ಪರಿಶ್ರಮಿಸಿದಾಗ ಯಶಸ್ಸು ಸಾಧ್ಯ

ಗದಗ: ಅಂಗವೈಕಲ್ಯವು ಶಾಪವಲ್ಲ. ವೈಕಲ್ಯದ ಬಗ್ಗೆ ಕೀಳರಿಮೆ ಹೊಂದದೆ ಆಸಕ್ತ ಕ್ಷೇತ್ರದಲ್ಲಿ ಸಾಧನೆ ಮಾಡಲು ಮುಂದಾದರೆ ಯಶಸ್ಸು ನಿಶ್ಚಿತ ಎಂದು ಜಿಪಂ ಸಿಇಒ ಮಂಜುನಾಥ ಚವ್ಹಾಣ ಹೇಳಿದರು.

ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಲಿಮ್ಕೊ ಸಹಯೋಗದಲ್ಲಿ ಕೇಂದ್ರ ಸರ್ಕಾರದ ವಿಶೇಷ ಯೋಜನೆಯಡಿ ಭಾನುವಾರ ಏರ್ಪಡಿಸಿದ್ದ ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗೆ ಉಚಿತವಾಗಿ ಸಾಧನ-ಸಲಕರಣೆಗಳ ವಿತರಣೆ ಶಿಬಿರದಲ್ಲಿ ಅವರು ಮಾತನಾಡಿದರು.

ಅಂಗವಿಕಲರಲ್ಲಿ ಅಗಾಧ ಪ್ರತಿಭೆಗಳು ಇರುತ್ತವೆ. ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಅಂಗವಿಕಲರು ಮಾನಸಿಕ ಖಿನ್ನತೆಗೆ ಒಳಗಾಗಬಾರದು. ಹತಾಶರಾಗದೆ ಸ್ವಾವಲಂಬಿ ಬದುಕು ಸಾಗಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆಗಳನ್ನು ಜಾರಿಗೊಳಿಸಿದೆ. ಪಾರದರ್ಶಕವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಆಯಾ ಇಲಾಖೆಗಳ ಮೂಲಕ ಯೋಜನೆಗಳ ಸೌಲಭ್ಯಗಳನ್ನು ದೊರಕಿಸಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯಿತಿ ಕೃಷಿ ಹಾಗೂ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಈರಣ್ಣ ನಾಡಗೌಡ್ರ ಮಾತನಾಡಿ, ಅಂಧರಾಗಿದ್ದರೂ ವಿಶ್ವಕಪ್ ಕ್ರಿಕೆಟ್ ಗೆದ್ದವರು ಭಾರತದವರು. ಹೀಗಾಗಿ ದೈಹಿಕ ಅಂಗವೈಕಲ್ಯ ಹೊಂದಿದವರು ಸಹ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದವರು ಅನೇಕರಿದ್ದಾರೆ. ಅವರನ್ನು ಸ್ಪೂರ್ತಿಯನ್ನಾಗಿಸಿಕೊಂಡು ಬಾಳಿದರೆ ಯಶಸ್ಸು ನಿಶ್ಚಿತ ಎಂದು ಹೇಳಿದರು.

ಜಿಪಂ ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷ ಮೋಹನ ದುರಗಣ್ಣವರ, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಪೂಜಾರ ಇದ್ದರು. ಅಲಿಮ್ಕೊ ಕಂಪನಿ ಪ್ರತಿನಿಧಿ ಅಭಯ ಪ್ರತಾಪ್​ಸಿಂಹ ಅವರು ಯೋಜನೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಧರ ಪೂಜಾರ ಸ್ವಾಗತಿಸಿ, ನಿರೂಪಿಸಿದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆಶು ನದಾಫ್ ವಂದಿಸಿದರು.

436 ಜನರಿಗೆ ಸಲಕರಣೆ ವಿತರಣ: ಜಿಲ್ಲೆಯ 436 ಅಂಗವಿಕಲ ಹಾಗೂ ಹಿರಿಯ ನಾಗರಿಕ ಫಲಾನುಭವಿಗಳಿಗೆ 28 ಲಕ್ಷ ರೂ. ವೆಚ್ಚದಲ್ಲಿ 9 ಟ್ರೖೆಸಿಕಲ್, 97 ವ್ಹೀಲ್​ಚೇರ್, 237 ವಾಕಿಂಗ್ ಸ್ಟಿಕ್, 17 ಬ್ರೖೆಲಿ ಕಿಟ್, 8 ಸಿಪಿ ಚೇರ್ಸ್ ಮೊದಲಾದ ಸಾಧನ-ಸಲಕರಣೆಗಳನ್ನು ವಿತರಿಸಲಾಯಿತು.

ಕಳೆದ ಸೆಪ್ಟೆಂಬರ್​ನಲ್ಲಿ ಸಮೀಕ್ಷೆ ಮೂಲಕ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಅಂಗವಿಕಲರು ಅಂಗಾಂಗ ನ್ಯೂನತೆಯಿಂದ ಸ್ವಲ್ಪ ಮಾನಸಿಕವಾಗಿ ಕುಗ್ಗಿರಬಹುದು. ಆದರೆ, ತಾವು ಯಾರಿಗಿಂತಲೂ ಕಡಿಮೆಯಿಲ್ಲ. ಸರ್ಕಾರದ ಯೋಜನೆ ಸದುಪಯೋಗ ಮಾಡಿಕೊಂಡು ಸಾಮಾನ್ಯರಿಗೆ ಪೈಪೋಟಿಯಂತೆ ಬದುಕು ಸಾಗಿಸಬಹುದು. | ಎಂ.ಜಿ. ಹಿರೇಮಠ ಜಿಲ್ಲಾಧಿಕಾರಿ