ಪರಂಪರೆಯ ಸತ್ವ, ಆಧುನಿಕ ದೃಷ್ಟಿಕೋನ

ಸಿದ್ಧಲಿಂಗಯ್ಯ ಎಂದೂ ಸದ್ದು ಮಾಡಿದವರೇ ಅಲ್ಲ- ಕಾವ್ಯ ಬರೆದಾಗಲೂ, ವಿಮರ್ಶಕರ ಎದುರಿನಲ್ಲೂ, ಅಧಿಕಾರ ಸಿಕ್ಕಾಗಲೂ. ಅಧಿಕಾರ ಬಂದಾಗ, ಹಲ್ಲುಕಿರಿಯುವ ಅಧ್ಯಾಪಕರ ಹಿಂಡು ಕೂಡಿಸಿ ತಮ್ಮ ಕಾವ್ಯ ಹೊಗಳುವ ಹಾಗೆ ಮಾಡಲಿಲ್ಲ. ಬೇರೆಯವರಿಗೆ ಹೋಲಿಸಿದರೆ ಸಿದ್ಧಲಿಂಗಯ್ಯ ಬರೆದದ್ದು ಕಡಿಮೆಯೇ. ಆದರೆ ಅವರು ಬರೆದದ್ದು ಗಟ್ಟಿಮುಟ್ಟಾದದ್ದು ಎನ್ನುವುದರಲ್ಲಿ ಸಂಶಯವಿಲ್ಲ.

