More

  ಪರಿಶ್ರಮವಿಲ್ಲದೆ ಯಶಸ್ಸಿಲ್ಲ

  ಶಿವಮೊಗ್ಗ: ಪರಿಶ್ರಮವಿಲ್ಲದೇ ಯಶಸ್ಸು ಪಡೆಯಲು ಸಾಧ್ಯವಿಲ್ಲ. ಪರಿಶ್ರಮವೇ ಯಶಸ್ಸಿನ ಮೂಲಮಂತ್ರ. ನಿರ್ದಿಷ್ಟ ಗುರಿಯೆಡೆಗೆ ಶ್ರದ್ಧೆಯಿಂದ ಸಾಗುವ ಮನೋಶಕ್ತಿ ವೃದ್ಧಿಸಿಕೊಳ್ಳಬೇಕು ಎಂದು ಜಿಪಂ ಸಿಇಒ ಎಂ.ಎಲ್.ವೈಶಾಲಿ ತಿಳಿಸಿದರು.

  ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಭಾನುವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್​ಗಳಲ್ಲಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

  ನಿರಂತರ ಪರಿಶ್ರಮ ಹಾಗೂ ಗುರಿ ಸಾಧಿಸುವ ಶ್ರದ್ಧೆ ಇದ್ದಲ್ಲಿ ಯಶಸ್ಸು ನಿಶ್ಚಿತ. ಎಲ್ಲರಲ್ಲಿಯೂ ಅಸಾಧ್ಯವಾದುದನ್ನು ಸಾಧಿಸುವ ಶಕ್ತಿ ಇರುತ್ತದೆ. ನಿಮ್ಮಲ್ಲಿ ನೀವು ನಂಬಿಕೆಯಿಟ್ಟು ಮುನ್ನಡೆಯಬೇಕು ಎಂದು ಹೇಳಿದರು.

  ಎಸ್ಪಿ ಕೆ.ಎಂ.ಶಾಂತರಾಜು ಮಾತನಾಡಿ, ಗುರಿ ಸಾಧಿಸಲು ಯೋಜಿಸಿದ ಪ್ರತಿ ದಿನದ ಕಾರ್ಯಗಳನ್ನು ಪೂರ್ಣಗೊಳಿಸ ಬೇಕು. ವೈಫಲ್ಯ ಅನುಭವಿಸಿದಲ್ಲಿ ಯಾವ ವಿಷಯದಲ್ಲಿ ಹಿನ್ನಡೆ ಆಗುತ್ತಿದೆ ಎಂಬುದನ್ನು ಅವಲೋಕನ ಮಾಡಬೇಕು. ಸಮಯದ ನಿರ್ವಹಣೆಯಲ್ಲಿ ವಿಫಲರಾದರೆ ಪರಿಣಾಮಕಾರಿಯಾಗಿ ಸಮಯದ ಬಳಕೆ ಮಾಡಿಕೊಳ್ಳಲು ಯೋಜನೆ ಸಿದ್ಧಪಡಿಸಿಕೊಳ್ಳಬೇಕು. ಯಶಸ್ಸಿಗೆ ಪೂರಕವಾದ ಸಣ್ಣ ಸಣ್ಣ ವಿಷಯಗಳಿಗೂ ಪ್ರಾಮುಖ್ಯತೆ ನೀಡಬೇಕು ಎಂದರು.

  ಯುಪಿಎಸ್​ಸಿ ಮತ್ತು ಕೆಪಿಎಸ್​ಸಿ ಪರೀಕ್ಷೆ ಎದುರಿಸಲು ಅಗತ್ಯ ಸಿದ್ಧತೆಗಳ ಬಗ್ಗೆ ಬೆಂಗಳೂರಿನ ರಾಜ್​ಕುಮಾರ್ ಅಕಾಡೆಮಿ ತರಬೇತುದಾರ ಬಾಬು ಸಂದೀಪ್ ಮಾತನಾಡಿ, ಪ್ರತಿ ವರ್ಷ ಯುಪಿಎಸ್​ಸಿ, ಕೆಪಿಎಸ್​ಸಿ ಸೇರಿ ವಿವಿಧ ಕ್ಷೇತ್ರಗಳ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುತ್ತವೆ. ವಿದ್ಯಾರ್ಥಿಗಳು ಪದವಿ ಹಂತದಿಂದಲೇ ಜೀವನ ರೂಪಿಸಿಕೊಳ್ಳುವ ಕ್ಷೇತ್ರದ ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿಯ ಯೂನಿಕ್ ಎಜುಕೇಷನ್ ಇಂಟರ್​ನ್ಯಾಷನಲ್ ಕಾಲೇಜ್ ನಿರ್ದೇಶಕ ಫಾದರ್ ಸಲೀನ್ ಕೆ.ಜೋಸೆಫ್ ಸ್ಪೂರ್ತಿದಾಯಕ ಉಪನ್ಯಾಸ ನೀಡಿದರು.

  ಶಿಕ್ಷಣ ಶಕ್ತಿಯುತ ಮಾರ್ಗ: ಉತ್ತಮ ಜೀವನ ರೂಪಿಸಿಕೊಳ್ಳಲು ಶಿಕ್ಷಣ ಅತ್ಯಂತ ಶಕ್ತಿಯುತ ಮಾರ್ಗ. ಎಲ್ಲರೂ ಶಿಕ್ಷಣ ಪಡೆಯುವ ಮೂಲಕ ಉನ್ನತ ಹುದ್ದೆ ಅಲಂಕರಿಸುವ ಗುರಿ ಇಟ್ಟುಕೊಳ್ಳಬೇಕು. ವಿದ್ಯಾರ್ಥಿ ಹಂತದಿಂದಲೇ ಪೂರಕ ಅಧ್ಯಯನ ಆರಂಭಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸ್ಪರ್ಧೆ ಹೆಚ್ಚುತ್ತಿದ್ದು, ಅದಕ್ಕೆ ಸೂಕ್ತ ರೀತಿಯಲ್ಲಿ ವಿದ್ಯಾರ್ಥಿಗಳು ಸಿದ್ಧತೆ ನಡೆಸಬೇಕು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಶೈಕ್ಷಣಿಕ ಅರ್ಹತೆ ಜತೆಯಲ್ಲಿ ಅಗತ್ಯ ಸ್ಪರ್ಧಾತ್ಮಕ ಕೌಶಲ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

  ಬ್ಯಾಂಕ್ ಪರೀಕ್ಷೆಗಳ ತಯಾರಿ ಕುರಿತು ಮೈಸೂರು ಎಸ್​ಬಿಐ ವ್ಯವಸ್ಥಾಪಕ ದರ್ಶನ್, ಸಹ ಪ್ರಾಧ್ಯಾಪಕ ಅಶೋಕ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ರಮ್ಯಾ, ನೆನಪಿನ ಶಕ್ತಿ ಮತ್ತು ತಂತ್ರಗಳ ಬಗ್ಗೆ ಮಂಗಳೂರಿನ ಮಾನಸಿಕ ತಜ್ಞೆ ಡಾ. ಕೆ.ಟಿ.ಶ್ವೇತಾ ಉಪನ್ಯಾಸ ನೀಡಿದರು. ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಂಕರ್​ಗುರು ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts