Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ಪರಿಸರ ನಾಶಪಡಿಸಿ ನಡೆಸುವ ಅಭಿವೃದ್ಧಿಗೆ ಅರ್ಹನೇ ಮನುಷ್ಯ?

Thursday, 29.03.2018, 3:03 AM       No Comments

| ಡಾ. ಮಂಜುನಾಥ್​ ಬಿ ಎಂ 

ಮಾನವನ ಜೀವಕ್ಕೆ, ಸುಖಕ್ಕೆ ಪರಿಸರಕ್ಕಿಂತಲೂ ಹೆಚ್ಚಿನ ಬೆಲೆ ಇದೆಯೇ? ನಮ್ಮ ಸಂತೋಷಕ್ಕಾಗಿ ಪರಿಸರವನ್ನೂ ಹೇಗೆ ಬೇಕಾದರೂ ಬಳಸಿಕೊಳ್ಳಬಹುದೇ? ಇಂತಹ ಪ್ರಶ್ನೆಗಳು ಇತ್ತೀಚೆಗೆ ನಮ್ಮನ್ನು ಬಹುವಾಗಿ ಕಾಡತೊಡಗಿವೆ. ಮೊನ್ನೆ ಕೊಡಗಿನ ಸ್ನೇಹಿತರೊಬ್ಬರೊಡನೆ ಮಾತನಾಡುತ್ತಿದ್ದಾಗ, ‘ಮಡಿಕೇರಿಯಲ್ಲಿ ಬೆಟ್ಟಗಳೆರಡರ ನಡುವೆ ಮರಗಳನ್ನೆಲ್ಲ ಕಡಿದುರುಳಿಸಿ ವೈದ್ಯಕೀಯ ಕಾಲೇಜು ಸ್ಥಾಪಿಸಿದ್ದಾರೆ. ಬೇರೆಲ್ಲೂ ಜಾಗವಿಲ್ಲದೆ ಕಾಡು ಕಡಿಯುತ್ತಾರೋ ಅಥವಾ ಕಾಡು ಕಡಿಯುವ ಉದ್ದೇಶದಿಂದಲೇ ಇಂತಹ ಕೆಲಸಗಳಾಗುತ್ತಿವೆಯೋ ಗೊತ್ತಾಗುತ್ತಿಲ್ಲ’ ಎಂದರು. ಪರಿಸರದೆಡೆಗಿನ ಕಾಳಜಿ ಅತ್ಯಂತ ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ ಎಂಬ ಖೇದವೂ ಕಾಡುತ್ತಿದೆ. ವೈದ್ಯಕೀಯ ಕಾಲೇಜು ಸಮಾಜಕ್ಕೆ, ಮಾನವ ಜನಾಂಗಕ್ಕೆ ಅತ್ಯಾವಶ್ಯಕ. ಆದರೆ, ಮಾನವ ಕೇಂದ್ರಿತ ಅಭಿವೃದ್ಧಿಯ ಹೆಸರಲ್ಲಿ ಪರಿಸರ ತೆರುತ್ತಿರುವ ಬೆಲೆ ಎಷ್ಟು ಎಂಬ ಕುರಿತು ಒಮ್ಮೆ ಆಲೋಚಿಸಬೇಕಲ್ಲವೇ?

ಮೊದಲೆಲ್ಲ ಕೊಡಗು ಕರ್ನಾಟಕದ ಅತಿ ಸುಂದರ ಭೂಪ್ರದೇಶಗಳಲ್ಲೊಂದಾಗಿತ್ತು. ಎಂತಹ ಬೇಸಿಗೆಯಲ್ಲೂ ತಣ್ಣನೆ ವಾತಾವರಣ, ವರ್ಷ ಪೂರ್ತಿ ಜುಳುಜುಳು ಹರಿಯುವ ಕಾವೇರಿ ಮತ್ತವಳ ಉಪನದಿಗಳು, ಪರಿಸರದ ಕುರಿತ ಕಾಳಜಿ ಕೊಡಗಿನಲ್ಲಿ ಮನೆಮಾತಾಗಿತ್ತು. ಆದರೆ ತಾಪಮಾನ ಏರಿಕೆಯ ಸ್ಪಷ್ಟ ಪರಿಣಾಮಗಳನ್ನು ಕೊಡಗಿನಲ್ಲೂ ಗಮನಿಸಬಹುದು. ತಂಪಾದ ವಾತಾವರಣ ಹೊಂದಿದ್ದ ಕೊಡಗಿನಲ್ಲೀಗ ಬೇಸಿಗೆ ಆರಂಭವಾಗುತ್ತಿದ್ದಂತೆ ಮಿತಿಮೀರಿದ ಸೆಕೆೆಯ ಅನುಭವವಾಗುತ್ತದೆ. ಕಾವೇರಿಯ ತವರು ಜಿಲ್ಲೆಯಾದರೂ ಜಿಲ್ಲಾ ಕೇಂದ್ರ ಮಡಿಕೇರಿಗೆ ಸಮರ್ಪಕ ಕುಡಿಯುವ ನೀರು ಪೂರೈಸಲು ಪಡಿಪಾಟಲು ಪಡುವ ಪರಿಸ್ಥಿತಿ ಇಂದು ಎದುರಾಗಿದೆ.

