Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಪರಿಶಿಷ್ಟರಿಗೆ ಅನುದಾನ ಬಲ

Thursday, 16.03.2017, 2:37 PM       No Comments

ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಜಮೀನಿನಲ್ಲಿ ಕೊಳವೆಬಾವಿ ಹೊಂದಲು ಸಹಕರಿಸುವ ಗಂಗಾ ಕಲ್ಯಾಣ ಯೋಜನೆಯನ್ನು ಸರ್ಕಾರ ಇನ್ನಷ್ಟು ಬಲಗೊಳಿಸಿದೆ. ಈ ಯೋಜನೆಯಡಿ ಕೊಳವೆಬಾವಿ ಕೊರೆಯಲು ಪ್ರಸಕ್ತ ಇರುವ ಘಟಕ ವೆಚ್ಚವನ್ನು 2.5 ಲಕ್ಷ ರೂ. ನಿಂದ 3 ಲಕ್ಷ ರೂ.ಗೆ ಹೆಚ್ಚಿಸಿ ಸಹಾಯ ಧನವನ್ನು 2 ಲಕ್ಷ ರೂ.ನಿಂದ 2.5 ಲಕ್ಷ ರೂ.ಗೆ ಏರಿಸಿದೆ. ಈ ಫಲಾನುಭವಿಗಳಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಮೂಲಕ ಹನಿ ಮತ್ತು ತುಂತುರು ನೀರಾವರಿ ಮತ್ತು ಕೃಷಿ ಹೊಂಡಗಳ ನಿರ್ವಣಕ್ಕೆ ನೆರವು ಒದಗಿಸಲಿದೆ.

ಭೂರಹಿತ ಕೃಷಿ ಕಾರ್ವಿುಕರಿಗೆ ಜಮೀನು ಖರೀದಿ ಯೋಜನೆಯಡಿ 10 ಲಕ್ಷ ರೂ.

ಇರುವ ಘಟಕ ವೆಚ್ಚವನ್ನು 15 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. ಪರಿಶಿಷ್ಟರು ಶೇ.50ಕ್ಕಿಂತ ಹೆಚ್ಚಿರುವ ಗ್ರಾಮಗಳ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಯೋಜನೆ ಗಳನ್ನು ಒಂದುಗೂಡಿಸಿ ಅನುದಾನ ಒದಗಿಸಲಿದೆ. ಗೃಹ ನಿರ್ವಣಕ್ಕೆ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಘಟಕಕ್ಕೆ 1.5 ಲಕ್ಷ ರೂ.ನಿಂ.ದ 1.75 ಲಕ್ಷ ರೂ.ಗೆ, ನಗರಪ್ರದೇಶದಲ್ಲಿ 1.8 ಲಕ್ಷ ರೂ.ನಿಂದ 2 ಲಕ್ಷ ರೂ. ನಿಗದಿ ಪಡಿಸಿದೆ. ಪರಿಶಿಷ್ಟರ ಯೋಜನೆಗಳ ಪರಿಣಾಮಕಾರಿ ಜಾರಿಗೆ ಅಸ್ತಿತ್ವದಲ್ಲಿರುವ 14 ಜಿಲ್ಲಾ ಕಚೇರಿಗಳ ಜತೆಗೆ 5 ಹೊಸ ಜಿಲ್ಲೆಗಳಲ್ಲಿ ಕಚೇರಿ ಸ್ಥಾಪಿಸಲಿದೆ. ಈ ಸಮುದಾಯಗಳ 2 ಲಕ್ಷ ಬಿಪಿಎಲ್ ಕುಟುಂಬಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಹಯೋಗದೊಂದಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಲು 100 ಕೋಟಿ ರೂ. ಒದಗಿಸಲಾಗುವುದು. ಸಮಾಜ ಕಲ್ಯಾಣ ಇಲಾಖೆಗೆ 6,363 ಕೋಟಿ ರೂ, ಹಿಂದುಳಿದವರ ಕಲ್ಯಾಣಕ್ಕೆ 3,514 ಕೋಟಿ ರೂ.ಗಳನ್ನು ಸಿಎಂ ನೀಡಿದ್ದಾರೆ.

 • ಮಹಿಳಾ ಸ್ವಸಹಾಯ ಸಂಘಗಳಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ
 • ಒಂದು ಲಕ್ಷ ಪರಿಶಿಷ್ಟ ನಿರುದ್ಯೋಗಿ ಯುವಕ ರಿಗೆ ಕೌಶಲ ತರಬೇತಿ
 • ಕಾನೂನು ಪದವೀಧರರ ಮಾಸಿಕ ತರಬೇತಿ ವೆಚ್ಚ 2,000 ರೂ.ಗಳಿಂದ 5,000 ರೂ.ಗಳಿಗೆ ಏರಿಕೆ
 • ಎಸ್​ಸಿ, ಎಸ್​ಟಿ ಬಿಪಿಎಲ್ ಕುಟುಂಬ ಗಳಿಗೆ ‘ಅಡುಗೆ ಅನಿಲ’ ಸಂಪರ್ಕ ಕಲ್ಪಿಸಲು 100 ಕೋಟಿ ರೂ. ಮೀಸಲು
 • ಯಕ್ಷಗಾನದ ಜತೆ ಸೇರಿಕೊಂಡಿದ್ದ ಬಯಲಾಟಕ್ಕೆ ಪ್ರತ್ಯೇಕ ಅಕಾಡೆಮಿ
 • ಮಲ್ಟಿಪ್ಲೆಕ್ಸ್​ನಲ್ಲಿ ಟಿಕೆಟ್ ಗರಿಷ್ಠ ದರ 200 ರೂ. ನಿಗದಿ. ಒಂದು ಸ್ಕ್ರೀನ್​ನಲ್ಲಿ ಕನ್ನಡ ಚಿತ್ರದ 3 ಪ್ರದರ್ಶನ ಕಡ್ಡಾಯ
 • ಮಂಗಳೂರಿನ ಸಸಿಹಿತ್ಲು ಬೀಚ್​ನಲ್ಲಿ ಪ್ರತಿವರ್ಷ ರಾಷ್ಟ್ರೀಯ ‘ಸರ್ಫಿಂಗ್ ಉತ್ಸವ ಆಯೋಜನೆ
 • ಮಲ್ಪೆ, ಮಂಗಳೂರು ಮೀನುಗಾರಿಕೆ ಬಂದರುಗಳಲ್ಲಿ 5 ಕೋಟಿ ರೂ. ವೆಚ್ಚದಲ್ಲಿ 75 ಮೀ. ಉದ್ದದವರೆಗೆ ಜಟ್ಟಿ ವಿಸ್ತರಣೆ
 • ಕಾರವಾರ ಬಂದರಿನಲ್ಲಿ ಹೆಚ್ಚುವರಿಯಾಗಿ 1,508 ಮೀ. ಉದ್ದದ ದಕ್ಕೆ ನಿರ್ಮಾಣ

