Wednesday, 12th December 2018  

Vijayavani

ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -ಕೈಗೆ ಬೆಂಬಲ ಘೋಷಿಸಿದ ಮಾಯಾವತಿ -ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್        ಪಾನ್ ಬ್ರೋಕರ್ ಡೀಲ್ ಪ್ರಕರಣದ ತನಿಖೆ ಚುರುಕು -ಸಹಕಾರ ಇಲಾಖೆಯಿಂದ ನೋಟಿಸ್ -ಇದು ದಿಗ್ವಿಜಯ ನ್ಯೂಸ್ ವರದಿ ಫಲಶ್ರುತಿ        ಋಣ ಸಂದಾಯಕ್ಕೆ ಮುಂದಾದ ರಾಮಲಿಂಗಾರೆಡ್ಡಿ -ಬಿಜೆಪಿ ಕಾರ್ಪೋರೇಟರ್ ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪಟ್ಟ -ಪುತ್ರಿ ಗೆಲುವಿಗೆ ಸಹಕರಿಸಿದ್ದಕ್ಕೆ ಗಿಫ್ಟ್        ಸರ್ಕಾರದ ವಿರುದ್ಧ ಇಂದು ಬರಾಸ್ತ್ರ -ಸಿಎಂಗೆ ಬಿಸಿ ಮುಟ್ಟಿಸಲು ಬಿಎಸ್‌ವೈ ರಣತಂತ್ರ -ಅತ್ತ ಭದ್ರತೆಗೆ ಬಂದ ಎಸ್ಪಿಗೆ ಕೈಕೊಟ್ಟ ಕಾರು        ಕಿಡ್ನಾಪರ್ಸ್ ಹಿಡಿಯಲು ಪ್ರೇಮಿಗಳ ವೇಷ -ಆಂಧ್ರಕ್ಕೆ ಆಗಿ ಹೋದ ಪೊಲೀಸರು -ಶಿವಾಜಿನಗರ ಠಾಣೆ ಪೊಲೀಸರಿಂದ ಕಿರಾತಕರಿಗೆ ಕೋಳ        ಮುಂಬೈನಲ್ಲಿಂದು ಅಂಬಾನಿ ಮಗಳ ಅದ್ಧೂರಿ ವಿವಾಹ -ಹಿಲರಿ ಕ್ಲಿಂಟನ್ ಸೇರಿ ಗಣ್ಯಾತಿಗಣ್ಯರು ಭಾಗಿ - ಸ್ಯಾಂಡಲ್‌ವುಡ್‌ನಲ್ಲಿ ದಿಗಂತ್, ಐಂದ್ರಿತಾ ಮದುವೆ ಸಂಭ್ರಮ       
Breaking News

ಪತ್ರಿಕೆ ಜೀವನೋಪಾಯ ಮಾತ್ರವಲ್ಲ, ಜೀವನ ಧರ್ಮ

Sunday, 26.11.2017, 3:05 AM       No Comments

ಅನೇಕ ಸವಾಲುಗಳ ನಡುವೆಯೂ ಪತ್ರಿಕೆಗಳು ಇಂದಿಗೂ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿವೆ;ಜನಜೀವನದಲ್ಲಿ ತಮ್ಮದೇ ಆದ ಪಾತ್ರವನ್ನು ನಿರ್ವಹಿಸುತ್ತಿವೆ; ಸಾಮಾಜಿಕ ಬದಲಾವಣೆಗೂ ಕಾರಣವಾಗುತ್ತಿವೆ. ನಮ್ಮಲ್ಲಿ ಅನೇಕ ಪ್ರತಿಭಾವಂತ ಪತ್ರಕರ್ತರಿದ್ದಾರೆ. ಅಂಥವರ ದೀರ್ಘ ಪರಂಪರೆಯೇ ನಮ್ಮಲ್ಲಿದೆ.

