ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಿ

ಶಿರಸಿ: ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಬೇಕು. ಪ್ರತಿ ವಿದ್ಯಾರ್ಥಿಯೂ ಆಧ್ಯಾತ್ಮಿಕ ಮಾರ್ಗದಲ್ಲಿ ಸಾಗಲು ಇದು ನೆರವಾಗುತ್ತದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಸ್ವರ್ಣವಲ್ಲೀ ಸಂಸ್ಥಾನದಲ್ಲಿ 28ನೇ ಚಾತುರ್ವಸ್ಯದ ಅಂಗವಾಗಿ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಅವರು ಆಶೀರ್ವಚನ ನೀಡಿದರು. ಭಗವದ್ಗೀತಾ ಅಭಿಯಾನದ ಮೂಲಕ ಶಾಲೆಗಳ ಬಾಗಿಲಿನವರೆಗೆ ಸ್ವರ್ಣವಲ್ಲೀ ಸಂಸ್ಥಾನ ತಲುಪಿದೆ. ಆದರೆ, ಗೀತೆ ಪಠ್ಯದಲ್ಲಿ ಅಳವಡಿಕೆಯಾಗಬೇಕಾಗಿದೆ. ಈ ಕಾರ್ಯ ನಡೆಸಲು ಸರ್ಕಾರಗಳಿಗೆ ಭಯವಾದರೆ, ಇನ್ನು ಕೆಲ ಸರ್ಕಾರ ಆಸಕ್ತಿ ತೋರುತ್ತಿಲ್ಲ. ಆಧ್ಯಾತ್ಮಿಕ ಮಾರ್ಗದರ್ಶನವನ್ನು ಅನುಸರಿಸದಿರುವುದು ದೇಶ ದುಸ್ಥಿತಿಗೆ ಬರಲು ಕಾರಣವಾಗಿದೆ. ಆಧ್ಯಾತ್ಮಿಕತೆ ಬಗೆಗೆ ಪ್ರವಚನ ಕೇಳಿದವರೂ ಈ ಮಾರ್ಗದಲ್ಲಿ ಸಾಗಲು ಆಸಕ್ತಿ ತೋರಿಸುವವರು ಕಡಿಮೆ. ಸ್ವಯಂಪ್ರೇರಿತವಾಗಿ ಅಳವಡಿಸಿಕೊಂಡಲ್ಲಿ ದೇಶದ ಮತ್ತು ಪ್ರತಿಯೊಬ್ಬರ ಜೀವನ ಕ್ರಮ ಉತ್ತಮವಾಗುತ್ತದೆ’ ಎಂದರು.

ವೇದ ಎಂದರೆ ಜ್ಞಾನ. ವ್ಯಾಸ ಎಂದರೆ ವಿಸ್ತರಿಸುವವರು ಎಂದರ್ಥ. ಜ್ಞಾನವನ್ನು ಎಲ್ಲೆಡೆ ವಿಸ್ತರಿಸುವವರೇ ನಿಜ ಗುರುವಾಗಿದ್ದಾರೆ. ಜ್ಞಾನ ಸಂಕುಚಿತಗೊಂಡಾಗ ಅಜ್ಞಾನವೆನಿಸುತ್ತದೆ. ಸೂರ್ಯನ ಬೆಳಕಿನಲ್ಲಿ ನಕ್ಷತ್ರಗಳು ಕಾಣದಿರುವಂತೆ ಕೆಲವು ಬಾರಿ ಜ್ಞಾನವೂ ಅಜ್ಞಾನಕ್ಕೆ ಕಾರಣವಾಗುತ್ತಿದೆ. ನಮ್ಮ ಲೌಕಿಕ ಪ್ರಜ್ಞೆಯಿಂದಾಗಿ ನಮ್ಮೊಳಗಿರುವ ಪರಮಾತ್ಮನ ಪ್ರಜ್ಞೆಯನ್ನು ನಾವು ಮರೆಯುತ್ತೇವೆ. ನಮ್ಮೆಲ್ಲ ಇಂದ್ರಿಯಗಳು ಬಹಿಮುಖವಾಗಿ ಸೃಷ್ಟಿಯಾಗಿವೆ. ಇದರಿಂದಾಗಿ ನಮ್ಮೊಳಗಿನ ಶಕ್ತಿಯನ್ನು ನಾವು ಅರಿಯುತ್ತಿಲ್ಲ. ನಿಜ ಜ್ಞಾನ ಮತ್ತು ಅಜ್ಞಾನದ ಅರಿವನ್ನು ಗುರುವಾದವನು ಮೂಡಿಸುತ್ತಾನೆ. ವೇದವ್ಯಾಸರು ಜಗತ್ತಿಗೇ ದೊಡ್ಡ ಗುರುಗಳಾಗಿದ್ದಾರೆ ಎಂದರು.

ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದ ವಿದ್ಯಾ ಪ್ರತಿಷ್ಠಾನದ ಪ್ರಮುಖ ಗೋವಿಂದ ಶರ್ಮಾ ಮಾತನಾಡಿ, ‘ಸ್ವರ್ಣವಲ್ಲೀ ಸಂಸ್ಥಾನದ ಮೂಲ ಸ್ಥಳ ಉಜ್ಜಯನಿಯಾಗಿತ್ತು. ಬಳಿಕ ಗೋಕರ್ಣ ಮತ್ತು ಈಗಿನ ಸ್ವರ್ಣವಲ್ಲೀಗೆ ಸ್ಥಳಾಂತರಗೊಂಡಿದೆ. ಮಠದ ಶಾಖೆಯನ್ನು ಉಜ್ಜಯನಿಯಲ್ಲಿ ಆರಂಭಿಸುವುದಾದರೆ ನಾವು ಸಹಕಾರ ನೀಡುತ್ತೇವೆ. ಶ್ರೀಗಳ ಕೃಪೆ ಮತ್ತು ಆಶೀರ್ವಾದ ಸಿಕ್ಕ ವ್ಯಕ್ತಿ ಯಶಸ್ಸು ಗಳಿಸುತ್ತಾನೆ’ ಎಂದರು. ಮಠದ ಪ್ರಮುಖ ವಿ.ಎನ್. ಹೆಗಡೆ ಬೊಮ್ನಳ್ಳಿ ಇತರರಿದ್ದರು.