ಪರಿಸರ ಮಾಲಿನ್ಯದಿಂದ ಪ್ರಪಂಚದ ವಿನಾಶ

ಈ ಸಲ ಅಕ್ಟೋಬರ್ 2ರಂದು ‘ಸ್ವಚ್ಛ ಭಾರತ’ ಆಂದೋಲನವನ್ನು ವಿನೂತನವಾಗಿ ಆಚರಿಸಿದೆವು. ಪ್ರಧಾನಿ ನರೇಂದ್ರ ಮೋದಿಯವರ ಕನಸು ನನಸಾಗಬೇಕು ಎಂದರೆ ಪ್ರತಿಯೊಬ್ಬರು ಶುಚಿತ್ವಕ್ಕೆ ಗಮನಕೊಟ್ಟು ಮಕ್ಕಳಲ್ಲಿ ಸ್ವಚ್ಛತೆಯ ಮಹತ್ವದ ಅರಿವು ಮೂಡಿಸಬೇಕು.

ಹಿಂದುಳಿದ ರಾಷ್ಟ್ರವಾದ ದಕ್ಷಿಣ ಆಫ್ರಿಕಾದ ರಾಜಧಾನಿ ಕೇಪ್​ಟೌನ್​ಗೆ ಇತ್ತೀಚೆಗೆ ಹೋಗಿದ್ದಾಗ ಆ ನಗರ ಸ್ವಚ್ಛವಾಗಿ ಕಂಗೊಳಿಸುತ್ತಿದ್ದುದನ್ನು ಕಂಡು ಚಕಿತಳಾದೆ. ನಮ್ಮ ಬೆಂಗಳೂರಿಗಿಂತ ಎಷ್ಟು ಸ್ವಚ್ಛವಾಗಿದೆ ಎಂದು ಮನದಲ್ಲಿಯೇ ಅಂದುಕೊಳ್ಳುತ್ತಿದ್ದಂತೆಯೇ ಮಾರ್ಗದರ್ಶಿ ಹೇಳಿದ, ‘20 ವರ್ಷಗಳ ಹಿಂದೆ ನಾವು ನಮ್ಮ ಶಾಲೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಮಹತ್ವ ತಿಳಿಸಿಕೊಟ್ಟದ್ದರ ಪರಿಣಾಮ ನಾವಿಂದು ಇಷ್ಟು ಸ್ವಚ್ಛ ಕೇಪ್​ಟೌನನ್ನು ನೋಡಬಹುದು’!

ಹೌದು, ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿ ಬಂದ ಮೋಹನದಾಸ್ ಕರಮ ಚಂದ ಗಾಂಧಿಯವರು ಕೂಡ ಸ್ವಚ್ಛ ಭಾರತದ ಕನಸು ಕಂಡು ಸ್ವಾತಂತ್ರ್ಯ ಹೋರಾಟದ ಜತೆಗೆ ಸ್ವಚ್ಛತೆಯ ಆಂದೋಲನ ಪ್ರಾರಂಭಿಸಿದರು. ಆದರೆ ಏಳು ದಶಕ ಕಳೆದರೂ ಭಾರತ ಬಯಲು ಶೌಚ ಮುಕ್ತವಾಗಿಲ್ಲ! ಕಳೆದ ಮೂರು ವರ್ಷಗಳಲ್ಲಿ ಸ್ವಚ್ಛ ಭಾರತದ ಅಡಿಯಲ್ಲಿ 3 ಕೋಟಿ ಶೌಚಗೃಹ ಕಟ್ಟಲಾಗಿದೆ! ಆದರೆ ಶುಚಿತ್ವ ಕಾಪಾಡುವುದು ಅವುಗಳನ್ನು ಬಳಸುವವರ ಮೇಲೆ ಅವಲಂಬಿತವಾಗಿದೆ!

ಒಂದು ಸಲ ಗಾಂಧಿಯವರು ಸಾಬರಮತಿ ಆಶ್ರಮದಲ್ಲಿ ವಾಯುವಿಹಾರ ಮಾಡುತ್ತಿರುವಾಗ ಒಬ್ಬ ಯುವಕ ವಿನಮ್ರವಾಗಿ ನಮಸ್ಕರಿಸಿದ. ಬಾಪೂ ಅಷ್ಟೇ ಅಕ್ಕರೆಯಿಂದ ಆ ಯುವಕನ ಹೆಗಲ ಮೇಲೆ ಕೈ ಇಟ್ಟು ಮಾತನಾಡಿ, ‘ಏನು ಮಾಡುತ್ತಿರುವೆ ಆಶ್ರಮದಲ್ಲಿ?’ ಎಂದು ಕೇಳಿದರು.

ಆಗ ಆ ಯುವಕ ಅತೀವ ಉತ್ಸಾಹದಿಂದ, ‘ಶೌಚಗೃಹ ಶುಚಿಗೊಳಿಸುತ್ತೇನೆ ಬಾಪೂಜಿ’ ಎಂದ. ಅವನ ಮಾತಿಗೆ ಪ್ರಸನ್ನರಾದ ಗಾಂಧಿ- ‘ಭೇಷ್, ನಾನು ಇಲ್ಲಿ ಇನ್​ಸ್ಪೆಕ್ಟರ್​ಗಳನ್ನು ನೇಮಿಸಿದ್ದೇನೆ. ಚೆನ್ನಾಗಿ ಶುಚಿಗೊಳಿಸಿ ಇಲ್ಲದಿದ್ದರೆ ಅವರೇ ನನಗೆ ವರದಿ ಮಾಡುತ್ತಾರೆ’ ಎಂದರು. ಬಾಪೂವಿನ ಮಾರ್ವಿುಕ ಮಾತು ಅರ್ಥವಾಗದ ಹುಡುಗ ಚಕಿತನಾಗಿ – ‘ಹೌದೇ, ಬಾಪೂಜಿ ನನಗೆಲ್ಲೂ ಇನ್​ಸ್ಪೆಕ್ಟರ್​ಗಳು ಕಣ್ಣಿಗೆ ಬೀಳಲಿಲ್ಲವಲ್ಲ. ಎಲ್ಲಿದ್ದಾರೆ?, ಯಾವಾಗ ಬರುತ್ತಾರೆ?’ ಎಂದೆಲ್ಲ ಕೇಳಿದ. ಜೋರಾಗಿ ನಗುತ್ತ ಬಾಪೂಜಿ ಉತ್ತರಿಸಿದರು – ‘ಮಗುವೇ, ಎಲ್ಲಿ ಗಲೀಜು ಇರುತ್ತದೋ ಅಲ್ಲಿ ಮಾತ್ರ ಆ ಇನ್​ಸ್ಪೆಕ್ಟರ್​ಗಳು ಬರುತ್ತವೆ. ಅವೇ ನೊಣಗಳು. ನನಗೆ ನೋಣ ಕಂಡರೆ ಸಾಕು ಗೊತ್ತಾಗುತ್ತದೆ ಅಲ್ಲಿ ಕೊಳಕು ಇದೆ ಎಂದು’ – ಎಷ್ಟು ಸತ್ಯ ನುಡಿ!

ನೊಣ ಅಂದಾಗ ನನಗೆ ನೆನಪಾಗುವುದು ನಮ್ಮ ಅಪ್ಪ ಹೇಳಿದ ಸರ್ವಜ್ಞನ ವಚನ. ಒಂದು ಸಲ ಸುತ್ತೂರು ಶ್ರೀಗಳು ಕರಣ್ ಸಿಂಗ್ ಅವರ ಉಪನಿಷತ್ ಪ್ರವಚನ ಆಯೋಜಿಸಿದ್ದರು. ಅದ್ಭುತವಾಗಿ ಶಿವನ ಸ್ತೋತ್ರ ಹೇಳಿ ಅವರು ಅಪರೂಪದ ಪ್ರವಚನ ನೀಡಿದರು. ಇದನ್ನು ಕೇಳಲು ಬಂದವರು ಬೆರಳೆಣಿಕೆಯಷ್ಟು ಜನ! ಅಜ್ಞಾನದ ಅಂಧಕಾರ ನೀಗಿಸುವ ಪ್ರವಚನಕ್ಕೆ ಬರದ ಬೆಂಗಳೂರು ಮಹಾಜನರ ಪೈಕಿ ಸಾವಿರಾರು ಜನ ಅಂದೇ ರಾತ್ರಿ ಅರಮನೆ ಮೈದಾನದಲ್ಲಿ ಪಾಪ್ ಸಂಗೀತ ಕೇಳಲು ಸೇರಿದ್ದರು! ಇದನ್ನು ನಾನು ನನ್ನ ಅಪ್ಪನಿಗೆ ಹೇಳಿದಾಗ ಅವರು ತತ್​ಕ್ಷಣ ಹೇಳಿದ ಸರ್ವಜ್ಞನ ತ್ರಿಪದಿ ಇಂದಿಗೂ ನನ್ನ ಕಿವಿಯಲ್ಲಿ ಗುಂಯ್ಗುಡುತ್ತಿದೆ.

