More

    ಪಕ್ಷಾತೀತವಾಗಿ ಒಗ್ಗಟ್ಟು ಪ್ರದರ್ಶಿಸಲು ನಿರ್ಧಾರ


    ಹುಬ್ಬಳ್ಳಿ: ಮಹದಾಯಿ ಸಮಸ್ಯೆಗೆ ರ್ತಾಕ ಅಂತ್ಯ ನೀಡುವವರೆಗೆ ಪಕ್ಷಾತೀತವಾಗಿ ಒಗ್ಗಟ್ಟು ಪ್ರದರ್ಶಿಸಲು ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಜನಪ್ರತಿನಿಧಿಗಳು ನಿರ್ಧರಿಸಿದ್ದಾರೆ.

    ಮಹದಾಯಿ, ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಗೆ ಒತ್ತಾಯಿಸಿ ಸಾಕಷ್ಟು ಹೋರಾಟ ನಡೆದರೂ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷದ ಜನಪ್ರತಿನಿಧಿಗಳು ಇದೇ ಮೊದಲ ಬಾರಿಗೆ ಒಗ್ಗಟ್ಟು ಪ್ರದರ್ಶಿಸುವ ಮಾತನಾಡಿದ್ದಾರೆ. ನಗರದ ರ್ಸಟ್ ಹೌಸ್​ನಲ್ಲಿ ಭಾನುವಾರ ಏರ್ಪಡಿಸಿದ್ದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಜನಪ್ರತಿನಿಧಿಗಳ ಸಭೆಯಲ್ಲಿ ಮೂರೂ ಪಕ್ಷಗಳ ಶಾಸಕರು ಪಾಲ್ಗೊಂಡಿದ್ದರು.

    ನ್ಯಾಯಾಧಿಕರಣ ತೀರ್ಪು ನೀಡಿದರೂ ಗೋವಾ ರಾಜ್ಯದ ಸಂಸದರು ಹಾಗೂ ಅಲ್ಲಿಯ ಬಿಜೆಪಿ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಯೋಜನೆಗೆ ನೀಡಲಾಗಿದ್ದ ಪರಿಸರ ಅನುಮತಿಯನ್ನು ತಡೆ ಹಿಡಿಯುವಲ್ಲಿ ಯಶಸ್ವಿಯಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿಯ ಜನಪ್ರತಿನಿಧಿಗಳು ಸಭೆ ಸೇರಿ ಒಗ್ಗಟ್ಟು ಪ್ರದರ್ಶಿಸಿದ್ದು, ಮಹತ್ವದ ತಿರುವು ಬಂದಂತಾಗಿದೆ.

    ಕಾನೂನು ಸಲಹೆ ಹಾಗೂ ವಿಷಯ ತಜ್ಞರ ಅಭಿಪ್ರಾಯ ಪಡೆದು ಮುಂದಿನ ಹೆಜ್ಜೆ ಇಡಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲೂ ಪಕ್ಷಾತೀತವಾಗಿ ಸಭೆ ಕರೆದು ಎಲ್ಲರೂ ಕೂಡಿಕೊಂಡು ಕೆಲಸ ಮಾಡಲು ತೀರ್ವನಿಸಲಾಗಿದೆ.

    ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್. ಆರ್. ಪಾಟೀಲ, ಶಾಸಕರಾದ ಪ್ರಸಾದ ಅಬ್ಬಯ್ಯ, ಶಂಕರ ಪಾಟೀಲ ಮುನೇನಕೊಪ್ಪ, ಆನಂದ ಮಮಾನಿ, ಅಮೃತ ದೇಸಾಯಿ, ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಪ್ರದೀದ ಶೆಟ್ಟರ್, ಶ್ರೀನಿವಾಸ ಮಾನೆ, ಮಾಜಿ ಎಂಎಲ್​ಸಿ ವೀರಣ್ಣ ಮತ್ತಿಗಟ್ಟಿ, ಮಾಜಿ ಶಾಸಕ ಎನ್. ಎಚ್. ಕೋನರಡ್ಡಿ ಪಾಲ್ಗೊಂಡಿದ್ದರು.

    ಚಾರಿತ್ರಿಕ ಹೆಜ್ಜೆ

    ‘ಮಹದಾಯಿ ಕಗ್ಗಂಟು ಸರಿಪಡಿಸಲು ಪಕ್ಷಾತೀತವಾಗಿ ಎಲ್ಲರೂ ಒಂದಾಗಿರುವುದು ಒಂದು ಚಾರಿತ್ರಿಕ ಹೆಜ್ಜೆ. ಈ ಸಮಸ್ಯೆಗೆ ರ್ತಾಕ ಅಂತ್ಯ ನೀಡಲು ನಾವೆಲ್ಲ ಬದ್ಧರಾಗಿದ್ದೇವೆ’ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಆಯಾ ರಾಜ್ಯಗಳು ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಪ್ರಯತ್ನ ಮಾಡುತ್ತವೆ. ಕೃಷ್ಣಾ, ಕಾವೇರಿ ವಿಷಯದಲ್ಲಿ ನಾವು ನಮ್ಮ ಕೆಲಸ ಮಾಡಿದ್ದೆವು. ಮಹದಾಯಿ ವಿಷಯದಲ್ಲೂ ಮಾಡುತ್ತೇವೆ. ಗೋವಾ ಸರ್ಕಾರ ಸವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿರುವುದರಿಂದ ನ್ಯಾಯಾಧಿಕರಣದ ತೀರ್ಪಿನ ಬಳಿಕವೂ ಕೇಂದ್ರ ಸರ್ಕಾರಕ್ಕೆ ನೋಟಿಫಿಕೇಶನ್ ಹೊರಡಿಸಲು ಬರುವುದಿಲ್ಲ ಎಂದರು.