 ದೃಶ್ಯ ಮಾಧ್ಯಮ ಎಷ್ಟೇ ದಾಳಿ ಮಾಡಿದರೂ, ದಿನದ ಇಪ್ಪತ್ತನಾಲ್ಕು ಗಂಟೆಗಳೂ ಸುದ್ದಿ ಪ್ರಸಾರ ಮಾಡಿದರೂ, ಪತ್ರಿಕೆಗಳ ಮಹತ್ವ ಕಡಿಮೆಯಾಗಿಲ್ಲ. ಬೆಳಗಾಗುತ್ತಿದ್ದಂತೆ ನಮ್ಮ ಜನ ಪತ್ರಿಕೆಗಳಿಗಾಗಿ ಕಾಯುತ್ತಾರೆ. ಸ್ವಲ್ಪ ತಡವಾದರೂ ಚಡಪಡಿಸುತ್ತಾ ಪತ್ರಿಕೆ ಹಾಕುವ ಹುಡುಗನ ಜೊತೆ ರೇಗಾಡುವುದನ್ನೂ ನಾನು ಕಂಡಿದ್ದೇನೆ. ಮಾತ್ರವಲ್ಲ, ಕಾಫಿ ಕುಡಿಯುತ್ತಾ ಪತ್ರಿಕೆ ಓದುವ ಉಲ್ಲಾಸವನ್ನು ಬಹಳಷ್ಟು ಜನ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಹಾಗೆ ನೋಡಿದರೆ ಅನೇಕ ಸುದ್ದಿಗಳು ನಮಗೆ ಗೊತ್ತಿರುವಂಥವೇ! ಹಿಂದಿನ ರಾತ್ರಿಯೇ ನ್ಯೂಸ್ ಚಾನೆಲ್​ಗಳು ಪರಿಣತರ ವಿಶ್ಲೇಷಣೆಯೊಂದಿಗೆ ಗಂಟೆಗಟ್ಟಲೆ ಪ್ರಸಾರ ಮಾಡಿರುತ್ತವೆ. ಆದರೂ ಪತ್ರಿಕೆಯಲ್ಲಿ ಅದನ್ನು ಓದಿದಾಗಲೇ ಒಂದು ಬಗೆಯ ತೃಪ್ತಿ. ನನ್ನ ಗೆಳೆಯನೊಬ್ಬ ಪತ್ರಿಕೆಗೆ ರಜಾ ಇದ್ದು ಪತ್ರಿಕೆ ಬಾರದ ದಿನ ಬೆಳಿಗ್ಗೆ ಎದ್ದಾಗ ಹಿಂದಿನ ದಿನದ ಪತ್ರಿಕೆಯನ್ನೇ ಮತ್ತೊಮ್ಮೆ ತಿರುವಿ ಹಾಕುತ್ತಾನೆ. ಹಾಗೆ ಪತ್ರಿಕಾ ಪಠಣವಾದರೇ ದಿನ ಆರಂಭವಾದಂತೆ. ಇಲ್ಲದಿದ್ದರೆ ಏನನ್ನೋ ಕಳೆದುಕೊಂಡ ಅನುಭವ.

ನಾನು ವಿದ್ಯಾರ್ಥಿಯಾಗಿದ್ದಾಗ ನಮ್ಮ ಶಾಲೆಗಳಲ್ಲಿ ಪ್ರಾರ್ಥನೆಯ ಜೊತೆಗೆ ಪತ್ರಿಕೆಯ ಮುಖ್ಯಾಂಶಗಳನ್ನು ಒಬ್ಬ ವಿದ್ಯಾರ್ಥಿ ಗುರುತು ಮಾಡಿಕೊಂಡು ಬಂದು ಓದಬೇಕಾಗಿತ್ತು. ಅದು ಶಾಲೆ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದ ನಿಯಮವಾಗಿತ್ತು. ಜನರಲ್ ನಾಲೆಡ್ಜ್ ಪಡೆಯಬೇಕಾದರೆ ಪತ್ರಿಕೆ ಓದಬೇಕೆಂಬುದು ರೂಢಿಸಿಕೊಂಡು ಬಂದ ನಂಬಿಕೆ. ಇಂದಿಗೂ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳು ಮಾಡಲೇಬೇಕಾದ ಕೆಲಸವೆಂದರೆ ಪತ್ರಿಕೆ ಓದುವುದು. ಅವರಿಗೆ ಅದು ಕೇವಲ ಸುದ್ದಿ ಮಾಧ್ಯಮವಲ್ಲ, ಅಧ್ಯಯನದ ಮೂಲ ಆಧಾರ. ಅವರಿಗೆ ಪತ್ರಿಕೆಯನ್ನು ಓದಬೇಕಾದ ಸ್ವರೂಪದ ಬಗ್ಗೆಯೂ ಹೇಳಿಕೊಡುವುದುಂಟು. ಪ್ರಾಂತ್ಯ ಸುದ್ದಿ, ರಾಷ್ಟ್ರ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ಆರ್ಥಿಕ ವಿಚಾರ, ಕ್ರೀಡಾ ವಿಚಾರ, ಮಾರುಕಟ್ಟೆಯ ಅಧ್ಯಯನ, ಸಂಪಾದಕೀಯ, ಅಗ್ರಲೇಖನ, ಸಂಕ್ಷಿಪ್ತ ಸುದ್ದಿ, ವಾಚಕರ ಅಭಿಪ್ರಾಯ, ಆ ದಿನದ ವಿಶೇಷ ಪುರವಣಿ – ಹೀಗೆ ಅನೇಕ ಸಂಗತಿಗಳನ್ನು ಗಮನಿಸಬೇಕಾಗುತ್ತದೆ. ಇದು ಪತ್ರಿಕೆಯ ಸ್ವರೂಪವನ್ನು ಮಾತ್ರವಲ್ಲ, ವಿಷಯ ವೈವಿಧ್ಯ, ವಿಸ್ತಾರವನ್ನೂ ಸೂಚಿಸುತ್ತದೆ.

ಯಾವುದೇ ಪತ್ರಿಕೆಯಾದರೂ ಸ್ಥಳೀಯ ಸುದ್ದಿಗೆ ವಿಶೇಷ ಮಹತ್ವವಿರುತ್ತದೆ. ನಾವು ಮೊದಲು ಗಮನಿಸುವುದು ನಮ್ಮ ಪ್ರದೇಶದ ಸುದ್ದಿ ವರದಿಗಳನ್ನು. ಹೀಗಾಗಿ ಜಿಲ್ಲಾ ಮಟ್ಟದ ಸಣ್ಣ ಪತ್ರಿಕೆಗಳು ಆಯಾ ಪ್ರಾಂತ್ಯಗಳಲ್ಲಿ ಮಹತ್ವದ ಸಾಮಾಜಿಕ ಪರಿಣಾಮ ಬೀರುತ್ತವೆ. ಹಾಗಾಗಿಯೇ ರಾಜ್ಯಮಟ್ಟದ ಪತ್ರಿಕೆಗಳೂ ಸಹ ಈಗ ವಿವಿಧ ಆವೃತ್ತಿಗಳ ಮೂಲಕ ಆಯಾ ಪ್ರದೇಶದ ಸುದ್ದಿಗಳಿಗೆ ಮಹತ್ವ ನೀಡುತ್ತವೆ. ಇದರಿಂದ ಒಂದು ರೀತಿ ಪ್ರಾಂತೀಯ ಸುದ್ದಿಗಳ ವಿವರ ಹೆಚ್ಚಿರುತ್ತದೆ, ಆ ಪ್ರದೇಶಕ್ಕೆ ಪ್ರಾಮುಖ್ಯತೆ ಸಿಗುತ್ತದೆ ಅನ್ನಿಸಿದರೂ, ಕೆಲವೊಮ್ಮೆ ನಾವು ಆ ಮೂಲಕ ದ್ವೀಪಗಳನ್ನೂ ಸೃಷ್ಟಿಸುತ್ತಿದ್ದೇವೆ ಎಂದೂ ಅನ್ನಿಸುತ್ತದೆ. ಒಂದು ಪ್ರದೇಶದ ಸುದ್ದಿ, ಪತ್ರಿಕೆಗಳಲ್ಲಿ ಮತ್ತೊಂದು ಕಡೆಗೆ ತಲುಪುವುದೇ ಇಲ್ಲ. ಹಾಗೆ ರಾಜ್ಯ ಮಟ್ಟದ ಸುದ್ದಿಯಾಗುವುದು ಬಹುಪಾಲು ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾತ್ರ. ಅಥವಾ ಸಂಪಾದಕರ ವಿವೇಚನೆಗೆ ಸಂಬಂಧಿಸಿಯೂ ಅದು ರಾಜ್ಯ ಸುದ್ದಿಯಾಗಬಹುದು.

ಇಷ್ಟೆಲ್ಲಾ ಹೇಳುತ್ತಿರುವ ಹಿನ್ನೆಲೆಯೆಂದರೆ ರಾಜ್ಯಮಟ್ಟದ ಪತ್ರಿಕೆಗಳ ಬಗ್ಗೆಯೇ ನಾವು ಅನೇಕ ವೇಳೆ ರ್ಚಚಿಸುತ್ತೇವೆ. ಆದರೆ ಕೆಲವೊಮ್ಮೆ ಜಿಲ್ಲಾ ಮಟ್ಟದ ಪತ್ರಿಕೆಗಳೂ ನಮ್ಮ ಸಾಮಾಜಿಕ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸಿರುವುದುಂಟು. ಅಂಥದೊಂದು ಪತ್ರಿಕೆ ‘ಆಂದೋಲನ’. ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ- ಈ ಜಿಲ್ಲೆಗಳಿಗೆ ಮಾತ್ರ ಸೀಮಿತವಾದ ಈ ಪತ್ರಿಕೆ ರಾಜ್ಯಮಟ್ಟದ ಪತ್ರಿಕೆಗಳ ಪರಿಣಾಮ, ಸ್ವರೂಪವನ್ನೇ ಹೊಂದಿದೆ ಎಂಬುದು ಗಮನಿಸಬೇಕಾದ ಸಂಗತಿ. ಇದರ ಹಿನ್ನೆಲೆಯಲ್ಲಿದ್ದು ಆ ಪತ್ರಿಕೆಯ ಶಕ್ತಿಯಾಗಿದ್ದವರು ಇತ್ತೀಚೆಗೆ ನಿಧನರಾದ ರಾಜಶೇಖರ ಕೋಟಿ.

ರಾಜಶೇಖರ ಕೋಟಿ ಗದಗ ಜಿಲ್ಲೆಯ ಹುಯಿಲಗೋಳ ಊರಿನವರು. ಜಮೀನ್ದಾರೀ ಕುಟುಂಬದಿಂದ ಬಂದವರು. ಹನ್ನೆರಡು, ಹದಿಮೂರನೆಯ ವಯಸ್ಸಿಗೇ ‘ನೇತಾಜಿ’ ಎಂಬ ಪತ್ರಿಕೆಯಲ್ಲಿ ಸಣ್ಣ ಕೆಲಸಕ್ಕೆ ಸೇರಿದ ಹುಡುಗ ರಾಜಶೇಖರ ಪತ್ರಿಕಾ ಪ್ರಪಂಚದ ಒಳಹೊರಗುಗಳನ್ನು ಅಲ್ಲಿಂದಲೇ ಕಲಿತುಕೊಂಡ. ಮುಂದೆ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪನವರ ಗರಡಿಯಲ್ಲಿ ಬೆಳೆದದ್ದು ಯುವಕ ರಾಜಶೇಖರನಿಗೆ ವಿಸ್ತಾರ ಅನುಭವವನ್ನು ತಂದುಕೊಟ್ಟಿತು. ಆಗ ಪತ್ರಿಕೆಗೆ ಸಂದರ್ಶನ ನಡೆಸಿದವರು ಬಸವರಾಜ ಕಟ್ಟೀಮನಿ. ಒಂದು ಇಂಗ್ಲೀಷ್ ಬರಹವನ್ನು ಕೊಟ್ಟು ಕನ್ನಡಕ್ಕೆ ಅನುವಾದಿಸಲು ಹೇಳಿದರಂತೆ. ರಾಜಶೇಖರ ಅದನ್ನು ಕನ್ನಡದ ಜಾಯಮಾನಕ್ಕೆ ಹೊಂದುವ ಹಾಗೆ ಸೊಗಸಾಗಿ ಅನುವಾದ ಮಾಡಿದ್ದನಂತೆ. ಆಗ ಕಟ್ಟೀಮನಿಯವರು ‘ಮುಂದೆ ನಿನಗೆ ಒಳ್ಳೆಯ ಭವಿಷ್ಯವಿದೆ, ಕಷ್ಟಪಟ್ಟು ಕೆಲಸ ಮಾಡು’ ಎಂದು ಹೇಳಿ ಕೆಲಸಕ್ಕೆ ಸೇರಿಕೊಳ್ಳಲು ಹೇಳಿದರಂತೆ. ಅವರ ಮಾತು ಸುಳ್ಳಾಗಲಿಲ್ಲ. ಇದು ಒಂದು ಪ್ರಸಂಗವನ್ನು ನನಗೆ ನೆನಪಿಸಿತು. ನಾನು ಎಂಎ ಪದವಿಯನ್ನು ಪ್ರಥಮ ರ್ಯಾಂಕಿನೊಂದಿಗೆ ತೇರ್ಗಡೆಯಾದರೂ, ಪಕ್ಷಪಾತದ ದ್ರೋಹದಿಂದ ನನಗೆ ಕೆಲಸ ಸಿಗಲಿಲ್ಲ. ಆಗ ಪ್ರತಿಷ್ಠಿತ ಪತ್ರಿಕೆಯೊಂದರ ಸಂಪಾದಕರು ನನ್ನ ಪಾಡು ತಿಳಿದು ಕರೆಸಿ, ಹೀಗೆಯೇ ಒಂದು ಇಂಗ್ಲೀಷ್ ಬರಹ ಕೊಟ್ಟು ಕನ್ನಡಕ್ಕೆ ಅನುವಾದಿಸಲು ಹೇಳಿದರು. ನನ್ನ ಅನುವಾದವನ್ನು ಗಮನಿಸಿ ಮೆಚ್ಚಿದ ಅವರು ಅಲ್ಲಿಯೇ ಸಂದರ್ಶನ ಮಾಡಿ ತಕ್ಷಣವೇ ಕೆಲಸದ ಆದೇಶ ನೀಡಿ ಮರುದಿನವೇ ಕೆಲಸಕ್ಕೆ ಬರಲು ಸೂಚಿಸಿದರು. ಆಗ ನನಗೆ ಪರಿಚಿತರಾಗಿದ್ದ ಹಿರಿಯ ಪತ್ರಕರ್ತರೊಬ್ಬರು ‘ನೀನು ಪತ್ರಕರ್ತನಾದರೆ ನಿನ್ನ ಸೃಜನಶೀಲತೆ ನಾಶವಾಗಿಬಿಡುತ್ತದೆ, ಯೋಚಿಸು’ ಎಂದು ಹೇಳಿದರು. ನಾನು ಆ ಕೆಲಸಕ್ಕೆ ಸೇರಲಿಲ್ಲ. ಇದು ಪತ್ರಿಕಾರಂಗ ಹಾಗೂ ಸೃಜನಶೀಲತೆಯ ಸಂಬಂಧದ ವ್ಯಾಖ್ಯಾನವೂ ಹೌದು. ಪತ್ರಿಕೆಯೆಂದರೆ ಕೇವಲ ವರದಿಯೇ? ಸೃಜನಶೀಲತೆಗೆ ಅಲ್ಲಿ ಅವಕಾಶವಿಲ್ಲವೇ? ಪತ್ರಿಕಾರಂಗ ಸೃಜನಶೀಲತೆಯನ್ನು ಕೊಲ್ಲುತ್ತದೆಯೇ? ಚಿಂತಿಸಬೇಕಾದ ಸಂಗತಿ. ಆದರೆ ಜಾಗತಿಕ ನೆಲೆಯಲ್ಲಿ ಇದಕ್ಕೆ ವಿರುದ್ಧವಾದ ರೀತಿಯ ದೃಷ್ಟಾಂತಗಳಿವೆ.

