ಪಡೆದ ಅಂಕವೇ ಒಂದು, ಪಟ್ಟಿಯಲ್ಲಿ ಮತ್ತೊಂದು!

ಧಾರವಾಡ: ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ವಿದ್ಯಾರ್ಥಿ ಪಡೆದ ಅಂಕ ಒಂದಾದರೆ, ಪಿಯು ಬೋರ್ಡ್ ಅಂಕಪಟ್ಟಿಯಲ್ಲಿ ಅಳವಡಿಸಿರುವ ಅಂಕವೇ ಮತ್ತೊಂದು. ಪಿಯು ಬೋರ್ಡ್​ನ ಈ ಅವಾಂತರದಿಂದ ಕೆಲ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.

ಹಲವು ಅವಾಂತರಗಳಿಗೆ ಹೆಸರಾಗಿರುವ ಪಿಯು ಬೋರ್ಡ್ ಈ ಬಾರಿ ಯಾವುದೇ ಎಡವಟ್ಟಿಗೆ ಆಸ್ಪದ ನೀಡುವುದಿಲ್ಲ ಎಂದು ಹೇಳಿತ್ತು. ಆದರೆ, ಮೌಲ್ಯಮಾಪನ ಸಂದರ್ಭದಲ್ಲಿ ವಿದ್ಯಾರ್ಥಿ ಪಡೆದ ಅಂಕಕ್ಕಿಂತ ಕಡಿಮೆ ಅಂಕವನ್ನು ಅಂಕಪಟ್ಟಿಯಲ್ಲಿ ಸೇರಿಸಿದ್ದು ಮರುಮೌಲ್ಯಮಾಪನದಲ್ಲಿ ಗೊತ್ತಾಗಿದೆ.

ಧಾರವಾಡ ಹಿರೇಮಲ್ಲೂರ ಈಶ್ವರನ್ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕು ಇಟಗಿ ಗ್ರಾಮದ ಶ್ರೀಧರ ಅಂಬಡಗಟ್ಟಿ ಎಂಬಾತನ ಅಂಕಪಟ್ಟಿಯಲ್ಲಿ 21 ಅಂಕ ನಮೂದಾಗಿತ್ತು. ಒಟ್ಟು 463 ಅಂಕಗಳೊಂದಿಗೆ ತೇರ್ಗಡೆ ಹೊಂದಿರುವ ಶ್ರೀಧರ ಜೀವಶಾಸ್ತ್ರ ವಿಷಯದಲ್ಲಿ ಕೇವಲ 21 ಅಂಕ ಬಂದಿದ್ದರಿಂದ ಆತಂಕಕ್ಕೆ ಒಳಗಾಗಿದ್ದ. ಆದರೆ ಆತನಿಗೆ ಧೈರ್ಯ ಹೇಳಿದ್ದ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಪಾಲಕರು ಉತ್ತರ ಪತ್ರಿಕೆಯ ನಕಲು ಪ್ರತಿ ತರಿಸಿದ ಸಂದರ್ಭದಲ್ಲಿ ಅವಾಂತರ ಬೆಳಕಿಗೆ ಬಂದಿದೆ.

ಇದು ಶ್ರೀಧರ ಒಬ್ಬನ ಪರಿಸ್ಥಿತಿ ಮಾತ್ರವಲ್ಲ. ಅನೇಕ ವಿದ್ಯಾರ್ಥಿಗಳು ಈ ಬಾರಿ ಕಂಗಾಲಾಗಿದ್ದಾರೆ. ಇದೇ ಕಾಲೇಜಿನ ಇನ್ನೂ ಇಬ್ಬರು ಸರಿಯಾದ ಉತ್ತರ ಬರೆದಿದ್ದರೂ ಮೌಲ್ಯಮಾಪನ ಮಾಡಿದವರು ಅಂಕ ನೀಡದೆ ಉತ್ತರ ತಪ್ಪಾಗಿದೆ ಎಂದು ನಮೂದು ಮಾಡಿದ್ದಾರೆ.

ಹೀಗೆ ಶಿಕ್ಷಕರ ಹಾಗೂ ಅಂಕಪಟ್ಟಿ ಸಿದ್ಧಪಡಿಸುವ ಅಧಿಕಾರಿಗಳಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ. ಕೆಲ ವಿದ್ಯಾರ್ಥಿಗಳು ಕಡಿಮೆ ಅಂಕ ಬಂದಿದ್ದಕ್ಕೆ ಪಾಲಕರು ಬೈಯುತ್ತಾರೆ ಎಂದು ಹೆದರಿ ದುಡುಕಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಮೌಲ್ಯಮಾಪನ ನಡೆಸುವ ಶಿಕ್ಷಕರು ಹಾಗೂ ಬೋರ್ಡ್ ಅಧಿಕಾರಿಗಳು ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸಬೇಕು. ಇಲ್ಲವಾದಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕಾದ ವಿದ್ಯಾರ್ಥಿಗಳು ಅನಾಹುತ ಮಾಡಿಕೊಳ್ಳುವ ಅಪಾಯ ಇದೆ ಎನ್ನುತ್ತಾರೆ ಸ್ಥಳೀಯ ಪ್ರಾಧ್ಯಾಪಕರು.

ವಿದ್ಯಾರ್ಥಿಗಳ ವಿಷಯದಲ್ಲಿ ಮೌಲ್ಯಮಾಪಕರು ಹಾಗೂ ಅಂಕಪಟ್ಟಿ ಭರ್ತಿ ಮಾಡಿ ಅಂತಿಮಗೊಳಿಸುವ ಸಿಬ್ಬಂದಿ ಅತ್ಯಂತ ಜಾಗರೂಕರಾಗಿರಬೇಕು. ಸೂಕ್ಷ್ಮ ಸ್ವಭಾವ ಹೊಂದಿರುವ ವಿದ್ಯಾರ್ಥಿಗಳು ಕಡಿಮೆ ಅಂಕ ಬಂತೆಂದು ದುಡುಕಿನ ನಿರ್ಧಾರ ತೆಗೆದುಕೊಳ್ಳುವ ಅಪಾಯ ಇದ್ದೇ ಇದೆ. ಹೀಗಾಗಿ ಪ್ರತಿ ಹಂತದಲ್ಲೂ ಎಚ್ಚರ ವಹಿಸಬೇಕು.
ಶಶಿಧರ ತೋಡಕರ್, ಹಿರೇಮಲ್ಲೂರ ಕಾಲೇಜು ಪ್ರಾಚಾರ್ಯ

ಪದವಿ ಪ್ರಶ್ನೆ ಪತ್ರಿಕೆಯಲ್ಲಿ ಎಡವಟ್ಟು

ಅಣ್ಣಿಗೇರಿ: ಕರ್ನಾಟಕ ವಿಶ್ವ ವಿದ್ಯಾಲಯದ ಬಿಎಸ್ಸಿ ಪ್ರಥಮ ವರ್ಷದ ದ್ವಿತೀಯ ಸೆಮಿಸ್ಟರ್ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ 10 ಅಂಕದ ಪ್ರಶ್ನೆಯನ್ನೇ ತಪ್ಪಾಗಿ ಕೊಟ್ಟಿದ್ದರಿಂದ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ.

ಗುರುವಾರ ನಡೆದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯ ಟಿಪ್ಪಣಿ ಬರೆಯಿರಿ ಎಂಬುದರಲ್ಲಿ ‘ಚಿರಾಸ್ತಿ ಕಥೆಯ ಮಲ್ಲು’ ಎಂಬ ಪ್ರಶ್ನೆ ಕೇಳಲಾಗಿದೆ. ಆದರೆ, ಚಿರಾಸ್ತಿ ಎಂಬುದು ಒಂದು ಪಾಠವಾದರೆ, ಮಲ್ಲು ಎಂಬುದು ಮತ್ತೊಂದು ಪಾಠದಲ್ಲಿ ಬರುವ ಪಾತ್ರವಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಉತ್ತರ ಬರೆಯಲು ಸಾಧ್ಯವಾಗಿಲ್ಲ.

ಇದೇ ರೀತಿ ಬಿಎ ಪದವಿ 6ನೇ ಸೆಮಿಸ್ಟರ್​ನ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಅಕ್ಷರ ದೋಷಗಳು ವಿದ್ಯಾರ್ಥಿಗಳನ್ನು ವಿಚಲಿತರನ್ನಾಗಿ ಮಾಡಿದೆ. ವೀರರ್ರಾಶಿ (ವೀರರಾಣಿ), ಲಾರ್ವಶಿ(ಲಾವಣಿ), ಎಸ್ಕಿ(ಎನ್ಕೆ) ಎಂದು ತಪ್ಪಾಗಿ ಮುದ್ರಿತವಾಗಿವೆ. ಕನ್ನಡ ಪದಗಳನ್ನು ತಪ್ಪಾಗಿ ಮುದ್ರಿಸಿ ಮತ್ತೇ ಸಾರ್ವಜನಿಕ ಟೀಕೆಗಳಿಗೆ ಕವಿವಿ ಗುರಿಯಾಗಿದೆ. ಅಲ್ಲದೆ, ತಪ್ಪಾದ ಪ್ರಶ್ನೆಗೆ ಕೃಪಾಂಕ ನೀಡಬೇಕು ಎಂದು ಆಗ್ರಹಿಸಿದ್ದಾರೆ.