    ಹಲವರು ಗೈರು

    ಕೇಂದ್ರ ಸಚಿವ ಸುರೇಶ ಅಂಗಡಿ ಸೇರಿ 6 ಸಂಸದರು, ಮಾಜಿ ಸಿಎಂ ಬಾದಾಮಿ ಶಾಸಕ ಸಿದ್ದರಾಮಯ್ಯ ಸೇರಿ 15 ಶಾಸಕರು ಹಾಗೂ 12 ಜನ ವಿಧಾನ ಪರಿಷತ್ ಸದಸ್ಯರನ್ನು ಸಭೆಗೆ ಆಹ್ವಾನಿಸಲಾಗಿತ್ತು. ಆದರೆ, ಅರ್ಧಕ್ಕಿಂತ ಹೆಚ್ಚು ಜನಪ್ರತಿನಿಧಿಗಳು ಸಭೆಗೆ ಗೈರಾಗಿದ್ದರು. ಅನಾರೋಗ್ಯದ ಕಾರಣ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಸಿದ್ದರಾಮಯ್ಯ ಪತ್ರ ಬರೆದಿದ್ದರು. ಉಳಿದವರು ಸಭೆಯ ನಿರ್ಣಯಕ್ಕೆ ತಮ್ಮ ಪೂರ್ಣ ಸಹಮತವಿದೆ ಎಂದು ಹೇಳಿದ್ದಾಗಿ ಸಂಘಟಕರು ತಿಳಿಸಿದರು.

    ಕೋನರಡ್ಡಿ ಪ್ರವೇಶಕ್ಕೆ ವಿರೋಧ

    ಜನಪ್ರತಿನಿಧಿಗಳ ಸಭೆಯಲ್ಲಿ ಮಾಜಿ ಶಾಸಕ, ಜೆಡಿಎಸ್ ನಾಯಕ ಎನ್. ಎಚ್. ಕೋನರಡ್ಡಿ ಉಪಸ್ಥಿತಿ ಬಗ್ಗೆ ಬಿಜೆಪಿ ಕಾರ್ಯಕರ್ತ ಉಮೇಶ ದುಶಿ ಪ್ರತಿಭಟನೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಧ್ಯಪ್ರವೇಶಿಸಿ, ಮಾಜಿ ಶಾಸಕರಿಗೂ ಅವಕಾಶ ಇದೆ ಎಂದು ಪಕ್ಷದ ಕಾರ್ಯಕರ್ತರನ್ನು ಸಮಾಧಾನಪಡಿಸಿದರು.

    ರೈತರ ಆಕ್ರೋಶ

    ಸಭೆಗೆ ತಮಗೂ ಪ್ರವೇಶ ನೀಡಬೇಕೆಂದು ಆಗ್ರಹಿಸಿ ನವಲಗುಂದ ತಾಲೂಕಿನ ಹಾಗೂ ಗದಗ ಜಿಲ್ಲೆ ರೈತರು, ಮಹದಾಯಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು. ಸಭೆ ಆರಂಭಕ್ಕೆ ಪೂರ್ವ ರ್ಸಟ್ ಹೌಸ್ ಮುಂಭಾಗದಲ್ಲಿ ಪೊಲೀಸ್ ಬಂದೋಬಸ್ತ್ ಹಾಕಿದ್ದನ್ನು ಭೇದಿಸಿ ಒಳಗೆ ತೆರಳಲು ರೈತರು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು.

    ‘ಇದು ಜನಪ್ರತಿನಿಧಿಗಳ ಸಭೆ. ರೈತರು, ಹೋರಾಟಗಾರರಿಗೆ ಆಹ್ವಾನ ಇರುವುದಿಲ್ಲ. ಸಭೆ ಮುಗಿದ ಬಳಿಕ ತಮಗೆ ವಿಷಯ ತಿಳಿಸಲಾಗುವುದು’ ಎಂದು ವಿಪ ಸದಸ್ಯ ಬಸವರಾಜ ಹೊರಟ್ಟಿ ಹಾಗೂ ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಪ್ರತಿಭಟನಾಕಾರರ ಮನವೊಲಿಸಿದರು. ಬಳಿಕ ಹೊರಗಡೆ ಮಹದಾಯಿ ನೀರು ಬೇಕು, ನ್ಯಾಯ ಬೇಕು ಎಂದು ಪ್ರತಿಭಟನೆ ನಡೆಸಿದರು. ಮಾಧ್ಯಮದವರನ್ನು ಸಭೆಯಿಂದ ಹೊರಗಿಡಲಾಗಿತ್ತು.

    ಸಭೆಯ ಬಳಿಕ ರೈತರು ಹಾಗೂ ಮಹದಾಯಿ ಹೋರಾಟಗಾರರನ್ನು ಭೇಟಿ ಮಾಡಿದ ಜನಪ್ರತಿನಿಧಿಗಳು, ಮಹದಾಯಿ ಸಮಸ್ಯೆ ಬಗೆಹರಿಸಲು ನಾವೆಲ್ಲ ಸೇರಿ ಪಕ್ಷಾತೀತವಾಗಿ ಪ್ರಯತ್ನ ಮಾಡುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ತಿಳಿಸಿದರು. ‘ಪ್ರಧಾನಿ ಮೋದಿ ಅವರ ಮೇಲೆ ಒತ್ತಡ ಹೇರುವ ಕೆಲಸ ಮಾಡಿ. ಜೋಶಿ ಅವರೇ ಅದು ನಿಮ್ಮಿಂದ ಸಾಧ್ಯ’ ಎಂದು ರೈತರೊಬ್ಬರು ಒತ್ತಾಯಿಸಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts