ಪರಿಸರ ಸಂರಕ್ಷಣೆಗೆ ಜಿಲ್ಲಾದ್ಯಂತ ಜನಸ್ಪಂದನೆ

ರಾಮನಗರ: ವಿಶ್ವ ಪರಿಸರ ದಿನಾಚರಣೆಯ ನಿಮಿತ್ತ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಸುದ್ದಿವಾಹಿನಿ ವತಿಯಿಂದ ಜಿಲ್ಲಾದ್ಯಂತ ಮಂಗಳವಾರ ನಡೆದ ಪರಿಸರ ದಿನಾಚರಣೆಗೆ ಅರಣ್ಯ ಇಲಾಖೆ ಸೇರಿ ವಿವಿಧ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಯಿತು.

ಜಿಲ್ಲಾ ಕೇಂದ್ರ ರಾಮನಗರದ ಕರ್ನಾಟಕ ಸಾಹಸ ಕಲಾ ಶಿಕ್ಷಣ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಕರ್ನಾಟಕ ರಣ ಹದ್ದು ಸಂರಕ್ಷಣಾ ಟ್ರಸ್ಟ್, ರಾಮದುರ್ಗ ಸರ್ಕಾರಿ ಪ್ರೌಢಶಾಲೆ ಮತ್ತು ಕರ್ನಾಟಕ ಸಾಹಸ ಕಲಾ ಶಿಕ್ಷಣ ಕೇಂದ್ರ ಸಹಕಾರ ನೀಡಿತ್ತು. ಪ್ರೌಢಶಾಲೆ ವಿದ್ಯಾರ್ಥಿಗಳ ಜತೆಗೂಡಿದ ಗಣ್ಯರು ಕೇಂದ್ರದ ಆವರಣದಲ್ಲಿ ಗಿಡ ನೆಟ್ಟು, ಖುಷಿ ಪಟ್ಟರು. ವಿವಿಧ ಜಾತಿಯ ನೂರು ಗಿಡಗಳನ್ನು ವಿದ್ಯಾರ್ಥಿಗಳಿಗೆ ಮತ್ತು ಪರಿಸರ ಕಾಳಜಿ ಹೊಂದಿದ ನಾಗರಿಕರಿಗೆ ವಿತರಿಸಲಾಯಿತು.

ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಾಹಸ ಕಲಾ ಶಿಕ್ಷಣ ಕೇಂದ್ರದ ಗೌರವಾಧ್ಯಕ್ಷ ವಿ.ರಾಮಾಂಜನೇಯ ಮಾತನಾಡಿ, ಅರಣ್ಯವನ್ನು ನಾಶ ಮಾಡಲಾಗುತ್ತಿದೆಯೇ ಹೊರತು ಬೆಳೆಸುವ ಕಾರ್ಯವಾಗುತ್ತಿಲ್ಲ. ಇಂದಿನ ಯುವ ಜನತೆ ಕೃಷಿಯಿಂದ ದೂರ ಸರಿಯುತ್ತಿರುವುದೇ ಪರಿಸರ ನಾಶಕ್ಕೆ ಪ್ರಮುಖ ಕಾರಣವಾಗಿದೆ ಎಂದರು.

ರೈತ ವೆಂಕಟರಾಮಯ್ಯ ಎ. ಮಾತನಾಡಿ, ಚಿಕ್ಕವನಾಗಿದ್ದಾಗ ಬೆಳೆಸಿದ ವಿವಿಧ ಜಾತಿಯ ಹಣ್ಣಿನ ಮರಗಿಡಗಳು ಇಂದು ಸ್ವಾವಲಂಬಿ ಬದುಕಿಗೆ ಆಸರೆಯಾಗಿವೆ. ಸ್ವಚ್ಛ ಪರಿಸರದ ಜತೆಗೆ ನೆಮ್ಮದಿಯ ಬದುಕು ಸಾಧ್ಯವಾಗಿದೆ. ಹಾಗಾಗಿ ಪ್ರತಿಯೊಂದು ಮಗುವೂ ಗಿಡ ನೆಟ್ಟು ಪೋಷಿಸುವ ಕಾರ್ಯ ಮಾಡಬೇಕು ಎಂದರು.

ರಾಮದುರ್ಗಾ ಶಾಲೆ ಶಿಕ್ಷಕ ಜವರಯ್ಯ ಮಾತನಾಡಿ, ಪರಿಸರ ಪ್ರೇಮವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಉದ್ದೇಶದಿಂದ ವಿಜಯವಾಣಿ ಮತ್ತು ದಿಗ್ವಿಜಯ ವಾಹಿನಿ ಈ ಕಾರ್ಯಕ್ರಮ ಆಯೋಜಿಸಿದೆ. ಎಲ್ಲ ವಿದ್ಯಾರ್ಥಿಗಳಿಗೂ ಗಿಡಗಳನ್ನು ವಿತರಿಸಿ ಮನೆ ಬಳಿ ನೆಟ್ಟು, ಪೋಷಿಸುವಂತೆ ತಿಳಿಸಿದೆ. ಇಂಥ ಪರಿಸರಪರ ಕಾಳಜಿ ಹೊಂದಿರುವ ಪತ್ರಿಕೆ ಮತ್ತು ವಾಹಿನಿಯ ಕಾರ್ಯ ಶ್ಲಾಘನೀಯ ಎಂದರು.

ರಾಮದುರ್ಗ ಸರ್ಕಾರಿ ಪೌಢಶಾಲೆ ವಿದ್ಯಾರ್ಥಿಗಳಿಗೆ ವಿವಿಧ ಜಾತಿಯ ಗಿಡಗಳನ್ನು ವಿತರಿಸಲಾಯಿತು. ಕಾರ್ಯಕ್ರಮ ಆರಂಭಕ್ಕೆ ಮುನ್ನ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಾಹಸ ಕಲಾ ಶಿಕ್ಷಣ ಕೇಂದ್ರದ ಸಂಚಾಲಕ ಗಿರೀಶ್, ರಾಮದುರ್ಗಾ ಶಾಲೆ ಶಿಕ್ಷಕ ಚನ್ನಪ್ಪ, ಕರ್ನಾಟಕ ರಣ ಹದ್ದು ಸಂರಕ್ಷಣಾ ಟ್ರಸ್ಟ್ ಕಾರ್ಯದರ್ಶಿ ಶಶಿಕುಮಾರ್, ಸದಸ್ಯ ಪ್ರವೀಣ್​ವುತ್ತಿತರರು ಇದ್ದರು.