ಪಟ್ಟಣ ಬಿಟ್ಟು ಹೋಗದಂತೆ ಅಂಕೆ

ಅಕ್ಕಿಆಲೂರ: ಪಟ್ಟಣದಲ್ಲಿ ಐದು ವರ್ಷಕ್ಕೊಮ್ಮೆ ಜರುಗುವ ಗ್ರಾಮದೇವಿ ಜಾತ್ರೆ ಹಿನ್ನೆಲೆಯಲ್ಲಿ ದೇವಿಗೆ ಅಂಕೆ ಹಾಕುವ ಮತ್ತು ಇತರ ಧಾರ್ವಿುಕ ವಿಧಿವಿಧಾನಗಳು ಭಾನುವಾರ ಜರುಗಿದವು.

ಬೆಳಗ್ಗೆ 5ಕ್ಕೆ ವಿರಕ್ತಮಠದ ಶಿವಬಸವ ಸ್ವಾಮೀಜಿ ಮತ್ತು ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ನಡೆದ ಅಂಕಿ ಹಾಕುವ ಸಂಸ್ಕಾರದಲ್ಲಿ ಅರ್ಚಕರು ಅಕ್ಕಿಯ ಮೇಲೆ ಮಣ್ಣಿನ ಗಡಿಗೆ ಇಟ್ಟು ಗಡಿಗೆ ಮೇಲೆ ದೀಪ ಹಚ್ಚಿದರು. ನಂತರ ಗ್ರಾಮದೇವಿಗೆ ಬಿಟ್ಟ ಹರಕೆ ಕೊಣಕ್ಕೆ ಪಟ್ಟವನ್ನು ನೀಡಲಾಯಿತು. ಎಲ್ಲರ ಕೈಯಲ್ಲಿ ಅಕ್ಷತೆ ನೀಡಿ, ಕಂಕಣ ಕಟ್ಟಿ ಮಾ. 27ರವರೆಗೂ ಅಕ್ಕಿಆಲೂರ ಬಿಟ್ಟು ಯಾರೂ ಹೊರಹೋಗಬಾರದು ಎಂದು ಪಟ್ಟಣದ ಹಿರಿಯರು ಅಧಿಕೃತವಾಗಿ ಘೊಷಿಸಿದರು.

ಅಂಕೆ ಹಾಕುವ ಕಾರ್ಯಕ್ರಮದಲ್ಲಿ ಹಚ್ಚಿದ ದೀಪ, ಗ್ರಾಮದೇವಿ ಪಾದಗಟ್ಟೆಯಲ್ಲಿ ದೇವಿ ಪ್ರತಿಷ್ಠಾಪನೆ ಆಗುವವರೆಗೂ ಶಾಂತವಾಗದಂತೆ ಕಾಪಾಡಿಕೊಳ್ಳಲು ಐದು ಕುಟುಂಬಕ್ಕೆ ದೀಪದ ಜವಾಬ್ದಾರಿ ನೀಡಲಾಯಿತು. ಧಾರ್ವಿುಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದ ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಸಾಂಸ್ಕೃತಿಕವಾಗಿ ಶ್ರೀಮಂತ ದೇಶ ಭಾರತದಲ್ಲಿ ಆಚರಿಸುವ ಸಂಪ್ರದಾಯಗಳ ಹಿಂದೆ ಒಂದೊಂದು ಮೌಲ್ಯಯುತ ಇತಿಹಾಸವಿದೆ. ನಾವು ಆಚರಿಸುವ ಆಚರಣೆಗಳು ಮಾನವ ಕುಲಕ್ಕೆ ಆಧ್ಯಾತ್ಮಿಕ ಮತ್ತು ವೈಜ್ಞಾನಿಕವಾಗಿ ಒಳಿತು ಬಯಸುತ್ತವೆ’ ಎಂದರು.

ವಿರಕ್ತಮಠದ ಶಿವಬಸವ ಸ್ವಾಮೀಜಿ ಮಾತನಾಡಿದರು. ಮುಖಂಡರಾದ ಟಾಕನಗೌಡ ಪಾಟೀಲ, ರಾಜಣ್ಣ ಗೌಳಿ, ಬಸವರಾಜ ಸೊರಗೊಂಡರು, ನಾಗನಗೌಡ ಪಾಟೀಲ, ಪ್ರಭುಗೌಡ ಪಾಟೀಲ, ಗಿರೀಶ ಅಯ್ಯನಗೌಡರ, ಜಗದೀಶ ಪರೆಗೊಂಡರ, ನಾಗಣ್ಣ ಶೇಷಗಿರಿ, ಮಲ್ಲಣ್ಣ ಮತ್ತಿಗಟ್ಟಿ, ನಿಲ್ಲಪ್ಪ ಹರಿಜನ, ಸುರೇಶ ಉಜಪ್ಪನವರ, ಅಜ್ಜನಗೌಡ ಪಾಟೀಲ, ಶಿವಣ್ಣ ಪರೆಗೊಂಡರ, ಉಪಸ್ಥಿತರಿದ್ದರು.

ಇಂದಿನ ಕಾರ್ಯಕ್ರಮ

ನೂತನವಾಗಿ ನಿರ್ವಿುಸಲಾದ ಗ್ರಾಮದೇವಿ ಪಾದಗಟ್ಟೆಗೆ ಮಾ.25ರಂದು ಬೆಳಗ್ಗೆ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕಳಸಾರೋಹಣ ಮತ್ತು ಪ್ರಾಣಪ್ರತಿಷ್ಠಾಪನೆ ನೆರವೇರಿಸುವರು. ನಂತರ ಹೋಮಹವನ ಜರುಗಲಿದೆ. ಶಿವಬಸವ ಸ್ವಾಮೀಜಿ ನೇತೃತ್ವ ವಹಿಸುವರು.