ಕಲಬುರಗಿ: ಈಶಾನ್ಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಮತದಾರರ ಪಟ್ಟಿ ತಯಾರಿ ಪ್ರಕ್ರಿಯೆ ಆರಂಭವಾಗಿದ್ದು, ಪದವೀಧರರ ತಮ್ಮ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಕೆಪಿಸಿಸಿ ಶಿಕ್ಷಕರ ಘಟಕದ ಅಧ್ಯಕ್ಷ ಬಸವರಾಜ ಗುರಿಕಾರ ಮತ್ತು ಮಾಜಿ ಶಾಸಕ ಶರಣಪ್ಪ ಮಟ್ಟೂರ ತಿಳಿಸಿದರು.
ಭಾನುವಾರ ನಗರದಲ್ಲಿ ಜಂಟಿಯಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ಹೆಸರು ನೋಂದಣಿ ಕಾರ್ಯ ಚುನಾವಣಾ ಆಯೋಗ ಶುರು ಮಾಡಿದೆ.ಕಲ್ಯಾಣ ಕರ್ನಾಟಕದಲ್ಲಿ ಸುಮಾರು ೧೦ ಲಕ್ಷ ಪದವೀಧರರಿದ್ದಾರೆ ಎಂಬ ಮಾಹಿತಿ ಇದೆ ಹೀಗಾಗಿ ಎಲ್ಲರು ಅರ್ಜಿ ಸಲ್ಲಿಸಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದರು.
ಗುರಿಕಾರ ಅವರು ಮಾತನಾಡಿ, ಕಳೆದ ಸಲ ಕೇವಲ ೯೮ ಸಾವಿರ ಪದವೀಧರರು ಮಾತ್ರ ಹೆಸರು ನೋಂದಣಿ ಮಾಡಿಸಿದ್ದರು. ಆದ್ದರಿಂದ ಈ ಬಾರಿ ಕಾಂಗ್ರೆಸ್‌ನ ಎಲ್ಲ ಘಟಕಗಳಿಂದ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ವಾಸಸ್ಥಳ ಪ್ರಮಾಣ ಪತ್ರ ಬೇಡ: ವಿಧಾನ ಪರಿಷತ್ ಮಾಜಿ ಸದಸ್ಯ ಶರಣಪ್ಪ ಮಟ್ಟೂರ್ ಮಾತನಾಡಿ ಪದವೀಧರರ ಚುನಾವಣೆಗೆ ನೋಂದಣಿ ಮಾಡಲು ಹಲವು ದಾಖಲೆ ಕೇಳಲಾಗಿದ್ದು, ಅದರಲ್ಲಿ ವಾಸಸ್ಥಳ ಕೂಡ ಕೇಳಿದ್ದಾರೆ. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ನೀಡಿದ ಮೇಲೆ ವಾಸಸ್ಥಳ ಪ್ರಮಾಣ ಪತ್ರ ಯಾಕೆ ನೀಡಬೇಕು ಎಂಬುದು ತಿಳಿಯುತ್ತಿಲ್ಲ. ಅವೇ ವಾಸಸ್ಥಳದ ವಿಳಾಸವಾಗಿರುತ್ತದೆ ಎಂಬುದು ಗೊತ್ತಿದ್ದರೂ ಅರ್ಜಿಯಲ್ಲಿ ವಾಸಸ್ಥಳದ ಪ್ರಮಾಣ ಪತ್ರದ ಬಗ್ಗೆ ಹೆಚ್ಚಿನ ಕಲಂ ಸೇರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅದನ್ನು ತೆಗೆಯುವಂತೆ ಚುನಾವಣಾ ಅಧಿಕಾರಿಗಳಿಗೆ ಆಗ್ರಹಿಸಲಾಗುವುದು. ಅಲ್ಲದೇ ಕಾಂಗ್ರೆಸ್‌ನಿಂದ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಶಿಕ್ಷಕರು ಮತ್ತು ಪದವೀಧರರಿಗಾಗಿ ಕಾಂಗ್ರೆಸ್ ಪಕ್ಷ ಹಲವು ಕಾರ್ಯಕ್ರಮಗಳನ್ನು ತಂದಿದೆ ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಕೆಕೆಸಿಸಿ ಶಿಕ್ಷಕರ ಘಟಕದ ಸಂಚಾಲಕ ತಿಮಯ್ಯ ಪುರ್ಲೆ, ಜಿಲ್ಲಾಧ್ಯಕ್ಷ ಡಾ.ಪಿ.ಎನ್. ಕೋಕಟನೂರ, ಚಿ.ಸಿ.ನಿಂಗಣ್ಣ ಇದ್ದರು.