ಪಕ್ಷ ಸಂಘಟನೆಗೆ ನಾಯಕತ್ವ ಕೊರತೆ

ಕೋಲಾರ: ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ನಾಯಕತ್ವದ ಕೊರತೆಯಿದ್ದು, ವರಿಷ್ಠರೊಂದಿಗೆ ರ್ಚಚಿಸಿ ಪಕ್ಷ ಸಂಘಟನೆಯಲ್ಲಿ ನಿಷ್ಕಿ›ಯರಾಗಿರುವವರ ಹುದ್ದೆ ಬದಲಾವಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಪಕ್ಷದಲ್ಲಿ ಯಾರು, ಏನು, ಹೇಗೆ? ಪಕ್ಷಕ್ಕಾಗಿ ದುಡಿದವರು, ವಂಚಿಸಿದವರು, ತಟಸ್ಥರಾದವರು ಎಂಬುದು ಗೊತ್ತು. ಪಕ್ಷಕ್ಕೆ ದ್ರೋಹಿಗಳನ್ನು, ಪಕ್ಷದ ವಿರುದ್ಧ ಹಾದಿ ಬೀದಿಗಳಲ್ಲಿ ಮಾತನಾಡುವವರನ್ನು, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವವರನ್ನು ಕ್ಷಮಿಸುವುದಿಲ್ಲ ಎಂದರು.

ನನ್ನನ್ನು ಸಂಸದನನ್ನಾಗಿ ಆಯ್ಕೆ ಮಾಡುವ ಮೂಲಕ ದೊಡ್ಡ ಜವಾಬ್ದಾರಿ ನೀಡಿದ್ದೀರಿ. ಇದನ್ನು ಸಮರ್ಪಕವಾಗಿ ನಿರ್ವಹಿಸಿ ಜನರ ನಿರೀಕ್ಷೆ ಈಡೇರಿಸಲು ಪ್ರಯತ್ನಿಸುತ್ತೇನೆ. ಆಗಬೇಕಾದ ಶಾಶ್ವತ ಕಾರ್ಯಗಳ ಬಗ್ಗೆ ರ್ಚಚಿಸಿ ಯೋಜನೆ ರೂಪಿಸಿಕೊಂಡು ಕೇಂದ್ರ ಮತ್ತು ರಾಜ್ಯದಿಂದ ಅನುದಾನ ತಂದು ಮಾದರಿ ಜಿಲ್ಲೆಯನ್ನಾಗಿಸಲಾಗುವುದು ಎಂದರು.

ಮುಂದಿನ ದಿನಗಳಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಮೇ 29ರಂದು ನಡೆಯಲಿರುವ ಪುರಸಭೆ ಚುನಾವಣೆಯಲ್ಲಿ ಕೆಲ ವಾರ್ಡ್​ಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಿದ್ದು ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಶಾಸಕ ಎ.ನಾಗರಾಜ್ ಮಾತನಾಡಿ, ಬಿಜೆಪಿ ಬಹುದಿನದ ಕನಸು ನನಸಾಗಿದೆ. ಈ ಖುಷಿಯನ್ನು ಮುಂದಿನ 25 ವರ್ಷಗಳವರೆಗೆ ಕಾಪಾಡಿಕೊಳ್ಳಬೇಕು. ಕೇಂದ್ರದಲ್ಲಿ ಕಳೆದ 5 ವರ್ಷ ನಮ್ಮದೇ ಸರ್ಕಾರ ಇದ್ದರೂ ನಾಮ ನಿರ್ದೇಶನಗೊಳ್ಳುವ ಅವಕಾಶದಿಂದ ಕಾರ್ಯಕರ್ತರು ವಂಚಿತರಾಗಿದ್ದಾರೆ. ಸಂಸದರಾಗಿರುವ ಮುನಿಸ್ವಾಮಿ ನಾಮನಿರ್ದೇಶನ ಮಾಡಲು ಕೇಂದ್ರದ ಮೇಲೆ ಒತ್ತಡ ತಂದು ಪಕ್ಷಕ್ಕಾಗಿ ಶ್ರಮಿಸಿದ ಕಾರ್ಯಕರ್ತರಿಗೆ ಸ್ಥಾನಮಾನ ದೊರಕಿಸಿಕೊಡಬೇಕೆಂದು ಸಲಹೆ ನೀಡಿದರು.

ಜಿಲ್ಲಾಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ಕ್ಷೇತ್ರದ ಪ್ರಭಾರಿ ಪಾವಗಡ ಕೃಷ್ಣಾರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಸುದೇವ್, ಸಿ.ಡಿ.ರಾಮಚಂದ್ರ, ಗ್ರಾಮಾಂತರ ಅಧ್ಯಕ್ಷ ಬೈಚಪ್ಪ, ನಗರದ ಘಟಕ ಅಧ್ಯಕ್ಷ ಮಾಗೇರಿ ನಾರಾಯಣಸ್ವಾಮಿ, ಉಪಾಧ್ಯಕ್ಷ ವಿಜಯಕುಮಾರ್, ಜಿಪಂ ಮಾಜಿ ಸದಸ್ಯ ಎಸ್.ಬಿ.ಮುನಿವೆಂಕಟಪ್ಪ ಇತರರಿದ್ದರು. ಮಹಿಳಾ ಘಟಕ ಸೇರಿ ವಿವಿಧ ಘಟಕಗಳಿಂದ ನೂತನ ಸಂಸದರನ್ನು ಅಭಿನಂದಿಸಲಾಯಿತು.

Leave a Reply

Your email address will not be published. Required fields are marked *