ಪತ್ರಕರ್ತ ರಾಜಶೇಖರ ಕೋಟಿ ನಿಧನ

ಮೈಸೂರು: ಹಿರಿಯ ಪತ್ರಕರ್ತ, ಆಂದೋಲನ ದಿನಪತ್ರಿಕೆ ಸಂಪಾದಕ ರಾಜಶೇಖರ ಕೋಟಿ (71) ಗುರುವಾರ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಕೆಲಸದ ನಿಮಿತ್ತ ಬುಧವಾರ ಬೆಂಗಳೂರಿಗೆ ತೆರಳಿ ಹೋಟೆಲ್​ನಲ್ಲಿ ತಂಗಿದ್ದ ಅವರಿಗೆ ಮಧ್ಯರಾತ್ರಿ ಎದೆ ನೋವು ಕಾಣಿಸಿಕೊಂಡಾಗ ಚಿಕಿತ್ಸೆ ಪಡೆದಿದ್ದರು. ಆದರೆ, ಬೆಳಗಿನ ಜಾವ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದರು.

ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಸಂಜೆ ಬಳಿಕ ಆಂದೋಲನ ಕಚೇರಿ ಎದುರು ಸರ್ಕಾರಿ ಗೌರವ ಸಲ್ಲಿಸಲಾಯಿತು. ನಂತರ ಚಾಮುಂಡಿಬೆಟ್ಟದ ತಪ್ಪಲಿನ ಅನಿಲ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಮೃತರಿಗೆ ಪತ್ನಿ ನಿರ್ಮಲಾ ಕೋಟಿ, ಪುತ್ರ ರವಿ ಕೋಟಿ, ಪುತ್ರಿಯರಾದ ರಶ್ಮಿ ಕೌಜಲಗಿ, ರಮ್ಯಾ ಕೋಟಿ ಇದ್ದಾರೆ.

ಸಚಿವ ಡಾ.ಎಚ್.ಸಿ. ಮಹದೇವಪ್ಪ, ಜಿಲ್ಲಾಧಿಕಾರಿ ಡಿ.ರಂದೀಪ್, ಸುತ್ತೂರುಶ್ರೀ, ನಟರಾಜ ಮಠದ ಚಿದಾನಂದ ಸ್ವಾಮೀಜಿ, 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ, ಕಸಾಪ ಅಧ್ಯಕ್ಷ ಮನು ಬಳಿಗಾರ್ ಸೇರಿ ಹಲವು ರಾಜಕೀಯ ಮುಖಂಡರು, ಅಭಿಮಾನಿಗಳು, ಪತ್ರಕರ್ತರು ಅಂತಿಮ ದರ್ಶನ ಪಡೆದರು. ರಾಜ್ಯದಲ್ಲಿನ ಸಣ್ಣ ಪತ್ರಿಕೆಗಳಿಗೆ ಮಾದರಿಯಾಗಿ ನಾಲ್ಕು ಜಿಲ್ಲೆಗಳಲ್ಲಿ ಆಂದೋಲನವನ್ನು ಬೆಳೆಸಿದ್ದ ಅವರಿಗೆ ರಾಜ್ಯ ಪತ್ರಿಕಾ ಅಕಾಡೆಮಿ, ಟಿಆರ್​ಎಸ್ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿಗಳು ಲಭಿಸಿದ್ದವು.

 

ನನ್ನ ಹುಟ್ಟೂರು ಗದಗದಿಂದ ಬಂದ ರಾಜಶೇಖರ ಕೋಟಿ ನನಗೆ ಮಾರ್ಗದರ್ಶಕರಾಗಿದ್ದರು. ನಾನು ಪತ್ರಿಕೆ ಆರಂಭಿಸುವ ಸಂದರ್ಭದಲ್ಲಿ ಉಪಯುಕ್ತ ಸಲಹೆ ನೀಡಿದ್ದರು. ಅವರ ನಿಧನ ಕನ್ನಡ ನಾಡಿನ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ.

| ಡಾ. ವಿಜಯ ಸಂಕೇಶ್ವರ, ಚೇರ್ಮನ್, ವಿಆರ್​ಎಲ್ ಸಮೂಹ ಸಂಸ್ಥೆಗಳು

 

Leave a Reply

Your email address will not be published. Required fields are marked *