ಗಂಧವನು ತೇದಲ್ಲಿ| ಒಂದು ನೊಣವನು ಕಾಣೆ |

ಸಂಧಿಸಿ ಮಲವ ಬಿಡುವಲ್ಲಿ ನೊಣ ಮುತ್ತು|

ವೃಂದವನು ನೋಡ ಸರ್ವಜ್ಞ||

ಇದು ಸರ್ವಜ್ಞ ಪ್ರತಿಪಾದಿಸಿದ ಸರ್ವಕಾಲೀನ ಸತ್ಯ! ಇಂದಿನ ಯುವಕರು ನೊಣಗಳಂತೆ ದುರಭ್ಯಾಸಕ್ಕೆ ತುತ್ತಾಗಿ ಶರೀರವನ್ನು ರೋಗಗ್ರಸ್ತ ಮಾಡಿಕೊಳ್ಳುತ್ತಿದ್ದಾರೆ. ಹಾಗೆ ನೋಡಿದರೆ ಮಕ್ಕಳು ಮುದುಕರೆನ್ನದೇ ಜನ ಸಾಂಕ್ರಾಮಿಕ ರೋಗಗಳಿಗೆ ಬಲಯಾಗುತ್ತಿರುವುದನ್ನು ನೋಡಿದರೆ ಭಾರತದ ಪ್ರತಿಯೊಬ್ಬ ಪ್ರಜೆಯಲ್ಲೂ ಶುಚಿತ್ವದ ಅರಿವು ಮೂಡಿಸಲೇ ಬೇಕಾದ ಅನಿವಾರ್ಯತೆ ಇಂದು ಬಂದೊದಗಿದೆ. ‘ಶುಚಿತ್ವವೇ ದೈವತ್ವ’ ಎಂದು ಅರಿತ ಪ್ರಧಾನಿ ನರೇಂದ್ರ ಮೋದಿಯವರು, ‘ಬೇಕಾದರೆ ನನ್ನನ್ನು ಹೀಯಾಳಿಸಿ, ಆದರೆ ‘ಸ್ವಚ್ಛ ಭಾರತ ಆಂದೋಲನ’ವನ್ನು ಹೀಯಾಳಿಸಿ ಅಲ್ಲಗಳೆಯಬೇಡಿ’ ಎಂದು ಕಳಕಳಿಯ ಮನವಿ ಮಾಡಿದ್ದಾರೆ!

ಪರಿಸರ ಮಾಲಿನ್ಯವನ್ನು ನಾವು ಪಂಚಭೂತ ಮಾಲಿನ್ಯ ಅನ್ನಬಹುದಾದ ವಾಯು ಮಾಲಿನ್ಯ, ಜಲ ಮಾಲಿನ್ಯ, ಆಹಾರ ಮಾಲಿನ್ಯ, ಶಬ್ದ ಮಾಲಿನ್ಯ ಮತ್ತು ಕೊನೆಯದಾಗಿ ಮನಸ್ಸು ಮಾಲಿನ್ಯ ಎಂದು ವಿಂಗಡಿಸಬಹುದು. ಇಂದು ನಗರೀಕರಣ ಮತ್ತು ಔದ್ಯೋಗೀಕರಣಗೊಂಡ ಜಗತ್ತಿನಲ್ಲಿ ಸೃಷ್ಟಿಕರ್ತ ಪರಶಿವನ ಸತ್ಯ ಸುಂದರ ಸ್ವರೂಪವಾದ ಪಂಚಭೂತ (ಭೂಮಿ, ನೀರು, ವಾಯು, ಆಕಾಶ, ಬೆಂಕಿ)ಗಳ ಮಹತ್ವ ಮರೆತು ಮಲಿನಗೊಳಿಸುತ್ತಿದ್ದೇವೆ. ಇದರಿಂದ ಜನರಲ್ಲಿ ಕ್ಯಾನ್ಸರ್ ಕಾಯಿಲೆ ಹೆಚ್ಚಿ ಹುಟ್ಟುವ ಮಕ್ಕಳಲ್ಲಿ ನ್ಯೂನತೆ ಉಂಟಾಗುತ್ತಿರುವ ಭಯಂಕರ ಅರಿವು ಇಲ್ಲದಾಗಿದೆ. ಇಂಥ ವಿನಾಶಕಾರಿ ಉದ್ದಿಮೆದಾರರ ಮೇಲೆ ಕಡಿವಾಣ ಹಾಕಬೇಕಾದ ಸರ್ಕಾರ ಕೈಬೆಚ್ಚಗೆ ಮಾಡಿಕೊಂಡು ಕೈಕಟ್ಟಿಕೊಂಡು ಕುಳಿತಿದೆ!