 ಎ.ಎನ್. ಮೂರ್ತಿರಾಯರು ತಮ್ಮ ಕಾಲದ ಕೆಲವರ ಉಪನ್ಯಾಸಗಳನ್ನು ತಾವು ಕೆಲವರು ‘ತಟ್ಟೆ’ ಎಂದು ಕರೆಯುತ್ತಿದ್ದುದನ್ನು ನಮ್ಮ ಮಾತುಕತೆಯ ಸಂದರ್ಭದಲ್ಲಿ ನೆನಪಿಸಿಕೊಂಡು ಮುಗುಳ್ನಗುತ್ತಿದ್ದರು. ಅಂತಹ ಉಪನ್ಯಾಸಗಳು ಗ್ರಾಮಾಫೋನ್ ರೆಕಾರ್ಡಿನಂತೆ ಹೇಳಿದ್ದನ್ನೇ ಮತ್ತೆ ತಿರುಗಿಸುತ್ತವೆ ಎಂಬುದು ಭಾವಾರ್ಥ. ಇಂತಹ ‘ತಟ್ಟೆ’ಗಳು ಇಂದಿಗೂ ಚಲಾವಣೆಯಲ್ಲಿವೆ. ಕೆಲವರ ಉಪನ್ಯಾಸಗಳನ್ನು ಒಮ್ಮೆ ಕೇಳಿದರೆ ಮತ್ತೆ ಕೇಳುವ ಅಗತ್ಯವಿಲ್ಲ. ಹೇಳಿದ್ದನ್ನೇ ಹೇಳುವ ಕಿಸುಬಾಯಿದಾಸರ ಪರಂಪರೆ ಇನ್ನೂ ಗಟ್ಟಿಯಾಗಿಯೇ ಇದೆ. ಇಂಥವರ ಪ್ರಯೋಜನವನ್ನು ಅಲ್ಲಗಳೆಯಲಾಗುವುದಿಲ್ಲ. ಕೆಲವು ಕವಿಗಳನ್ನು, ಕೆಲವು ಕೃತಿಭಾಗಗಳನ್ನು, ಕೆಲವು ಸಿದ್ಧ ಸಿದ್ಧಾಂತಗಳನ್ನು ಇವರು ಅತ್ಯಂತ ಸ್ವಾರಸ್ಯಕರವಾಗಿ ಪ್ರವಚನದ ಧಾಟಿಯಲ್ಲಿ ವಿವರಿಸುತ್ತಾರೆ. ಸಾಮಾನ್ಯಜನರ ಸಾಹಿತ್ಯಾಸಕ್ತಿಯನ್ನು, ಅಭಿರುಚಿಯನ್ನು ಮೂಡಿಸುವಲ್ಲಿ ಇಂಥವರ ಪಾತ್ರ ಹಿರಿದು. ಆದರೆ ಸೂಕ್ಷ್ಮ ಮನಸ್ಸುಗಳಿಗೆ ಇಂತಹ ಉಪನ್ಯಾಸಗಳು ‘ತಟ್ಟೆ’ಯೇ ಸರಿ. ನಮ್ಮ ವಿಮರ್ಶೆಯಲ್ಲಿಯೂ ಇದೇ ಧಾಟಿಯನ್ನು ನಾವು ಕಾಣಬಹುದು. ಒಂದು ಕಾವ್ಯಮಾರ್ಗವನ್ನು ಅಥವಾ ಒಂದು ಪರಂಪರೆಯನ್ನು ಕುರಿತು ಮಾತನಾಡುವಾಗ ಕೆಲವು ಹೆಸರುಗಳು ಮತ್ತೆ ಮತ್ತೆ ಪ್ರಸ್ತಾಪಿತವಾಗುತ್ತವೆ. ಮಾರ್ಗಪ್ರವರ್ತಕ ಕವಿಗಳು ಹೊಸಹಾದಿಯನ್ನು ಹಾಕಿಕೊಡುತ್ತಾರೆ ನಿಜ. ಆದರೆ ಅದು ಒಂದು ಪರಂಪರೆಯಾಗಲು ಅನೇಕ ಕವಿಗಳ ಕೊಡುಗೆ ಇರುತ್ತದೆ. ಶಿಖರಗಳು ಮಾತ್ರ ಪರಂಪರೆಯನ್ನು ರೂಪಿಸುವುದಿಲ್ಲ. ಅನೇಕ ಸಂದರ್ಭಗಳಲ್ಲಿ ನಮ್ಮ ವಿಮರ್ಶೆ ಒಂದು ಕಾವ್ಯಪರಂಪರೆಯಲ್ಲಿ ಕೆಲವರನ್ನು ಮಾತ್ರ ಮತ್ತೆಮತ್ತೆ ಉಲ್ಲೇಖಿಸಿ ಉಳಿದ ಅನೇಕ ಮುಖ್ಯರನ್ನು ಕಡೆಗಣಿಸಿಬಿಡುತ್ತದೆ. ಇದನ್ನೇ ಮಿಶೆಲ್ ಫುಕೋ ತನ್ನ ಡಿಸ್​ಕೋರ್ಸ್ ಪರಿಕಲ್ಪನೆಯಲ್ಲಿ ಕ್ರಾಂತಿಕಾರಕವಾಗಿ ವಿವರಿಸುತ್ತಾನೆ. ಪ್ರಭಾವಿ ವಿದ್ವಾಂಸರ ಸಮೂಹ ತನ್ನ ಜ್ಞಾನದ ಅಧಿಕಾರದ ಬಲದಿಂದ ಕೆಲವರನ್ನು ಮಾನ್ಯಮಾಡಿ, ಅವರಿಗೆ ಅಧಿಕೃತ ಮಾನ್ಯತೆ ಕಲ್ಪಿಸಿ, ಅವರನ್ನೇ ಪರಂಪರೆಯೆಂದು ಬಿಂಬಿಸುತ್ತದೆ. ಕ್ರಮೇಣ ಇವರು ರೂಪಿಸಿದ ಈ ‘ಪರಂಪರೆ’ಯಿಂದಾಚೆಗಿನ ಲೇಖಕರನ್ನು ಚರ್ಚೆಯಿಂದ ಹೊರಗಿಡುತ್ತದೆ. ಆದರೆ ಪರಂಪರೆ ರೂಪುಗೊಳ್ಳುವಲ್ಲಿ ಇತರರ ಕೊಡುಗೆಯೂ ಮಹತ್ವದ್ದಾಗಿರುತ್ತದೆ. ಕನ್ನಡ ಸಂಸ್ಕೃತಿಯನ್ನು ರೂಪಿಸಿದ ಅನೇಕ ಮಹನೀಯರು ಹೀಗೆ ಹೆಚ್ಚು ಚರ್ಚೆಗೊಳಗಾಗಿಲ್ಲ. ಅಂಥವರಲ್ಲಿ ಜಿ.ಎಸ್. ಸಿದ್ಧಲಿಂಗಯ್ಯನವರೂ ಒಬ್ಬರು.

