ಪರಿಸರ ದಿನದಂದೂ ಕಸ ತೆಗೆಯಲಿಲ್ಲ!

ರಾಮನಗರ: ವಿಶ್ವ ಪರಿಸರ ದಿನಾಚರಣೆ ದಿನದಂದೂ ಕೂಡ ನಗರಸಭೆಯ 2ನೇ ವಾರ್ಡ್​ನ ವಿಜಯನಗರ, ವಿನಾಯಕನಗರ ಸೇರಿ ಸುತ್ತಮುತ್ತಲಿನ ರಸ್ತೆಯ ಇಕ್ಕೆಲಗಳಲ್ಲಿ ಕಸದ ರಾಶಿ ಕಂಡುಬಂತು.

ಕಳೆದ 2-3 ವಾರಗಳಿಂದ ತ್ಯಾಜ್ಯ ಸಂಗ್ರಹಿಸುವ ವಾಹನ ಇತ್ತ ಸುಳಿದಿಲ್ಲ. ಇದರಿಂದ ತ್ಯಾಜ್ಯ ಕೊಳೆತು ದುರ್ವಾಸನೆ ಬೀರುತ್ತಿದೆ. ಕಸದ ರಾಶಿಯಲ್ಲಿ ಬೀದಿ ನಾಯಿ, ಹಂದಿಗಳ ಹಾವಳಿ ಜಾಸ್ತಿಯಾಗಿದ್ದು, ತ್ಯಾಜ್ಯವನ್ನು ನಡು ರಸ್ತೆವರೆಗೂ ತಂದುಹಾಕುತ್ತಿವೆ. ಇದರಿಂದ ಪಾದಚಾರಿಗಳಿಗೆ ತೊಂದರೆಯಾಗಿದೆ. ಆದರೂ ನಗರಸಭೆ ಸಮರ್ಪಕ ವಿಲೇವಾರಿಗೆ ನಿರ್ಲಕ್ಷ್ಯ ತೋರಿರುವುದು ವಿಶ್ವ ಪರಿಸರ ದಿನಾಚರಣೆಯನ್ನೇ ಅಣಕಿಸುವಂತಿದೆ.

ಇದು ಕೇವಲ 2ನೇ ವಾರ್ಡ್​ನ ಸಮಸ್ಯೆ ಮಾತ್ರವಲ್ಲ. ನಗರದ ಮಾಗಡಿ, ಜಾಲಮಂಗಲ, ರಾಯರದೊಡ್ಡಿ ರಸ್ತೆಯುದ್ದಕ್ಕೂ ಬಿದ್ದಿರುವ ತ್ಯಾಜ್ಯ ರಾಶಿ ನಗರಸಭೆ ಕಾರ್ಯವೈಖರಿಗೆ ಕನ್ನಡಿ ಹಿಡಿದಂತಿದೆ.

ಕಸಮುಕ್ತ ನಗರ ಮಾಡುವ ಉದ್ದೇಶ ಹೊಂದಿರುವ ನಗರಸಭೆ ತನ್ನ ಗುರಿ ಮರೆತಂತಿದೆ. ನಗರದ ಪ್ರಮುಖ ವಾರ್ಡ್​ಗಳಲ್ಲೂ ಪೌರ ಕಾರ್ವಿುಕರು ಪ್ರತಿನಿತ್ಯ ಕಸ ಸಂಗ್ರಹಿಸುತ್ತಿಲ್ಲ ಎಂಬ ದೂರು ಕೇಳಿಬಂದಿದೆ. ಕೆಲ ವಾರ್ಡ್​ಗಳಲ್ಲಿ ವಾರಕ್ಕೊಮ್ಮೆಯೂ ತ್ಯಾಜ್ಯ ವಿಲೇವಾರಿ ಮಾಡುತ್ತಿಲ್ಲ. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಕರೆ ಮಾಡಿ ಸಮಸ್ಯೆ ಹೇಳಿಕೊಂಡರೂ ಪ್ರಯೋಜನವಾಗಿಲ್ಲ. ನಗರಸಭೆಯ ನಿರ್ಲಕ್ಷ್ಯಂದ ಆಕ್ರೋಶಗೊಂಡ ಜನರು ಸಮರ್ಪಕ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳದಿದ್ದರೆ ಕಚೇರಿ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.

ರಾಮನಗರದ ಜನತೆಯನ್ನು ಕಸದ ಸಮಸ್ಯೆ ಕಾಡಿದೆ. ತ್ಯಾಜ್ಯ ನಿರ್ವಹಣೆ ಮಾಡುವಲ್ಲಿ ನಗರಸಭೆ ವಿಫಲವಾಗಿದೆ. ಆಯುಕ್ತರ ಗಮನಕ್ಕೆ ತಂದರೆ, ನೈರ್ಮಲ್ಯ ವಿಭಾಗದ ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸುತ್ತಾರೆ. ನೈರ್ಮಲ್ಯ ವಿಭಾಗದ ಅಧಿಕಾರಿಗಳು ಕರೆ ಸ್ವೀಕರಿಸುವುದಿಲ್ಲ. ಈ ಬಗ್ಗೆ ಶಾಸಕರ ಗಮನಕ್ಕೂ ತರಲಾಗಿದೆ, ಪ್ರಯೋಜನವಾಗಿಲ್ಲ.

| ಡಿ.ಕೆ.ಶಿವಕುಮಾರ, ನಗರಸಭೆ ಮಾಜಿ ಸದಸ್ಯ

Leave a Reply

Your email address will not be published. Required fields are marked *