ಶಿಗ್ಗಾಂವಿ: ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನ ಪಡಿತರ ಪಡೆಯಲು ಮುಗಿಬಿದ್ದ ಘಟನೆ ಪಟ್ಟಣದ 1ನೇ ನಂಬರ್ ಸರ್ಕಾರಿ ಶಾಲೆಯ ಪಕ್ಕದ ನ್ಯಾಯಬೆಲೆ ಅಂಗಡಿಯಲ್ಲಿ ಸೋಮವಾರ ನಡೆದಿದೆ.
ಕರೊನಾ ರೋಗ ತಡೆಗೆ ಮುಂಜಾಗ್ರತೆ ಕ್ರಮವಾಗಿ ಸರ್ಕಾರ ಪಡಿತರದಾರರಿಗೆ ಈ ಬಾರಿ ಎರಡು ತಿಂಗಳ ರೇಶನ್ ವಿತರಿಸಲು ಮುಂದಾಗಿದೆ. ಇದನ್ನು ಪಡೆಯಲು ನ್ಯಾಯಬೆಲೆ ಅಂಗಡಿಗಳ ಮುಂದೆ ಜಮಾಯಿಸಿರುವ ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಿದರೂ ಲೆಕ್ಕಿಸದೇ ಚೀಲಗಳನ್ನು ಸರದಿಯಲ್ಲಿ ಇಟ್ಟು ಗುಂಪು ಗುಂಪಾಗಿ ಕುಳಿತು ಪಡಿತರಕ್ಕಾಗಿ ಕಾಯುತ್ತಿರುವುದು ಕಂಡುಬಂದಿತು.
ಪೊಲೀಸ್, ಕಂದಾಯ, ಸಿಡಿಪಿಒ, ಪುರಸಭೆ ಸೇರಿ ವಿವಿಧ ಇಲಾಖೆ ಅಧಿಕಾರಿಗಳು, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಾಕಷ್ಟು ಅರಿವು ಮೂಡಿಸಿದರೂ ಜನ ಮಾತ್ರ ತಮಗೆ ಸಂಬಂಧಿಸಿದಲ್ಲ ಎನ್ನುವಂತೆ ವರ್ತಿಸುತ್ತಿರುವುದು ತಾಲೂಕು ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಪಡಿತರ ವಿತರಣೆ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಸಿಬ್ಬಂದಿ ನೇಮಕದ ಜತೆಗೆ ಕುಡಿಯುವ ನೀರು, ಮತ್ತು ಪೆಂಡಾಲ್ ವ್ಯವಸ್ಥೆಗೆ ಇಂದಿನಿಂದಲೇ ಕ್ರಮ ಕೈಗೊಳ್ಳಲಾಗುವುದು.
| ಶಿವಾನಂದ ಅಜ್ಜಂಪುರ, ಆಹಾರ ನಿರೀಕ್ಷಕ ಶಿಗ್ಗಾಂವಿ