ಪರಿಸರ ಸ್ನೇಹಿ ಗಣೇಶ ಮೂರ್ತಿಗೆ ಬೇಡಿಕೆ

ಲಕ್ಷ್ಮೇಶ್ವರ: ಹಿಂದುಗಳ ಪ್ರಮುಖ ಹಬ್ಬವಾದ ಗಣೇಶ ಚೌತಿ ಸಮೀಪಿಸುತ್ತಿದ್ದು, ಕಲಾವಿದರು ವಿನಾಯಕನ ಮೂರ್ತಿಗೆ ಅಂತಿಮ ಸ್ಪರ್ಶ ನೀಡುವ ಕಾಯಕದಲ್ಲಿ ನಿರತರಾಗಿದ್ದಾರೆ.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಪಿಒಪಿ ಗಣೇಶನ ಮೂರ್ತಿಗಳನ್ನು ನಿಷೇಧಿಸಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಇದರಿಂದಾಗಿ ಪಟ್ಟಣದ ಬಹುತೇಕ ಕಲಾವಿದರು ಪರಿಸರ ಸ್ನೇಹಿ ಗಣೇಶ ಮೂರ್ತಿ ನಿರ್ವಣಕ್ಕೆ ಒತ್ತು ನೀಡಿದ್ದಾರೆ. ಮಣ್ಣಿನ ಮೂರ್ತಿಗಳಿಗೆ ಗ್ರಾಹಕರ ಬೇಡಿಕೆಯೂ ಹೆಚ್ಚಾಗಿದೆ.

ಪಟ್ಟಣದ ಕುಂಬಾರ ಓಣಿ ಹಾಗೂ ಬಸ್ತಿ ಕೆರೆ ಓಣಿಯಲ್ಲಿರುವ 20ಕ್ಕೂ ಹೆಚ್ಚು ಮೂರ್ತಿ ಕಲಾವಿದರಿಂದ 10 ಸಾವಿರ ಗಣೇಶನ ಮೂರ್ತಿಗಳು ಮಾರಾಟಕ್ಕೆ ಸಿದ್ಧಗೊಳ್ಳುತ್ತಿವೆ. ಅಂತಿಮ ಸ್ಪರ್ಶವಷ್ಟೇ ಬಾಕಿ ಉಳಿದಿದೆ. ಈಗಾಗಲೇ ಸಾರ್ವಜನಿಕರು, ಸಂಘ-ಸಂಸ್ಥೆಗಳು ತಮ್ಮಿಷ್ಟದ ಮೂರ್ತಿಗಳನ್ನು ಗುರುತಿಸಿ ಮುಂಗಡ ಹಣ ನೀಡಿ ಹೆಸರು ಬರೆಯಿಸುತ್ತಿದ್ದಾರೆ.

‘ನಮ್ಮ ಕುಟುಂಬ ವಂಶಪಾರಂಪರ್ಯವಾಗಿ ಮೂರ್ತಿ ತಯಾರಿಕೆಯಲ್ಲಿ ತೊಡಗಿದೆ. ನಾಯಿಕೆರೂರ, ಕಡಕೋಳ ಮತ್ತಿತರ ಕಡೆಗಳಿಂದ ಮಣ್ಣು ಖರೀದಿಸಿ ತಂದು ಹದ ಮಾಡಿ ಗಣಪನ ಮೂರ್ತಿ ತಯಾರಿಸುತ್ತೇವೆ. ಈ ಬಾರಿ ಗಣೇಶೋತ್ಸವಕ್ಕಾಗಿ 500 ಮೂರ್ತಿಗಳನ್ನು ಸಿದ್ಧಪಡಿಸಿದ್ದು, ಇದರಲ್ಲಿ 250ಕ್ಕೂ ಹೆಚ್ಚು ಪರಿಸರ ಸ್ನೇಹಿಯಾಗಿವೆ. ಮೂರ್ತಿಗಳಿಗೆ ಅನುಗುಣವಾಗಿ ಬೆಲೆ ನಿಗದಿಪಡಿಸಲಾಗುತ್ತದೆ’ ಎನ್ನುತ್ತಾರೆ ಕಲಾವಿದ ಸಹನರಾಜ ಚಕ್ರಸಾಲಿ.

ಸಾಮಾನ್ಯ ಎತ್ತರ ಗಣಪತಿ ಮೂರ್ತಿಗಳಿಗೆ 500 ರೂ., 5 ಅಡಿ ಎತ್ತರದ ಮಣ್ಣಿನ ಮೂರ್ತಿಗಳಿಗೆ 10 ಸಾವಿರ ರೂ. ವರೆಗೆ ಬೆಲೆ ನಿಗದಿ ಮಾಡಲಾಗಿದೆ. ಕಚ್ಚಾ ಸಾಮಗ್ರಿಗಳ ಬೆಲೆಯಲ್ಲಿ ಹೆಚ್ಚಳವಾಗಿರುವುದರಿಂದ ಮೂರ್ತಿಗಳ ಬೆಲೆಯಲ್ಲೂ ಹೆಚ್ಚಳವಾಗಿದೆ. ಎಲ್ಲ ಮೂರ್ತಿಗಳು ಮಾರಾಟವಾದಾಗ ಮಾತ್ರ ಖರ್ಚು-ವೆಚ್ಚ ತೆಗೆದು ತಕ್ಕಮಟ್ಟಿನ ಆದಾಯ ನಿರೀಕ್ಷಿಸಬಹುದಾಗಿದೆ ಎನ್ನುತ್ತಾರೆ ಮೂರ್ತಿ ಕಲಾವಿದರಾದ ಫಕಿರೇಶ ಚಕ್ರಸಾಲಿ, ಪ್ರವೀಣ ಗಾಯಕರ, ಪ್ರಕಾಶ ಕುಂಬಾರ, ಮಹೇಶ ಕುಂಬಾರ ಮತ್ತಿತರರು.

ಸರ್ಕಾರ ಈಗಾಗಲೇ ಪಿಒಪಿ ಗಣಪತಿಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಈ ವರ್ಷ ಪಿಒಪಿ ಗಣಪತಿ ಮೂರ್ತಿಗಳನ್ನು ಸಿದ್ಧಪಡಿಸುವುದು, ಮಾರಾಟ ಮಾಡುವುದು ಮತ್ತು ಪ್ರತಿಷ್ಠಾಪಿಸುವುದು ಕಂಡುಬಂದರೆ ಅಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆ. 23ರ ಮಧ್ಯಾಹ್ನ 3 ಗಂಟೆಗೆ ಈ ಕುರಿತು ತಿಳಿವಳಿಕೆ ಸಭೆ ಕರೆಯಲಾಗುವುದು.
-ಭ್ರಮರಾಂಭ ಗುಬ್ಬಿಶೆಟ್ಟಿ ತಹಸೀಲ್ದಾರ್

Leave a Reply

Your email address will not be published. Required fields are marked *