ಸದ್ದುಮಾಡದ ಸಿದ್ಧಲಿಂಗಯ್ಯ: ಎಂಭತ್ತರ ದಶಕದಲ್ಲಿ ಸಿದ್ಧಲಿಂಗಯ್ಯನವರ ‘ಋಷ್ಯಶೃಂಗ’ ಸಂಕಲನಕ್ಕೆ ಮುನ್ನುಡಿ ಬರೆಯುತ್ತಾ ಚಂದ್ರಶೇಖರ ಕಂಬಾರರು ಹೀಗೆ ಹೇಳಿದ್ದಾರೆ: ‘ಸಿದ್ಧಲಿಂಗಯ್ಯ ಎಂದೂ ಸದ್ದು ಮಾಡಿದವರೇ ಅಲ್ಲ, ಕಾವ್ಯ ಬರೆದಾಗಲೂ, ವಿಮರ್ಶಕರ ಎದುರಿನಲ್ಲೂ, ಅಧಿಕಾರ ಸಿಕ್ಕಾಗಲೂ. ಎಲ್ಲಾದರೂ ತಮ್ಮ ಪದ್ಯ ಅಚ್ಚಾದರೆ ಓದಿದ್ದೀರಾ? ಎನ್ನುವುದಿಲ್ಲ. ಹೊಸ ಸಂಕಲನ ಕಳಿಸಿ ಅಭಿಪ್ರಾಯಕ್ಕಾಗಿ ಕಾಡುವುದಿಲ್ಲ. ಸಿಕ್ಕರೆಂದು ಸಿಕ್ಕಾಗಲೆಲ್ಲಾ ತಮ್ಮ ಕಾವ್ಯದ ಬಗ್ಗೆ ಕೊರೆಯುವುದಿಲ್ಲ. ಅಧಿಕಾರ ಬಂದಾಗ ಹಲ್ಲುಕಿರಿಯುವ ಅಧ್ಯಾಪಕರ ಹಿಂಡು ಕೂಡಿಸಿ ತಮ್ಮ ಕಾವ್ಯ ಹೊಗಳುವ ಹಾಗೆ ಮಾಡಲಿಲ್ಲ. ಹೋಗಲಿ ಇಷ್ಟೊಂದು ವರ್ಷ ಪಾಠ ಮಾಡಿದ್ದಾರೆ, ತಮ್ಮ ಪದ್ಯಗಳನ್ನು ಅರ್ಥೈಸುವ ವಿಧಾನ, ಹೊಗಳುವ ಭಾಷೆ, ಇಂದಿನ ಸಂದರ್ಭದಲ್ಲಿ ತಮ್ಮನ್ನು ಇಟ್ಟು ತೂಗಬೇಕಾದ ರೀತಿನೀತಿಗಳನ್ನು ಕಲಿಸಿ ಒಂದು ವಿದ್ಯಾರ್ಥಿಗಳ ತಂಡ ನಿರ್ವಿುಸಿ ಅವರು ಹೋದ ಹೋದಲ್ಲೆಲ್ಲಾ ಇವರ ಪರಾಕು ಒದರುತ್ತಾ ಅಡ್ಡಾಡುವ ಹಾಗೂ ಮಾಡಲಿಲ್ಲ. ವೈಯಕ್ತಿಕ

ದುಃಖಗಳ ಬಡಬಾನಲ ಒಳಗಡೆ ಇದ್ದಾಗ್ಯೂ ಹೊರಗಡೆ ತಣ್ಣಗೆ ಒಂದು ಜೋಕು ಹೊಡೆದು ದೊಡ್ಡದಾಗಿ ನಕ್ಕುಬಿಡುವ ಪೈಕಿ ಇವರು. ಬೇರೆಯವರಿಗೆ ಹೋಲಿಸಿದರೆ ಸಿದ್ಧಲಿಂಗಯ್ಯ ಬರೆದದ್ದು ಕಡಿಮೆಯೇ. ಆದರೆ ಅವರು ಬರೆದದ್ದು ಗಟ್ಟಿಮುಟ್ಟಾದದ್ದು ಎನ್ನುವುದರಲ್ಲಿ ಸಂಶಯವಿಲ್ಲ’. ಸಿದ್ಧಲಿಂಗಯ್ಯನವರ ವ್ಯಕ್ತಿತ್ವವನ್ನು ಈ ಮಾತುಗಳು ಸೊಗಸಾಗಿ ಹಿಡಿದಿಡುತ್ತವೆ ಅನ್ನಿಸುತ್ತದೆ.

ಕಡಿಮೆ ಅವಧಿಯಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ನನ್ನ ಗೆಳೆಯನೊಬ್ಬ ಹೇಳುತ್ತಿದ್ದ- ನಮ್ಮ ಕಾಲದಲ್ಲಿ ಪ್ರತಿಭೆ ಇದ್ದರೆ ಸಾಲದು, ಅದನ್ನು ಮಾರ್ಕೆಟಿಂಗ್ ಮಾಡುವುದೂ ಗೊತ್ತಿರಬೇಕು. ಇಲ್ಲದಿದ್ದರೆ ಚಲಾವಣೆಯಲ್ಲಿರುವುದು ಕಷ್ಟ. ನಿಜ, ಇದು ಮಾರ್ಕೆಟಿಂಗ್ ಯುಗ. ಎಲ್ಲವನ್ನೂ ನಾವು ಮಾರುಕಟ್ಟೆಯ ದೃಷ್ಟಿಯಿಂದಲೇ ನೋಡುವ ಕ್ರಮ ರೂಢಿಯಾಗಿಬಿಟ್ಟಿದೆ. ಕೆಲವೊಮ್ಮೆ ಕಳಪೆ ಮಾಲುಗಳೂ ಮಾರ್ಕೆಟಿಂಗ್ ಸ್ಟ್ರಾಟೆಜಿಯಿಂದಾಗಿ ಮುಖ್ಯವಾಗಿಬಿಡುತ್ತವೆ. ನಮ್ಮ ಸಾಂಸ್ಕೃತಿಕ ಕ್ಷೇತ್ರದಲ್ಲೂ ಈಗ ಮಾರ್ಕೆಟಿಂಗ್ ಮಾಡುವ ಕಲೆಯೇ ನಿಜಪ್ರತಿಭೆಗಿಂತ ಮುಖ್ಯವಾದಂತೆ ತೋರುತ್ತಿದೆ. ಸಿದ್ಧಲಿಂಗಯ್ಯನವರಿಗೆ ಇದರ ಅರಿವಿದ್ದರೂ ಅವರು ಮಾತ್ರ ಅದನ್ನು ಕಲಿಯಲಿಲ್ಲ.

ನಿಲುವಿನಲ್ಲಿ ರಾಜಿ ಮಾಡಿಕೊಂಡವರಲ್ಲ: ಸಿದ್ಧಲಿಂಗಯ್ಯನವರು ಪ್ರಧಾನವಾಗಿ ಕವಿ. ಆದರೆ ಅವರು ನಮ್ಮ ನಡುವಿನ ಅಪರೂಪದ ವಿದ್ವಾಂಸರೂ ಹೌದು. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಅವರು 1955ರಲ್ಲಿ ಬಿ.ಎ. ಆನರ್ಸ್ ಪದವಿಯನ್ನು ಪ್ರಥಮ ರ್ಯಾಂಕಿನೊಂದಿಗೆ ಪಡೆದವರು. ಮುಂದೆ ಮೈಸೂರು ವಿಶ್ವವಿದ್ಯಾಲಯದಿಂದಲೇ ಎಂ.ಎ. ಪದವಿಯನ್ನೂ ಪಡೆದ ಅವರು ಕುವೆಂಪು, ಡಿಎಲ್​ಎನ್, ತೀನಂಶ್ರೀ ಮೊದಲಾದ ಗುರು ಪರಂಪರೆಯಲ್ಲಿ ತಮ್ಮ ಸಾಹಿತ್ಯಾಭ್ಯಾಸವನ್ನು ರೂಢಿಸಿಕೊಂಡರು. ಮುಂದೆ ತಮ್ಮ ಸುದೀರ್ಘ ವೃತ್ತಿಬದುಕಿನಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ಉತ್ತಮ ಅಧ್ಯಾಪಕರೆಂದೂ, ದಕ್ಷ ಆಡಳಿತಗಾರರೆಂದೂ ಹೆಸರು ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಗ್ರಾಮೀಣ ನೆಲೆಗೆ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದರು. ಸಾಹಿತಿಗಳನ್ನು ಪರಿಷತ್ತಿಗೆ ಹತ್ತಿರವಾಗಿಸಿದರು. ಸಿದ್ಧಲಿಂಗಯ್ಯನವರ ಬದುಕಿನುದ್ದಕ್ಕೂ ನಾವು ಕಾಣುವ ಅವರ ವ್ಯಕ್ತಿತ್ವದ ಪ್ರಧಾನ ಗುಣವೆಂದರೆ ನೇರನುಡಿ, ದಿಟ್ಟ ನಿಲುವು. ಎಂದೂ ಯಾರನ್ನೂ ಓಲೈಸುವ ಪರಿ ಅವರದಲ್ಲ. ಕೆಲವೊಮ್ಮೆ ತಮ್ಮ ನಿಷ್ಠುರ ಪ್ರವೃತ್ತಿಯಿಂದಾಗಿಯೇ ಕೆಲವರ ವಿರೋಧವನ್ನೂ ಎದುರಿಸಬೇಕಾಗಿ ಬಂದುದೂ ಉಂಟು. ಆದರೆ ಅವರೆಂದೂ ತಮ್ಮ ನಿಲುವಿನಲ್ಲಿ ರಾಜಿ ಮಾಡಿಕೊಂಡವರಲ್ಲ. ಅವರ ಮಾತಿನಲ್ಲೂ ಕೆಲವೊಮ್ಮೆ ಹಳ್ಳಿಗನ ಗತ್ತಿನ ಲಯವಿದೆ. ನಿಜವ ನುಡಿವ ನಿಸ್ಸಂಕೋಚ ಪ್ರವೃತ್ತಿಯಿದೆ. ಮುಚ್ಚುಮರೆಯಿಲ್ಲದ ಸರಳತೆಯಿದೆ.