ಇನ್ನು ಜಲಮಾಲಿನ್ಯದ ಬಗ್ಗೆ ಯೋಚಿಸಿದರೆ ನಮ್ಮ ದೇಶದಲ್ಲಿ ಸುಮಾರು ಶೇ.80 ರೋಗಗಳು ಅಶುದ್ಧ ನೀರಿನಿಂದ ಉಂಟಾಗುತ್ತವೆ ಎಂದು ತಿಳಿದು ಬಂದಿದೆ. ಪ್ರಮುಖವಾಗಿ ಟೈಫಾಯ್್ಡ ಕಾಮಾಲೆ (ಜಾಂಡೀಸ್), ಕಾಲರಾ, ಪೋಲಿಯೋ, ವಾಂತಿಭೇದಿ ಅಮಿಬಿಯಾಸಿಸ್, ಜಿಯಾರ್ಡಿಯಾಸಿಸ್ ಇತ್ಯಾದಿ ಕಾಯಿಲೆಗಳು ಕಲುಷಿತ ನೀರು ಕುಡಿಯುವುದರಿಂದ ಬರುತ್ತವೆ. ಕಲುಷಿತ ನೀರಿನಿಂದ ಬರುವ ರೋಗಗಳಿಗೆ ತುತ್ತಾಗಿ ಪ್ರತಿವರ್ಷ 4 ಲಕ್ಷ ಮಕ್ಕಳು ಅಸುನೀಗುತ್ತಿರುವುದು ಶೋಚನೀಯ. ಪ್ರತೀ 5 ಮಕ್ಕಳಲ್ಲಿ ಒಂದು ಮಗು ಕಲುಷಿತ ನೀರಿನಿಂದ ರೋಗಗ್ರಸ್ತವಾಗುತ್ತಿದೆ. ವಿಶ್ವಬ್ಯಾಂಕಿನ ಲೆಕ್ಕದ ಪ್ರಕಾರ ಭಾರತದಲ್ಲಿ ಪ್ರತಿವರ್ಷ ಕಲುಷಿತ ನೀರನ್ನು ಕುಡಿದು ಬರುವ ಕಾಯಿಲೆ ಚಿಕಿತ್ಸೆಗೆ ಬರೋಬ್ಬರಿ 19,995 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂದರೆ ನಮ್ಮ ರಾಜಕಾರಣಿಗಳ ತಾತ್ಸಾರದ ಭಯಂಕರ ಸ್ವರೂಪ ಅರ್ಥವಾಗುತ್ತದೆ. ಹಿಂದೆ ಶುಚಿತ್ವ ಅರಿತ ನಮ್ಮ ಅಜ್ಜ, ಅಜ್ಜಿ ಕೈಕಾಲು ತೊಳೆಯದೇ ಮನೆ ಪ್ರವೇಶಿಸುತ್ತಿರಲಿಲ್ಲ. ಕಾಯಿಸಿ, ಆರಿಸಿದ ಶುಚಿಯಾದ ನೀರನ್ನು ಬಾಯಿ ಕಚ್ಚದೇ ಮೇಲಿಂದ ಕುಡಿಯುತ್ತಿದ್ದರು. ಹಳ್ಳ ನದಿಗಳ ನೀರು ಅಂದು ಶುಚಿಯಾಗಿತ್ತು. ಆದರೆ ಇಂದು ಊರಿನ ಗಲೀಜು ನೀರನ್ನು ನದಿಗೆ ಬಿಟ್ಟು ನದಿನೀರನ್ನೇ ಕಲುಷಿತಗೊಳಿಸಿದ ಮಹಾಪಾಪಿ ಮನುಷ್ಯರು ನಾವು.