 

ಒಳಪಂಗಡ ಮದುವೆಗೆ ಉತ್ತೇಜನ

ಪರಿಶಿಷ್ಟ ಜಾತಿ ಮತ್ತು ಪಂಗಡದ ಯುವಕ ಯುವತಿಯರು ಅದೇ ಸಮುದಾಯಗಳ ನಡುವೆ ಅಂತರ್ಜಾತಿ ವಿವಾಹವಾದರೆ 2 ಲಕ್ಷ ರೂ. ಪ್ರೋತ್ಸಾಹ ಧನವನ್ನು ಸರ್ಕಾರ ನೀಡಲಿದೆ. ಈ ಸಮುದಾಯಗಳ ವಿಧವೆಯರು ಮರು ಮದುವೆಯಾದಲ್ಲಿ 3 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಿದೆ.

 • ಹಿಂದುಳಿದ ವರ್ಗ, ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗಳ 1-5ನೇ ತರಗತಿ ವರೆಗಿನ ಆಶ್ರಮ/ವಸತಿ ಶಾಲೆಗಳ ಶೈಕ್ಷಣಿಕ ನಿರ್ವಹಣೆ ಹೊಣೆ ಶಿಕ್ಷಣ ಇಲಾಖೆಗೆ ವರ್ಗಾವಣೆ.
 • ಡಿ. ದೇವರಾಜ ಅರಸು ಸಂಶೋಧನಾ ಸಂಸ್ಥೆಗೆ ಸ್ವಾಯತ್ತತೆ
 • ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 25 ಕೋಟಿ ರೂ. ಅನುದಾನ
 • ಹಿಂದುಳಿದ ವರ್ಗಗಳ ಹಾಸ್ಟೆಲ್ ವಿದ್ಯಾರ್ಥಿಗಳ ಪುಸ್ತಕ ಮತ್ತು ಲೇಖನ ಸಾಮಗ್ರಿ, ಕ್ಷೌರ ಹಾಗೂ ಸಮವಸ್ತ್ರ ವೆಚ್ಚ ಕ್ರಮವಾಗಿ 200ರಿಂದ 400 ರೂ.ಗೆ, 150 ರೂ.ನಿಂದ 300 ರೂ.ಗೆ, 499 ರೂ.ನಿಂದ 1000 ರೂ.ಗೆ ಹೆಚ್ಚಳ.

ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ

ಜೆಇಇ/ನೀಟ್/ಗೇಟ್/ಜಿಆರ್​ಇ ರಾಷ್ಟ್ರ ಮಟ್ಟದ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಎಸ್​ಸಿ ಎಸ್​ಟಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುವುದು. ಐಐಎಂ, ಐಐಟಿ, ಐಐಎಸ್​ಸಿ ಪ್ರವೇಶ ಪಡೆದ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ 2 ಲಕ್ಷ ರೂ. ಪ್ರೋತ್ಸಾಹ ಧನ ದೊರೆಯಲಿದೆ.

ಕಾನೂನು ಪದವೀಧರರ ಭತ್ಯೆ ಹೆಚ್ಚಳ

ಎಸ್ಸಿ-ಎಸ್ಟಿ ಸಮುದಾಯದ ಕಾನೂನು ಪದವೀಧರರಿಗೆ ಮಾಸಿಕ ಭತ್ಯೆಯನ್ನು 2 ಸಾವಿರ ರೂ.ನಿಂದ 5 ಸಾವಿರ ರೂ.ಗೆ, ಹಿಂದುಳಿದ ವರ್ಗದ ಪದವೀಧರರಿಗೆ 2 ಸಾವಿರ ರೂ.ನಿಂದ 4 ಸಾವಿರ ರೂ.ಗೆ ಹೆಚ್ಚಳ ಮಾಡಲಾಗಿದೆ.

ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ

ಹಿಂದುಳಿದ ವರ್ಗಗಳ ಯುವಕರು ಸೇನೆಗೆ ಸೇರುವುದನ್ನು ಹೆಚ್ಚಿಸಲು 3,000 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು. ಕೇಂದ್ರ ರಕ್ಷಣಾ ಇಲಾಖೆಯ ಸಹಯೋಗದಲ್ಲಿ ಬೈಲಹೊಂಗಲದ ಸಂಗೊಳ್ಳಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಆರಂಭಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಆದಿವಾಸಿಗಳ ಅರಣ್ಯ ಅನುಭವ ಬಳಕೆ

ಜೇನುಕುರುಬ, ಕಾಡುಕುರುಬ, ಕೊರಗ, ಸೋಲಿಗ, ಎರವ, ಗೌಡಲು ಮುಂತಾದ ಆದಿವಾಸಿ ಸಮುದಾಯದವರ ಅರಣ್ಯದ ಕುರಿತು ಹೊಂದಿರುವ ಅನುಭವವನ್ನು ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ. ಅವರನ್ನು ಅರಣ್ಯ ಇಲಾಖೆಯ ಗಾರ್ಡ್, ವಾಚರ್ ಇತ್ಯಾದಿ ಹುದ್ದೆಗಳಿಗೆ ನೇಮಕ ಮಾಡಲು ವಿಶೇಷ ನಿಯಮ ರೂಪಿಸಲಾಗುವುದು.