ಎಪ್ಪತ್ತರ ದಶಕ ಭಾರತೀಯ ಬದುಕಿನಲ್ಲಿ ಒಂದು ಮಹತ್ವದ ಘಟ್ಟ. ಅನೇಕ ರೀತಿಯ ಬದಲಾವಣೆಗಳು ಆಗ ಸಂಭವಿಸಿದವು. ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಅನೇಕ ಬಗೆಯ ಪಲ್ಲಟಗಳನ್ನು ಕಂಡ ಕಾಲವದು. ಸರ್ವಾಧಿಕಾರಿ ಶಕ್ತಿ ವಿಜೃಂಭಿಸಿದಾಗ ಪ್ರಜಾಶಕ್ತಿ ಜಾಗೃತಗೊಂಡು ಅದನ್ನು ಎದುರಿಸಿದ ಸಂದರ್ಭ. ರಾಜಶೇಖರ ಕೋಟಿಯವರ ಬದುಕಿನಲ್ಲೂ ಇದು ಸಂಕ್ರಮಣ ಕಾಲ.

ಆ ಕಾಲದಲ್ಲಿ ಸಮಾಜವಾದಿ ಚಳವಳಿ ಪ್ರಖರವಾಗಿತ್ತು. ಎಪ್ಪತ್ತರ ವೇಳೆಗೆ ಕೋಟಿ ‘ಸಮಾಜವಾದಿ ಯುವಜನ ಸಭಾ’ದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ತಮ್ಮ ಸಾಮಾಜಿಕ ಚಿಂತನೆ ಹಾಗೂ ಹೋರಾಟಕ್ಕೆ ಪೂರಕವಾಗಿ 1972 ರ ವೇಳೆಗೆ ತಮ್ಮದೇ ಪತ್ರಿಕೆ ‘ಆಂದೋಲನ’ ಆರಂಭಿಸಿದರು. ಇದು ಆರಂಭವಾದಾಗ ವಾರಪತ್ರಿಕೆಯಾಗಿದ್ದು, ‘ಯುವಜನರಿಗಾಗಿ’ ಎಂಬ ಶೀರ್ಷಿಕೆಯೊಂದಿಗೆ ಪ್ರಕಟವಾಗುತ್ತಿತ್ತು. ಸಮಾಜದಲ್ಲಿ ಯಾವುದೇ ಬದಲಾವಣೆ ಸಂಭವಿಸಬೇಕಾದರೆ ಅದು ಯುವಕರಿಂದ ಎಂಬ ನಿಲುವಿನ ಬಗ್ಗೆ ಅವರಿಗೆ ಕಡೆಯವರೆಗೂ ಶ್ರದ್ಧೆಯಿತ್ತು. ಕೆಲ ಸಮಯದ ನಂತರ ತೇಜಸ್ವಿ ಪತ್ರಿಕೆಯ ಜೊತೆಗೆ ಮೈಸೂರಿಗೆ ಬರಲು ಸೂಚಿಸಿದರು. ಅವರ ಸಲಹೆಯನ್ನು ಗಂಭೀರವಾಗಿ ಸ್ವೀಕರಿಸಿದ ರಾಜಶೇಖರ ಕೋಟಿ ತಮ್ಮ ಬಿಡಾರವನ್ನು ಧಾರವಾಡದಿಂದ ಮೈಸೂರಿಗೆ ಬದಲಾಯಿಸಲು ನಿರ್ಧರಿಸಿದರು. ಆಗ ಮನೆಯವರಿಂದ ಪ್ರತಿರೋಧ ಬಂದಿತು. ಸಿರಿವಂತ ಮನೆತನ. ನೆಮ್ಮದಿಯಾಗಿ ಬದುಕು ಸಾಗಿಸಬಹುದಾದ ಅವಕಾಶ. ಆ ಎಲ್ಲವನ್ನೂ ಧಿಕ್ಕರಿಸಿ ಹೋರಾಟದ ಹುಚ್ಚು ಹತ್ತಿಸಿಕೊಂಡಿದ್ದ ಕೋಟಿ ಒಂದೆರಡು ಬಟ್ಟೆಗಳನ್ನು ಬಗಲುಚೀಲದಲ್ಲಿ ಹಾಕಿಕೊಂಡು ಮೈಸೂರಿನತ್ತ ಹೊರಟರು. ಮುಂದಿನ ಅವರ ಬದುಕು ಹೋರಾಟದ ಪಯಣ. ಬಗಲಿನಲ್ಲಿ ಕಟ್ಟಿಕೊಂಡು ಬಂದ ‘ಆಂದೋಲನ’ವನ್ನು ಮಡಿಲಿನಲ್ಲಿ ಹಾಕಿಕೊಂಡು ಕಡೆಯುಸಿರಿನ ತನಕ ಸಲಹಿದರು. ಬರಿಗೈಯಲ್ಲಿ ಬಂದ ಕೋಟಿಗೆ ಮೈಸೂರಿನಲ್ಲಿ ಆಗ ನೆರವಿಗೆ ನಿಂತವರು ತೇಜಸ್ವಿ, ರಾಮದಾಸ್, ಕಡಿದಾಳು ಶಾಮಣ್ಣ, ನೆಲಮನೆ ದೇವೇಗೌಡ, ದೇವನೂರ ಮಹಾದೇವ ಮೊದಲಾದವರು. ಸಮಾಜವಾದಿ ಚಿಂತನೆಯ ಬಳಗದ ಆಸರೆ ಪಡೆದ ‘ಆಂದೋಲನ’ ಜಯಪ್ರಕಾಶ ನಾರಾಯಣರ ಚಳುವಳಿಗೆ ಪೂರಕವಾಗಿತ್ತು. ಒಂದು ರೀತಿ ಅದರ ಮುಖವಾಣಿಯಾಗಿತ್ತು. ಇದರಿಂದಾಗಿ ಸಹಜವಾಗಿಯೇ ತುರ್ತಪರಿಸ್ಥಿತಿ ಸಂದರ್ಭದಲ್ಲಿ ಪತ್ರಿಕೆ ಸಮಸ್ಯೆ ಎದುರಿಸಿತು. ಕೆಲಕಾಲ ಪತ್ರಿಕೆ ನಿಲ್ಲಿಸಬೇಕಾಯಿತು. ಆದರೆ ಹೋರಾಟವೇ ಉಸಿರಾಗಿದ್ದ ಪತ್ರಿಕೆ ಮತ್ತೆ ಜೀವ ತಳೆದು ನಿರಂತರ ನಾಲ್ಕು ದಶಕಗಳಿಂದ ಪ್ರಾದೇಶಿಕ ಪತ್ರಿಕೆಗಳಿಗೆ ಮಾದರಿಯೆಂಬಂತೆ ಪ್ರಕಟವಾಗುತ್ತಿದೆ.

‘ಆಂದೋಲನ’ ಪತ್ರಿಕೆಯ ಸಾಧನೆಯನ್ನು ನಾಲ್ಕು ನೆಲೆಗಳಲ್ಲಿ ಗುರ್ತಿಸಬಹುದು: ಮೊದಲನೆಯದು ಓದುವ ಅಭಿರುಚಿಯನ್ನು ರೂಪಿಸಿದ್ದು. ಮೈಸೂರು ಭಾಗದ ಮನೆಮನೆಗೂ ಪತ್ರಿಕೆಯನ್ನು ತಲುಪಿಸುವ ಪ್ರಯತ್ನವನ್ನು ಕೋಟಿ ಮಾಡಿದ್ದರು. ಅದರಲ್ಲಿ ಯಶಸ್ವಿಯೂ ಆಗಿದ್ದರು. ‘ಆಂದೋಲನ’ ಆ ಭಾಗದ ಜನರ ಬದುಕಿನ ಒಂದು ಭಾಗವೆಂಬಂತೆ ಸಮುದಾಯ ಅದನ್ನು ಸ್ವೀಕರಿಸಿತ್ತು. ಅನೇಕರು ರಾಜ್ಯಮಟ್ಟದ ಪತ್ರಿಯೊಂದನ್ನು ಇದರ ಜೊತೆಗೆ ತರಿಸುತ್ತಿದ್ದರೆ ಹೊರತು ಇದರ ಹೊರತಾಗಿಯಲ್ಲ. ಎರಡನೆಯದು ಆ ಭಾಗದ ಜನರ ಸಂಕಟ, ಸಮಸ್ಯೆಗಳಿಗೆ ದನಿಯಾದದ್ದು. ಯಾವುದೇ ಪತ್ರಿಕೆಯ ಜೀವನಾಡಿ ಜನಪರ ಕಾಳಜಿ. ಆದರೆ, ಪತ್ರಿಕೆೆಗಳು ಉದ್ಯಮದ ರೂಪ ತಾಳಿರುವುದರಿಂದ ಅನೇಕ ವೇಳೆ ತಮ್ಮ ಉಳಿವಿಗಾಗಿ ವ್ಯವಸ್ಥೆಯ ಪರ ನಿಲ್ಲುತ್ತವೆ. ಕೋಟಿ ತಮ್ಮ ಸಮಾಜವಾದಿ ಚಿಂತನೆಯ ಹೋರಾಟದ ಹಿನ್ನೆಲೆಯಿಂದಾಗಿ ಈ ವಿಚಾರದಲ್ಲಿ ಸದಾ ಎಚ್ಚರದಿಂದಿದ್ದರು. ಅವರಿಗೆ ಪತ್ರಿಕೆ ಉದ್ಯಮವಾಗಿರಲಿಲ್ಲ, ಜೀವನ ಧರ್ಮವಾಗಿತ್ತು. ಮೂರನೆಯದು- ಸಾಮಾಜಿಕ ಚಟುವಟಿಕೆಗಳಲ್ಲಿ ‘ಆಂದೋಲನ’ ತನ್ನನ್ನು ತೊಡಗಿಸಿಕೊಂಡಿತ್ತು. ಕಾರ್ಗಿಲ್ ಯುದ್ಧದ ಸಂದರ್ಭವಾಗಿರಬಹುದು, ಗುಜರಾತಿನ ಭೂಕಂಪದ ಹೊತ್ತಿನಲ್ಲಿರಬಹುದು, ಸುನಾಮಿ ಅಪ್ಪಳಿಸಿದಾಗ, ನೆರೆಯ ಹಾವಳಿಯುಂಟಾದಾಗ – ಹೀಗೆ ಯಾವ ಬಗೆಯ ಆಪತ್ತು ಒದಗಿದಾಗಲೂ ಪತ್ರಿಕೆ ಜನರಿಂದ ಹಣ ಸಂಗ್ರಹಿಸಿ ಸಂತ್ರಸ್ತರ ನೆರವಿಗೆ ನಿಲ್ಲುತ್ತಿತ್ತು. ಅನೇಕ ಸರ್ಕಾರಿ ಶಾಲೆಗಳಿಗೆ ಒತ್ತಾಸೆಯಾಗಿತ್ತು. ಪ್ರಯಾಣಿಕರಿಗೆ ತಂಗುದಾಣಗಳನ್ನು ನಿರ್ಮಿಸುವ ಮೂಲಕ ಜನಸಮುದಾಯದೊಡನೆ ಸಂಬಂಧ ಸೃಷ್ಟಿಸಿಕೊಳ್ಳಲು ಪ್ರಯತ್ನಿಸಿತ್ತು. ಗ್ರಾಮೀಣ ಭಾಗದಲ್ಲಿ ಕ್ರೀಡೆಗಳನ್ನು ಪೋ›ತ್ಸಾಹಿಸುವ ಯೋಜನೆಗಳನ್ನು ರೂಪಿಸಿತ್ತು. ಹೀಗೆ ಅನೇಕ ಸ್ತರಗಳಲ್ಲಿ ಸಾಮಾನ್ಯ ಜನರ ಬದುಕು ಹಸನಾಗಲು ಸಮಾಜ ಹೇಗೆ ಸ್ಪಂದಿಸಬಹುದು ಎಂಬುದಕ್ಕೆ ಮಾದರಿ ಒದಗಿಸುತ್ತಿತ್ತು. ನಾವೇ ಎಲ್ಲವನ್ನೂ ಮಾಡುತ್ತೇವೆನ್ನುವುದು ಭ್ರಮೆ. ಹೀಗೆ ಮಾಡಬಹುದು ಎಂದು ತಾನು ಮಾಡಿ ಮಾದರಿ ಒದಗಿಸುವುದು ಸಮಾಜಮುಖಿ ಚಿಂತನೆಯ ಮೂರ್ತವಾಸ್ತವ. ರಾಜಶೇಖರ ಕೋಟಿ ಹೀಗೆ ಕೆಲವು ಮಾದರಿ ಒದಗಿಸುವ ಪ್ರಯತ್ನ ಮಾಡುತ್ತಿದ್ದರು.

