ಪಟ್ಟಭದ್ರರಿಂದ ಸಂಸ್ಕೃತಿ ಹಾಳು ಮಾಡುವ ಯತ್ನ

ಮಂಚೇನಹಳ್ಳಿ/ಗೌರಿಬಿದನೂರು:  ದೇಶದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಯುವಪೀಳಿಗೆಯನ್ನು ದಿಕ್ಕು ತಪ್ಪಿಸುವ ಮೂಲಕ ನೆಲದ ಸಂಸ್ಕೃತಿ ಹಾಳು ಮಾಡಲು ಯತ್ನಿಸುತ್ತಿವೆ ಎಂದು ದೊಡ್ಡಬಳ್ಳಾಪುರದ ಶ್ರೀ ಪುಷ್ಪಾಂಡಜ ಆಶ್ರಮದ ದಿವ್ಯ ಜ್ಞಾನಾನಂದಗಿರಿ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ಮಂಚೇನಹಳ್ಳಿ ಹೋಬಳಿ ಬಿಕ್ಕಲಹಳ್ಳಿ ಶ್ರೀ ಯೋಗಿ ಮುನೇಶ್ವರಸ್ವಾಮಿ ದೇವಾಲಯದಲ್ಲಿ ನಿರ್ವಿುಸಿರುವ ಭಾರತ ಮಾತಾ ಮಂದಿರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ನೆಲದ ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಜಗತ್ತಿಗೆ ಮಾದರಿಯಾಗುವ ಸಂಸ್ಕೃತಿಯನ್ನು ಅನೇಕ ಸಂತರು, ಪುಣ್ಯಪುರುಷರು ನಮಗೆ ನೀಡಿದ್ದಾರೆ. ಪಾಶ್ಚಿಮಾತ್ಯ ಸಂಸ್ಕೃತಿಯಿಂದ ನಾವೆಲ್ಲರೂ ದೂರ ಉಳಿಯುವ ಮೂಲಕ ಯುವಕರಲ್ಲಿ ದೇಶಭಕ್ತಿ ಬೆಳೆಸಬೇಕು ಎಂದರು.

ಭಾರತ ಮಾತೆಗೆ ತಾಯಿ ಸ್ಥಾನ ನೀಡಿದ್ದೇವೆ. ತಾಯಿಯನ್ನು ಪ್ರೀತಿಸುವಂತೆ ದೇಶವನ್ನು ಪ್ರೀತಿಸಬೇಕು. ಈ ನಿಟ್ಟಿನಲ್ಲಿ ಗ್ರಾಮದಲ್ಲಿ ಭಾರತ ಮಾತೆ ದೇವಾಲಯ ನಿರ್ವಿುಸಿ ಜನರಲ್ಲಿ ಭಕ್ತಿ ಮೂಡಿಸಲು ಹೊರಟಿರುವುದು ಸ್ವಾಗತಾರ್ಹ ಎಂದರು.

ದೇವಾಲಯ ಪ್ರಧಾನ ದತ್ತಿ, ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ.ಬಿ.ಕೆ.ಮಂಜುನಾಥ್ ಮಾತನಾಡಿ, ಪ್ರಪಂಚಕ್ಕೆ ಬೆಳಕು ನೀಡುವ ಶಕ್ತಿ ಧರ್ಮಕ್ಕಿದೆ ಎಂದು ಈ ಹಿಂದೆ ಸ್ವಾಮಿ ವಿವೇಕಾನಂದರು ತಿಳಿಸಿಕೊಟ್ಟಿದ್ದಾರೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ದೇಶದ ಸಂಸ್ಕೃತಿ ಕೆಡಿಸಲು ಇನ್ನಿಲ್ಲದ ಯತ್ನಗಳನ್ನು ಧರ್ಮದ ಮೇಲೆ ನಿರಂತರವಾಗಿ ನಡೆಸುತ್ತಿವೆ. ಇದನ್ನು ಯುವಪೀಳಿಗೆ ಅರಿಯಬೇಕು. ಧರ್ಮ ಉಳಿಸಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿ ಅರಿತು ಸಾಗಬೇಕೆಂದು ಸಲಹೆ ನೀಡಿದರು. ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *