ಪರಿಸರದ ಉಳಿವಿಗೆ ಕೆರೆಗಳನ್ನು ಉಳಿಸಿ

ಬೆಂಗಳೂರು: ಕೆರೆಗಳನ್ನು ನಾಶ ಮಾಡದೆ ಪರಿಸರದ ಉಳಿವಿಗೆ ಆದ್ಯತೆ ನೀಡಬೇಕಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೇಳಿದ್ದಾರೆ.

ಅದಮ್ಯ ಚೇತನ ಸಂಸ್ಥೆ, ಅತ್ತಿಗುಪ್ಪೆಯ ಸ್ಕೈಲೈನ್ ಉದ್ಯಾನದಲ್ಲಿ ಏರ್ಪಡಿಸಿದ್ದ 83ನೇ ‘ಹಸಿರು ಭಾನುವಾರ’ ಕಾರ್ಯಕ್ರಮದಲ್ಲಿ ಮಾತನಾಡಿ, ಬ್ರಿಟಿಷರು ಗೆಜೆಟಿಯರ್​ನಲ್ಲಿ ದಾಖಲಿಸಿದಂತೆ ರಾಜಧಾನಿ ಸುತ್ತಮುತ್ತ ಸೇಬು ಬೆಳೆಯಲಾಗುತಿತ್ತು. ಇಲ್ಲಿ ಬಿರುಬೇಸಿಗೆ ತಿಂಗಳುಗಳಾದ ಏಪ್ರಿಲ್, ಮೇನಲ್ಲೂ ಗರಿಷ್ಠ ತಾಪಮಾನ 18 ಡಿಗ್ರಿ ಇರುತ್ತಿತ್ತು. ಆದರೆ, ಇಂದು ಗರಿಷ್ಠ ತಾಪಮಾನ 35ರಿಂದ 40 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಇದನ್ನು ಬದಲಿಸಲು ಕೆರೆ ಉಳಿಸಲು ಹೆಚ್ಚಿನ ಒತ್ತು ನೀಡಬೇಕು ಎಂದರು.

ನಗರದಲ್ಲಿ 1 ಕೋಟಿ ಜನರಿಗೆ 15.5 ಲಕ್ಷ ಗಿಡಗಳು ಮಾತ್ರ ಇವೆ. 30 ವರ್ಷಗಳ ಹಿಂದೆ ಜನಸಂಖ್ಯೆಗೆ ತಕ್ಕಷ್ಟು ಮರಗಳಿದ್ದವು. ಈಗ ಪರಿಸ್ಥಿತಿ ಬದಲಾಗಿದೆ. ಪ್ರತಿಯೊಬ್ಬರೂ ಪರಿಸರಕ್ಕೆ ಪೂರಕವಾಗಿರುವ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಂಸ್ಥೆ ಅಧ್ಯಕ್ಷೆ ಡಾ. ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ಶಬ್ದಕೋಶಕ್ಕೆ ಸಸ್ಯಾಗ್ರಹ ಎನ್ನುವ ಶಬ್ದವನ್ನು ಸೇರ್ಪಡೆಗೊಳಿಸಬೇಕಿದೆ. ಸಸ್ಯಾಗ್ರಹವು ಸಸಿಗಳನ್ನು ನೆಟ್ಟು ಗಿಡಗಳನ್ನಾಗಿ ಬೆಳಸುವುದಾಗಿದೆ ಎಂದು ಹೇಳಿದರು.

ಸ್ಕೈಲೈನ್ ಉದ್ಯಾನವಲ್ಲದೆ ಸಿದ್ಧಿವಿನಾಯಕ ದೇವಸ್ಥಾನ, ಹಿಂದು ರುದ್ರಭೂಮಿಗಳಲ್ಲಿ 92 ಸಸಿಗಳನ್ನು ನೆಡಲಾಯಿತು. ಸಂಗೀತ ನಿರ್ದೇಶಕ ಗುರುಕಿರಣ್, ಬಿಜೆಪಿ ಮುಖಂಡ ಅಶ್ವತ್ಥನಾರಾಯಣ, ಮಾಜಿ ಉಪಮೇಯರ್ ಲಕ್ಷ್ಮೀನಾರಾಯಣ್, ಬಾಬಿ ವೆಂಕಟೇಶ್, ಪಾಲಿಕೆ ಸದಸ್ಯ ಡಾ. ರಾಜು, ಉಮೇಶ್ ಶೆಟ್ಟಿ, ದಾಸೇಗೌಡ ಮತ್ತಿತರರಿದ್ದರು.

 

Leave a Reply

Your email address will not be published. Required fields are marked *