ಚೀಟಿಯಲ್ಲಿನ ಸಮಸ್ಯೆ, ಗೊಂದಲಕ್ಕೆ ಕಾರ್ಡ್ದಾರರಿಗೆ ಸಂಕಷ್ಟ, ಸರ್ವರ ಸಮಸ್ಯೆಗೆ ಹೈರಾಣ
ಮಂಜುನಾಥರಾಜ್ ಅರಸ್ ಚಿಕ್ಕನಾಯಕನಹಳ್ಳಿ
ಅರ್ಹರ ಬಿಪಿಎಲ್ ಪಡಿತರ ಕಾರ್ಡ್ಗಳೇ ರದ್ದಾಗುತ್ತಿದ್ದರೆ ಮತ್ತೊಂದೆಡೆ ಪಡಿತರ ಚೀಟಿಯಲ್ಲಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಆಹಾರ ಪದಾರ್ಥ ಪಡೆಯಲು ಕಾರ್ಡ್ದಾರರು ಪರಿತಪಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಪದೇಪದೆ ಸರ್ವರ್ ಸಮಸ್ಯೆ, 1 ಲಕ್ಷಕ್ಕೂ ಅಧಿಕ ಆದಾಯ ಇದೆ ಅಥವಾ ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು ಬಿಪಿಎಲ್ ಕಾರ್ಡ್ ಹೊಂದಿ ದ್ದಾರೆ ಎಂಬ ಕಾರಣಕ್ಕೆ ಆಹಾರ ಇಲಾಖೆ ಯಿಂದ ಅರ್ಹರ ಬಿಪಿಎಲ್ ಪಡಿತರ ಚೀಟಿ ರದ್ದಾಗಿರುವ ಸಮಸ್ಯೆ ನಡುವೆ ಈಗ ತಾಲೂಕಿನಲ್ಲಿ ಪಡಿತರದಾರರು ಮರಣ ಹೊಂದಿದವರ ಹೆಸರು ಕೈಬಿಟ್ಟು ಹೊಸಬರ ಸೇರ್ಪಡೆ ಮಾಡಲೂ ಸಾಧ್ಯವಾಗದೆ ಗ್ರಾಮಒನ್, ಸೈಬರ್ ಸೆಂಟರ್ಗಳ ಬಳಿ ಅಲೆದಾಡುವಂತಾಗಿದೆ.
ಚಾಲ್ತಿಯಲ್ಲಿದ್ದಂತಹ ಪಡಿತರ ಚೀಟಿಗಳು ಇದ್ದಕ್ಕಿದ್ದಂತೆ ರದ್ದಾಗುತ್ತಿವೆ. ಈ ಬಾರಿ ಸ್ವೀಕೃತಗೊಂಡ ಬೆರಳಿನ ಗುರುತು ಮುಂದಿನ ಬಾರಿಗೆ ಸ್ವೀಕೃತವಾಗದಿರುವುದು, ಸರ್ವರ್ ಹೋಗುತ್ತಿರುವುದು ಅಥವಾ ಕುಟುಂಬದವರ ಮಾಹಿತಿ ಸರಿಯಾಗಿ ಕಾಣಿಸದಿರುವುದು ಸೇರಿ ಅನೇಕ ಸಮಸ್ಯೆಗಳು
ಪಡಿತರದಾರರನ್ನು ಇಕ್ಕಟ್ಟಿಗೆ ಸಿಲುಕಿಸಿವೆ.
ನಾಮಕೇವಾಸ್ತೆಗೆ ವಿತರಣೆ: ಈ ಹಿಂದೆ 2021ರಲ್ಲಿ ಸರ್ಕಾರದ ಆದೇಶದಂತೆ ಸರ್ಕಾರಿ ನೌಕರರು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದ 56 ಜನರು ಒಟ್ಟು 9.71 ಲಕ್ಷದ ರೂಪಾಯಿಗಳನ್ನು ಈಗಾಗಲೇ ಸರ್ಕಾರಕ್ಕೆ ದಂಡದ ರೂಪದಲ್ಲಿ ಪಾವತಿ ಮಾಡಿದ್ದಾರೆ. ಇದಕ್ಕೂ ಮುಂಚಿತವಾಗಿ 250 ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ಗಳನ್ನು ಸರ್ಕಾರಕ್ಕೆ ವಾಪಸ್ ನೀಡಿದ್ದಾರೆ. ಈ ರೀತಿಯ ಪಡಿತರ ಚೀಟಿಗಳ ಸಮಸ್ಯೆಗಳು ಒಂದು ರೀತಿಯಲ್ಲಾದರೆ ಹೊಸದಾಗಿ ಮಕ್ಕಳ ಹೆಸರುಗಳ ಸೇರ್ಪಡೆ, ತಿದ್ದುಪಡಿಗಳು, ನ್ಯಾಯಬೆಲೆ ಅಂಗಡಿಗಳ ಬದಲಾವಣೆ ಸೇರಿ ಇನ್ನಿತರ ಸಮಸ್ಯೆಗಳನ್ನು ನಾಗರಿಕರು ಎದರಿಸುತ್ತಿದ್ದಾರೆ. ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿಗಳಿಗೆ ಮಾತ್ರ ಅಕ್ಕಿ, ರಾಗಿ ವಿತರಣೆಯಾಗುತ್ತಿದ್ದು, ಎಪಿಎಲ್ ಪಡಿತರ ಚೀಟಿಗಳನ್ನು ನಾಮಕೇವಾಸ್ತೆಗೆ ವಿತರಣೆ ಮಾಡಿದಂತಾಗಿದೆ. ತಾಲೂಕಿನಲ್ಲಿ ಈಗ ಅಂತ್ಯೋದಯ 4,529, ಬಿಪಿಎಲ್ 51,917 ಹಾಗೂ ಎಪಿಎಲ್ ಪಡಿತರಚೀಟಿಗಳು 5,506
ಗಳಿದ್ದು, ಒಟ್ಟು 61,952 ಪಡಿತರಚೀಟಿಗಳು ಚಾಲ್ತಿಯಲ್ಲಿವೆ.