ಕೆಲವು ವರ್ಷಗಳ ಹಿಂದೆ, ಕೇರಳಕ್ಕೆ ವಿದ್ಯುತ್ ಪೂರೈಸಲು ಕೊಡಗಿನ ಮೂಲಕ ಹೈ ಟೆನ್ಶನ್ ವಿದ್ಯುತ್ ತಂತಿಗಳನ್ನು ಎಳೆಯಲಾಯಿತು. ಈ ವಿದ್ಯುತ್ ಪೂರೈಕೆಗಾಗಿ ಅಪಾರ ಪ್ರಮಾಣದ ಮರಗಳನ್ನು, ಕೊಡಗಿನ ಉಸಿರಾಗಿದ್ದ ಹಸಿರನ್ನು ಕಡಿದುರುಳಿಸಲಾಯಿತು. ವಿದ್ಯುತ್ ಯೋಜನೆಗಾಗಿ ಕಡಿದ ಅರಣ್ಯ ಪ್ರದೇಶಕ್ಕಿಂತಲೂ ಹೆಚ್ಚು ಅರಣ್ಯವನ್ನು ಟಿಂಬರ್ ಲಾಬಿ ನುಂಗಿ ನೀರು ಕುಡಿಯಿತು. ಇದು ಬರಿಯ ಕೊಡಗು ಜಿಲ್ಲೆಯ ಕಥೆಯಲ್ಲ. ಪಶ್ಚಿಮ ಘಟ್ಟದುದ್ದಕ್ಕೂ ಅವ್ಯಾಹತವಾಗಿ ನಡೆಯುತ್ತಿರುವ ಮಾನವ ಹಸ್ತಕ್ಷೇಪದ ಪರಿಣಾಮ ಇದು. ಕನಿಷ್ಠ ಪ್ರಮಾಣದ ಪರಿಸರ ಕಾಳಜಿಯೂ ಇಲ್ಲದಿದ್ದರೆ ಎದುರಾಗಬಹುದಾದ ಅನಾಹುತಗಳಿಗೆ ಇವೆಲ್ಲ ಉದಾಹರಣೆಗಳಷ್ಟೇ.

ಮಾನವ ಕೇಂದ್ರಿತ ಅಭಿವೃದ್ಧಿಯ ಹೆಸರಲ್ಲಿ ಪಶ್ಚಿಮ ಘಟ್ಟಗಳ ಒಡಲಿಗೆ ಹಾಕುತ್ತಿರುವ ಚೂರಿ ಕೊನೆಗೆ ಇರಿಯುವುದು ನಮ್ಮನ್ನೇ! ಸುಮಾರು 1600 ಕಿ.ಮೀ. ಉದ್ದವಿರುವ ಪಶ್ಚಿಮ ಘಟ್ಟಗಳು ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡುಗಳಲ್ಲಿ ಹಬ್ಬಿವೆ. ಒಟ್ಟು ಶ್ರೇಣಿಯ ಅರ್ಧಕ್ಕಿಂತ ಹೆಚ್ಚು ಭಾಗ ಕರ್ನಾಟಕದಲ್ಲಿಯೇ ಇದೆ. ಈ ಸುಂದರ ನೈಸರ್ಗಿಕ ಸಂಪತ್ತಿಗೆ ಹೆಮ್ಮೆ ಪಡುವುದು ಹಾಗೂ ರಕ್ಷಿಸುವುದನ್ನು ಬಿಟ್ಟು, ಇವುಗಳನ್ನು ಮಣಿಸಿ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಅಭಿಮಾನ ಶೂನ್ಯತೆಯ ವಿಚಾರವಲ್ಲವೆ? ಪಶ್ಚಿಮ ಘಟ್ಟ ಪ್ರದೇಶವು ವಿಶ್ವದ ಅತ್ಯಂತ ಪ್ರಮುಖ ಜೀವವೈವಿಧ್ಯದ ನೆಲೆಗಳಲ್ಲಿ ಒಂದಾಗಿದ್ದು, 5,000ಕ್ಕೂ ಹೆಚ್ಚಿನ ತಳಿಯ ಗಿಡಮರಗಳು, 139 ಬಗೆಯ ಸಸ್ತನಿಗಳು, 508 ವಿವಿಧ ಪಕ್ಷಿಗಳ ನೆಲೆಯಾಗಿದೆ. ವಿಶ್ವದಲ್ಲಿ ಅಳಿವಿನಂಚಿನಲ್ಲಿರುವ ಜೀವತಳಿಗಳ ಪೈಕಿ 325 ತಳಿಗಳ ಜೀವಿಗಳು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿವೆ. ಸಂಶೋಧನೆಗಳು ಮುಂದುವರಿದಂತೆಲ್ಲ ಹೊಸ ಹೊಸ ಪ್ರಬೇಧಗಳ ಜೀವಿಗಳು ಪಶ್ಚಿಮ ಘಟ್ಟದಲ್ಲಿ ಸಿಗುತ್ತಲೇ ಇವೆ.

