ಪದೇಪದೆ ವರ್ಗಾವಣೆಯಿಂದ ಅಭಿವೃದ್ಧಿ ಕುಂಠಿತ

ಮಾಗಡಿ: ಪುರಸಭೆ ಮುಖ್ಯಾಧಿಕಾರಿಗಳನ್ನು ಪದೇಪದೆ ವರ್ಗಾವಣೆ ಮಾಡುವುದರಿಂದ ಪಟ್ಟಣದ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ ಹಾಗೂ ಯುಜಿಡಿ ಮತ್ತು 247 ಕುಡಿಯುವ ನೀರು ಯೋಜನೆ ಮುಗಿಯದ ತಲೆನೋವಾಗಿ ಪರಿಗಣಿಸಿದೆ.

2011ರಿಂದ 2019ರವರೆಗೆ ಪುರಸಭೆಯ 9 ಮುಖ್ಯಾಧಿಕಾರಿಗಳನ್ನು ಬದಲಾವಣೆ ಮಾಡಲಾಗಿದೆ. ಒಂದು ವರ್ಷ ಕಳೆಯುವುದರೊಳಗೆ ಮುಖ್ಯಾಧಿಕಾರಿಗಳ ಬದಲಾವಣೆ ಆಗುತ್ತಿದ್ದು, ಒಮ್ಮೆ ವರ್ಗಾವಣೆಗೊಂಡವರೇ ಮತ್ತೆ ಅದೇ ಸ್ಥಾನಕ್ಕೆ ವಾಪಸಾಗುತ್ತಿರುವುದು ವಿಪರ್ಯಾಸ. ಪುರಸಭೆ ಬಗ್ಗೆ ಹಾಗೂ ಸಮಸ್ಯೆಗಳನ್ನು ತಿಳಿದು ಬಗೆಹರಿಸುವಷ್ಟರಲ್ಲೇ ವರ್ಗಾವಣೆಯಾಗುತ್ತಿರುವುದರಿಂದ ಸಮಸ್ಯೆಗಳು ವರ್ಷಗಳಿಂದ ಹಾಗೆಯೇ ಉಳಿಯುವಂತಾಗಿದೆ.

2013-14ರಲ್ಲಿ ಕೊಟ್ಟು ಕತ್ತಿರ ಮುತ್ತಪ್ಪ ಕಾರ್ಯನಿರ್ವಹಿಸಿ ವರ್ಗಾವಣೆಯಾಗಿದ್ದರು. ಪುನಃ 2018ರ ಮೇನಿಂದ 4 ತಿಂಗಳು ಕಾರ್ಯನಿರ್ವಹಿಸಿ ಮತ್ತೆ ವರ್ಗಾವಣೆಯಾದರು. ನಂತರ ನಟರಾಜು (ಪ್ರಸ್ತುತ ಮುಖ್ಯಾಧಿಕಾರಿ) ಅಧಿಕಾರ ವಹಿಸಿಕೊಂಡರು. 2014-15ರಲ್ಲಿ ಒಂದು ವರ್ಷ ಸೇವೆ ಸಲ್ಲಿಸಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವರ್ಗಾವಣೆಗೊಂಡಿದ್ದರು. ಹೀಗೆ ಪದೇಪದೆ ಮುಖ್ಯಾಧಿಕಾರಿಗಳ ಬದಲಾವಣೆಯಾದರೆ ಪಟ್ಟಣ ಅಭಿವೃದ್ಧಿ ಕಾಣುವುದು ಹೇಗೆ ಎಂಬುದು ನಾಗರಿಕರ ಪ್ರಶ್ನೆಯಾಗಿದೆ.

ಖಾಲಿ ಹುದ್ದೆ ಭರ್ತಿಗೆ ಡಿಸಿಗೆ ಪತ್ರ: ಮಾಗಡಿ ಪುರಸಭೆಯಲ್ಲಿ 7 ಹುದ್ದೆಗಳು ಖಾಲಿಯಿವೆ. ಕಿರಿಯ ಅಭಿಯಂತರರು, ಕಚೇರಿ ವ್ಯವಸ್ಥಾಪಕರು, ಕಂದಾಯ ಅಧಿಕಾರಿ, ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ಕಿರಿಯ ಆರೋಗ್ಯ ನಿರೀಕ್ಷಕರ ಹುದ್ದೆಗಳು ಖಾಲಿಯಿವೆ.

ಪುರಸಭಾ ವ್ಯಾಪ್ತಿಯಲ್ಲಿ 23 ವಾರ್ಡ್​ಗಳಿವೆ. ಸಿಬ್ಬಂದಿ ಕೊರತೆಯಿಂದಾಗಿ ಖಾತೆ ನಕಲು ನೀಡುವುದು ಮತ್ತು ವರ್ಗಾವಣೆ, ಕಂದಾಯ, ನೀರಿನ ತೆರಿಗೆ, ಅಂಗಡಿ ಮಳಿಗೆಗಳ ಬಾಡಿಗೆ ವಸೂಲಾತಿ ಇನ್ನಿತರ ಕೆಲಸಗಳನ್ನು ಸಕಾಲದಲ್ಲಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ. ಖಾಲಿ ಇರುವ ಸ್ಥಾನಗಳನ್ನು ಕೂಡಲೇ ಭರ್ತಿ ಮಾಡುವಂತೆ ಅಥವಾ ಒಒಡಿ ಮೇಲೆ ನಿಯೋಜನೆ ಮಾಡುವಂತೆ ಮುಖ್ಯಾಧಿಕಾರಿ ನಟರಾಜ್ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಮಾಗಡಿ ಪುರಸಭೆಯಲ್ಲಿ ಕೆಲಸ ಮಾಡಿದ ಅನುಭವವಿದ್ದು, ಚುನಾವಣೆ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿತ್ತು. ಪಟ್ಟಣದಲ್ಲಿರುವ ಯುಜಿಡಿ ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುವುದು. ಸ್ವಲ್ಪ ದಿನಗಳಲ್ಲೇ ಪುರಸಭೆ ಚುನಾವಣೆ ನಡೆಯಲಿದ್ದು, ನಂತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಿಸಿ ಕೊಡಲಾಗುವುದು.

| ನಟರಾಜು, ಮುಖ್ಯಾಧಿಕಾರಿ, ಪುರಸಭೆ ಮಾಗಡಿ

 

Leave a Reply

Your email address will not be published. Required fields are marked *