More

  ಪಠ್ಯಪುಸ್ತಕದಲ್ಲಿ ಶೇ.33 ಕೃಷಿ ವಿಷಯ ಅಳವಡಿಸಿ

  ಬಸವನಬಾಗೇವಾಡಿ: ದೇಶದಲ್ಲಿ ಶೇ.70 ರಷ್ಟು ಜನರು ಕೃಷಿ ಅವಲಂಬಿಸಿದ ಕಾರಣ ಶಾಲಾ ಪಠ್ಯ ಪುಸ್ತಕಗಳಲ್ಲಿ ಶೇ.33 ರಷ್ಟು ವಿಷಯ ಕೃಷಿಗೆ ಸಂಬಂಧಿತವಾಗಿ ಇರುವಂತೆ ಕಾನೂನು ಜಾರಿಯಾಗಬೇಕು ಎಂದು ಪಟ್ಟಣದ ವಿರಕ್ತಮಠದ ಸಿದ್ದಲಿಂಗ ಶ್ರೀಗಳು ಹೇಳಿದರು.

  ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳ ಆಶಯದಂತೆ ಎತ್ತುಗಳ ಸಂರಕ್ಷಣೆಗಾಗಿ ಜಿಲ್ಲಾದ್ಯಂತ ಸಂಚರಿಸಿ ಅರಿವು ಮೂಡಿಸಲು ಸಿದ್ಧೇಶ್ವರ ಶ್ರೀಗಳ ಜನ್ಮಸ್ಥಳವಾದ ಬಿಜ್ಜರಗಿ ಗ್ರಾಮದಿಂದ ಆರಂಭವಾದ ಜೋಡೆತ್ತಿನ ಬಂಡಿಗಳ ನಂದಿಯಾತ್ರೆ ಸೋಮವಾರ ಪಟ್ಟಣಕ್ಕೆ ಆಗಮಿಸಿದ ವೇಳೆ ಅವರು ಮಾತನಾಡಿದರು.

  ಅಣ್ಣ ಬಸವಣ್ಣನವರು ಹೇಳಿದ ಕಾಯಕವೇ ಕೈಲಾಸ ಎಂಬ ತತ್ವಕ್ಕೆ ಹತ್ತಿರವಾಗಿ ಬದುಕು ಸಾಗಿಸುತ್ತಿರುವ ಜೋಡೆತ್ತು ಹೊಂದಿದ ರೈತರು ಇಂದಿನ ರಾಜಕೀಯ ವ್ಯವಸ್ಥೆಯ ಸುಳಿಯಲ್ಲಿ ಸಿಲುಕಿ ಕೃಷಿಯಲ್ಲಿ ಭರವಸೆ ಕಳೆದುಕೊಳ್ಳುತ್ತಿದ್ದಾರೆ. ಜೋಡೆತ್ತು ಕಟ್ಟಿದ ರೈತರು ಬೇಸಾಯಕ್ಕೆ ಖರ್ಚು ಮಾಡಿದ ಬಂಡವಾಳ ಮರಳಿ ಪಡೆಯದ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದರು.

  ಒಂದು ಅನಾವೃಷ್ಟಿ, ಇನ್ನೊಂದು ಅತಿವೃಷ್ಟಿಯಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಸರ್ಕಾರ ಬೆಳೆಗೆ ನಿಗದಿತ ಬೆಲೆ ನಿಗದಿ ಮಾಡಬೇಕು. ಮಣ್ಣು ಉಳಿಸಿ- ಮಣ್ಣು ಪುನಶ್ಚೇತನ ಕಾನೂನು ಜಾರಿಗೊಳಿಸಬೇಕು. ಬರಗಾಲದಲ್ಲಿ ಎತ್ತುಗಳನ್ನು ಮಾರಾಟ ಮಾಡಿದರೆ ಅವುಗಳು ಕಸಾಯಿಖಾನೆ ಪಾಲಾಗುತ್ತವೆ. ಹೀಗಾಗಿ ಎತ್ತು ಆಧಾರಿತ ಕೃಷಿಕರ ಸಂಖ್ಯೆ ಕಡಿಮೆಯಾಗುತ್ತಿದೆ. ಆದ್ದರಿಂದ ರಾಜ್ಯಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

  ರೈತರ ಸಂಕಷ್ಟದ ಬಗ್ಗೆ ಸರ್ಕಾರದ ಗಮನ ಸೆಳೆಯಲು ನೂರಾರು ರೈತರು ಎತ್ತಿನ ಬಂಡಿಗಳಲ್ಲಿ ಬಸವೇಶ್ವರ ಹಾಗೂ ಸಿದ್ಧೇಶ್ವರ ಶ್ರೀಗಳು ಹಾಗೂ ಅನೇಕ ಶರಣರ ಭಾವಚಿತ್ರವನ್ನು ತಮ್ಮ ಎತ್ತಿನ ಬಂಡಿಯಲ್ಲಿ ಇಟ್ಟುಕೊಂಡು ಪಟ್ಟಣದಲ್ಲಿ ನಂದಿಯಾತ್ರೆಯಲ್ಲಿ ಭಾಗವಹಿಸಿದ್ದರು.

  ಅರವಿಂದ ಕೌಲಗಿ, ಬಸವರಾಜ ಬಿರಾದಾರ, ಕೋನ ರೆಡ್ಡಿ, ಹನುಮಂತ ಕಲಮಡಿ, ಶ್ರೀಶೈಲ ಉಟಗಿ, ಶಿವಾನಂದ ಬಿರಾದಾರ, ಬಸವರಾಜ ಹಾರಿವಾಳ, ಮಲಕಾಜಿ ಮುಳವಾಡ, ಈರಣ್ಣ ಗುಳೆದ, ಚನ್ನಬಸು ಜಾಡರ, ಪರಶುರಾಮ ಮುಳವಾಡ, ಮಲ್ಲಪ್ಪ ಕುಂಬಾರ, ಬಸವರಾಜ ಸಂಗಮ, ಪಾವಡೆಪ್ಪ ನಾಯ್ಕೋಡಿ, ಅಪ್ಪಸಿ ಕುಂಬಾರ, ಶರಣಪ್ಪ ಗುಡ್ಡದ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts