ಪತಿಯನ್ನು ಕೊಲೆಗೈದ ಪತ್ನಿ ಬಂಧನ

ಕೋಲಾರ: ಷಾಹಿನ್​ಷಾ ನಗರದಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿದ ಪ್ರಕರಣ ಭೇದಿಸಿದ ನಗರಠಾಣೆ ಪೊಲೀಸರು 18 ದಿನಗಳಲ್ಲಿ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.

ಕೋಲಾರದಲ್ಲಿ ವಾಸವಿದ್ದ ಶಬಾನಾ (25) ಮತ್ತು ಆಕೆಯ ಪ್ರಿಯಕರ ಸಮೀರ್ (32) ಬಂಧಿತರು. ಪ್ರೀತಿಗೆ ಅಡ್ಡಿಯಾಗಿದ್ದ ಪತಿ ಸಾಜೀದ್​ನನ್ನು (30) ಪ್ರಿಯಕರನ ಜತೆ ಸೇರಿ ಡಿ. 28ರಂದು ಶಬಾನಾ ಕೊಲೆ ಮಾಡಿದ್ದಾರೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಈ ಮೂವರೂ ಉತ್ತರಪ್ರದೇಶದವರು.

ಶಬಾನಾ ಮತ್ತು ಸಮೀರ್ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಮನೆಯಲ್ಲಿ ಪ್ರೀತಿಗೆ ಒಪ್ಪಿಗೆ ಸೂಚಿಸದೆ ಆಕೆಯನ್ನು ಸಾಜೀದ್​ಗೆ ಮದುವೆ ಮಾಡಿಕೊಡಲಾಗಿತ್ತು. ಉತ್ತರ ಪ್ರದೇಶದಿಂದ ಕರ್ನಾಟಕಕ್ಕೆ ಪತ್ನಿಯೊಂದಿಗೆ ಬಂದ ಸಾಜೀದ್ 4 ವರ್ಷಗಳಿಂದ ಕೋಲಾರದಲ್ಲಿ ಅಂಗಡಿ ಇಟ್ಟುಕೊಂಡಿದ್ದ.

ಪ್ರಿಯಕರನೊಂದಿಗೆ ಶಬಾನಾ ಸಂಬಂಧ ಮುಂದುವರಿಸಿದ್ದನ್ನು ತಿಳಿದ ಪತಿ ಸಾಜೀದ್ ಹಲವು ಬಾರಿ ಎಚ್ಚರಿಕೆ ನೀಡಿದ್ದ. ಇದೇ ವಿಚಾರವಾಗಿ ಆಗಾಗ ಗಲಾಟೆ ನಡೆಯುತ್ತಿತ್ತು. ಡಿ. 28ರಂದು ಸಾಜೀದ್ ಕೊಲೆಯಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಕೆಲ ದಿನಗಳ ಹಿಂದೆ ಪತಿಯನ್ನು ಯಾರೋ ಕರೆದುಕೊಂಡು ಹೋಗಿದ್ದರು, ಈಗ ಕೊಲೆಯಾಗಿದ್ದಾರೆಂದು ಪತ್ನಿ ಶಬಾನಾ ದೂರು ನೀಡಿದ್ದರು.

ನಗರಠಾಣೆ ವೃತ್ತ ನಿರೀಕ್ಷಕ ಫಾರುಖ್​ಪಾಷಾ ಶಬಾನಾಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದರಿಂದ ಪತಿಯನ್ನು ಸಮೀರ್​ನೊಂದಿಗೆ ಸೇರಿ ಉಸಿರುಗಟ್ಟಿಸಿ ಕೊಲೆಮಾಡಿ ರಸ್ತೆಗೆ ತಂದು ಹಾಕಿದ್ದಾಗಿ ಒಪ್ಪಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ನಗರಠಾಣೆ ಪಿಎಸ್​ಐ ಅಣ್ಣಯ್ಯ, ಸಿಬ್ಬಂದಿ ಹಮೀದ್​ಖಾನ್, ಜಿ.ವಿ.ರಾಘವೇಂದ್ರ, ಕೆ.ಎ.ನರೇಂದ್ರ, ಎ.ರಮೇಶ್, ಆಂಜನಪ್ಪ, ಗುರುಪ್ರಸಾದ್ ಮತ್ತು ಆರತಿ ಇದ್ದರು.