ಪಕ್ಷಾಂತರ ಪರ್ವ ಆರಂಭ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಇನ್ನೂ ನಾಲ್ಕು ತಿಂಗಳು ಬಾಕಿ ಇರುವಾಗ ಪಕ್ಷಾಂತರ ಪರ್ವ ಆರಂಭವಾಗಿದ್ದು, ಮೂರೂ ಪಕ್ಷಗಳಿಂದ ಮುಖಂಡರು ಜಿಗಿಯಲು ತಯಾರಿ ನಡೆಸುತ್ತಿದ್ದಾರೆ.

ಮಾಸಾಂತ್ಯದೊಳಗೆ 10ಕ್ಕೂ ಅಧಿಕ ಶಾಸಕರು ಹಾಲಿ ಪಕ್ಷ ಬದಲಿಸಲಿದ್ದು, ಹೋಗುತ್ತಿರುವ ಪಕ್ಷದಲ್ಲಿ ಟಿಕೆಟ್ ಖಾತ್ರಿಪಡಿಸಿಕೊಂಡು ಹೆಜ್ಜೆ ಇಡುತ್ತಿದ್ದಾರೆ. ಮಾಜಿ ಸಚಿವರಾದ ವಿಜಯಶಂಕರ್, ಆನಂದ ಅಸ್ನೋಟಿಕರ್, ಶಾಸಕರಾದ ಆನಂದ್ ಸಿಂಗ್, ನಾಗೇಂದ್ರ, ಮಾನಪ್ಪ ವಜ್ಜಲ್ ಹಾಗೂ ಶಿವರಾಜ್ ಪಾಟೀಲ್ ಪಕ್ಷ ತೊರೆಯುವುದು ಬಹುತೇಕ ಖಚಿತವಾಗಿದೆ.

ಇವರಲ್ಲದೆ ಹೈ.ಕ ಭಾಗದ ಇನ್ನೂ ನಾಲ್ವರು ಶಾಸಕರು ಕಾಂಗ್ರೆಸ್ ತೊರೆಯಲು ಸಿದ್ಧರಿದ್ದಾರೆ. ಮೋದಿ ರಾಜ್ಯ ಭೇಟಿ ಹಾಗೂ ಮುಂದಿನ ಷಾ ಭೇಟಿ ಬಳಿಕ ಈ ಕುರಿತು ಅಂತಿಮ ನಿರ್ಧಾರವಾಗಲಿದೆ.

ಕೈಗೆ ಕಮಲ ನಾಯಕರು: ಕಾರವಾರದ ಮಾಜಿ ಮಾಜಿ ಸಚಿವ ಆನಂದ ಅಸ್ನೋಟಿಕರ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿದ್ದರು. ಕೆಲಕಾಲ ಜೆಡಿಎಸ್​ನಲ್ಲೂ ತಂಗಿದ್ದರು. ಈಗ ಮತ್ತೆ ಕುಮಾರಸ್ವಾಮಿ ಜತೆಗಿನ ಸಭೆ ಬಳಿಕ ತೆನೆಹೊರಲು ನಿರ್ಧರಿಸಿದ್ದಾರೆ. ಇದು ಜೆಡಿಎಸ್​ಗೆ ಇನ್ನೊಂದು ಸೀಟಿನ ನಿರೀಕ್ಷೆ ಹುಟ್ಟಿಸಲು ಕಾರಣವಾಗಿದೆ. ಅಸ್ನೋಟಿಕರ್ ಜತೆಗೆ ಬಿಜೆಪಿ ತೊರೆಯಲು ಇನ್ನೂ ಮೂವರು ಮುಖಂಡರು ಮುಂದಾಗಿದ್ದಾರೆ. ಮೈಸೂರು ಬಿಜೆಪಿ ನಾಯಕರ ರಾಜಕೀಯದಿಂದ ಬೇಸತ್ತು ಸಿದ್ದರಾಮಯ್ಯ ಪಾಳೆಯ ಸೇರಲು ಮಾಜಿ ಸಚಿವ ವಿಜಯಶಂಕರ್ ನಿರ್ಧರಿಸಿದ್ದಾರೆ. ಬಳ್ಳಾರಿ ರಾಜಕೀಯದಲ್ಲಿ ಬಿಜೆಪಿಗೆ ಬಲವಾಗಿದ್ದ ಆನಂದ ಸಿಂಗ್ ಹಾಗೂ ನಾಗೇಂದ್ರ ಬಿಜೆಪಿಗೆ ಕೈ ಕೊಡುವುದು ಬಹುತೇಕ ಖಾತ್ರಿಯಾಗಿದೆ.ಇವರಿಬ್ಬರೂ, ರಾಹುಲ್ ಗಾಂಧಿ ರಾಜ್ಯ ಭೇಟಿ ವೇಳೆ ಕೈ ತೆಕ್ಕೆಗೆ ಹೋಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಬಿಜೆಪಿಗೆ ತೆನೆ ಶಾಸಕರು: ಜೆಡಿಎಸ್ ಈಗಾಗಲೇ 7 ಶಾಸಕರನ್ನು ಕಳೆದುಕೊಂಡಿದೆ. ಈಗ ಮತ್ತಿಬ್ಬರು ಹಾಲಿ ಶಾಸಕರು ಬಿಜೆಪಿ ಸೇರಲು ಮುಂದಾಗಿದ್ದಾರೆ. ಮಾನಪ್ಪ ವಜ್ಜಲ್ ಹಾಗೂ ಶಿವರಾಜ್ ಪಾಟೀಲ್ ಜೆಡಿಎಸ್ ಕಾರ್ಯಕ್ರಮಗಳಿಂದ ದೂರ ಸರಿದಿದ್ದು, ಶೀಘ್ರವೇ ಬಿಜೆಪಿ ಪಾಲಾಗುತ್ತಿದ್ದಾರೆ.


ಜಾತಕ ನೋಡಿ ದಿನ ನಿಗದಿ

ಕಾರವಾರ: ಆನಂದ ಅಸ್ನೋಟಿಕರ್ ತಮ್ಮ ಕುಂಡಲಿ ಫಲದ ಆಧಾರದ ಮೇಲೆ ಜೆಡಿಎಸ್ ಸೇರಲು ಸಮಯ ನಿಗದಿ ಮಾಡಿಕೊಂಡಿದ್ದಾರೆ. ನಮ್ಮ ಕುಟುಂಬ ಪುರೋಹಿತರು ಮೀನ ಲಗ್ನ, ಗುರು ಅನುಗ್ರಹ ರಾಶಿಯಲ್ಲಿ ಜ.15ರಂದು ಬೆಳಗ್ಗೆ 11.30ರಿಂದ 12.15ರ ನಡುವಿನ ಅವಧಿಯಲ್ಲಿ ಪಕ್ಷ ಸೇರುವಂತೆ ಸೂಚಿಸಿದ್ದಾರೆ ಎಂದು ಆನಂದ ಅಸ್ನೋಟಿಕರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

19ಕ್ಕೆ ಕಾಂಗ್ರೆಸ್ ಸೇರ್ಪಡೆ

ಮೈಸೂರು: ಮಾಜಿ ಸಚಿವ ಸಿ.ಎಚ್. ವಿಜಯ ಶಂಕರ್ ಜ.19ರಂದು ಕಾಂಗ್ರೆಸ್​ಗೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ. ಶುಕ್ರವಾರ ನಗರದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ವಿಜಯಶಂಕರ್ ಸುದ್ದಿಗಾರರ ಮುಂದೆ ಈ ವಿಷಯ ಪ್ರಕಟಿಸಿದರು.

Leave a Reply

Your email address will not be published. Required fields are marked *