ಗುತ್ತಲ: ಅನ್ನಭಾಗ್ಯ ಯೋಜನೆಯಡಿ ವಿತರಿಸುತ್ತಿರುವ ಗೋಧಿ ಕಳಪೆ ಮಟ್ಟದ್ದಾಗಿದ್ದು, ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನ್ಯಾಯಬೆಲೆ ಅಂಗಡಿಯಲ್ಲಿ ಫಲಾನುಭವಿಗಳಿಗೆ ಅಕ್ಕಿ ಹಾಗೂ ಗೋಧಿ ವಿತರಿಸಲಾಗುತ್ತಿದೆ. ಅಕ್ಕಿ ಹೊರತುಪಡಿಸಿ ಗೋಧಿ ಕಳಪೆಯಾಗಿದೆ. ಅನೇಕ ದಿನಗಳಿಂದ ಸಂಗ್ರಹಿಸಿಟ್ಟಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದ್ದು, ಜನರು ಒಲ್ಲದ ಮನಸ್ಸಿನಿಂದ ಪಡೆದುಕೊಳ್ಳುತ್ತಿದ್ದಾರೆ.
ನ್ಯಾಯಬೆಲೆ ಅಂಗಡಿಯಲ್ಲಿ ಕಳೆದ 4-5 ವರ್ಷದಿಂದ ಗೋಧಿ ವಿತರಣೆ ಸ್ಥಗಿತಗೊಳಿಸಲಾಗಿತ್ತು. ಆದರೆ, ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ಡೌನ್ ಘೊಷಣೆಯ ನಂತರ ಬಡಜನರಿಗೆ ಆಗುತ್ತಿರುವ ತೊಂದರೆ ಗಮನಿಸಿ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿಯೊಂದಿಗೆ ಎರಡು ತಿಂಗಳ ಧಾನ್ಯ ಒಟ್ಟು 4 ಕೆಜಿ ಗೋಧಿ ನೀಡಲಾಗುತ್ತಿದೆ. ಕಳೆದ 3-4 ದಿನಗಳಿಂದ ಗೋಧಿ ವಿತರಿಸಲಾಗುತ್ತಿದೆ.
ಪ್ರಸ್ತುತ ಪಟ್ಟಣದಲ್ಲಿ ಬಿಪಿಎಲ್ 30804, ಅಂತ್ಯೋದಯ 171 ಸೇರಿ ಒಟ್ಟು 3975 ಪಡಿತರದಾರರಿದ್ದು, ಅಂದಾಜು 300 ಚೀಲ ಗೋಧಿ ಬಂದಿದೆ. ಗುಣಮಟ್ಟದ ಬಗ್ಗೆ ನ್ಯಾಯಬೆಲೆ ಅಂಗಡಿಯವರು ಹಾಗೂ ಜನರು ಮಧ್ಯೆ ವಾಗ್ವಾದ ನಡೆಯುತ್ತಿದೆ. ಗೋಧಿ ಸರಿಯಿಲ್ಲ, ಇವುಗಳನ್ನು ಬದಲಾಯಿಸಿ ಗುಣಮಟ್ಟದ ಗೋಧಿ ನೀಡಬೇಕೆಂದು ಜನರು ಆಗ್ರಹಿಸಿದ್ದಾರೆ.
ಜಾನುವಾರಗಳೂ ತಿನ್ನದಂತಹ ಗೋಧಿಯನ್ನು ನೀಡುತ್ತಿದ್ದಾರೆ. ಗುಣಮಟ್ಟದ ಗೋಧಿ ವಿತರಿಸಲಿ, ಇಲ್ಲವೆ ಬಿಟ್ಟು ಬಿಡಲಿ.
| ಕರಿಬಸವ ವೀ. ಅಂಗಡಿ, ಪಡಿತರ ಚೀಟಿದಾರ, ಗುತ್ತಲ
ಕಳಪೆ ಗೋಧಿಯನ್ನು ಮರಳಿ ಪಡೆದು ಗುಣಮಟ್ಟದ ಗೋಧಿ ವಿತರಿಸಲು ಕ್ರಮ ಕೈಗೊಳ್ಳುತ್ತೇನೆ. ಈ ಬಗ್ಗೆ ಆಹಾರ ಶಿರಸ್ತೇದಾರಿಗೆ ಸೂಚಿಸುತ್ತೇನೆ.
| ವಿನೋದಕುಮಾರ ಹೆಗ್ಗಳಿಕೆ, ಆಹಾರ ಇಲಾಖೆ ಉಪನಿರ್ದೇಶಕ