‘ಸಿದ್ಧಲಿಂಗಯ್ಯನವರು ಸೃಜನಶೀಲ ಕವಿಯಾಗಿರುವಂತೆ ಶ್ರೇಷ್ಠ ವಿಮರ್ಶಕರೂ, ಸಂಶೋಧಕರೂ ಹೌದು. ನಿರಂತರ ಅಧ್ಯಯನಶೀಲರಾದ ಅವರೊಂದಿಗೆ ನಾನು ಎಷ್ಟೋ ಸಾರಿ ಹಳಗನ್ನಡ ಸಾಹಿತ್ಯ, ವಚನ ಸಾಹಿತ್ಯ ಇವುಗಳ ಬಗ್ಗೆ ಮಾತನಾಡಿ ಸಂದೇಹಗಳನ್ನು ಪರಿಹರಿಸಿಕೊಂಡಿದ್ದೇನೆ. ಹೊಸ ಮಾಹಿತಿ ಪಡೆದಿದ್ದೇನೆ. ವಿಶೇಷವಾಗಿ ಅವರು ವಚನ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿ ಅದರ ಮೇಲೆ ಹೊಸ ಬೆಳಕನ್ನು ಬೀರಿದ್ದಾರೆ. ಶೂನ್ಯಸಂಪಾದನೆಗಳ ಬಗ್ಗೆ ತಕ್ಕಮಟ್ಟಿಗೆ ಕೆಲಸ ಮಾಡಿರುವ ನಾನು ಅವರು ಆ ಬಗ್ಗೆ ಬರೆದಿರುವ ಕೃತಿಗಳನ್ನು ಓದಿ ಲಾಭ ಪಡೆದಿದ್ದೇನೆ. ಅವರು ಹಲವರ ಜೀವನ ಚರಿತ್ರೆಗಳನ್ನೂ ಬರೆದಿದ್ದಾರೆ. ಅವರ ಬಹುಮುಖಿ ಆಸಕ್ತಿ, ಸಾಹಿತ್ಯ ಪ್ರೇಮ, ಸಂಶೋಧನಾ ಶಕ್ತಿ ನನ್ನಂಥವನಿಗೂ ಪ್ರೇರಣೆ ಕೊಡುವಂಥವು’- ಇವು ನಮ್ಮ ಪ್ರಮುಖ ಸಂಶೋಧಕರಲ್ಲೊಬ್ಬರಾದ ಎಂ. ಚಿದಾನಂದಮೂರ್ತಿಯವರು ಸಿದ್ಧಲಿಂಗಯ್ಯನವರ ಬಗ್ಗೆ ಆಡಿದ ಮೆಚ್ಚುಗೆಯ ಮಾತುಗಳು. ಸಿದ್ಧಲಿಂಗಯ್ಯನವರನ್ನು ಹತ್ತಿರದಿಂದ ಬಲ್ಲವರಿಗೆ ಚಿದಾನಂದಮೂರ್ತಿಯವರ ಮಾತುಗಳಲ್ಲಿ ಉತ್ಪ್ರೇಕ್ಷೆ ಇಲ್ಲ ಎಂಬುದು ತಿಳಿಯುತ್ತದೆ. ಉದಾಹರಣೆಗೆ ಅವರ ‘ಶಬ್ದಸೋಪಾನ’ ಕೃತಿಯನ್ನೇ ಗಮನಿಸಬಹುದು. ಹನ್ನೆರಡನೇ ಶತಮಾನ ಕರ್ನಾಟಕದ ಇತಿಹಾಸದಲ್ಲಿ ಅನೇಕ ಕಾರಣಗಳಿಗಾಗಿ ಮಹತ್ವದ ಕ್ರಾಂತಿಕಾರಕ ಘಟ್ಟ. ಸಾಮಾಜಿಕ, ಸಾಂಸ್ಕೃತಿಕ, ಧಾರ್ವಿುಕ ತಿಳಿವಳಿಕೆಯ ಬಗ್ಗೆ ಹೊಸ ಅರಿವು, ಹೊಸ ದರ್ಶನ ಈ ಹಂತದಲ್ಲಿ ಕಾಣಿಸಿಕೊಂಡಿತು. ಏಕೀಕೃತ ಭಾರತೀಯ ದರ್ಶನಕ್ಕೆ ಬದಲಾಗಿ ಭಿನ್ನ ದನಿಗಳು, ಬಹುಮುಖಿ ಚಿಂತನೆಯ ರೂಪಗಳು ಇಲ್ಲಿ ನಮಗೆ ಕಾಣಿಸುತ್ತವೆ. ಆದರೆ ನಮ್ಮ ವಚನ ಸಾಹಿತ್ಯದ ಅಧ್ಯಯನವೂ ಕೆಲವು ವಚನಕಾರರಿಗೆ ಮಾತ್ರ ಸೀಮಿತವಾಗಿ ಅಲ್ಲಿಯೇ ಕಾಣಿಸಿಕೊಂಡ ಭಿನ್ನದನಿಗಳು, ಪ್ರತ್ಯೇಕ ವಾಸನೆಗಳು, ಸೂಕ್ಷ್ಮ ವ್ಯತ್ಯಾಸಗಳ ಬಗ್ಗೆ ಗಮನಹರಿಸಿಲ್ಲ. ಸಿದ್ಧಲಿಂಗಯ್ಯನವರು ತಮ್ಮ ವಚನ ಸಾಹಿತ್ಯ ಅಧ್ಯಯನದಲ್ಲಿ ಈ ಅಂಶದತ್ತ ಗಮನ ಹರಿಸುತ್ತಾರೆ. ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ, ದೇವರ ದಾಸಿಮಯ್ಯ ಮೊದಲಾದ ವಚನಕಾರರ ಜೊತೆಗೆ ನುಲಿಯ ಚಂದಯ್ಯ, ಆಯ್ದಕ್ಕಿ ಮಾರಯ್ಯ, ಬಹುರೂಪಿ ಚೌಡಯ್ಯ, ಸುಂಕದ ಬಂಕಣ್ಣ, ದಾಸೋಹದ ಸಂಗಣ್ಣ, ಢಕ್ಕೆಯ ಬೊಮ್ಮಣ್ಣ, ಸೂಳೆ ಸಂಕವ್ವೆ, ಮಸಣವ್ವ, ಕಾಳವ್ವೆ, ಕೆಮ್ಮವ್ವೆ, ಹೆಂಡದ ಮಾರಯ್ಯ ಹೀಗೆ ಭಿನ್ನಸ್ತರದ, ವಿವಿಧ ವೃತ್ತಿಗಳ ಅನೇಕ ವಚನಕಾರರ ಲೋಕವನ್ನು ನಾವು ಸಿದ್ಧಲಿಂಗಯ್ಯನವರ ಕೃತಿಯ ಮೂಲಕ ಪ್ರವೇಶಿಸುತ್ತೇವೆ. ಪ್ರತಿಯೊಬ್ಬ ವಚನಕಾರನ ಬಗ್ಗೆ ಬರೆಯುವಾಗಲೂ ಸಿದ್ಧಲಿಂಗಯ್ಯನವರು ಆತನ ವೈಯಕ್ತಿಕ ವಿವರ, ಆತನ ವ್ಯಕ್ತಿತ್ವ, ಆತನ ವಚನಗಳ ಸ್ವರೂಪ, ಆ ಮೂಲಕ ಆತನ ಅಭಿವ್ಯಕ್ತಿ ಕ್ರಮದ ವಿಶಿಷ್ಟತೆ, ಆತನ ದರ್ಶನ ಮೊದಲಾದ ವಿವರಗಳನ್ನೂ ನೀಡುವುದರ ಮೂಲಕ ವಚನಸಾಹಿತ್ಯದ ವೈವಿಧ್ಯ ವಿಸ್ತಾರಗಳನ್ನೂ ನಮಗೆ ಪರಿಚಯಿಸುತ್ತಾರೆ. ಶೂನ್ಯಸಂಪಾದನೆಯ ಬಗೆಗೂ ಸಿದ್ಧಲಿಂಗಯ್ಯನವರದು ಆಳವಾದ ಅಧ್ಯಯನ. ಹಲಗೆಯಾರ್ಯನ ಶೂನ್ಯಸಂಪಾದನೆಯನ್ನು ಅವರು ಸಂಪಾದಿಸಿದ್ದಾರೆ. ಹರಿದಾಸ ಸಾಹಿತ್ಯ, ಲಕ್ಷ್ಮೀಶ, ಚಾಮರಸ, ಹರಿಹರ, ಜನ್ನ, ರತ್ನಾಕರವರ್ಣಿ ಮೊದಲಾದ ಕವಿಗಳ ಅವರ ಅಧ್ಯಯನವನ್ನೂ ನಾವಿಲ್ಲಿ ನೆನಪಿಸಿಕೊಳ್ಳಬಹುದು. ಅಂತೆಯೇ ಹೊಸಗನ್ನಡ ಕಾವ್ಯದ ಬಗೆಗೂ ಅವರದು ತಲರ್ಸ³ ಅಧ್ಯಯನ.

ಅನನ್ಯ ಕಾವ್ಯಶ್ರದ್ಧೆ: ಜಿ.ಎಸ್. ಸಿದ್ಧಲಿಂಗಯ್ಯನವರು ಈಗಾಗಲೇ ಹೇಳಿದಂತೆ ಪ್ರಧಾನವಾಗಿ ಕವಿ. ಅವರ ಮೊದಲ ಸಂಕಲನ ‘ರಸಗಂಗೆ’ ಗೋಪಾಲಕೃಷ್ಣ ಅಡಿಗರ ಮುನ್ನುಡಿಯೊಡನೆ 1960ರಲ್ಲಿ ಪ್ರಕಟವಾಯಿತು. ಸುಮಾರು ಐದು ದಶಕಗಳ ದೀರ್ಘಕಾಲದ ಸಿದ್ಧಲಿಂಗಯ್ಯನವರ ಕಾವ್ಯಯಾನದಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ್ದು ಅವರ ಕಾವ್ಯಶ್ರದ್ಧೆ. ಇದುವರೆಗೆ ಸಿದ್ಧಲಿಂಗಯ್ಯನವರು ಹತ್ತು ಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ಸಮಗ್ರಕಾವ್ಯ’ ಸಂಪುಟವನ್ನೂ ಹೊರತಂದಿದ್ದಾರೆ. ಅಡಿಗರು ತಮ್ಮ ಮುನ್ನುಡಿಯಲ್ಲಿ ‘ಕವಿ ಸಿದ್ಧಲಿಂಗಯ್ಯನವರ ಕವನಗಳನ್ನೆಲ್ಲ ಓದಿದ ಮೇಲೆ ಒಂದು ಮಾತು ಮಾತ್ರ ಖಚಿತವಾಗುತ್ತದೆ: ಇದು ಬಯಲಾಡಂಬರದ, ಸೋಗಿನ, ಥಳಕಿನ ಕವಿತೆಯಲ್ಲ. ತನ್ನ ಅನುಭವದ ನಿಜಸ್ವರೂಪವನ್ನು ಹುಡುಕಬಯಸುವ ಪ್ರಾಮಾಣಿಕ ಕಾವ್ಯಮಾರ್ಗ’ ಎಂದಿದ್ದಾರೆ. ಅವರ ಇದುವರೆಗಿನ ಕಾವ್ಯಹಾದಿಯನ್ನು ಗಮನಿಸಿದರೆ ಅಡಿಗರ ಮಾತು ನಿಜವೆನ್ನಿಸುತ್ತದೆ. ತನ್ನ ಸ್ವಂತ ಅನುಭವದ ಗುಪ್ತನಿಧಿಯ ಹುಡುಕಾಟವೇ ಅವರ ಕಾವ್ಯದ ಮೂಲದ್ರವ್ಯ. ಅವರ ಕಾವ್ಯವನ್ನು ಕುರಿತು ದ.ರಾ. ಬೇಂದ್ರೆ, ಕೀರ್ತಿನಾಥ ಕುರ್ತಕೋಟಿ, ಜಿ.ಎಸ್. ಆಮೂರ, ಎಚ್.ಎಸ್. ವೆಂಕಟೇಶಮೂರ್ತಿ, ಕಿ.ರಂ. ನಾಗರಾಜ ಮೊದಲಾದವರು ಮೆಚ್ಚಿ ಬರೆದಿದ್ದಾರೆ.

