ಪರಶಿವ ತತ್ವ ಅನುಭವಿಸುವ ಮಹಾಜ್ಞಾನಿಯೇ ಜಂಗಮ

ಗದಗ: ಪರಶಿವ ತತ್ವವನ್ನು ಆತ್ಮರೂಪದಲ್ಲಿ ಅನುಭವಿಸುವ ಮಹಾಜ್ಞಾನಿಯೇ ಜಂಗಮ ಎಂದು ಕಾಶೀ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಜಗದ್ಗುರು ಪಂಚಾಚಾರ್ಯ ಯುವ ಸಂಘದಿಂದ ಆಷಾಢ ಮಾಸದ ಗುರುಪೂರ್ಣಿಮೆ ನಿಮಿತ್ತ ಹಮ್ಮಿಕೊಂಡಿರುವ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನದಲ್ಲಿ ‘ಜಂಗಮನ ಸ್ವರೂಪ’ ಕುರಿತು ಅವರು ಮಾತನಾಡಿದರು.

ಶಿವಜ್ಞಾನ ಸಂಪನ್ನನಾದ ಜಂಗಮನು ಯಾವಾಗಲೂ ತನ್ನ ಆತ್ಮಾನಂದದಲ್ಲಿಯೇ ತಲ್ಲೀನನಾಗಿರುತ್ತಾನೆ. ಅವನಿಗೆ ಬೇರೊಂದರ ಅವಶ್ಯಕತೆಯಿಲ್ಲ. ಗಾಢವಾದ ನಿದ್ರಾವಸ್ಥೆಯಲ್ಲಿ ಪ್ರತಿ ಜೀವಿಯೂ ಹೊರಗಿನ ಶಬ್ಧ, ಸ್ಪರ್ಶಾದಿ ವಿಷಯಗಳಿಲ್ಲದೇ ಆತ್ಮದ ಆನಂದವನ್ನು ನಿರಂತರ ಅನುಭವಿಸುತ್ತಿರುವಂತೆ ಶಿವಜ್ಞಾನ ಸಂಪನ್ನನಾದ ಶಿವಯೋಗಿಯು ಸರ್ವರಲ್ಲಿ ತನ್ನನ್ನು, ತನ್ನಲ್ಲಿ ಸರ್ವರನ್ನು ಸಮರಸ ಭಾವದಿಂದ ಅನುಭವಿಸುತ್ತಾನೆ. ಹಾಗಾಗಿ ಅವನಿಗೆ ಹೊರಗಿನ ವಸ್ತುವಿನ ಅವಶ್ಯಕತೆಯಿಲ್ಲ. ಅಂತೆಯೇ ಅವನು ಸ್ವಸ್ಥ ಸ್ಥಿತಿಯಲ್ಲಿರುತ್ತಾನೆ ಎಂದರು.

ಗೃಹದಲ್ಲಿ ಇರುವವನಿಗೆ ಗೃಹಸ್ಥ, ವನದಲ್ಲಿ ಇರುವವನಿಗೆ ವನಸ್ಥ, ಸ್ವರೂಪದಲ್ಲಿ ನೆಲೆ ನಿಂತವನಿಗೆ ಸ್ವಸ್ಥ ಎಂದು ಕರೆಯುತ್ತಾರೆ. ಶಿವಜ್ಞಾನ ಸಂಪನ್ನನಾದ ಶಿವಯೋಗಿ ಜಂಗಮನು ತನ್ನ ಸ್ವರೂಪದಲ್ಲಿಯೇ ಸದಾ ಆನಂದವನ್ನು ಅನುಭವಿಸುತ್ತಿರುತ್ತಾನೆ. ಸಾಮಾನ್ಯವಾಗಿ ಪ್ರತಿ ಜೀವಿ ಜಾಗೃತ, ಸ್ವಪ್ನಾವಸ್ಥೆಯಲ್ಲಿ ವಿವಿಧ ವಿಷಯಗಳಿಂದ ಆನಂದವನ್ನು ಅನುಭವಿಸುತ್ತಾನೆ. ಆದರೆ, ಸುಷುಪ್ತಿ ಅವಸ್ಥೆಯಲ್ಲಿ ಬಾಹ್ಯ, ಮತ್ತಿತರ ಪದಾರ್ಥ ಇಲ್ಲದಿದ್ದರೂ, ತನ್ನಲ್ಲಿ ತಾನೇ ಆನಂದವನ್ನು ಅನುಭವಿಸುತ್ತಿರುತ್ತಾನೆ. ಅದರಂತೆ ಈ ಶಿವಯೋಗಿಯ ಹೊರಗಿನ ಯಾವುದೇ ವಿಷಯವನ್ನು ಅಪೇಕ್ಷಿಸದೇ, ತನ್ನ ಆತ್ಮಾನಂದದಲ್ಲಿ ಯಾವಾಗಲೂ ಲೀನವಾಗಿರುವುದರಿಂದ ಅವನಿಗೆ ಸ್ವಯಸ್ಥಲಿ ಎಂದು ಕರೆಯಲಾಗಿದೆ. ಈ ಸ್ವಯ ಸ್ಥಳದ ಸಾಧಕನ ಸ್ವರೂಪದಲ್ಲಿ ಸದಾ ತಲ್ಲೀನನಾಗಿದ್ದು, ಲೋಕ ಕಲ್ಯಾಣಾರ್ಥವಾಗಿ ಯಾವಾಗ ಸಂಚರಿಸಲು ಆರಂಭಿಸುವನೋ, ಆಗ ಅವನಿಗೆ ಚರಸ್ಥಲೀ ಎಂದು ಕರೆಯುವರು ಎಂದು ಕಾಶೀ ಶ್ರೀಗಳು ಹೇಳಿದರು.

ಮುಂದೆ ಅವನೇ ತನಗಿಂತಲೂ ಪರವಸ್ತು ಬೇರೊಂದು ಇಲ್ಲವೆಂಬುದಾಗಿ ತಿಳಿದು, ತನ್ನನ್ನೇ ಪರಾತ್ಪರ ತತ್ವವನ್ನಾಗಿ ಅನುಭವಿಸುವನೋ ಆಗ ಅವನೇ ಪರಸ್ಥಲೀ ಎಂದು ಕರೆಸಿಕೊಳ್ಳುವನು. ಹೀಗೆ ಜಂಗಮನು ಸ್ವಯ ಚರ ಮತ್ತು ಪರ ಎಂಬ ಮೂರು ಅವಸ್ಥೆಗಳನ್ನು ಹೊಂದಿ ಲೋಕಕಲ್ಯಾಣಾರ್ಥವಾಗಿ ಸಂಚರಿಸುವವನಾಗುತ್ತಾನೆ ಎಂದು ಶ್ರೀಗಳು ಜಂಗಮನ ವಿವಿಧ ಸ್ವರೂಪಗಳನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಶ್ರೀಗಳಿಂದ ಸನ್ಮಾನ ಸ್ವೀಕರಿಸಿದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

Leave a Reply

Your email address will not be published. Required fields are marked *