ಪರಿಹಾರಕ್ಕಾಗಿ ಹಣದ ಹೊಳೆ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ತ್ವರಿತ ಬಸ್ ಸಂಚಾರ ವ್ಯವಸ್ಥೆ (ಬಿಆರ್​ಟಿಎಸ್) ಯೋಜನೆಗೆ ಭೂಮಿ ಕಳೆದುಕೊಂಡವರಿಗೆ ಕಂಪನಿ ಭರಪೂರ ಕೊಡುಗೆ ನೀಡಿದೆ. ಅಕ್ರಮ, ಅನಧಿಕೃತ ಕಟ್ಟಡಗಳಿಗೂ ಹಣದ ಹೊಳೆ ಹರಿಸುವ ಮೂಲಕ ಕರದಾತರು ಹುಬ್ಬೇರಿಸುವಂತೆ ಮಾಡಿದೆ.

ಧಾರವಾಡ ಜಿಲ್ಲೆಯ ಇತಿಹಾಸದಲ್ಲಿಯೇ ಇಷ್ಟೊಂದು ದೊಡ್ಡ ಮೊತ್ತದ ಭೂಸ್ವಾಧೀನ ಪರಿಹಾರ ನೀಡಿರುವುದು ಇದೇ ಮೊದಲು. ಬಿಆರ್​ಟಿಎಸ್ ಯೋಜನೆಗೆ ಅವಳಿನಗರ ಮಧ್ಯೆ ಒಟ್ಟು 72 ಎಕರೆ ಜಮೀನು ವಶಪಡಿಸಿಕೊಳ್ಳಲಾಗಿದೆ. ಇದಕ್ಕಾಗಿ ಬಿಆರ್​ಟಿಎಸ್ ಕಂಪನಿ ಬರೊಬ್ಬರಿ 303 ಕೋಟಿ ರೂ. ಪರಿಹಾರ ನೀಡಿದೆ.

ವಿಪರ್ಯಾಸ ಎಂದರೆ ಬಿಆರ್​ಟಿಎಸ್ ಯೋಜನಾ ವೆಚ್ಚ ಎಷ್ಟು ಗೊತ್ತೆ? 2012ರಲ್ಲಿ ಯೋಜನೆ ಜಾರಿಗೆ ಮುಂದಾದಾಗ 690 ಕೋಟಿ ರೂ. ಎಂದು ನಿಗದಿಯಾಗಿತ್ತು. ಹಾಗೆ ನೋಡಿದರೆ ಯೋಜನೆಯ ಅರ್ಧದಷ್ಟು ಹಣ ಪರಿಹಾರಕ್ಕಾಗಿಯೇ ನೀಡಿರುವುದು ವಿಶೇಷ.

ಹುಬ್ಬಳ್ಳಿ- ಧಾರವಾಡದಲ್ಲಿ ಬಿಆರ್​ಟಿಎಸ್ ಯೋಜನೆಗೆ ಆರಂಭದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಶತಾಯಗತಾಯ ಯೋಜನೆ ಜಾರಿಗೆ ಪ್ರಯತ್ನ ನಡೆಯಿತು. ಅದೇ ವೇಳೆಗೆ ಭೂಸ್ವಾಧೀನಕ್ಕೆ ಮಾಲೀಕರೊಂದಿಗೆ ಮಾತುಕತೆ ನಡೆಸಿ ಪರಿಹಾರ ಕೊಡಲು ಮುಂದಾದಾಗ ಪ್ರತಿಯೊಬ್ಬ ಮಾಲೀಕರಿಗೆ ಅತೀ ಹೆಚ್ಚಿನ ಪರಿಹಾರ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

ಏನೇ ಆಗಲಿ ಯೋಜನೆ ನಿಲ್ಲಬಾರದು ಎನ್ನುವ ಒಂದೇ ಉದ್ದೇಶಕ್ಕೆ ಕೆಲವೆಡೆ ಅಗತ್ಯಕ್ಕಿಂತ ಹೆಚ್ಚಿನ ಪರಿಹಾರ ನೀಡಲಾಗಿದೆ ಎಂಬ ಆರೋಪಗಳೂ ಈಗಲೂ ಕೇಳಿಬರುತ್ತಿವೆ.

ನಿಜವಾಗಿ ಜಮೀನು ವಶಪಡಿಸಿಕೊಂಡಿದ್ದರೆ ಪರಿಹಾರ ನೀಡಲಿ. ಆದರೆ, ಕೆಲವೆಡೆ ಅಕ್ರಮವಾಗಿ, ನಿರ್ಮಾಣ ಮಾಡಬಾರದ ಜಾಗದಲ್ಲಿರುವ ಕಟ್ಟಡಗಳಿಗೂ ಪರಿಹಾರ ನೀಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ.

ಇಲ್ಲಿಯ ಹೊಸೂರ ಸರ್ಕಲ್​ನಲ್ಲಿರುವ ರಾಜಕಾಲುವೆ ಮೇಲೆ ಅದು ಕೂಡ ಮಳೆ ನೀರು (ಸದ್ಯ ಕೊಳಕು) ಹರಿಯುವ ಜಾಗದಲ್ಲಿ ನಿರ್ವಿುಸಿರುವ ವಾಣಿಜ್ಯ ಸಂಕೀರ್ಣಕ್ಕೂ ಲಕ್ಷಾಂತರ ರೂ. ಪರಿಹಾರ ನೀಡಿರುವುದು ಕರದಾತರನ್ನು ಕೆರಳಿಸಿದೆ.

ಇದೇ ರೀತಿ ಹಲವು ಕಡೆಗಳಲ್ಲಿ ಅನಗತ್ಯವಾಗಿ ಪರಿಹಾರದ ಹೆಸರಲ್ಲಿ ಹಣದ ಹೊಳೆ ಹರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಮೂಗಿಗಿಂತ ಮೂಗುತಿ ಭಾರ ಎನ್ನುವ ಹಾಗೆ 2012ರಲ್ಲಿ 690 ಕೋಟಿ ರೂ. ಇದ್ದ ಯೋಜನಾ ವೆಚ್ಚದಲ್ಲಿ ಭೂಸ್ವಾಧೀನಕ್ಕಾಗಿಯೇ 303 ಕೋಟಿ ರೂ. ಕಳೆದುಕೊಳ್ಳಲಾಗಿದೆ. ಇದನ್ನು ಬಿಆರ್​ಟಿಎಸ್ ಕಂಪನಿ ವೆಬ್​ಸೈಟ್​ನಲ್ಲೂ ಪ್ರಕಟಿಸಿದೆ. ಬಹುಶಃ 20 ಕಿ.ಮೀ. ಉದ್ದದ ಒಂದು ರಸ್ತೆ ಅಭಿವೃದ್ಧಿಗೆ ಇಷ್ಟೊಂದು ದೊಡ್ಡ ಮೊತ್ತದ ಪರಿಹಾರ ನೀಡಿರುವುದು ಎಲ್ಲಿಯೂ ಇರಲಿಕ್ಕಿಲ್ಲ ಎಂಬುದು ತಜ್ಞರ ಅಭಿಪ್ರಾಯ.

ಬಿಆರ್​ಟಿಎಸ್ ಯೋಜನೆ ಜಾರಿ ವಿಶ್ವ ಬ್ಯಾಂಕ್ ನೆರವಿನಡಿ ನಡೆಯುತ್ತಿದೆ. ವಿಶ್ವಬ್ಯಾಂಕ್ ನಿಯಮಾವಳಿ ಪ್ರಕಾರ ಯೋಜನೆಗೆ ಯಾವುದೇ ರೀತಿಯಲ್ಲಿ ಮಳಿಗೆ, ಅಂಗಡಿ ಕಳೆದುಕೊಳ್ಳುವವರಿಗೆ ಪರಿಹಾರ ನೀಡುವುದು ಅಗತ್ಯವಾಗಿದೆ. ಆ ನಿಯಮದಂತೆ ಪುನರ್​ವಸತಿಗಾಗಿ (ಆರ್ ಆಂಡ್ ಆರ್) ನಾಲಾ ಮೇಲಿನ ವಾಣಿಜ್ಯ ಸಂಕೀರ್ಣದವರಿಗೂ ಪರಿಹಾರ ನೀಡಲಾಗಿದೆ. ಇಲ್ಲಿ ಭೂಸ್ವಾಧೀನಕ್ಕಾಗಿ ಪರಿಹಾರ ನೀಡಿಲ್ಲ ಎಂದು ಬಿಆರ್​ಟಿಎಸ್ ಭೂಸ್ವಾಧೀನ ಅಧಿಕಾರಿ ವಿನಾಯಕ ಪಾಲನಕರ ಸ್ಪಷ್ಟಪಡಿಸಿದ್ದಾರೆ.

ದರ ನಿಗದಿ ಹೇಗೆ? ಬಿಆರ್​ಟಿಎಸ್ ಯೋಜನೆಯಡಿ ಭೂಮಿ ಕಳೆದುಕೊಳ್ಳುವವರಿಗೆ ಪರಿಹಾರ ನೀಡಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಂಧಾನ ಸಮಿತಿ ರಚಿಸಲಾಗಿದೆ. ಮಹಾನಗರ ಪಾಲಿಕೆ ಆಯುಕ್ತರು, ಬಿಆರ್​ಟಿಎಸ್ ವ್ಯವಸ್ಥಾಪಕ ನಿರ್ದೇಶಕರು, ಕೆಆರ್​ಡಿಸಿಎಲ್ ಅಧೀಕ್ಷಕ ಇಂಜಿನಿಯರ್ ಸೇರಿ ಏಳು ಜನರ ಸಮಿತಿ ಇದಾಗಿದೆ. ಒಟ್ಟಾರೆ ಭೂಸ್ವಾಧೀನ ಹಾಗೂ ಪುನರ್​ವಸತಿಗಾಗಿ ಹಣದ ಹೊಳೆ ಹರಿದಿದೆ. ಅಲ್ಲದೇ ಎಷ್ಟೋ ಜನರಿಗೆ ಪರಿಹಾರದಲ್ಲಿ ವಿಳಂಬ, ಬಿಡಿಗಾಸು ಸಿಕ್ಕಿರುವ ಬಗ್ಗೆಯೂ ಸಂತ್ರಸ್ತರೇ ಆರೋಪ ಮಾಡುತ್ತಾರೆ. ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚಿದ್ದು, ಬಿಆರ್​ಟಿಎಸ್ ಭೂಸ್ವಾಧೀನ ಪರಿಹಾರವೇ ಒಂದು ಗೋಲ್‍ಮಾಲ್ ಎನ್ನುವ ಆರೋಪಗಳು ಇವೆ. ಈ ಬಗ್ಗೆ ತನಿಖೆ ನಡೆದರೆ ಒಟ್ಟಾರೆ ಹೂರಣ ಹೊರಬೀಳಲಿದೆ ಎಂಬ ಅಭಿಪ್ರಾಯ ಹಲವರದ್ದಾಗಿದೆ.