ಸಾರ್ವತ್ರಿಕ ಆರೋಗ್ಯ ಯೋಜನೆ

ಯಶಸ್ವಿನಿ ಯೋಜನೆ ಕೈ ಬಿಟ್ಟು ಸರ್ಕಾರವು ಸಾರ್ವತ್ರಿಕ ಆರೋಗ್ಯ ವ್ಯಾಪ್ತೀಕರಣ ಯೋಜನೆ ಜಾರಿಗೆ ನಿರ್ಧರಿಸಿದೆ.1.38 ಕೋಟಿ ಕುಟುಂಬವನ್ನು ಈ ಯೋಜನೆಯಿಂದ ತಲುಪುವ ಗುರಿ ಹೊಂದಲಾಗಿದ್ದು, ಇದನ್ನು ಸರ್ಕಾರವೇ ನೇರವಾಗಿ ನಿರ್ವಹಿಸಲಿದೆ.ಇದರಿಂದಾಗಿ ಸರ್ಕಾರವು ಈಗ ನಡೆಸುತ್ತಿರುವ ಎಲ್ಲ ಆರೋಗ್ಯ ಯೋಜನೆಗಳು ರದ್ದಾಗಲಿವೆ. ಆರೋಗ್ಯದ ಬಗ್ಗೆ ಅಪಾರ ಕಾಳಜಿ ವ್ಯಕ್ತಪಡಿಸಿರುವ ಸಿಎಂ, ಕ್ಯಾನ್ಸರ್ ಹಾಗೂ ಹೃದಯ ರೋಗಗಳ ಚಿಕಿತ್ಸೆಗೆಂದು ದಾವಣಗೆರೆ, ರಾಮನಗರ, ತುಮಕೂರು, ವಿಜಯಪುರ ಮತ್ತು ಕೋಲಾರದಲ್ಲಿ ತಲಾ 25 ಕೋಟಿ ರೂ. ವೆಚ್ಚದಲ್ಲಿ ಐದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಘೊಷಣೆ ಮಾಡಿದ್ದಾರೆ.

ಅಲ್ಲದೆ, ಡೆಂಘೆ, ಮಲೇರಿಯಾದಂಥ ರೋಗಿಗಳಿಗಾಗಿ ಬಾಗಲಕೋಟೆ, ವಿಜಯಪುರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾವೇರಿ, ಕೊಡಗು, ಕೋಲಾರ, ತುಮಕೂರು ಮತ್ತು ಉತ್ತರ ಕನ್ನಡದ ಜಿಲ್ಲಾ ಆಸ್ಪತ್ರೆಗಳಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ರಕ್ತ ವಿದಳನ ಘಟಕಗಳನ್ನು ಆರಂಭಿಸುವುದಾಗಿ ತಿಳಿಸಿದ್ದಾರೆ. ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಆಯುಷ್ ಕೇಂದ್ರ ಸ್ಥಾಪಿಸುವುದಾಗಿ ಹೇಳಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 5, 118 ಕೋಟಿ ರೂ. ಒದಗಿಸಲಾಗಿದೆ.

ಆರೋಗ್ಯ ಸಹಾಯಕಿಯರಿಗೆ ‘ಟ್ಯಾಬ್’

ಮಾಹಿತಿ ಸಂಗ್ರಹ, ಸಂರಕ್ಷಣೆ ಮತ್ತು ಸಂವಹನಕ್ಕಾಗಿ 16,500 ಕಿರಿಯ ಮಹಿಳಾ ಆರೋಗ್ಯ ಸಹಾಯಕರಿಗೆ ಕಂಪ್ಯೂಟರ್ ಟ್ಯಾಬ್ ವಿತರಿಸಲು ಸರ್ಕಾರ ನಿರ್ಧರಿಸಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಿಂದ 10 ಕಿ.ಮೀ.ಗಿಂತ ಹೆಚ್ಚು ದೂರವಿರುವ ಗ್ರಾಮಗಳಿಗೆ ತಲಾ 10 ಲಕ್ಷ ರೂ. ವೆಚ್ಚದಲ್ಲಿ ವೈದ್ಯ, ಶುಶ್ರೂಷಕ ಹಾಗೂ ಫಾರ್ಮಸಿಸ್ಟ್ ಒಳಗೊಂಡ 150 ಆರೋಗ್ಯ ವಿಸ್ತರಣಾ ಚಿಕಿತ್ಸಾಲಯ ಆರಂಭಿಸಲಿದೆ. ಇದರೊಂದಿಗೆ ಪ್ರತಿ 10ರಿಂದ 15 ಕಿ.ಮೀ. ಸುತ್ತಳತೆಯ 35 ಸಾವಿರ ಜನರಿಗೆ ಒಂದರಂತೆ ಆಂಬುಲೆನ್ಸ್ ಸೇವೆ ಒದಗಿಸಲಿದೆ. ಪರಿಶಿಷ್ಟ ಜಾತಿ, ಪಂಗಡಗಳ ಜನಸಂಖ್ಯೆ ಹೊಂದಿರುವ 1200-1300 ಗ್ರಾಮಗಳ ಜನರಿಗೆ 2 ವರ್ಷಗಳಲ್ಲಿ 25.34 ಕೋಟಿ ರೂ. ವೆಚ್ಚದಲ್ಲಿ ಎಸ್​ಸಿಎಸ್​ಪಿ/ಟಿಎಸ್​ಪಿ ಅನುದಾನ ಬಳಸಿ 64 ಸಂಚಾರಿ ಆರೋಗ್ಯ ಘಟಕ ಪ್ರಾರಂಭಿಸಲಿದೆ.

 • ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹಧನದ ಜತೆ 1000 ರೂ. ಗೌರವಧನ.
 • ಸಂಜಯ್ ಗಾಂಧಿ ಅಪಘಾತ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯಲ್ಲಿ 14.32 ಕೋಟಿ ರೂ. ವೆಚ್ಚದಲ್ಲಿ 10 ಹಾಸಿಗೆ ಸಾಮರ್ಥ್ಯದ ವೆಂಟಿಲೇಟರ್ ಸೌಲಭ್ಯದ ಐಸಿಯು ಮತ್ತು 20 ಹಾಸಿಗೆಯ ಪಾಲಿಟ್ರಾಮಾ ಕೇಂದ್ರ ಸ್ಥಾಪನೆ.
 • 150 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶವಾಗಾರಗಳ ನಿರ್ವಣ.
 • ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗಳಲ್ಲಿ 50 ಹಾಸಿಗೆಗಳ ಸಂಯೋಜಿತ ಆಯುಷ್ ಆಸ್ಪತ್ರೆ.
 • 114 ತಾಲೂಕುಗಳಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪನೆ
 • ಜನೌಷಧ ಮಳಿಗೆ ಯೋಜನೆಯಡಿ 200 ಜನರಿಕ್ ಔಷಧ ಮಳಿಗೆ ಪ್ರಾರಂಭ.
 • ಆಸ್ಪತ್ರೆಗಳಲ್ಲಿ ಒಟ್ಟು 188 ಆರ್​ಒ ಪ್ಲಸ್​ಯುುವಿ ಕುಡಿಯುವ ನೀರಿನ ಸೌಲಭ್ಯ.
 • 206 ಸಮುದಾಯ ಆರೋಗ್ಯ ಕೇಂದ್ರ, 2353 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇ-ಹಾಸ್ಪಿಟಲ್ ಕಾರ್ಯಕ್ರಮ ವಿಸ್ತರಣೆ.
 • ರಾಷ್ಟ್ರೀಯ ಉಚಿತ ರೋಗಪತ್ತೆ ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ರೋಗಪತ್ತೆ ಸೌಲಭ್ಯ. 14 ಜಿಲ್ಲಾಸ್ಪತ್ರೆಗಳಲ್ಲಿ ಸಿ.ಟಿ.ಸ್ಕ್ಯಾನ್, 6 ಜಿಲ್ಲಾಸ್ಪತ್ರೆಗಳಲ್ಲಿ ಎಂಆರ್​ಐ ಸ್ಕ್ಯಾನ್ ಸೌಲಭ್ಯ.

ಸ್ಮಾರಕ ಅಭಿವೃದ್ಧಿಗೆ ಆದ್ಯತೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಈ ಬಾರಿ ಒಟ್ಟು 424 ಕೋಟಿ ರೂ. ಘೊಷಿಸಲಾಗಿದೆ. ಈ ಪೈಕಿ ರಾಜ್ಯದ ಸ್ಮಾರಕಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಯಾದಗಿರಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೊಲ್ಲೂರು ಮಲ್ಲಪ್ಪನವರ ಸ್ಮಾರಕ ನಿರ್ವಣಕ್ಕೆ 2 ಕೋಟಿ ರೂ., ಕೆ.ಸಿ. ರೆಡ್ಡಿ ಸ್ಮಾರಕ ನಿರ್ವಣಕ್ಕೆ 2 ಕೋಟಿ, ಚನ್ನಗಿರಿಯ ಹೊದಿಗೆರೆಯಲ್ಲಿ ಶಿವಾಜಿ ಮಹಾರಾಜರ ತಂದೆ ಶಹಾಜಿ ಮಹಾರಾಜರ ಸಮಾಧಿ ಸ್ಥಳದ ಅಭಿವೃದ್ಧಿಗೆ 2 ಕೋಟಿ ರೂ. ಪ್ರಕಟಿಸಲಾಗಿದೆ. ಚಾಲುಕ್ಯರ ರಾಜಧಾನಿ ಹಾಗೂ ಸಾಹಿತಿ ಅತ್ತಿಮಬ್ಬೆಯ ಸ್ಥಳವಾದ ಲಕ್ಕುಂಡಿಯನ್ನು ಅಭಿವೃದ್ಧಿಪಡಿಸಲು ಪ್ರಾಧಿಕಾರ ರಚನೆಗೆ 3 ಕೋಟಿ ರೂ.ಒದಗಿಸಲಾಗಿದೆ. ವಿಮರ್ಶಕ ಎಂ.ಎಂ. ಕಲ್ಬುರ್ಗಿ ಅವರ ಸಮಗ್ರ ಸಾಹಿತ್ಯ ಕೃತಿಗಳನ್ನು ವಿಜಯಪುರದ ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಮೂಲಕ ಪ್ರಕಟಿಸಲು ನಿರ್ಧರಿಸಲಾಗಿದೆ. ದೆಹಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠಕ್ಕೆ ಮೂಲನಿಧಿಯಾಗಿ 5 ಕೋಟಿ ರೂ. ನೀಡಲಾಗುತ್ತಿದೆ.

ಗರ್ಭಿಣಿ, ಬಾಣಂತಿಯರಿಗೂ ಬಿಸಿಯೂಟ

ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿ ಹಲವು ಮಹತ್ವದ ಯೋಜನೆಗಳನ್ನು ಘೂಷಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಿಳೆಯರ ಸುರಕ್ಷತೆ ಹಾಗೂ ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಹೆಚ್ಚಿನ ಒತ್ತು ನೀಡಿದ್ದಾರೆ.

ಮಹಿಳಾ ಸ್ವಾವಲಂಬನೆಗೂ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ಹೇಳಿರುವ ಸಿದ್ದರಾಮಯ್ಯ 2017-18ನೇ ಸಾಲಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಟ್ಟು 4,926 ಕೋಟಿ ರೂ.ಗಳನ್ನು ಒದಗಿಸಿದ್ದಾರೆ. ಮಹಿಳಾ ಸ್ವಸಹಾಯ ಸಂಘಗಳಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವುದಾಗಿ ಪ್ರಕಟಿಸಿದೆ.

ಗರ್ಭಿಣಿಯರು ಮತ್ತು ಬಾಣಂತಿಯರಲ್ಲಿ ಪೌಷ್ಠಿಕಾಂಶದ ಕೊರತೆ ನಿವಾರಣೆಗಾಗಿ ಜಾರಿಗೆ ತರಲಾಗಿರುವ ‘ಮಾತೃಪೂರ್ಣ’ ಯೋಜನೆಯನ್ನು ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲು ಉದ್ದೇಶಿಸಲಾಗಿದ್ದು, ಈ ಯೋಜನೆಯ ಅಡಿಯಲ್ಲಿ ಜುಲೈನಿಂದ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಸಿದ್ಧಪಡಿಸಿದ ಬಿಸಿಯೂಟ ಪೂರೈಸಲಾಗುವುದು. ಇದಕ್ಕಾಗಿ 302 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ.

ಅತ್ಯಾಚಾರ ಮತ್ತು ವಿವಿಧ ದೌರ್ಜನ್ಯಕ್ಕೊಳಗಾದ ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ತಾಲೂಕು ಆಸ್ಪತ್ರೆಗಳಲ್ಲಿ 145 ವಿಶೇಷ ಚಿಕಿತ್ಸಾ ಘಟಕ ಸ್ಥಾಪನೆ.

ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರಿಗೆ ನೀಡುವ ಗೌರವಧನವನ್ನು ಕ್ರಮವಾಗಿ 1000 ಹಾಗೂ 500 ರೂ. ಹೆಚ್ಚಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ 115 ಕೋಟಿ ರೂ. ಗಳನ್ನು ಒದಗಿಸಲಾಗುತ್ತದೆ. ಜತೆಗೆ, ಅವರಿಗೆ ಸರ್ಕಾರದಿಂದಲೇ ಅಪಘಾತ ವಿಮೆಯನ್ನು ಒದಗಿಸಲಿದೆ. ಅಂಗನವಾಡಿ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸಲು ಜೂನ್​ನಿಂದ ವಾರದಲ್ಲಿ ಎರಡು ದಿನ ಮೊಟ್ಟೆ ವಿತರಿಸಲು ನಿರ್ಧರಿಸಿದ್ದು, ಇದಕ್ಕಾಗಿ 47 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ. ಕ್ಷೀರಭಾಗ್ಯ ಯೋಜನೆಯಡಿ ಪ್ರಸ್ತುತ 3 ದಿನ ವಿತರಿಸುತ್ತಿರುವ ಹಾಲನ್ನು 5 ದಿನಗಳಿಗೆ ವಿಸ್ತರಿಸಲು ಉದ್ದೇಶಿಸಲಾಗಿದೆ.

ಮಕ್ಕಳ ವಿಶೇಷ ನ್ಯಾಯಾಲಯವನ್ನು ಬಾಲ ಸ್ನೇಹಿಯಾಗಿಸಲು ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ ನ್ಯಾಯಾಲಯ ನಿರ್ವಿುಸಲು 4 ಕೋಟಿ ರೂ. ಅನುದಾನ. ಪಾಲನೆ ಯೋಜನೆಯಡಿ ಎಚ್​ಐವಿ ಸೋಂಕಿತ ಹಾಗೂ ಬಾಧಿತ 25,000 ಮಕ್ಕಳಿಗೆ ನೀಡಲಾಗುವ ಧನ ಸಹಾಯ ಮಾಸಿಕ 800 ರೂ.ಗಳಿಂದ 1,000 ರೂ.ಗಳಿಗೆ ಏರಿಕೆ ಮಾಡಲಾಗಿದೆ.

 

ಹಳೇ ಘೊಷಣೆಗೆ ಹೊಸ ಧ್ವನಿ

ಈ ವರ್ಷ ದಾವಣಗೆರೆಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನಕ್ಕೆ ಕಳೆದ ವರ್ಷದ ಬಜೆಟ್​ನಲ್ಲೇ 30 ಕೋಟಿ ರೂ. ಅನುದಾನ ಘೊಷಿಸಲಾಗಿತ್ತು. ಈ ಬಾರಿಯ ಬಜೆಟ್​ನಲ್ಲಿ ಮತ್ತೆ ಸೇರ್ಪಡೆ ಮಾಡಿರುವ ಸಿದ್ದರಾಮಯ್ಯ 20 ಕೋಟಿ ನೀಡುವುದಾಗಿ ಘೊಷಿಸಿದ್ದಾರೆ. ಮಹಾತ್ಮಾ ಗಾಂಧೀಜಿ 150ನೇ ಜನ್ಮ ವರ್ಷಾಚರಣೆಗೆ ಪೂರ್ವಭಾವಿಯಾಗಿ ರಾಜ್ಯಾದ್ಯಂತ ಮಹಾತ್ಮಾ ಗಾಂಧೀಜಿ ಧ್ವನಿ- ಬೆಳಕು ಪ್ರದರ್ಶನಕ್ಕೆ 5 ಕೋಟಿ. ಗಾಂಧೀಜಿ ಚಿತಾಭಸ್ಮವಿರುವ ಅರಸೀಕೆರೆಯ ಕಸ್ತೂರಬಾ ಆಶ್ರಮ ಅಭಿವೃದ್ಧಿಗೆ 2 ಕೋಟಿ ಘೊಷಿಸಿರುವ ಸರ್ಕಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ 283 ಕೋಟಿ ರೂ. ನೀಡಿದೆ.

ಶರಣರ ಅಧ್ಯಯನ ಪೀಠ

12ನೇ ಶತಮಾನದ ಶರಣರ ವಿಚಾರಧಾರೆಗಳನ್ನು ಅಧ್ಯಯನ ಮಾಡಲು ಅಧ್ಯಯನ ಪೀಠ ಸ್ಥಾಪನೆಗೆ ಸರ್ಕಾರ ನಿರ್ಧರಿಸಿದೆ. ಜತೆಗೆ ಶರಣರಿಗೆ ಸಂಬಂಧಿಸಿದ ಆಯಾ ಕ್ಷೇತ್ರದ ಅಭಿವೃದ್ಧಿಗಾಗಿ 3 ಕೋಟಿ ರೂ. ಅನುದಾನ ನೀಡಲಿದೆ.ಜಿಲ್ಲೆಗಳಲ್ಲಿ ಸಭಾಂಗಣ ನಿರ್ವಣಕ್ಕೆ 20 ಕೋಟಿ ರೂ., ಗಡಿ ಪ್ರದೇಶ ಅಭಿವೃದ್ಧಿ ಮಂಡಳಿಗೆ 50 ಕೋಟಿ ರೂ. ಘೊಷಿಸಿದೆ. ಮೈಸೂರು ಚಾಮರಾಜೇಂದ್ರ ಸರ್ಕಾರಿ ಆಡಿಯೋ ವಿಡಿಯೋ ಕಾಲೇಜಿನಲ್ಲಿ 6 ಹೊಸ ತರಗತಿ ಕೊಠಡಿಗಳ ನಿರ್ವಣಕ್ಕೆ 10.96 ಕೋಟಿ ರೂ. ನೀಡಿದೆ. ಮಕ್ಕಳು, ಉದಯೋನ್ಮುಖ ಬರಹಗಾರರಿಗೆ ನೆರವು ಹಾಗೂ ಮಕ್ಕಳ ಸಮಸ್ಯೆಗಳ ಕುರಿತು ರಂಗನಾಟಕಗಳ ರಚನೆಗೆ 3 ಕೋಟಿ ಪ್ರಕಟಿಸಿದೆ.

ಬಯಲಾಟಕ್ಕೆ ಪ್ರತ್ಯೇಕ ಅಕಾಡೆಮಿ

ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯ ಸಮಿತಿ ಸರ್ಕಾರಕ್ಕೆ ಸಲ್ಲಿಸಿದ್ದ ಸಾಂಸ್ಕೃತಿಕ ನೀತಿಯಲ್ಲಿದ್ದ ಪ್ರಮುಖ ಪ್ರಸ್ತಾವನೆಗಳಲ್ಲಿ ಬಯಲಾಟವನ್ನು ಯಕ್ಷಗಾನದಿಂದ ಬೇರ್ಪಡಿಸಿ ಪ್ರತ್ಯೇಕ ಅಕಾಡೆಮಿ ರಚಿಸಬೇಕು ಎಂಬುದು ಕೂಡ ಒಂದಾಗಿತ್ತು. ಸಣ್ಣಾಟ, ದೊಡ್ಡಾಟ ಮುಂತಾದ ಕಲಾಪ್ರಕಾರಗಳನ್ನು ಒಳಗೊಂಡಂತೆ ರಾಜ್ಯದ ಹಲವೆಡೆ ಪ್ರಚಲಿತದಲ್ಲಿರುವ ಬಯಲಾಟಕ್ಕೆ ಸ್ವತಂತ್ರ ಸ್ಥಾನ ಕಲ್ಪಿಸಬೇಕು ಎಂಬ ಪ್ರಸ್ತಾವನೆಯನ್ನು ಪರಿಗಣಿಸಿರುವ ಸರ್ಕಾರ ಈ ಬಾರಿಯ ಬಜೆಟ್​ನಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕ ಬಯಲಾಟ ಅಕಾಡೆಮಿ ಸ್ಥಾಪಿಸುವುದಾಗಿ ಘೊಷಿಸಿದೆ.

ಜಿಲ್ಲೆಗಳಲ್ಲಿ ಸವಿರುಚಿ ಸಂಚಾರಿ ಕ್ಯಾಂಟೀನ್

ಸ್ತ್ರೀಶಕ್ತಿ ಸಬಲೀಕರಣ ಹಾಗೂ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲ 30 ಜಿಲ್ಲೆಗಳಲ್ಲಿ ‘ಸವಿರುಚಿ’ ಸಂಚಾರಿ ಕ್ಯಾಂಟೀನ್ ಆರಂಭಿಸಲು ನಿರ್ಧರಿಸಲಾಗಿದೆ. ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟಗಳಿಗೆ ಇವುಗಳ ಉಸ್ತುವಾರಿ ವಹಿಸಲಾಗುವುದು. ಮಹಿಳೆಯರು ನಡೆಸುತ್ತಿರುವ 10 ಸಾವಿರ ನ್ಯಾಯಬೆಲೆ ಅಂಗಡಿಗಳಿಗೆ ಅಗತ್ಯ ಸಲಕರಣೆ ಖರೀದಿಸಲು 5 ಸಾವಿರ ರೂ. ಗಳ ‘ಪರಿಕರ ಸಹಾಯಧನ’ ನೀಡಲಾಗುವುದು. ದೇವದಾಸಿ ಪದ್ಧತಿಯಿಂದ ಹೊರಬಂದವರು, ಲೈಂಗಿಕ ಕಾರ್ಯಕರ್ತರುಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ನೀಡುತ್ತಿದ್ದ 20 ಸಾವಿರ ಪ್ರೋತ್ಸಾಹಧನ 25 ಸಾವಿರ ರೂ. ಗಳಿಗೆ ಹೆಚ್ಚಳ ಹಾಗೂ 25 ಸಾವಿರ ರೂ. ಸಾಲ ಸೌಲಭ್ಯ. ಈ ಎಲ್ಲ ಯೋಜನೆಗಳಿಗಾಗಿ 148.74 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಲಾಗಿದೆ.

ಮಹಿಳಾ ಪೊಲೀಸರಿಗೆ ಮೂಲಸೌಕರ್ಯ

ಮಹಿಳೆ ಮತ್ತು ಮಕ್ಕಳ ಸುರಕ್ಷತೆಗಾಗಿ ತಂತ್ರಜ್ಞಾನ ಅಳವಡಿಕೆಗೆ ಒತ್ತುಕೊಟ್ಟಿರುವ ಸರ್ಕಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಮೂಲಸೌಕರ್ಯ ಕಲ್ಪಿಸುವುದು ಸೇರಿ ಗೃಹ ಇಲಾಖೆಗೆ 4,938 ಕೋಟಿ ರೂ. ಮೀಸಲಿಟ್ಟಿದೆ. ಮಹಿಳಾ ಪೊಲೀಸರಿಗೆ ಎಲ್ಲ ಠಾಣೆಗಳಲ್ಲಿ ಪ್ರತ್ಯೇಕ ಶೌಚಗೃಹ ನಿರ್ವಣ, ಪೊಲೀಸ್ ತರಬೇತಿ ಶಾಲೆಗಳಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಮೂಲಸೌಕರ್ಯ ಕಲ್ಪಿಸಲು 10 ಕೋಟಿ ರೂ. ಅನುದಾನ ನೀಡಿದೆ. ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ತಡೆ ಹಾಗೂ ತ್ವರಿತವಾಗಿ ಸ್ಪಂದಿಸಲು ಮೊಬೈಲ್ ಆಪ್ ಸೇರಿ ತಂತ್ರಜ್ಞಾನ ಆಧಾರಿತ ಪರಿಕರಗಳನ್ನು ಇಲಾಖೆಗೆ ಅಳವಡಿಸಿಕೊಳ್ಳಲಾಗುತ್ತಿದೆ. ಬೆಂಗಳೂರು ಕಮಿಷನರೇಟ್​ನಲ್ಲಿ ‘ಡಯಲ್-100’ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲು ಯಶಸ್ವಿಯಾಗಿದ್ದು, ಇದೇ ಮಾದರಿಯಲ್ಲಿ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲಿದೆ.

ಪೊಲೀಸ್ ತಾಂತ್ರಿಕ ಕೇಂದ್ರ ಸ್ಥಾಪನೆ

ಅಪರಾಧ ಪತ್ತೆ ಮತ್ತು ಅಪರಾಧ ತನಿಖೆಗೆ ವಿಧಿವಿಜ್ಞಾನ ಪ್ರಯೋಗಾಲಯವನ್ನು ಮತ್ತಷ್ಟು ಆಧುನೀಕರಣಗೊಳಿಸಲು ಬೆಂಗಳೂರಿನಲ್ಲಿ 20 ಕೋಟಿ ರೂ. ‘ವಿಧಿ ವಿಜ್ಞಾನ ಹಾಗೂ ಪೊಲೀಸ್ ತಾಂತ್ರಿಕ ಕೇಂದ್ರ’ವನ್ನು ಸ್ಥಾಪಿಸಲಾಗುತ್ತದೆ. ಪ್ರಸ್ತುತ 5 ನಗರಗಳಲ್ಲಿರುವ ಸಂಚಾರ ನಿರ್ವಹಣೆ (ಟ್ರ್ಯಾಕ್ ಪ್ರೋಗ್ರಾಮ್ ಯೋಜನೆಯನ್ನು ಕಲಬುರಗಿ, ತುಮಕೂರು, ಬೆಂಗಳೂರು ಮತ್ತು ಮೈಸೂರು ರೈಲು ನಿಲ್ದಾಣಗಳಿಗೂ ವಿಸ್ತರಿಸಲಾಗುತ್ತದೆ. ಕಾರವಾರ, ತಿಪಟೂರು, ವಿರಾಜಪೇಟೆ, ಗಂಗಾವತಿ, ಬೀದರ್ ಮತ್ತು ತರೀಕೆರೆಗಳಲ್ಲಿ ನೂತನ ಕಾರಾಗೃಹ ನಿರ್ವಣ. ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ 3ನೇ ಹಂತದ ಮಹಿಳಾ ಮತ್ತು ಸಜಾಬಂಧಿಗಳಿಗಾಗಿ ಜೈಲು ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಕಾರಾಗೃಹಗಳ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗುತ್ತಿದೆ.

ನೋಟು ಅಮಾನ್ಯೀಕರಣದಿಂದ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಸಂಗ್ರಹದಲ್ಲಿ 1,350 ಕೋಟಿ ಖೋತಾ ಆಗಿದೆ. ಇದರ ಪರಿಣಾಮ ಮುಂದಿನ ಆರ್ಥಿಕ ವರ್ಷದಲ್ಲಿಯೂ ಉಂಟಾಗುವ ಅಪಾಯವಿದೆ. ಜಿಎಸ್​ಟಿ ಜಾರಿ ನಂತರ ರಾಜ್ಯಕ್ಕಾಗುವ ನಷ್ಟವನ್ನು ಅಂದಾಜು ಮಾಡಿದ್ದೇವೆ. ಕೇಂದ್ರದಿಂದ ಈ ವ್ಯತ್ಯಾಸದ ಹಣ ಪಡೆಯಲು ಕ್ರಮ ಕೈಗೊಳ್ಳುತ್ತೇವೆ.

|ಸಿದ್ದರಾಮಯ್ಯ ಮುಖ್ಯಮಂತ್ರಿ

 

ಮಹಿಳಾ ಪೊಲೀಸ್ ಸಿಬ್ಬಂದಿಗೆ ಪ್ರತ್ಯೇಕ ಶೌಚಗೃಹ ನಿರ್ಮಾಣ ಈ ಹಿಂದೆಯೇ ಆಗಬೇಕಾಗಿತ್ತು. ಆದರೆ, ಕೇವಲ ಘೊಷಣೆಗೆ ಮೀಸಲಾಗಿತ್ತು. ಇದೀಗ ಬಜೆಟ್​ನಲ್ಲಿ ಪ್ರಸ್ತಾಪ ಹಾಗೂ ಬೆಳಗಾವಿ ವಿಧಾನ ಮಂಡಲ ಅಧಿವೇಶನಕ್ಕೆ ಭದ್ರತೆ ಒದಗಿಸುವ ಪೊಲೀಸರಿಗೆ ಭವನ ನಿರ್ಮಾಣ ಉತ್ತಮ ಕೆಲಸ.

| ಡಾ. ಅಜಯ್ಕುಮಾರ್ ಸಿಂಗ್, ನಿವೃತ್ತ ಪೊಲೀಸ್ ಮಹಾನಿರ್ದೇಶಕ

 

ಯಶಸ್ವಿನಿ ವರ್ಗಾವಣೆ ಸರಿಯಲ್ಲ

| ಡಾ.ಬಿ.ಎಸ್. ಅಜಯ್ಕುಮಾರ್ ಚೇರ್ಮನ್ ಮತ್ತು ಸಿಇಒ, ಎಚ್​ಸಿಜಿ ಆಸ್ಪತ್ರೆ, ಬೆಂಗಳೂರು

ಈ ಬಾರಿಯ ಆಯವ್ಯಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಗ್ಯ ಇಲಾಖೆಯ ಸುಧಾರಣೆಗೆ ಹಲವು ಯೋಜನೆಗಳನ್ನು ಘೊಷಿಸಿರುವುದು ಸ್ವಾಗತಾರ್ಹವಾದರೂ, ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯನ್ನು ಮಾರ್ಪಾಡು ಮಾಡಲು ಹೊರಟಿರುವುದು ಸರಿಯಾದ ಕ್ರಮವಲ್ಲ.

ರಾಜ್ಯದಲ್ಲಿ ಸಹಕಾರ ಇಲಾಖೆ ಮೂಲಕ ಜಾರಿಯಲ್ಲಿರುವ ಯಶಸ್ವಿನಿ ಯೋಜನೆ ರೈತ ಸಮುದಾಯ ಹಾಗೂ ಗ್ರಾಮೀಣ ಜನರಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಈ ಯೋಜನೆಯ ಯಶಸ್ಸು ದೇಶದಲ್ಲಷ್ಟೇ ಅಲ್ಲದೆ, ವಿದೇಶಗಳಲ್ಲೂ ಹೆಸರು ಮಾಡಿದೆ. ಹೀಗಿರುವಾಗ ಯೋಜನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಗೆ ವರ್ಗಾಯಿಸಿದರೆ ಅದು ಯೋಜನೆಯನ್ನು ಹಾಳುಗೆಡಹುವ ಯತ್ನವಾಗುವ ಅಪಾಯವಿದೆ. ಹೀಗಾಗಿ ಈಗಿರುವಂತೆಯೇ ಸಹಕಾರ ಇಲಾಖೆ ವ್ಯಾಪ್ತಿಯಲ್ಲೇ ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯನ್ನು ಮುಂದುವರಿಸುವುದು ಸೂಕ್ತ.

ವಿವಿಧ ಜಿಲ್ಲೆಗಳಲ್ಲಿ ಸರ್ಕಾರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ತೆರೆಯಲು ನಿರ್ಧರಿಸಿರುವುದು ಪ್ರಾಯೋಗಿಕವಾಗಿ ಕಷ್ಟಸಾಧ್ಯವಾದುದು. ಇಂತಹ ಆಸ್ಪತ್ರೆಗಳಿಗೆ ತಜ್ಞ ವೈದ್ಯರು, ಸಿಬ್ಬಂದಿ ಒದಗಿಸಿ, ಸಮರ್ಪಕ ನಿರ್ವಹಣೆ ಮಾಡುವುದು ಸರ್ಕಾರಕ್ಕೆ ಅಷ್ಟೊಂದು ಸುಲಭವಲ್ಲ. ಇದರ ಬದಲು ಈಗಾಗಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಡೆಸುವ ಖಾಸಗಿಯವರಿಗೆ ಸರ್ಕಾರ

ಪ್ರೋತ್ಸಾಹ ನೀಡಬಹುದಿತ್ತು.

ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಸೇವೆಗಳ ಸುಧಾರಣೆ, ರಕ್ತನಿಧಿಗಳ ಸ್ಥಾಪನೆ, ಮಕ್ಕಳು, ಮಹಿಳೆಯರ ಆರೋಗ್ಯ ಸುಧಾರಣೆ, ಅಪೌಷ್ಟಿಕತೆ ನಿವಾರಣೆಗೆ ಗರ್ಭಿಣಿ ಹಾಗೂ ಬಾಣಂತಿಯರಿಗೆ ಬಿಸಿಯೂಟ ನೀಡುವುದು, ಜನಸಂಖ್ಯೆಗೆ ಅನುಗುಣವಾಗಿ ಆಂಬುಲೆನ್ಸ್ ಸೇವೆ ಹೆಚ್ಚಳ, ಸಂಚಾರಿ ಆರೋಗ್ಯ ಘಟಕಗಳ ಪ್ರಾರಂಭ, 200

ಜನರಿಕ್ ಔಷಧ ಮಳಿಗೆ ಸ್ಥಾಪನೆ, 114 ತಾಲೂಕುಗಳಲ್ಲಿ ಡಯಾಲಿಸಿಸ್ ಘಟಕ ತೆರೆಯುವುದು, ತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಒಳಗೊಂಡ ತೀವ್ರ ನಿಗಾ ಘಟಕ, ಶುದ್ಧ ಕುಡಿವ ನೀರಿನ ಘಟಕ ಸ್ಥಾಪನೆ ಹಾಗೂ 6 ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ ಮೊದಲಾದ ನಿರ್ಧಾರಗಳು ಸ್ವಾಗತಾರ್ಹವಾಗಿವೆ. ಜತೆಗೆ ಈ ಎಲ್ಲ ಯೋಜನೆಗಳು ಜನ ಸಾಮಾನ್ಯರಿಗೆ ತೀರಾ ಅಗತ್ಯವಿದ್ದ ಯೋಜನೆಗಳಾಗಿವೆ.

Leave a Reply

Your email address will not be published. Required fields are marked *

Back To Top