ಆಘಾತದ ಮೇಲೆ ಆಘಾತ: ಕೇರಳ ಸರ್ಕಾರ ಕೇಂದ್ರ ಸರ್ಕಾರಕ್ಕೆ ಕೊಡಗಿನ ಮೂಲಕ ಹಾದು, ಮೈಸೂರಿನಿಂದ ಕೇರಳಕ್ಕೆ ರೈಲ್ವೆ ಮಾರ್ಗದ ಬೇಡಿಕೆಯನ್ನಿಟ್ಟಿತ್ತು. ವಿದ್ಯುಚ್ಛಕ್ತಿಗಾಗಿ ಕಡಿದ ಕಾಡಿನ ಪೆಟ್ಟಿನಿಂದಿನ್ನೂ ಚೇತರಿಸಿಕೊಳ್ಳದ ಕೊಡಗಿನಲ್ಲಿ ರೈಲ್ವೆ ಮಾರ್ಗವೆಂದರೆ ಅದು ಕರ್ನಾಟಕದ ಪಾಲಿಗೆ ಮರಣಶಾಸನವಷ್ಟೇ! ಆದರೆ ಸ್ಥಳೀಯರ ಅವಿರತ ಹೋರಾಟ ಹಾಗೂ ಕೇಂದ್ರ ಸರ್ಕಾರಕ್ಕೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟ ಪರಿಣಾಮವಾಗಿ ಇಂದು ರೈಲ್ವೆ ಯೋಜನೆಯೇನೋ ರದ್ದಾಗಿದೆ. ಆದರೆ ಆಗಿರುವ ಹಾನಿಗೇನು ಮಾಡೋಣ? ಬದಲಾಗುತ್ತಿರುವ ಸನ್ನಿವೇಶದಲ್ಲಿ ರಾಜ್ಯದಲ್ಲಿ ನೀರಿನ ಸಮಸ್ಯೆ ಪ್ರತಿವರ್ಷವೂ ಉಲ್ಬಣವಾಗುತ್ತಿದೆ. ಒಂದು ಕಾಲದಲ್ಲಿ ಕೆರೆ ಕಟ್ಟೆಗಳಿಂದ ನಳನಳಿಸುತ್ತಿದ್ದ ಕೋಲಾರ ಜಿಲ್ಲೆ ಇಂದು ಅಪಾರ ಜಲಕ್ಷಾಮ ಅನುಭವಿಸುತ್ತಿದೆ. ಕುಡಿಯುವ ಹನಿ ನೀರಿಗೂ ತತ್ವಾರವಿರುವಾಗ, ಬೆಳೆಯುತ್ತಿರುವ ಜನಸಂಖ್ಯೆಗೆ ನೀರೊದಗಿಸುವುದು ಹೇಗೆ? ಹನಿ ಮಳೆ ನೀರನ್ನೂ ಉಳಿಸುವ, ಕೆರೆಗಳನ್ನು ಪುನರುಜ್ಜೀವನಗೊಳಿಸುವ ದೂರಗಾಮಿ ಯೋಜನೆಗಳನ್ನು ಯೋಚಿಸುವ ಬದಲು ಹೊಳೆದದ್ದು ಎತ್ತಿನಹೊಳೆ ಯೋಜನೆ!

