ಪರಂಪರೆ ಗೌರವಿಸಿದರೆ ಉಳವಿ ರಥೋತ್ಸವಕ್ಕೆ ಚಾಲನೆ:ಶ್ರೀ ಮುರುಘಾ ಶರಣರ ಹೇಳಿಕೆ

ಚಿತ್ರದುರ್ಗ: ದೇವಾಲಯದ ಟ್ರಸ್ಟ್ ಶ್ರೀ ಮುರುಘಾ ಪರಂಪರೆಯನ್ನು ಗೌರವಿಸಿ,ಆಹ್ವಾನಿಸಿದರೆ ಫೆ.19ರಂದು ನಡೆಯಲಿರುವ ಉತ್ತರ ಕನ್ನಡ ಜಿಲ್ಲೆ ಶ್ರೀ ಉಳವಿ ಚನ್ನಬಸವೇಶ್ವರ ಮಹಾರಥೋತ್ಸವದಲ್ಲಿ ತಾವು ಭಾಗವಹಿಸುವುದಾಗಿ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಮಂಗಳವಾರ ಶ್ರೀ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಆಹ್ವಾನ ಬಂದರೆ ಸರಿ. ಇಲ್ಲವಾದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಉಳವಿ ಶಾಖಾ ಮಠಕ್ಕೆ ತೆರಳಿ ಅಲ್ಲಿ ನಡೆಯುವ ಸಹಜ ಶಿವಯೋಗ,ಶಿವ ಪ್ರಸಾದ ಕಾರ‌್ಯಕ್ರಮಗಳಲ್ಲಿ ತಾವು ಭಾಗವಹಿಸುವುದಾಗಿ ಹೇಳಿದರು.

ಶ್ರೀ ಉಳವಿ ಚನ್ನ ಬಸವೇಶ್ವರ ದೇವಾಲಯದ ಟ್ರಸ್ಟಿಗಳು ಸೋಮವಾರ ರಥೋತ್ಸವಕ್ಕೆ ಯಾವೊಬ್ಬ ಮಠಾಧೀಶರನ್ನು ಆಹ್ವಾನಿಸಿಲ್ಲ ವೆಂದು ಹೇಳಿಕೆ ನೀಡಿದ್ದಾರೆ. ಆ ಮೂಲಕ ಅನಾದಿ ಕಾಲದಿಂದ ನಡೆದು ಬಂದಿರುವ ರಥೋತ್ಸವಕ್ಕೆ ಶ್ರೀ ಮುರುಘಾ ಮಠದ ಪೀಠಾಧಿಪತಿಗಳಿಂದ ಚಾಲನೆ ಕೊಡಿಸುವ ಸಂಪ್ರದಾಯ ಧಿಕ್ಕರಿಸಿದ್ದಾರೆ ಎಂದರು.