್ಲೆಯ ನೆರೆ ಸಂತ್ರಸ್ತ ಕುಟುಂಬಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪಡಿತರ ವಿತರಣೆ ಮಾಡುವ ಜತೆಗೆ ಆ ಕುಟುಂಬಗಳ ಪಡಿತರ ಚೀಟಿ ಕಳೆದು ಹೋಗಿದ್ದರೆ ಕೂಡಲೇ ಅವರಿಗೆ ಪಡಿತರ ಚೀಟಿ ವಿತರಣೆಗೂ ಕ್ರಮ ಕೈಗೊಳ್ಳಬೇಕೆಂದು ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ.ಕಾಂತೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನೆರೆ ಸಂದರ್ಭದಲ್ಲಿ ಕಾರ್ಡ್ ಕಳೆದುಹೊಗಿದ್ದರೆ ಅಂತಹ ಪಡಿತರದಾರರಿಗೆ ಮಾಸಿಕ ರೇಷನ್ ನೀಡಲು ಸೂಚನೆ ನೀಡಲಾಗಿದೆ. ಪಡಿತರದಾರರ ಬಯೋಮೆಟ್ರಿಕ್ ಪಡೆದು ಪಡಿತರ ನೀಡುವಂತೆ ಎಲ್ಲ ವಿತರಕರಿಗೆ ತಿಳಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕ ಎ.ಟಿ.ಜಯಪ್ಪ ತಿಳಿಸಿದರು.

ಕೃಷಿ ಹಾಗೂ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ತೀರ್ಥಹಳ್ಳಿ ತಾಲೂಕಿನ ಅನೇಕ ಕುಗ್ರಾಮಗಳಲ್ಲಿ ಇಂಟರ್​ನೆಟ್ ಸಮಸ್ಯೆಯಿಂದ ಬಯೋಮೆಟ್ರಿಕ್ ಪಡೆಯುವುದು ಸಾಧ್ಯವಾಗುತ್ತಿಲ್ಲ. ಪಡಿತರ ವಿತರಕರು ತಿಂಗಳಲ್ಲಿ ಕೆಲವೇ ದಿನ ಮಾತ್ರ ರೇಷನ್ ನೀಡುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಇದನ್ನು ಪರಿಹರಿಸಬೇಕೆಂದು ಹೇಳಿದರು.

ಶುದ್ಧ ನೀರಿನ ಘಟಕ ಸರಿಪಡಿಸಿ: ಗ್ರಾಮೀಣ ಭಾಗದಲ್ಲಿ 255 ಶುದ್ಧ ಕುಡಿಯುವ ನೀರಿನ ಘಟಕ ನಿರ್ವಿುಸಲಾಗಿದ್ದು, ಇವುಗಳಲ್ಲಿ ಹಲವು ಇನ್ನೂ ಸೇವೆಗೆ ಲಭ್ಯವಿಲ್ಲ. 50ಕ್ಕೂ ಹೆಚ್ಚು ನೀರಿನ ಘಟಕಗಳು ಒಂದೇ ವರ್ಷದಲ್ಲಿ ಸಂಪೂರ್ಣ ಹಾಳಾಗಿವೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ.ಕಾಂತೇಶ್ ಆಕ್ಷೇಪ ವ್ಯಕ್ತಪಡಿಸಿದರು. ಶುದ್ಧ ಕುಡಿಯುವ ನೀರಿನ ಘಟಕದ ವಿಷಯದಲ್ಲಿ ಅಧಿಕಾರಿಗಳ ಲೋಪ ಎದ್ದು ಕಾಣುತ್ತಿದೆ. ಕಳಪೆ ಯಂತ್ರೋಪಕರಣಗಳನ್ನು ಬಳಸಿ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದೇ ಇಂದಿನ ಸ್ಥಿತಿಗೆ ಕಾರಣ. ಕೂಡಲೇ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸರಿಪಡಿಸಬೇಕೆಂದು ಹೇಳಿದರು.

400 ಅಂಗನವಾಡಿಗೆ ಹಾನಿ: ಅತಿವೃಷ್ಟಿಯಿಂದ ಜಿಲ್ಲೆಯ 400ಕ್ಕೂ ಹೆಚ್ಚು ಅಂಗನವಾಡಿ ಕಟ್ಟಡಗಳೀಗೆ ಹಾನಿ ಉಂಟಾಗಿದೆ. ಈ ಪೈಕಿ 200ಕ್ಕೂ ಹೆಚ್ಚು ಅಂಗನವಾಡಿ ಕಟ್ಟಡಗಳನ್ನು ಹೊಸದಾಗಿ ನಿರ್ವಿುಸಬೇಕಾದ ಅನಿವಾರ್ಯತೆ ಇದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶೇಷಪ್ಪ ಸಭೆಗೆ ತಿಳಿಸಿದರು. ನರೇಗಾದಲ್ಲಿ ಅಂಗನವಾಡಿ ಕಟ್ಟಡಗಳ ನಿರ್ವಣಕ್ಕೆ ಅವಕಾಶವಿದೆಯೇ ಎಂಬುದನ್ನು ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸುವಂತೆ ಜಿಪಂ ಸಿಇಒ ಎಂ.ಎಲ್.ವೈಶಾಲಿ ಸೂಚಿಸಿದರು.

ಗುರಿ ಸಾಧನೆಯಾಗದ ಬಿತ್ತನೆ: ಮುಂಗಾರು ಹಂಗಾಮಿನಲ್ಲಿ 1,59,457 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಇದುವರೆಗೆ 1,48,946 ಹೆಕ್ಟೇರ್ ಬಿತ್ತನೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,65,534 ಹೆಕ್ಟೇರ್ ಬಿತ್ತನೆಯಾಗಿತ್ತು. ಭತ್ತ 7 ಸಾವಿರ ಹೆಕ್ಟೇರ್, ಮುಸುಕಿನ ಜೋಳ 950 ಹೆಕ್ಟೇರ್, ರಾಗಿ 330 ಹೆಕ್ಟೇರ್, ದ್ವಿದಳ ಧಾನ್ಯ 300 ಹಾಗೂ 1,700 ಹೆಕ್ಟೇರ್ ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳ ಬಿತ್ತನೆ ಕುಂಠಿತವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣ್​ಕುಮಾರ್ ಸಭೆಗೆ ತಿಳಿಸಿದರು.

ಜಿಪಂ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಗ ನಾಯ್ಕ, ಜಿಪಂ ಸಿಇಒ ಎಂ.ಎಲ್.ವೈಶಾಲಿ ಉಪಸ್ಥಿತರಿದ್ದರು.</p>

Leave a Reply

Your email address will not be published. Required fields are marked *