ಪದವಿ ಕಾಲೇಜುಗಳ ಅಧ್ಯಾಪಕರನ್ನು ಗೈಡ್ ಮಾಡಿ

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ ಹಾಗೂ ಅನುಭವಿ ಅಧ್ಯಾಪಕರನ್ನು ಪಿಎಚ್ಡಿ ಮಾರ್ಗದರ್ಶಕರನ್ನಾಗಿ ನೇಮಕ ಮಾಡಬೇಕು ಎಂದು ಹೈದರಾಬಾದ್ ಕರ್ನಾಟಕ  ಕಾಲೇಜು ಅಧ್ಯಾಪಕರ ಸಂಘ ಒತ್ತಾಯಿಸಿದೆ.
ಈ ಕುರಿತು ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಶರಣಪ್ಪ ಸೈದಾಪುರ ನೇತೃತ್ವದ ನಿಯೋಗ ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್.ಪಿ. ಮೇಲಕೇರಿ, ಕುಲಸಚಿವ ಪ್ರೊ. ಸಿ.ಸೋಮಶೇಖರ ಅವರಿಗೆ ಮನವಿ ಪತ್ರ ಸಲ್ಲಿಸಿದ್ದು, ಈಗಾಗಲೇ ಗೈಡ್ ಆದವರಿಗೆ ಒಂದು ನೀತಿ, ಇನ್ನೂ ಮುಂದೆ ಗೈಡ್ ಆಗಿ ನೇಮಕ ಆಗುವವರಿಗೆ ಮತ್ತೊಂದು ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರನ್ನು ಸಂಶೋಧನಾ ಶಿಕ್ಷಣದಿಂದ ವಂಚಿಸುವ ವಿವಿ ನೀತಿಯನ್ನು ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿವಿ ಕುಲಪತಿಗಳ ನೇತೃತ್ವದಲ್ಲಿ ಜಿಇಆರ್ ಪ್ರಮಾಣ ಹೆಚ್ಚಿಸಲು ಸರ್ಕಾರ ಸಮಿತಿ ರಚಿಸಿದೆ. ಇತ್ತೀಚೆಗೆ ಹಲವು ಮಾರ್ಗದರ್ಶಕ ಅಧ್ಯಾಪಕರು ಸೇವಾ ನಿವೃತ್ತಿ ಹೊಂದಿದ್ದು, ಇದರಿಂದಾಗಿ ಹೈಕ ಭಾಗದ ವಿದ್ಯಾರ್ಥಿಗಳನ್ನು ಸಂಶೋಧನಾ ಶಿಕ್ಷಣದಿಂದ ವಂಚಿಸಿದಂತಾಗುತ್ತಿದೆ. ಮಹಾವಿದ್ಯಾಲಯಗಳು ನ್ಯಾಕ್ ಮಾನ್ಯತೆ ಪಡೆಯಲು ಕಾಲೇಜುಗಳಲ್ಲಿ ಸ್ನಾತಕೋತ್ತರ ಕೋರ್ಸ  ನಡೆಸುವುದನ್ನು ಯುಜಿಸಿ ಕಡ್ಡಾಯಗೊಳಿಸಿದೆ. ಈ ಹಿನ್ನೆಲೆಯಲ್ಲಿ 2005ರಲ್ಲಿ ಸ್ಯಾಮ್ ಪಿಟ್ರೊಡಾ ನೇತೃತ್ವದಲ್ಲಿ ರಾಷ್ಟ್ರೀಯ ಜ್ಞಾನ ಆಯೋಗ ಜಿಇಆರ್ ಶೇ.30ಕ್ಕೆ ಹೆಚ್ಚಿಸಲು ಶಿಫಾರಸ್ಸು ಮಾಡಿದೆ. ಹೀಗಾಗಿ ಕೂಡಲೇ ಪದವಿ ಕಾಲೇಜುಗಳಲ್ಲಿರುವ ಅರ್ಹ ಹಾಗೂ ಅನುಭವಿ ಅಧ್ಯಾಪಕರನ್ನು ಹೊಸದಾಗಿ ಮಾರ್ಗದರ್ಶಕರನ್ನಾಗಿ ನೇಮಕ ಮಾಡಬೇಕು ಎಂದು ಸಂಘ ಒತ್ತಾಯಿಸಿದೆ.
ಪದಾಧಿಕಾರಿಗಳಾದ ಡಾ.ಮಲ್ಲಿಕಾರ್ಜುನ ಶೆಟ್ಟಿ, ಡಾ.ಶ್ರೀಮಂತ ಬಿ.ಹೋಳ್ಕರ್, ಡಾ.ಚಿನ್ನಾ ಆಶಪ್ಪ, ಪ್ರೊ. ತ್ರಿವಿಕ್ರಮ ಯಕ್ಕಂಚಿ, ಡಾ.ಸಂಗಪ್ಪ ಹೊಸ್ಮನಿ ಹೊಸಮನಿ, ಸಂಗೀತಾ ಸೈದಾಪುರ ಇತರರಿದ್ದರು. 

Leave a Reply

Your email address will not be published. Required fields are marked *