ಸಿದ್ಧಲಿಂಗಯ್ಯನವರ ಕಾವ್ಯವನ್ನು ಸಮಗ್ರವಾಗಿ ಅಧ್ಯಯನ ಮಾಡಿದಾಗ ಮೊದಲಿಗೇ ನಮ್ಮ ಗಮನ ಸೆಳೆಯುವುದು ಅವರ ಕಾವ್ಯದ ವಿಸ್ತಾರ ಹಾಗೂ ವೈವಿಧ್ಯ. ಆರಂಭದಲ್ಲಿ ಅವರ ಆಸಕ್ತಿಯ ಕೇಂದ್ರ ಪ್ರಕೃತಿಯಾಗಿತ್ತು. ಪ್ರಕೃತಿಯ ವಿಸ್ಮಯಲೋಕಕ್ಕೆ ಅವರ ಮನಸ್ಸು ಬೆರಗಾಗಿತ್ತು- ‘ಜಲಪಾತದಬ್ಬರವ/ನದಿಯ ಕಲರವವನ್ನು/ಹಕ್ಕಿ ಚಿಲಿಪಿಲಿಗಳನು/ಬೆಟ್ಟಗಳ ಮೌನವನು/ಚಿಗುರಿಸುತ್ತರಳಿಸುತ/ಕವಿಯಾಗಿಬಿಟ್ಟ’.

ಆದರೆ ಪ್ರಕೃತಿಯ ಈ ಬೆರಗಿನ ಜತೆಗೇ ಆಧುನಿಕತೆಯ ಆಕ್ರಮಣದ ಪರಿಣಾಮವನ್ನೂ ಕವಿ ವಿಷಾದದಿಂದ ದಾಖಲಿಸುತ್ತಾರೆ- ‘ನವಿಲಾಡುತಿದ್ದಲ್ಲಿ/ಕ್ರೇನು ಕತ್ತೆತ್ತಿ ಅತ್ತಿತ್ತ ಕಬಂಧ ಕೈಯಾಡಿಸುತ್ತಿದೆ’.