ವಿವೇಚನೆ ಇಲ್ಲದ ಯೋಜನೆಗಳು: ಪಶ್ಚಿಮ ಘಟ್ಟಗಳಿಂದಿಳಿದು, ಪೂರ್ವ ದಿಕ್ಕಿಗೆ ಹರಿದು ಬಂಗಾಳ ಕೊಲ್ಲಿಗೆ ಸೇರುವ ಕಾವೇರಿಯಂತಹ ಬೃಹತ್ ನದಿಗಳೊಡನೆ ಪಶ್ಚಿಮಕ್ಕೆ ರಭಸವಾಗಿ ಹರಿದು, ಅರಬ್ಬೀ ಸಮುದ್ರ ಸೇರುವ ನೇತ್ರಾವತಿಯೂ ಹುಟ್ಟಿ ಬರುತ್ತದೆ. ನೇತ್ರಾವತಿಯ ಪ್ರಮುಖ ಉಪನದಿಯಾದ ಎತ್ತಿನಹೊಳೆಯಲ್ಲಿ ಮಳೆಗಾಲದಲ್ಲಿ ತುಂಬಿ ಹರಿಯುವ ನೀರನ್ನು ಸಂಗ್ರಹಿಸಿ, ಬರಪೀಡಿತ ಪ್ರದೇಶಗಳಿಗೆ ಕಾಲುವೆಗಳ ಮೂಲಕ, ಪೈಪುಗಳ ಮೂಲಕ ಕಳುಹಿಸಬೇಕೆಂಬುದು ಈ ಎತ್ತಿನಹೊಳೆ ಯೋಜನೆಯ ಉದ್ದೇಶ. ಪಶ್ಚಿಮ ಘಟ್ಟದಲ್ಲಿ ಹುಟ್ಟುವ ನದಿಗೆ ಪಶ್ಚಿಮ ಘಟ್ಟದಲ್ಲೇ ಒಡ್ಡು. ಅದೇ ಪಶ್ಚಿಮ ಘಟ್ಟವನ್ನು ಸೀಳಿ ಕೋಲಾರ ಪ್ರಾಂತ್ಯಕ್ಕೆ ನೀರು ಹರಿಸುತ್ತೇವೆನ್ನುವುದು ಎಷ್ಟರಮಟ್ಟಿಗೆ ಕಾರ್ಯಸಾಧು? ಫೆಬ್ರವರಿಯಾಗುತ್ತಲೇ ನೇತ್ರಾವತಿ ನದಿ ಹರಿವು ನಿಲ್ಲಿಸುತ್ತದೆ. ನೇತ್ರಾವತಿಯ ನೀರನ್ನು ನಂಬಿರುವ ಮಂಗಳೂರಿನ ಜನತೆಗೆ ನೀರು ಒದಗಿಸುವುದೇ ದುಸ್ಸಾಧ್ಯ ಎನಿಸಿಬಿಡುತ್ತದೆ. ಅಂತಹದ್ದರಲ್ಲಿ ಉಪನದಿಯನ್ನೂ ತಡೆದುಬಿಟ್ಟರೆ ನದಿಯ ಸ್ಥಿತಿ ಏನಾಗಬೇಡ?

ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್​ಡಿಎ ಸರ್ಕಾರ ಗಂಗಾ ಕಾವೇರಿ ನದಿ ಜೋಡಣೆಯಂಥ ಕನಸನ್ನು ಹೊಂದಿತ್ತು. ಉತ್ತರ ಭಾರತ ಮತ್ತು ದಕ್ಷಿಣ ಭಾರತದ ನದಿಗಳ ಜೋಡಣೆಯಿಂದ ದೇಶ ಎದುರಿಸುತ್ತಿರುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನೂ ಒದಗಿಸಿದಂತಾಗುತ್ತದೆ. ಆದರೆ ಎತ್ತಿನಹೊಳೆ ಯೋಜನೆ ಯಾವ ರೀತಿಯಿಂದಲೂ ನೀರಿನ ಪೂರೈಕೆಗೆ ಶಾಶ್ವತ ಪರಿಹಾರವಾಗಿ ಕಾಣುತ್ತಲೇ ಇಲ್ಲ. ಪಶ್ಚಿಮ ಘಟ್ಟದ ಸೆರಗಿನಲ್ಲಿ ವಾಸವಾಗಿರುವ ಜನ ಈಗಾಗಲೇ ಕಸ್ತೂರಿ ರಂಗನ್ ವರದಿ ಹಾಗೂ ಗಾಡ್ಗೀಳ್ ವರದಿಗಳಿಂದಲೇ ಬೆಚ್ಚಿಬಿದ್ದಿದ್ದಾರೆ. ಇದು ಸಾಲದೆಂಬಂತೆ ಅಭಿವೃದ್ಧಿ ಹೆಸರಲ್ಲಿ ಬೆಟ್ಟಗುಡ್ಡಗಳಲ್ಲೂ ರಸ್ತೆಗಳ ನಿರ್ವಣವಾಗುತ್ತಿದೆ. ಕಾಡುಗಳನ್ನು ಸವರಿ ವಿದ್ಯುತ್ ತಂತಿಗಳನ್ನೆಳೆಯಲಾಗಿದೆ. ಇವೆಲ್ಲವುಗಳ ಒಟ್ಟಾರೆ ಪರಿಣಾಮವಾಗಿ ಕಾಡುಪ್ರಾಣಿಗಳು ನಾಡಿಗಿಳಿಯುತ್ತಿವೆ, ದಾಂಧಲೆಯೆಬ್ಬಿಸುತ್ತಿವೆ. ಇದಕ್ಕೆ ನಮ್ಮ ಮಾನವ ಕೇಂದ್ರಿತ ಅಭಿವೃದ್ಧಿಯನ್ನು ದೂರುವುದೋ ಅಥವಾ ಏನೂ ಅರಿಯದ ಮೂಕ ಪ್ರಾಣಿಗಳನ್ನೋ?

ಕಳೆದ ವರ್ಷ ಬಹುತೇಕ ಇದೇ ಸಮಯಕ್ಕೆ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿತು. ಮೈಸೂರು ಜಿಲ್ಲೆ ಎಚ್​ಡಿ ಕೋಟೆಯ ಕಲ್ಕೆರೆ ಅರಣ್ಯ ಪ್ರದೇಶದಿಂದ ಬೇಗೂರು ಅರಣ್ಯದವರೆಗೆ 500 ಎಕರೆಗೂ ಅಧಿಕ ವ್ಯಾಪ್ತಿಯ ಕಾಡನ್ನು ಬೆಂಕಿ ಆವರಿಸಿಕೊಂಡಿತು. ಅರಣ್ಯ ಇಲಾಖೆ ಸಿಬ್ಬಂದಿ ಕಾಡ್ಗಿಚ್ಚನ್ನು ನಿಯಂತ್ರಿಸುವ ಪ್ರಯತ್ನ ನಡೆಸಿದರೂ, ಗಾಳಿಯ ವೇಗ ಸಹಕಾರಿಯಾಗಿ ಬೆಂಕಿ 1,200 ಎಕರೆಗೂ ಅಧಿಕ ಅರಣ್ಯ ಪ್ರದೇಶವನ್ನು ವ್ಯಾಪಿಸಿತು. ಕೇವಲ ಮರಗಿಡಗಳಲ್ಲದೆ ಅದೆಷ್ಟೋ ಪ್ರಾಣಿಗಳು, ಪಕ್ಷಿಗಳು ಪ್ರಾಣ ಕಳೆದುಕೊಂಡವು.

ಬಂಡೀಪುರ ಅರಣ್ಯ ಪ್ರದೇಶದಲ್ಲಿ ಬಿದ್ದ ಬೆಂಕಿಯನ್ನು ನಂದಿಸುವ ಪ್ರಯತ್ನದಲ್ಲಿದ್ದಾಗ ಅರಣ್ಯ ರಕ್ಷಕ ಮುರಿಗೆಪ್ಪ ತಮ್ಮನಗೋಳ ಕಾಡ್ಗಿಚ್ಚಿಗೆ ಬಲಿಯಾದರು. ವಿಪರ್ಯಾಸವೆಂದರೆ ಕೇವಲ ಒಂದು ಅರಣ್ಯ ಪ್ರದೇಶದಲ್ಲಲ್ಲ. ವಿವಿಧ ಜಿಲ್ಲೆಗಳ ಅನೇಕ ಅರಣ್ಯ ಪ್ರದೇಶಗಳಿಗೆ ಏಕಕಾಲಕ್ಕೆ ಬೆಂಕಿ ಬೀಳತೊಡಗಿತು. ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಅರಣ್ಯ, ಕೊಡಗಿನ ಅತ್ತೂರು, ಆನೆಕಾಡು, ಗದಗದ ಕಪ್ಪತಗುಡ್ಡಕ್ಕೂ ಏಕಕಾಲಕ್ಕೇ ಹಬ್ಬಿದ ಬೆಂಕಿ ಹಿಂದೆ ಯಾವುದೋ ದುಷ್ಟಕೂಟದ ಕೈವಾಡ, ವ್ಯವಸ್ಥಿತ ಸಂಚು ಖಂಡಿತಾ ಕೆಲಸ ಮಾಡುತ್ತಿದೆ. ರಾಜ್ಯಾದ್ಯಂತ ಹಬ್ಬಿರುವ ಟಿಂಬರ್ ಲಾಬಿಯೂ ಈ ಕುಕೃತ್ಯದ ಹಿಂದಿರುವ ಸಾಧ್ಯತೆಗಳಿವೆ. ಈಗಾಗಲೇ ಅನೇಕ ಅರಣ್ಯದಂಚಿನ ಪ್ರದೇಶಗಳಲ್ಲಿ ಭೂ ಒತ್ತುವರಿ ಪ್ರಯತ್ನಗಳೂ ಎಗ್ಗಿಲ್ಲದೆ ನಡೆಯುತ್ತಿವೆ. ಇದನ್ನು ತಡೆಯಲು ಯತ್ನಿಸುವ ಅರಣ್ಯ ಇಲಾಖೆಯ ಸಿಬ್ಬಂದಿ ಮೇಲಿನ ಕೋಪವೂ ಈ ಕಾಡ್ಗಿಚ್ಚಿನ ಹಿಂದಿನ ಕಾರಣವಾಗಿರಬಹುದು. ಅದರ ಮುಂದುವರಿದ ಭಾಗವಾಗಿ ಈಗಾಗಲೇ ಹಲವು ಕಡೆಗಳಲ್ಲಿ ಕಾಡ್ಗಿಚ್ಚು ಬೀಳಲು ಆರಂಭವಾಗಿದೆ.

ಕೊಡಗಿನಲ್ಲಿ ಕಾಡಾನೆಗಳು ತೋಟಕ್ಕೆ ನುಗ್ಗುತ್ತಿವೆ, ಬೆಳೆ ಹಾನಿ ಮಾಡುತ್ತಿವೆ. ಆದರೆ ಅವುಗಳ ಪ್ರಾಣಕ್ಕೆ ತೊಂದರೆ ಉಂಟು ಮಾಡಬೇಕೆಂದು ಕೃಷಿಕರಿಗೆ ಖಂಡಿತ ಅನಿಸಿಲ್ಲ. ಅಲ್ಲೊಂದು ಇಲ್ಲೊಂದು ಕಾಡಾನೆ ಸಾಯುವಾಗಲೂ ಮನಸ್ಸಿಗೆ ಅಪಾರ ದುಃಖವೇ ಆಗುತ್ತದೆ. ‘ಕಾಡೆಲ್ಲ ಕಡಿದು, ನೀರು ಬತ್ತಿದರೆ ಅವು ಹಸಿರು ಹುಡುಕಿ ತೋಟಕ್ಕೆ ನುಗ್ಗದೆ ಇನ್ನೆಲ್ಲಿ ಹೋದಾವು?’ ಎಂದು ಪ್ರಶ್ನಿಸಿದರು ನನ್ನ ಗೆಳೆಯ. ಇಂದು ನಮ್ಮ ಪಾಲಿಗೆ ಅಭಿವೃದ್ಧಿ ಎಂದರೆ ಇಷ್ಟೇ. ಪರಿಸರಕ್ಕೆ ಏನೇ ಹಾನಿಯಾದರೂ ಸರಿ, ಮನುಷ್ಯನಿಗೆ ಸಕಲ ಸುಖವೂ ಲಭಿಸಬೇಕು. ಎಲ್ಲೆಡೆಯೂ ವಿದ್ಯುತ್, ಕಾಡಿನ ಮೂಲೆಗೂ ರಸ್ತೆ, ಕಟ್ಟಡಗಳು. ಪರಿಸರಕ್ಕೆ ಏನಾದರೇನು ಎಂಬ ಅಸಡ್ಡೆ. ಅಷ್ಟಕ್ಕೂ ಪರಿಸರವನ್ನು ನಾಶಗೊಳಿಸಿ ಅಭಿವೃದ್ಧಿಯಾಗಬೇಕಾದಷ್ಟು ಶ್ರೇಷ್ಠನೇ ಮನುಷ್ಯ?

Leave a Reply

Your email address will not be published. Required fields are marked *

Back To Top