ಪಬ್ಲಿಕ್ ಸ್ಕೂಲ್‌ನಿಂದ ಕನ್ನಡಕ್ಕೆ ಧಕ್ಕೆ ಇಲ್ಲ

ಮೈಸೂರು: ಕರ್ನಾಟಕ ಪಬ್ಲಿಕ್ ಸ್ಕೂಲ್‌ನಿಂದ ಸರ್ಕಾರಿ ಶಾಲೆ ಹಾಗೂ ಕನ್ನಡ ಭಾಷೆಗೆ ಯಾವುದೇ ರೀತಿಯ ಧಕ್ಕೆ ಉಂಟಾಗುವುದಿಲ್ಲ ಎಂದು ಶಾಸಕ ತನ್ವೀರ್ ಸೇಠ್ ಅಭಿಪ್ರಾಯಪಟ್ಟರು.

ರಾಜೇಂದ್ರ ನಗರದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ತೆರೆದಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಎಲ್‌ಕೆಜಿ ಮತ್ತು 1ನೇ ತರಗತಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಲಾಗುತ್ತದೆ. ಹೀಗಾಗಿ ಕನ್ನಡ ಭಾಷಾ ಕಲಿಕೆಗೆ ಯಾವುದೇ ರೀತಿಯ ಅಡ್ಡಿ ಆಗುವುದಿಲ್ಲ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೀಡಿರುವ ಶಿಫಾರಸಿನ ಮೇರೆಗೆ ರಾಜ್ಯದ ಯಾವುದೇ ಮೂಲೆಯಲ್ಲಿರುವ ಸಿಬಿಎಸ್‌ಸಿ, ಐಎಸ್‌ಸಿ, ಖಾಸಗಿ ಆಂಗ್ಲ ಮಾಧ್ಯಮ ಹಾಗೂ ಇಂಟರ್‌ನ್ಯಾಷನಲ್ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ಇಂದು ಎಲ್ಲ ಕಡೆಗಳಲ್ಲಿ ಆಂಗ್ಲಭಾಷೆ ಬಳಕೆಯಲ್ಲಿದೆ. ಹೀಗಾಗಿ ಬಡವರ್ಗದ ಮಕ್ಕಳಿಗೂ ಆಂಗ್ಲಭಾಷೆ ಜ್ಞಾನ ದೊರೆಯಲಿ ಎಂಬ ಕಾರಣಕ್ಕೆ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಯಾವುದರಲ್ಲೂ ಕಡಿಮೆ ಇರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಯಷ್ಟೇ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದವರನ್ನು ಸರ್ಕಾರಿ ಶಾಲೆಗಳಿಗೆ ಶಿಕ್ಷಕರನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಮಕ್ಕಳಿಗೆ ಎನ್‌ಸಿಆರ್‌ಟಿ ಪುಸ್ತಕಗಳನ್ನು ನೀಡಿದ್ದೇವೆ. ಇವುಗಳು ಸಿಬಿಎಸ್‌ಸಿಗೆ ಸರಿಸಮಾನವಾಗಿದೆ ಎಂದರು.
ಪಾಲಿಕೆ ಸದಸ್ಯ ಪ್ರದೀಪ್ ಚಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಾಂಡುರಂಗ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಉದಯ್ ಕುಮಾರ್, ಬಸವರಾಜು ಇತರರು ಇದ್ದರು.

Leave a Reply

Your email address will not be published. Required fields are marked *