‘ಪತಂಜಲಿ ಪರಿಧಾನ’ ಲೋಕಾರ್ಪಣೆ ನಾಳೆ

ಹುಬ್ಬಳ್ಳಿ: ಗೋಕುಲ ರಸ್ತೆಯ ಅರ್ಬನ್ ಓಯಾಸಿಸ್ ಮಾಲ್​ನಲ್ಲಿ ‘ಪತಂಜಲಿ ಪರಿಧಾನ’ ಲೋಕಾರ್ಪಣೆ ಕಾರ್ಯಕ್ರಮ ಏ. 1ರಂದು ಬೆಳಗ್ಗೆ 11ಕ್ಕೆ ನಡೆಯಲಿದ್ದು, ಯೋಗ ಗುರು ಬಾಬಾ ರಾಮದೇವ ಅವರು ಸಾನ್ನಿಧ್ಯ ವಹಿಸುವರು ಎಂದು ಪತಂಜಲಿ ಯೋಗ ಸಮಿತಿ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದರು.

ಪತಂಜಲಿ ಉತ್ಪನ್ನಗಳು ಸ್ವದೇಶಿ ಸ್ವಾಭಿಮಾನವನ್ನು ಹೆಚ್ಚಿಸುವಂತೆ ಮಾಡಿವೆ. ಇವುಗಳ ಸಾಲಿಗೆ ಈಗ ಪತಂಜಲಿ ಪರಿಧಾನ ಸೇರುತ್ತಿದೆ. ದಕ್ಷಿಣ ಭಾರತ ಹಾಗೂ ಕರ್ನಾಟಕದ ಮೊಟ್ಟ ಮೊದಲ ವಿನೂತನ ಮಳಿಗೆ ಇದಾಗಿದೆ. ಇಲ್ಲಿ ಮಕ್ಕಳಿಂದ ಹಿರಿಯರವರೆಗೆ ಬಟ್ಟೆಗಳು ಸಿಗಲಿವೆ. ಲಂಗೋಟಿಯಿಂದ ಕೋಟ್ ಸೇರಿ ಇತರೆ ಸಮವಸ್ತ್ರಗಳು ಒಂದೇ ಮಳಿಗೆಯಲ್ಲಿ ದೊರೆಯಲಿವೆ. ವಿವಿಧ ವಿನ್ಯಾಸದ ಮೂರೂವರೆ ಸಾವಿರ ವೈವಿಧ್ಯಮಯ ಉಡುಪುಗಳು ಲಭ್ಯ ಇವೆ. ಮದುವೆ ಸೇರಿ ಯಾವುದೇ ಸಮಾರಂಭಕ್ಕೆ ಇಲ್ಲಿ ಬಟ್ಟೆಗಳು ಲಭಿಸಲಿವೆ ಎಂದರು.

ನಮ್ಮ ಬಟ್ಟೆಯನ್ನೇ ಕಡಿಮೆ ಬೆಲೆಗೆ ತೆಗೆದುಕೊಂಡು ಎಂಎನ್​ಸಿ ಕಂಪನಿಗಳು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದವು. ಪತಂಜಲಿ ಯೋಗ ಸಮಿತಿ ಬಟ್ಟೆ ಖರೀದಿಸಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಶೇ. 50ರವರೆಗೆ ರಿಯಾಯಿತಿ ಸಿಗಲಿದೆ. ಉತ್ತರ ಭಾರತದಲ್ಲಿ 6 ತಿಂಗಳ ಹಿಂದೆ ಶೋ ರೂಮ್ ತೆರೆಯಲಾಗಿದೆ. ಹುಬ್ಬಳ್ಳಿಯಲ್ಲಿ ಪ್ರಥಮ ಮಳಿಗೆ ಇದು ಎಂದು ವಿವರಿಸಿದರು.

ವರ್ತಕ ಶಿವಾನಂದ ಆವಟಿ, ಸೌರಭ ಆವಟಿ, ಸುಪ್ರಿಯಾ ಆವಟಿ, ಪೂಜಾ ಆವಟಿ ಸುದ್ದಿಗೋಷ್ಠಿಯಲ್ಲಿದ್ದರು.

Leave a Reply

Your email address will not be published. Required fields are marked *