ನಮ್ಮ ಪ್ರಾಣಕ್ಕೆ ಪ್ರಾಣ ಕೊಡುವ ಪ್ರಾಣವಾಯುವಿಲ್ಲದೇ ನಾವು ಕೇವಲ ಮೂರು ನಿಮಿಷ ಬದುಕಬಹುದು. ಆದರೆ, ಪ್ರಾಣವಾಯು ಕೊಡುವ ವಾಯುವನ್ನು ಮಲಿನಗೊಳಿಸಿದ್ದರಿಂದ ಪ್ರತೀವರ್ಷ 2 ಕೋಟಿ ಜನ ಸುಮಾರು 45 ಕಾಯಿಲೆಗಳಿಗೆ ತುತ್ತಾಗಿ ಸಾಯುತ್ತಿದ್ದಾರೆ!

ಈ ಹಿಂದೆ ವಾಯುಮಾಲಿನ್ಯದಿಂದ ನ್ಯುಮೋನಿಯಾ, ಬ್ರಾಂಕೈಟಿಸ್, ಎಂಫಿಸೀಮಾ, ಲ್ಯುಕೇಮಿಯಾ, ಶ್ವಾಸಕೋಶದ ಕ್ಯಾನ್ಸರ್ ಮತ್ತು ಕ್ಷಯ ರೋಗ ಬರುವುದೆಂದು ಎಲ್ಲರಿಗೂ ತಿಳಿದಿತ್ತು. ಆದರೆ ಇಂದು ಉದ್ಯಮಗಳಿಂದ ಬರುವ ದಟ್ಟ ಹೊಗೆ, ವಾಹನಗಳ ಪೆಟ್ರೋಲ್, ಡೀಸೆಲ್​ನಿಂದ ಬರುವ ನಿಷ್ಕಾಸ್, ಅದರಲ್ಲಿ ಆರೋಗ್ಯ ಹಾಳುಮಾಡುವ ಇಂಗಾಲದ ಡೈ ಆಕ್ಸ್​ಡ್, ಸಲ್ಪರ್ ಡೈಆಕ್ಸೈಡ್, ಕಾರ್ಬನ್ ಮೊನೋಕ್ಸೈಡ್, ವೊಲಟೈಲ್ ಆರ್ಗಾನಿಕ್ ಕಾಂಪೌಡ್ಸ್ ಮತ್ತು ಸೂಕ್ಷ್ಮ ಕಣಗಳು ಅಂದರೆ ಉಸಿರಿನಲ್ಲಿ ಶ್ವಾಸಕೋಶ ರಕ್ತನಾಳ ಸೇರಬಹುದಾದ ಪರ್ಟಿಕುಲೇಟ್ ಮ್ಯಾಟರ್ (PM2.5 ಮತ್ತು PM10) ಜೀವಕ್ಕೆ ಅಪಾಯಕಾರಿ ಎಂದು ತಿಳಿದು ಬಂದಿದೆ.

