ಹಗರಿಬೊಮ್ಮನಹಳ್ಳಿ: ಬಡ್ತಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ತಾಲೂಕು ಘಟಕ ಸೋಮವಾರ ಪಟ್ಟಣದ ಬಿಇಒ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.
ತಾಲೂಕು ಘಟಕದ ಅಧ್ಯಕ್ಷ ಯಂಕಾರೆಡ್ಡಿ ಮಾತನಾಡಿ, 15 ವರ್ಷಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಒಂದರಿಂದ 8ನೇ ತರಗತಿಯವರೆಗೆ ಬೋಧನೆ, ಕ್ರೀಡಾಕೂಟ, ಪ್ರತಿಭಾ ಕಾರಂಜಿ, ಇನ್‌ಸ್ಪೈರ್ ಅವಾರ್ಡ್‌ನಂತಹ ಇಲಾಖೆಯ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದ್ದೇವೆ.
ಆದರೆ, ಸಿಆರ್ ನಿಯಮ ತಿದ್ದುಪಡಿಯಿಂದಾಗಿ 1 ರಿಂದ 5 ನೇ ತರಗತಿವರೆಗೆ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರಾಗಿ ಹಿಂಬಡ್ತಿ ನೀಡಲಾಗಿದೆ. ವರ್ಗಾವಣೆಯಲ್ಲಿ ತೀವ್ರ ಅನ್ಯಾಯವಾಗಿದ್ದು, ಬಡ್ತಿಯಿಂದಲೂ ವಂಚಿತರಾಗಿದ್ದೇವೆ. ಸಿಆರ್ ನಿಯಮ ತಿದ್ದುಪಡಿಯಿಂದ ಸಲ್ಲಬೇಕಾದ ಸೌಲಭ್ಯಗಳು ದೊರಕುತ್ತಿಲ್ಲ.
ಇದರಿಂದಾಗಿ ಶಿಕ್ಷಕ ಸಮೂಹಕ್ಕೆ ಅನ್ಯಾಯವಾಗಿದ್ದು ರಾಜ್ಯ ಸರ್ಕಾರ ಶೀಘ್ರವೇ ಪರಿಶೀಲಿಸಿ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು. ಬಿಇಒ ಎಂ.ಸಿ.ಆನಂದ್‌ಗೆ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ:ಪದವೀಧರರಿಗೆ ಮುಂಬಡ್ತಿ, ಶಾಲಾ ಶಿಕ್ಷಕರಿಗೆ ಗುಡ್ನ್ಯೂಸ್; ಶೇ.60 ಹುದ್ದೆಗೆ ನೇರ ನೇಮಕಾತಿ, ಶೇ.40 ಹುದ್ದೆ ಬಡ್ತಿ
ಬಿಇಒ ಕಚೇರಿ ಅಧೀಕ್ಷಕ ಮುರಳೀಧರ, ದೈಹಿಕ ಶಿಕ್ಷಣ ಪರಿವೀಕ್ಷಕ ಸಿ.ಕೊಟ್ರೇಶ್, ತಾಲೂಕು ಘಟಕದ ಗೌರವಾಧ್ಯಕ್ಷ ಸಿ.ಹುಸೇನ್ ಸಾಹೇಬ್, ಪದಾಧಿಕಾರಿಗಳಾದ ಎಲ್.ಹೀರಾನಾಯ್ಕ, ಜೆ.ಹನುಮರೆಡ್ಡಿ, ಎಲ್.ರಾಮನಾಯ್ಕ, ಸಿ.ರುದ್ರೇಶ್, ಮೋಹನ್ ಅಣಜಿ, ನವೀನ್, ಕೊಟ್ರೇಶ್, ಜೆ.ಕೊಟ್ರೇಶ್, ಸಿ.ಹನುಮಕ್ಕ, ಮಂಜುಳಾ, ಶಕುಂತಲಾ ಹೂಗಾರ್, ಪೂರ್ಣಿಮಾ ಇತರರಿದ್ದರು.