ಕಾರವಾರ: ಲಾಕ್ಡೌನ್ ಸಂದರ್ಭದಲ್ಲಿ ಜನರಿಗೆ ತೊಂದರೆಯಾಗಬಾರದು ಎಂದು ಸರ್ಕಾರ ಎರಡು ತಿಂಗಳ ಪಡಿತರವನ್ನು ಒಂದೇ ಬಾರಿಗೆ ವಿತರಿಸಲು ಮುಂದಾಗಿದೆ. ಆದರೆ, ಕೆಲ ಗ್ರಾಮೀಣ ಪ್ರದೇಶಗಳ ಜನರಿಗೆ ಅದನ್ನು ಕೊಂಡೊಯ್ಯುವುದೇ ದೊಡ್ಡ ಸಮಸ್ಯೆಯಾಗಿದೆ.
ಗುಡ್ಡಗಾಡು ಭಾಗಗಳನ್ನು ಹೊಂದಿರುವ ಜಿಲ್ಲೆಯ ಹಲವು ಊರುಗಳ ಜನರು ಪಡಿತರ ಪಡೆಯಲು 8 ರಿಂದ 10 ಕಿಮೀವರೆಗೂ ಬರಬೇಕಿದೆ. ಈಗ ಸಾರ್ವಜನಿಕ ವಾಹನ ವ್ಯವಸ್ಥೆಯಿಲ್ಲ. ಸ್ವಂತ ವಾಹನ ಇದ್ದರೂ ಅದಕ್ಕೆ ಇಂಧನ ಸಿಗುತ್ತಿಲ್ಲ. ಇನ್ನು ಪೊಲೀಸರ ಭಯದಿಂದ ಬಾಡಿಗೆ ವಾಹನಗಳೂ ಬರಲೊಪ್ಪುತ್ತಿಲ್ಲ. ಇದರಿಂದ ಏನು ಮಾಡಬೇಕು ಎಂಬುದು ತಿಳಿಯದೇ ಬಡ ಜನ ಆತಂಕದಲ್ಲಿದ್ದಾರೆ.
ಎಷ್ಟು ಪಡಿತರ?: ಏಪ್ರಿಲ್ ಹಾಗೂ ಮೇ ತಿಂಗಳ ಪಡಿತರವನ್ನು ಒಟ್ಟಿಗೆ ನೀಡಲಾಗುತ್ತಿದೆ. ಅಂತ್ಯೋದಯ ಕಾರ್ಡ್ ಗೆ ಒಟ್ಟು 70 ಕೆಜಿ ಅಕ್ಕಿ ದೊರೆಯಲಿದೆ. ಬಿಪಿಎಲ್ ಕಾರ್ಡ್ಗೆ ಪ್ರತಿ ಸದಸ್ಯನಿಗೆ 10 ಕೆಜಿ ಅಕ್ಕಿ ದೊರೆಯಲಿದೆ. ಎಪಿಎಲ್ ಕಾರ್ಡ್ ಇರುವವರು ವಿಲ್ಲಿಂಗ್ ನೆಸ್ ಮಾಡಿಕೊಂಡಿದ್ದರೆ ಅವರಿಗೂ 10 ಕೆಜಿ ಅಕ್ಕಿಯನ್ನು 15 ರೂ. ಬೆಲೆಯಲ್ಲಿ ನೀಡಲಾಗುತ್ತಿದೆ. ಅಲ್ಲದೆ, ಎಲ್ಲ ಕಾರ್ಡ್ ದಾರರಿಗೆ 4 ಕೆಜಿ ಗೋಧಿ ನೀಡಲಾಗುತ್ತಿದೆ.