1110 ಕಾರ್ಡ್ಗಳು ರದ್ದು: ಚಿಕ್ಕನಾಯಕನಹಳ್ಳಿ ಒಂದೇ ತಾಲೂಕಿನಲ್ಲಿ ಆದ್ಯತಾ ಕುಟುಂಬದ ಪಡಿತರ ಚೀಟಿಗಳು (ಬಿಪಿಎಲ್) ಆದಾಯತೆರಿಗೆ ಪಾವತಿದಾರರು ಎಂದು 287 , ಒಂದು ಲಕ್ಷದ ಇಪ್ಪತ್ತು ಸಾವಿರಕ್ಕೂ ಹೆಚ್ಚು ವಾರ್ಷಿಕ ಆದಾಯವೆಂದು 121, ಸರ್ಕಾರಿ ನೌಕರರು ಎಂದು 25, ಆರು ತಿಂಗಳ ಕಾಲ ಪಡಿತರವನ್ನು ಪಡೆದಿಲ್ಲವೆಂಬ ಕಾರಣಕ್ಕೆ 677 ಪಡಿತರ ಚೀಟಿ ಸೇರಿ ಒಟ್ಟು 1110 ಪಡಿತರ ಚೀಟಿಗಳು ರದ್ದಾಗಿವೆ.
ಈ ಹಿಂದೆ ತಾಲೂಕಿನಲ್ಲಿ ಕೆಲವು ಕಾರಣಗಳಿಗೆ ಪಡಿತರಚೀಟಿಗಳು ರದ್ದಾಗಿದ್ದವು. ಆದರೆ ಈಗ ಸರ್ಕಾರದ ಹಾಗೂ ಸಚಿವರ ಆದೇಶದಂತೆ ರದ್ದಾಗಿರುವಂತಹ ಪಡಿತರಚೀಟಿಗಳನ್ನು ಚಾಲ್ತಿಗೊಳಿಸುತ್ತಿದ್ದು, ಅವರು ಪಡಿತರ ಪಡೆಯಲು ಅನುಕೂಲ ಮಾಡಿಕೊಡಲಾಗಿದೆ. ಇನ್ನು ಆನ್ಲೈನ್ನಲ್ಲಿ ಪಡಿತರ ಚೀಟಿಗಳ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಅನರ್ಹರು ಪಡಿತರಚೀಟಿಗಳನ್ನು ಪಡೆದಿದ್ದರೆ ಆ ಕಾರ್ಡ್ಗಳನ್ನು ವಾಪಸ್ ಹಿಂತಿರುಗಿಸಲಿ.
| ಕಿರಣ್ಕುಮಾರ್ ಆಹಾರ ಶಿರಸ್ಥೇದಾರ್
ನಮ್ಮ ಮನೆಯಲ್ಲಿ ಮೂರು ಜನರಿದ್ದು, ಪ್ರತಿ ತಿಂಗಳು ಪಡಿತರ ಪಡೆಯುತ್ತಿದ್ದೇವೆ. ನಾವು ಕುರಿಗಾಹಿಯಾಗಿದ್ದು, ಇದರಿಂದಲೇ ಜೀವನ ನಡೆಯುತ್ತಿದ್ದೇವೆ. ಆದರೆ ಪಡಿತರ ಚೀಟಿ ರದ್ದುಪಡಿಸಿದ್ದ ಕಾರಣ ಮಾತ್ರ ತಿಳಿದಿಲ್ಲ. ಬಡವರ ಪಡಿತರಚೀಟಿಗಳನ್ನು ರದ್ದುಪಡಿಸಿರುವುದು ಸರಿಯಲ್ಲ. ಪರಿಶೀಲಿಸಿ ನಮಗೆ ಪಡಿತರ ನೀಡಬೇಕು.
| ಹೊಸಪಾಳ್ಯದ ಲಕ್ಷ್ಮಯ್ಯ
ನಾವು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು, ನಮಗೆ ಆಹಾರ ಇಲಾಖೆಯಿಂದ ಬಿಪಿಎಲ್ ಪಡಿತರ ಚೀಟಿ ನೀಡಿದ್ದರು. ಆದರೆ ಈಗ ಅದನ್ನು ರದ್ದುಪಡಿಸಿದ್ದಾರೆ. ಈ ಬಗ್ಗೆ ಕೇಳಿದಾಗ ನಾವು ಆದಾಯ ತೆರಿಗೆ ಪಾವತಿದಾರರು ಎಂದು ತೋರಿಸುತ್ತಿದೆ. ಕರೊನಾ ಅವಧಿಯಲ್ಲಿ ನಮ್ಮ ಖಾತೆಯಲ್ಲಿ ಹಣ ವರ್ಗಾವಣೆಯಾಗಿದ್ದ ಕಾರಣ ನೀಡಿ ಕಾರ್ಡ್ ರದ್ದುಪಡಿಸಿದ್ದಾರೆ. ಆದರೆ ನಾವು ಈ ಪಡಿತರಚೀಟಿಯನ್ನೇ ನಂಬಿ ಬದುಕುತ್ತಿದ್ದೇವೆ. ನಮ್ಮ ಪಡಿತರಚೀಟಿ ಚಾಲ್ತಿ ಮಾಡಿ ಕೊಡಬೇಕು.
| ಬಸವರಾಜು ಲಾನುಭವಿ ಶೆಟ್ಟಿಕೆರೆ