ಪಪಂ ನಿರ್ಧಾರಕ್ಕೆ ವ್ಯಾಪಾರಸ್ಥರ ಆಕ್ರೋಶ

20ರಂದು ವಿಶೇಷ ಸಭೆ ಆಯೋಜನೆ>

ಹೊಸಪೇಟೆ: ವಾರದ ಸಂತೆ ಸ್ಥಳಾಂತರಿಸಲು ಕಮಲಾಪುರ ಪಪಂ ಕೈಗೊಂಡ ನಿರ್ಧಾರಕ್ಕೆ ವ್ಯಾಪಾರಸ್ಥರು, ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದರು.

ಪ್ರತಿ ಸೋಮವಾರ ಕಮಲಾಪುರ ಊರಮ್ಮ ಬಯಲು ಸೇರಿ ಮಾರುಕಟ್ಟೆ ಪ್ರದೇಶದಲ್ಲಿ ಸಂತೆ ನಡೆಯುತ್ತಿದ್ದು, ಪಟ್ಟಣದ ಜೆಸ್ಕಾಂ ಕಚೇರಿ ಹಿಂಭಾಗದಲ್ಲಿನ ಖಾಸಗಿ ಜಾಗದಲ್ಲಿ ಸಂತೆ ನಡೆಸುವಂತೆ ಅಧಿಕಾರಿಗಳು ಸೂಚಿಸುತ್ತಿದ್ದಂತೆ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಅನೇಕ ವರ್ಷಗಳಿಂದ ಪಟ್ಟಣದ ಹಳೆಯ ಬಸ್ ನಿಲ್ದಾಣದ ಬಳಿ (ನಾಡ ಕಚೇರಿಯ ಮುಂದೆ) ವಾರದ ಸಂತೆ ನಡೆಯುತ್ತಿದ್ದು, ಕೆಲವರ ಒತ್ತಡಕ್ಕೆ ಮಣಿದ ಪಪಂ ಅಧಿಕಾರಿಗಳು ಪಟ್ಟಣದ ಹೊರವಲಯಕ್ಕೆ ಸ್ಥಳಾಂತರಿಸುತ್ತಿದ್ದಾರೆ. ಪ್ರಭಾವಿಗಳ ಖಾಸಗಿ ಜಾಗದಲ್ಲಿ ನಿವೇಶನ ಮಾಡಲು ದಾರಿ ಇಲ್ಲದ್ದರಿಂದ ಸಂತೆ ಸ್ಥಳಾಂತರಿಸಿದರೆ ಅನುಕೂಲವಾಗಲಿದೆ ಎಂಬುದಾಗಿದೆ. ಅಲ್ಲದೆ, ಪಟ್ಟಣದ ಹೊರವಲಯದಲ್ಲಿ ಸಂತೆ ನಡೆಯುವುದರಿಂದ ವಿವಿಧ ಭಾಗದ ಜನರು ಅಲ್ಲಿಗೆ ತೆರಳಲು ಒಂದೆರಡು ಕಿಮೀ ದೂರವಾಗಲಿದೆ. ಈ ನಿರ್ಧಾರ ಅವೈಜ್ಞಾನಿಕವಾಗಿದೆ ಎಂದು ವ್ಯಾಪಾರಸ್ಥರು ಹರಿಹಾಯ್ದರು.

ರಸ್ತೆಯಲ್ಲಿ ಸಂತೆ ನಡೆಯುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಹಾಗೂ ಮನೆಯ ಬಾಗಿಲಿಗೆ ಅಡ್ಡವಾಗುತ್ತದೆಂದು ಈ ಹಿಂದೆ ಕೆಲವರು ಮನವಿ ಸಲ್ಲಿಸಿದ್ದಾರೆ. ಹಾಗಾಗಿ, ಪಪಂಯಲ್ಲಿ ನ.15ರಂದು ನಡೆದ ಸಾಮಾನ್ಯ ಸಭೆಯಲ್ಲಿ ಸಂತೆ ಸ್ಥಳಾಂತರಿಸುವ ಕುರಿತು ಠರಾವು ಮಾಡಲಾಗಿದೆ. ಆದ್ದರಿಂದ ವಾರದ ಸಂತೆಗೆ ಬೇರೆಡೆ ನಿಗದಿಪಡಿಸಿದ ಸ್ಥಳಕ್ಕೆ ತೆರಳುವಂತೆ ಪಪಂ ಸಿಬ್ಬಂದಿ ಸೂಚಿಸುತ್ತಿದ್ದಂತೆ, ವಾಹನಗಳಲ್ಲೇ ಸೊಪ್ಪು, ತರಕಾರಿ ಮೂಟೆಗಳನ್ನು ಬಿಟ್ಟು ವಿರೋಧ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಗದ್ದಲದ ವಾತಾವರಣ ಏರ್ಪಟ್ಟಿತ್ತು. ಕಮಲಾಪುರ ಪಿಎಸ್‌ಐ ಕೆ.ಜಯಪ್ರಕಾಶ್ ಮಧ್ಯೆಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿ, ಮೊದಲು ನಡೆಯುತ್ತಿದ್ದ ಸ್ಥಳದಲ್ಲೇ ಈ ಬಾರಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಲಾಯಿತು.

ಸ್ವಚ್ಛತೆ ಇಲ್ಲದ ಮಾರುಕಟ್ಟೆ ..: ಮಾರುಕಟ್ಟೆ ಜಾಗದಲ್ಲಿ ಕೆಲ ವರ್ಷಗಳ ಹಿಂದೆ ವಾಲಿಬಾಲ್ ಮೈದಾನ ನಿರ್ಮಿಸಲಾಗಿದೆ. ಅವೈಜ್ಞಾನಿಕವಾಗಿ ಮಾರುಕಟ್ಟೆ ಮಳಿಗೆ ನಿರ್ಮಿಸಲಾಗಿದೆ. ಮೂಲಸೌಕರ್ಯ ಮರೀಚಿಕೆಯಾಗಿದ್ದು, ಬಯಲು ಶೌಚಗೃಹವಾಗಿ ಮಾರ್ಪಟ್ಟಿದ್ದರಿಂದ ಊರಮ್ಮನ ಬಯಲಿನಲ್ಲಿ ವಾರದ ಸಂತೆ ನಡೆಯುತ್ತಿದೆ. ಈಗ ಸಾರ್ವಜನಿಕರ ಅಭಿಪ್ರಾಯ ಪಡೆಯದೇ ಏಕಾಏಕಿ ಸಂತೆಯನ್ನು ಸ್ಥಳಾಂತರಿಸಿದ್ದರಿಂದ ವಿರೋಧ ವ್ಯಕ್ತವಾಯಿತು.

ಈ ಮೊದಲು ನಡೆಯುತ್ತಿದ್ದ ಸಂತೆಯ ಜಾಗದಲ್ಲಿ ಸ್ವಚ್ಛತೆ ಕೈಗೊಳ್ಳುವ ದೃಷ್ಟಿಯಿಂದ 3 ತಿಂಗಳು ಖಾಸಗಿ ಜಾಗಕ್ಕೆ ಸಂತೆಯನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು. ಅದಕ್ಕಾಗಿ ಜೆಸ್ಕಾಂ ಕಚೇರಿಯ ಕಾಂಪೌಂಡ್ ಒಡೆದು 10 ಅಡಿ ದಾರಿ ಮಾಡಲಾಗಿದೆ. ಆದರೆ, ವ್ಯಾಪಾರಸ್ಥರು ಮತ್ತು ಸಾರ್ವಜನಿಕರಲ್ಲಿ ಪರ-ವಿರೋಧ ಇರುವುದರಿಂದ ಡಿ.20ರಂದು ವಿಶೇಷ ಸಭೆ ಕರೆಯಲಾಗಿದೆ. ನಂತರ ಸಾರ್ವಜನಿಕರ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.
| ಶಿವಕುಮಾರ್ ಮುಖ್ಯಾಧಿಕಾರಿ, ಪಪಂ, ಕಮಲಾಪುರ