ಪರಸಾಪುರದಲ್ಲಿ ಕಲುಷಿತ ನೀರು ಪೂರೈಕೆ

ಹುಬ್ಬಳ್ಳಿ: ತಾಲೂಕಿನ ಪರಸಾಪುರ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಕೊಳವೆ ಬಾವಿಯ ಕಲುಷಿತ ನೀರು ಪೂರೈಕೆಯಾಗಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಮಣ್ಣು ಮಿಶ್ರಿತ ಕೆಂಪು ನೀರು ಮನೆಮನೆಗೆ ಪೂರೈಕೆಯಾಗಿದೆ. ಅದನ್ನು ಕೆಲವರು ಗಮನಿಸಿ ಆತಂಕಗೊಂಡಿದ್ದರು. ಕೊಳವೆ ಬಾವಿ ನೀರು ಏಕಾಏಕಿ ಹೀಗೇಕಾಗಿದೆ ಎಂದು ಭಯ ಪಟ್ಟಿದ್ದರು. ಕೆಲವರು ಬಟ್ಟೆಯಿಂದ ಸೋಸಿಕೊಂಡು ಕುಡಿದರೆ, ಇನ್ನೂ ಕೆಲವರು ಹಾಗೇ ಕುಡಿದಿದ್ದರಿಂದ ತೊಂದರೆ ಅನುಭವಿಸಿದ್ದಾರೆ ಎಂದು ಹೇಳಲಾಗಿದೆ.

ಬುಧವಾರ ಅದೇ ಬೋರ್​ವೆಲ್ ನೀರು ಸ್ವಚ್ಛವಾಗಿದ್ದು, ಗ್ರಾಮದಲ್ಲಿ ಪೂರೈಕೆಯಾಗಿದೆ. ಬೋರ್​ವೆಲ್ ವೈಬ್ರೇಷನ್​ಗೆ ತಳದಲ್ಲಿನ ಮಣ್ಣು ನೀರಿಗೆ ಸೇರಿ ಅದೇ ನೀರು ಪೂರೈಕೆಯಾಗಿದೆ. ಈಗ ಅದು ನಿವಾರಣೆಯಾಗಿದೆ ಎಂದು ನೀರು ಪೂರೈಕೆ ವಾಲ್ವಮನ್ ‘ವಿಜಯವಾಣಿ’ಗೆ ತಿಳಿಸಿದರು.

ಬೋರ್​ವೆಲ್ ನೀರು ಪರೀಕ್ಷೆಗೆ ಜಿಲ್ಲಾ ಪಂಚಾಯಿತಿಗೆ ಕಳುಹಿಸಿಕೊಡುತ್ತಿದ್ದೇವೆ ಎಂದೂ ಅವರು ಹೇಳಿದರು.

ನಮ್ಮ ಕಷ್ಟ ಯಾರಿಗೆ ಹೇಳೂನ್ರಿ:

ಗ್ರಾಮದಲ್ಲಿ ಸರ್ಕಾರಿ ಶಾಲೆ, ಅಂಗನವಾಡಿಗಳಿವೆ. ಅಲ್ಲಿಯೂ ಸರಿಯಾಗಿ ನೀರು ಪೂರೈಕೆಯಾಗುವುದಿಲ್ಲ. ಅಂಗನವಾಡಿ ಪಕ್ಕದಲ್ಲೇ ಇರುವ ನೀರಿನ ಸಂಗ್ರಹ ಟ್ಯಾಂಕ್ ತುಂಬಿಸುವುದೇ ಇಲ್ಲ. ಹಲವು ತಿಂಗಳಿಂದ ಖಾಲಿ ಇದೆ. ಪಕ್ಕದ ಓಣಿಗೆ ಹೋಗಿ ನೀರು ತರಬೇಕು ಎಂದು ಅಂಗನವಾಡಿ ಕಾರ್ಯಕರ್ತರು ಅಲವತ್ತುಕೊಂಡರು.

ಮಕ್ಕಳಿಗೆ ಕುಡಿಯಲು ಫಿಲ್ಟರ್ ನೀರು ಕೊಡುತ್ತೇವೆ. ಉಳಿದಂತೆ ಬಳಕೆಗೆ ಬೋರ್​ವೆಲ್ ನೀರು ತರುತ್ತೇವೆ. ಟ್ಯಾಂಕ್​ಗೆ ನೀರು ಏಕೆ ಬರುವುದಿಲ್ಲ ಎಂದರೆ, ನಮ್ಮ ಕಷ್ಟ ಯಾರಿಗೆ ಹೇಳೂನ್ರಿ, ನೀರು ಇರುವಲ್ಲಿಗೆ ಹೋಗಿಯೇ ತರಬೇಕು. ಪಕ್ಕದಲ್ಲೇ ಟ್ಯಾಂಕ್ ಇದ್ದರೂ ಉಪಯೋಗವಿಲ್ಲ ಎಂದು ಸ್ಥಳೀಯರು ದೂರಿದರು.

ಗ್ರಾಮದಲ್ಲಿ ಎರಡು, ಮೂರು ಬೋರ್​ವೆಲ್ ಇವೆ. ಅದರಲ್ಲಿ ಒಂದು ಬೋರ್​ವೆಲ್ ಮಾತ್ರ ಹೆಚ್ಚು ನೀರು ಕೊಡುತ್ತದೆ. ಅದೇ ಬೋರ್​ವೆಲ್​ನಲ್ಲಿ ಎರಡು ದಿನದ ಹಿಂದೆ ಕಲುಷಿತ ನೀರು ಬಂದಿತ್ತು ಎಂದು ಹೇಳಲಾಗಿದೆ.

ಪರಸಾಪುರ ಬಸ್ ನಿಲ್ದಾಣ ಬಳಿ ಶುದ್ಧೀಕರಣ ಘಟಕ ಇದೆ. ಸದ್ಯಕ್ಕೆ ಅದು ಕಾರ್ಯ ನಿರ್ವಹಿಸುತ್ತಿದೆ. ಗ್ರಾಮದ ಕೆಲವೇ ಜನರಿಗೆ ಅದು ಅನುಕೂಲವಾಗಿದೆ. ಅನೇಕ ಜನರು ದೂರ ಎನ್ನುವ ಕಾರಣಕ್ಕೆ ಘಟಕದವರೆಗೂ ಬರುವುದಿಲ್ಲ. ಇನ್ನೂ ಕೆಲವರು ಘಟಕ ಹೆಚ್ಚಿನ ಸಂದರ್ಭದಲ್ಲಿ ದುರಸ್ತಿಯಲ್ಲಿರುತ್ತದೆ ಎಂದೂ ದೂರಿದರು.

Leave a Reply

Your email address will not be published. Required fields are marked *