ಹೆಚ್ಚು ಜನ ಸದಸ್ಯರಿರುವವರು 70 ಕೆಜಿಯ ದೊಡ್ಡ ಮೂಟೆಯನ್ನು ಹೊತ್ತು ನಾಲ್ಕಾರು ಕಿಮೀ ನಡೆದು ಸಾಗುವುದು ಹೇಗೆ ಎಂಬ ಆತಂಕದಲ್ಲಿದ್ದಾರೆ. ಕೆಲವೆಡೆ ಊರಿಗೇ ಅಕ್ಕಿ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಇದನ್ನು ಇಡೀ ಜಿಲ್ಲೆಗೆ ವಿಸ್ತರಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಊರುಗಳಿಗೆ ಪೂರೈಕೆ ಮಾಡುವುದಾಗಿ ಡಿಸಿ ಭರವಸೆ: ಪಡಿತರ ಕೊಂಡೊಯ್ಯಲು ಸಮಸ್ಯೆಯಾದಲ್ಲಿ ಸಂಬಂಧಪಟ್ಟ ತಹಸೀಲ್ದಾರ್ ಕಚೇರಿ ಸಹಾಯವಾಣಿಗೆ ಕರೆ ಮಾಡಿ ತಿಳಿಸಿದರೆ, ಆಯಾ ಗ್ರಾಮಗಳಿಗೇ ಪಡಿತರ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಸ್ಪಷ್ಟಪಡಿಸಿದ್ದಾರೆ. ಕಾರವಾರದ ಗೋಟೆಗಾಳಿ ಗ್ರಾಪಂ ವ್ಯಾಪ್ತಿಯ ಕಮರಗಾಂವ ಗ್ರಾಮದ 37 ಕುಟುಂಬಗಳಿಗೆ ಹಾಗೂ ಮಲ್ಲಾಪುರ ಗ್ರಾಪಂ ವ್ಯಾಪ್ತಿಯ ಬಾರೆ ಗ್ರಾಮದ 63 ಹಾಗೂ ಬಳಸೆ ಗ್ರಾಮದ 19 ಕುಟುಂಬಗಳಿಗೆ ಅಧಿಕಾರಿಗಳು ತೆರಳಿ ಪಡಿತರ ಮುಟ್ಟಿಸಿ ಬರಲಾಗಿದೆ. ಈ ಗ್ರಾಮಗಳ ಜನರು ಜನರು ಪಡಿತರ ಪಡೆಯಲು 15 ಕಿಮೀಗಿಂತ ಹೆಚ್ಚು ದೂರ ಬರಬೇಕಿದೆ. ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಸಹಾಯಕ ಗ್ರಾಪಂ ಸದಸ್ಯರ ಸಹಕಾರ ಪಡೆದು ಈ ವ್ಯವಸ್ಥೆ ಮಾಡಲಾಗಿದೆ ಎಂದು ಕಾರವಾರ ಆಹಾರ ನಿರೀಕ್ಷಕ ಎಸ್.ವಿ. ನಾಯ್ಕ ತಿಳಿಸಿದ್ದಾರೆ.
ಎಷ್ಟು ಪಡಿತರದಾರರು?: ಜಿಲ್ಲೆಯಲ್ಲಿ ಒಟ್ಟು, 3,90,876 ಎಪಿಎಲ್ ಪಡಿತರದಾರರಿದ್ದಾರೆ. ಅದರಲ್ಲಿ 16,149 ಅಂತ್ಯೋದಯ, 2,92,335 ಬಿಪಿಎಲ್ ಹಾಗೂ 82,372 ಎಪಿಎಲ್ ಕಾರ್ಡ್ಗಳು ಜಿಲ್ಲೆಯಲ್ಲಿವೆ. 28 ಸಾವಿರ ಎಪಿಎಲ್ ಕಾರ್ಡ್ದಾರರು ಮಾತ್ರ ಪಡಿತರ ಪಡೆಯಲು ನೋಂದಣಿ ಮಾಡಿಕೊಂಡಿದ್ದಾರೆ.
ಬೇರೆ ಊರುಗಳಲ್ಲಿ ಇರುವವರು ಪಡಿತರಕ್ಕಾಗಿ ತಮ್ಮ ಊರಿಗೆ ಹೋಗಬೇಕು ಎಂದಿಲ್ಲ. ತಾವಿರುವ ಸ್ಥಳದ ಸಮೀಪ ಇರುವ ಅಂಗಡಿಯಲ್ಲಿ ಪಿಒಎಸ್ ಯಂತ್ರದ ಮೂಲಕ ನೋಂದಾಯಿಸಿ ಪಡಿತರ ಪಡೆಯಬಹುದಾಗಿದೆ. | ಪುಟ್ಟಸ್ವಾಮಿ ಉಕ ಆಹಾರ ಇಲಾಖೆ ಡಿಡಿ
ನಾವು ಊರಿಂದ 9 ಕಿಮೀ ದೂರ ಬಂದು ಪಡಿತರ ಪಡೆಯಬೇಕು. ಮೊದಲಾದರೆ ಬಸ್, ಅಥವಾ ಖಾಸಗಿ ವಾಹನ ಸಿಗುತ್ತಿತ್ತು. ಈಗ ದೊಡ್ಡ ಮೂಟೆ ಹೊತ್ತು ಅಷ್ಟು ದೂರ ಹೋಗುವುದು ಹೇಗೆ? | ರಾಘವೇಂದ್ರ ದಾಂಡೇಲಿ ಗ್ರಾಮೀಣ ಭಾಗದ ನಾಗರಿಕ