ನಾಲ್ಕನೆಯದು- ‘ಆಂದೋಲನ’ ಅನೇಕ ಯುವ ಪತ್ರಕರ್ತರಿಗೆ ಕಮ್ಮಟಶಾಲೆಯಾಗಿತ್ತು. ಕೋಟಿಯವರ ಒಡನಾಟವೇ ಪತ್ರಿಕಾ ರಂಗಕ್ಕೆ ಪ್ರವೇಶ ಬಯಸುವವರಿಗೆ ಅನೇಕ ಪಾಠಗಳನ್ನು ಕಲಿಸುತ್ತಿತ್ತು. ಕೋಟಿ ತಮ್ಮ ಇಡೀ ಬದುಕನ್ನು ಈ ಕ್ಷೇತ್ರಕ್ಕಾಗಿ ಮುಡಿಪಿಟ್ಟವರು. ಪತ್ರಿಕೆಯಲ್ಲಿ ಸಹಾಯಕನಾಗಿ ಸೇರಿದ ಕೋಟಿ, ಅನೇಕ ಮಜಲುಗಳನ್ನು ದಾಟಿ- ಕಚೇರಿ ಸಹಾಯಕನಾಗಿ, ಅಚ್ಚುಮೊಳೆ ಜೋಡಿಸಿ, ವರದಿಗಾರನಾಗಿ, ಬೀದಿಬದಿಯಲ್ಲಿ ನಿಂತು ಪತ್ರಿಕೆ ಮಾರಾಟ ಮಾಡಿ, ಹೋರಾಟದ ಮಾಧ್ಯಮವನ್ನಾಗಿ ಪತ್ರಿಕೆ ರೂಪಿಸಿ ತಮ್ಮ ಪರಿಶ್ರಮದ ಫಲವಾಗಿ ಸಂಪಾದಕನಾಗಿ ತಮ್ಮದೇ ಪತ್ರಿಕೆ ಸ್ಥಾಪಿಸಿ ನಾನಾ ರೀತಿಯ ಸವಾಲುಗಳನ್ನು ಎದುರಿಸಿ ನಿಂತು ಪತ್ರಿಕೆಯನ್ನು ನಿರಂತರವಾಗಿ ನಡೆಸಿಕೊಂಡು ಬಂದವರು. ಹೀಗಾಗಿ ಪತ್ರಿಕೆಯ ಶಕ್ತಿ ಮಿತಿಗಳನ್ನು, ಸಮಸ್ಯೆ, ಸಾಧ್ಯತೆ, ಸವಾಲುಗಳನ್ನು ಅವರು ಅನುಭವದಿಂದಲೇ ಕಂಡುಕೊಂಡವರು. ಸುದೀರ್ಘ ಅನುಭವವೇ ಅವರ ಬಂಡವಾಳವಾಗಿತ್ತು. ಅತ್ಯುತ್ತಮ ಜಿಲ್ಲಾ ಮಟ್ಟದ ಪತ್ರಿಕೆಗೆ ಮಾಧ್ಯಮ ಅಕಾಡೆಮಿಯ ಮೂಲಕ ಪ್ರಶಸ್ತಿಯೊಂದನ್ನೂ ಅವರು ಸ್ಥಾಪಿಸಿದ್ದಾರೆ.

ನಮ್ಮಲ್ಲಿ ಅನೇಕ ಪ್ರತಿಭಾವಂತ ಪತ್ರಕರ್ತರಿದ್ದಾರೆ. ಅಂಥವರ ದೀರ್ಘ ಪರಂಪರೆಯೇ ನಮ್ಮಲ್ಲಿದೆ. ಆದರೆ ಸ್ಥಳೀಯ ಪತ್ರಿಕೆಯೊಂದನ್ನು ನಾಲ್ಕು ದಶಕಗಳ ಕಾಲ ಸಮರ್ಥವಾಗಿ ನಡೆಸಿಕೊಂಡು ಬಂದು, ಗ್ರಾಮೀಣ ಜನರ ದನಿಯಾಗಲು ಪ್ರಯತ್ನಿಸಿದ್ದು ಕೋಟಿಯವರ ವಿಶಿಷ್ಟತೆ. ಪತ್ರಿಕೆಯನ್ನೇ ಜೀವನ ಧರ್ಮವಾಗಿಸಿಕೊಂಡಿದ್ದ ಕೋಟಿಯವರಿಗೆ ಗೌರವದ ಶ್ರದ್ಧಾಂಜಲಿ.

(ಲೇಖಕರು ಖ್ಯಾತ ವಿಮರ್ಶಕರು)

Leave a Reply

Your email address will not be published. Required fields are marked *

Back To Top