ಮುಂದೆ ಕವಿ ಆದರ್ಶದ ಕನಸಿನ ಬೆನ್ನು ಹತ್ತುತ್ತಾರೆ- ‘ಕೈಯಿಟ್ಟ ಆಗಸಕೆ/ಆಯ್ದು ನಕ್ಷತ್ರಗಳ/ಚಂದ್ರಹಾರವ ಮಾಡಿ/ರವಿಯ ಪದಕಕ್ಕಿಟ್ಟು/ಇಂದ್ರಧನುಷಿನ ಚಿಗುರು/ಕನಸುಗಳ ಕೊಟ್ಟ’.

ಆದರೆ ಬಹಳ ಬೇಗ ಕನಸು ಭ್ರಮನಿರಸನವಾಗಿ ಬದುಕಿನ ಕಟುವಾಸ್ತವ ಕಣ್ಣೆದುರು ಕಾಡುತ್ತದೆ- ‘ಬದುಕಿನಾಳಗಳಲ್ಲಿ/ಮುಳುಮುಳುಗುತೇಳುತ್ತ/ಬದುಕೆ ಬೆಳಕಾದವನು/ಜೀವನದ ಯೋಗಿ’.

ಈ ಹಂತದಲ್ಲಿಯೇ ಅವರ ಕಾವ್ಯವನ್ನು ಗಂಡು-ಹೆಣ್ಣಿನ ಸಂಬಂಧದ ಸಂಕೀರ್ಣತೆ, ದೇಹಾತ್ಮಗಳ ಸಂಬಂಧ, ಹೊಸ ತಲೆಮಾರಿನ ದಿಕ್ಕುತಪ್ಪಿದ ಸ್ಥಿತಿ, ಕಮರಿಹೋದ ಆದರ್ಶಗಳು, ಸಾಮಾಜಿಕ ಅಸಮಾನತೆಯ ಶೋಷಣೆಯ ಕಠೋರ ವಾಸ್ತವ, ನಗರೀಕರಣದ ಪರಿಣಾಮ ಸಂಗತಿಗಳೆಲ್ಲ ಅವರ ಕಾವ್ಯಜಗತ್ತನ್ನು ಪ್ರವೇಶಿಸುತ್ತವೆ. ಕವಿತೆ ಬಹಿಮುಖವಾದಾಗ ಸಿದ್ಧಲಿಂಗಯ್ಯನವರಲ್ಲಿ ಅದು ವಿಡಂಬನೆಯ ರೂಪ ತಾಳುತ್ತದೆ. ಅಂತಮುಖವಾದಾಗ ಆತ್ಮವಿಮರ್ಶೆಯ ಧಾಟಿ ಹಿಡಿಯುತ್ತದೆ. ಇದು ಅವರ ಕವಿತೆಗಳ ಸಾಮಾನ್ಯ ವಿನ್ಯಾಸ. ‘ಸುಟ್ಟ ರಥ/ನಮ್ಮ ಮನೋರಥ’ ಎಂಬುದು ಅವರ ಕಾವ್ಯದ ಪ್ರಧಾನ ನೆಲೆಯಾದರೂ ಗಾಳಿ ಬೀಸಿದಾಗೊಮ್ಮೆ ಜಿನುಗುವ ಬೆಳಕಿನ ಬಗ್ಗೆ ಅವರಿಗೆ ಆಸಕ್ತಿ ಭರವಸೆಯಿದೆ.

ಸಿದ್ಧಲಿಂಗಯ್ಯ (20-02-1931) ಅವರಿಗೆ ಈಗ ಎಂಭತ್ತಾರು ತುಂಬಿ ಎಂಭತ್ತೇಳು. ಇದನ್ನು ನೆಪವಾಗಿಸಿಕೊಂಡು ಅವರ ಆಪ್ತರು ‘ನಿಸ್ಸೀಮ’ ಎಂಬ ಅಭಿನಂದನಾ ಗ್ರಂಥವೊಂದನ್ನು ಸಮರ್ಪಿಸಿ ಸನ್ಮಾನಿಸುತ್ತಿದ್ದಾರೆ. ಇದು ಅವರ ಸಾಹಿತ್ಯಾಧ್ಯಯನದ ಮರು ಓದಿಗೆ ಅವಕಾಶ ಕಲ್ಪಿಸುವಂತಾಗಲಿ. ಹಿರಿಯರಾದ ಸಿದ್ಧಲಿಂಗಯ್ಯನವರಿಗೆ ನಾಡವರ ಪರವಾಗಿ ಅಭಿನಂದನೆಗಳು.

Leave a Reply

Your email address will not be published. Required fields are marked *