ಪ್ರಮುಖವಾಗಿ ಸೂಕ್ಷ್ಮ ಕಣಗಳಾದ PM2.5 ಮತ್ತು PM10ಗಳು ರಕ್ತನಾಳಗಳಲ್ಲಿ ಸೇರಿ ಚಿಕ್ಕ ವಯಸ್ಸಿನಲ್ಲೇ ಅಥಿರೋಸ್ಕಿ್ಲರೋಸಿಸ್ ಆಗಿ ಹೃದಯಾಘಾತದಿಂದ ಯುವ ವಯಸ್ಸಿನಲ್ಲೇ ಸಾಯುವಂತೆ ಮಾಡುತ್ತದೆಂಬ ಆಘಾತಕಾರಿ ಅಂಶ ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ಇಂದು ವೃದ್ಧ ತಂದೆ, ತಾಯಿಗಳು ತಮ್ಮ ಮಕ್ಕಳ ಶವ ಸಂಸ್ಕಾರ ಮಾಡಬೇಕಾದ ದುಸ್ಥಿತಿ ತಂದದ್ದು ಈ ಸೂಕ್ಷ್ಮ ಕಣಗಳು. ಸೂಕ್ಷ್ಮ ಕಣಗಳಿಂದ ಹೃದಯದ ಮಿಡಿತದಲ್ಲಿ ಏರುಪೇರು ಆಗಿ ಅರ›ಹಿತ್ಮಿಯಾ (Arrhythmia) ಉಂಟಾಗುತ್ತದೆ. ಅಲ್ಲದೆ, ರಕ್ತದಲ್ಲಿ ಹೆಪ್ಪುಗಟ್ಟುವಿಕೆ ಹೆಚ್ಚಾಗಿ ಹೃದಯಾಘಾತವಾಗಿ ಯುವಕರು ಸಾಯುತ್ತಿದ್ದಾರೆ. ಕೆಲಸಕ್ಕೆ ಹೋಗುವ ಅವಸರದಲ್ಲಿ ದ್ವಿಚಕ್ರವಾಹನ ನಡೆಸುವವರು ಗಾಡಿಗಳ ಮಧ್ಯೆ ನುಗ್ಗಿದಾಗ ಎಕ್ಸ್​ಹಾಸ್ಟ್ ಪೈಪ್​ನಿಂದ ಬರುವ ವಿಷಪೂರಿತ ಅನಿಲ ಮತ್ತು ಸೂಕ್ಷ್ಮ ಕಣಗಳನ್ನು ಉಸಿರಿನಲ್ಲಿ ತೆಗೆದುಕೊಂಡು ತಮ್ಮ ಶ್ವಾಸಕೋಶ ಮತ್ತು ಹೃದಯದ ನಿಷ್ಕ್ರಿಯತೆಗೆ ತಾವೇ ಕಾರಣರಾಗುತ್ತಿದ್ದಾರೆ.

ಇಂದು ಕೇವಲ ಪರಿಸರ ಮಾಲಿನ್ಯ ಅಷ್ಟೇ ಅಲ್ಲ ಮನಸ್ಸಿನ ಮಾಲಿನ್ಯವನ್ನು ಜನರು ಕಡಿಮೆ ಮಾಡಿಕೊಳ್ಳುವುದು ಅವಶ್ಯವಾಗಿದೆ. ಇದನ್ನೇ ಬಸವಣ್ಣನವರು ‘ಅಂತರಂಗ ಶುದ್ಧಿ, ಬಹಿರಂಗ ಶುದ್ಧಿ’ ಎಂದರು. ಅಕ್ಕಮಹಾದೇವಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ- ‘ನಡೆ ಶುಚಿ, ನುಡಿ ಶುಚಿ, ತನು ಶುಚಿ, ಮನ ಶುಚಿ, ಭಾವ ಶುಚಿ ಇಂತೀ ಪಂಚ ತೀರ್ಥಂಗಳನೊಳಕೊಂಡು ಮರ್ತದಲಿ ನಿಂದ ನಿಮ್ಮ ಶರಣರ ತೋರಿ ಎನ್ನನುಳುಹಿಕೊಳ್ಳ ಚೆನ್ನಮಲ್ಲಿಕಾರ್ಜುನ!’ ಎಂದರು.

ಇಂದು ಪ್ರಪಂಚ ಪರಿಸರ ಮಾಲಿನ್ಯದಿಂದ ವಿನಾಶದಂಚಿಗೆ ಬಂದು ನಿಂತಾಗ, ನಮ್ಮ ಪ್ರಾಣಕ್ಕಾಗಿ ನಮ್ಮ ಮುಂದಿನ ಪೀಳಿಗೆಗಾಗಿ ಬನ್ನಿ ನಾವೆಲ್ಲ ನಮ್ಮ ನಡೆ, ನುಡಿ, ತನು, ಮನ, ಭಾವ ಶುಚಿಗೊಳಿಸಿ ಪಂಚಭೂತಗಳಾದ ಭೂಮಿ, ಜಲ, ವಾಯು, ಆಕಾಶ ಮತ್ತು ಅಗ್ನಿಗಳ ಮಾಲಿನ್ಯ ತಡೆಗಟ್ಟಿ ಸೃಷ್ಟಿಕರ್ತನ ನಿಸರ್ಗವನ್ನು ಉಳಿಸೋಣ. ಬಂಗಾರದಂತೆ ಬದುಕೋಣ.

(ಲೇಖಕರು ಖ್ಯಾತ ಹೃದ್ರೋಗ ತಜ್ಞರು)

Leave a Reply

Your email address will not be published. Required fields are marked *