ಪರಸ್ಪರ ಸಹಕಾರದಿಂದ ಅಭಿವೃದ್ಧಿ ಸಾಧ್ಯ

ಹುಬ್ಬಳ್ಳಿ: ಸಮಾಜ ಮತ್ತು ದೇಶ ಅಭಿವೃದ್ಧಿಗೊಳ್ಳಬೇಕು ಎಂದರೆ ಪರಸ್ಪರ ಕೈಜೋಡಿಸಿ ಕೆಲಸ ಮಾಡುವ ಅಗತ್ಯ ಇದೆ ಎಂದು ಮೈನಿ ಗ್ರುಪ್ ಚೇರ್ಮನ್ ಸಂದೀಪ ಮೈನಿ ಹೇಳಿದರು.

ಸಿಐಐ ಯಂಗ್ ಇಂಡಿಯನ್ಸ್ ಗ್ರುಪ್ ವತಿಯಿಂದ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಯುವ ಭಾರತೀಯರ ಧ್ವನಿಗೆ ಕೈ ಜೋಡಿಸಿ’ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊಂದಾಣಿಕೆ ಕೆಲಸದಿಂದ ಗುರಿ ಈಡೇರಲು ಸಾಧ್ಯ ಎಂದರು.

ಭಾರತದಲ್ಲಿ ಯುವಜನರ ಸಂಖ್ಯೆ ಹೆಚ್ಚಿದೆ. ಈ ಯುವಶಕ್ತಿ ಪರಿಣಾಮಕಾರಿಯಾಗಿ ಕಾರ್ಯ ಮಾಡಬೇಕಾದಲ್ಲಿ ಸರಿಯಾದ ಮಾರ್ಗದರ್ಶನದ ಅಗತ್ಯವಿದೆ. ಯುವಕರು ಪರಸ್ಪರರೊಂದಿಗೆ ಸೇರಿಕೊಂಡು ಕೆಲಸ ಮಾಡಿದಾಗ ವೈಯಕ್ತಿಕ ಉನ್ನತಿ ಜತೆಗೆ ರಾಷ್ಟ್ರವೂ ಅಭಿವೃದ್ಧಿಗೊಳ್ಳಲು ಸಾಧ್ಯ ಎಂದು ಹೇಳಿದರು.

ಉದ್ಯಮಿಗಳು ತಮ್ಮ ನೌಕರರಿಗೆ ಉತ್ತಮ ಸಂಬಳ, ಆರೋಗ್ಯ, ಶಿಕ್ಷಣ ಸೇರಿ ವಿವಿಧ ಸೌಲಭ್ಯಗಳನ್ನು ನೀಡುವ ಜತೆಗೆ ಅವರಲ್ಲಿನ ಕೌಶಲ ಅಭಿವೃದ್ಧಿಗೊಳಿಸಬೇಕು. ಇದರಿಂದ, ಪರಿಣಾಮಕಾರಿಯಾಗಿ ಕೆಲಸ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಟಾಟಾ ಹಿಟಾಚಿ ಕನ್​ಸ್ಟ್ರಕ್ಷನ್​ನ ವ್ಯವಸ್ಥಾಪಕ ನಿರ್ದೇಶಕ ಸಂದೀಪ ಸಿಂಗ್ ಮಾತನಾಡಿ ಭದ್ರತೆ, ಆರೋಗ್ಯ ಹಾಗೂ ಶಿಕ್ಷಣ ಇಂದಿನ ಪ್ರಮುಖ ಸವಾಲುಗಳು. ಇವುಗಳ ವಿಷಯದಲ್ಲಿ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ ಎಂದರು.

ಸಣ್ಣ ನಗರಗಳಿಗೂ ಕೈಗಾರಿಕೆಗಳು ವಿಸ್ತರಣೆಯಾಗಬೇಕು. ಈ ನಿಟ್ಟಿನಲ್ಲಿ ಕೈಗಾರಿಕೆಗಳಿಗೆ ಸರ್ಕಾರ ಅಗತ್ಯ ಪ್ರೋತ್ಸಾಹ ನೀಡಬೇಕು. ಇದರಿಂದ ನಿರುದ್ಯೋಗ ನಿವಾರಣೆಯಾಗಿ, ಜನರು ಗುಣಮಟ್ಟದ ಜೀವನ ನಡೆಸಲು ಸಹಾಯವಾಗುತ್ತದೆ ಎಂದು ಹೇಳಿದರು. ಸಿಐಐ ಯಂಗ್ ಇಂಡಿಯನ್ಸ್ ಗ್ರುಪ್​ನ ಕರ್ನಾಟಕ ಶಾಖೆಯ ಚೇರ್ಮನ್ ಅಮನ್ ಚೌಧರಿ, ಬೆಂಗಳೂರು ಚೇರ್ಮನ್ ರಾಜೇಶ, ನೀಲ್ ಕ್ಯಾಸ್ಟ್ರೋ, ಡಾ. ಶ್ರೀನಿವಾಸ ಜೋಶಿ, ಸಚಿನ್ ತೆಂಗಿನಕಾಯಿ ಮತ್ತಿತರರಿದ್ದರು.

ಆಗಸ್ಟ್​ನಲ್ಲಿ ಹುಬ್ಬಳ್ಳಿ ಶಾಖೆ ಉದ್ಘಾಟನೆ: ಸಿಐಐ ಯಂಗ್ ಇಂಡಿಯನ್ಸ್ ಹುಬ್ಬಳ್ಳಿ ಶಾಖೆಯ ಉದ್ಘಾಟನೆ ಆಗಸ್ಟ್​ನಲ್ಲಿ ನೆರವೇರಲಿದೆ. ಈ ಸಂಘಟನೆಗೆ ಹುಬ್ಬಳ್ಳಿ-ಧಾರವಾಡದ ವಿವಿಧ ಕ್ಷೇತ್ರದ ಸುಮಾರು 30 ಜನ ಇದೀಗ ಸದಸ್ಯರಾಗಿದ್ದಾರೆ. ಈ ಸಂಘಟನೆ ಮೂಲಕ ಹುಬ್ಬಳ್ಳಿ-ಧಾರವಾಡದ ಸಮಸ್ಯೆ ನಿವಾರಣೆ ಜೊತೆಗೆ ಯುವಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದು ನೇತ್ರತಜ್ಞ ಡಾ. ಶ್ರೀನಿವಾಸ ಜೋಶಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *