ಪಕ್ಷಭೇದ ಮರೆತರೆ ಪ್ರಗತಿ

ನೆಲಮಂಗಲ: ಜನಪ್ರತಿನಿಧಿಗಳು ಪಕ್ಷಭೇದ ಮರೆತು ಸಹಕಾರ ನೀಡಿದರೆ ಗ್ರಾಮಗಳ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ. ಇದಕ್ಕೆ ಉದಾಹರಣೆ ಗ್ರಾಪಂಗೆ ದೊರೆತ ರಾಷ್ಟ್ರಮಟ್ಟದ ಗಾಂಧಿಗ್ರಾಮ ಪ್ರಶಸ್ತಿಯೇ ಸಾಕ್ಷಿ ಎಂದು ಬೂದಿಹಾಲ್ ಗ್ರಾಪಂ ಅಧ್ಯಕ್ಷ ಎಂ.ಕೆ.ನಾಗರಾಜು ಅಭಿಪ್ರಾಯಪಟ್ಟರು.

ತಾಲೂಕಿನ ಬೂದಿಹಾಲ್ ಗ್ರಾಪಂ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಮಾತನಾಡಿದರು. ಸರ್ಕಾರ ನೀಡುತ್ತಿರುವ ಅನುದಾನದ ಜತೆಗೆ ಸರ್ವಸದಸ್ಯರ ಸಹಕಾರದಿಂದ ನಿಯಮಾನುಸಾರ ಪಂಚಾಯಿತಿ ವ್ಯಾಪ್ತಿಯ ಕಾರ್ಖಾನೆಗಳಿಂದ ಪೂರ್ಣಪ್ರಮಾಣದ ತೆರಿಗೆ ಸಂಗ್ರಹಿಸುತ್ತಿದ್ದು, ಪ್ರತಿ ಗ್ರಾಮಗಳಲ್ಲಿ ನಿರೀಕ್ಷಿತ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಹೇಳಿದರು.

ಜನರ ಆರೋಗ್ಯ ದೃಷ್ಟಿಯಿಂದ ಸಂಸದರ ನಿಧಿ, ಕಾರ್ಖಾನೆಗಳ ಸಿಎಸ್​ಆರ್ ಅನುದಾನ, ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಸಹಯೋಗದಲ್ಲಿ ಪಂಚಾಯಿತಿ ವ್ಯಾಪ್ತಿಯ 16 ಗ್ರಾಮಗಳ ಪೈಕಿ ಈಗಾಗಲೇ 9 ಗ್ರಾಮಗಳಲ್ಲಿ ಶುದ್ಧಕುಡಿಯುವ ನೀರಿನ ಘಟಕ ತೆರೆಯಲಾಗಿದೆ. ಉಳಿದ ಗ್ರಾಮಗಳಿಗೂ ನೀರಿನ ಘಟಕ ಸ್ಥಾಪಿಸಲು ಕಾರ್ಯಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಲಾಗಿದೆ. ಅರಣ್ಯ ಇಲಾಖೆ ವಿವಿಧ ಯೋಜನೆಯಡಿ ಸಾವಿರಾರು ಗಿಡ ನೆಟ್ಟು ಪೋಷಿಸಲಾಗುತ್ತಿದ್ದು, ರಾಜ್ಯದಲ್ಲೇ ಮಾದರಿ ಗ್ರಾಪಂಆಗಿ ಪರಿವರ್ತನೆಯಾಗಲಿದೆ. ಈ ಬಾರಿಯೂ ಗಾಂಧಿಗ್ರಾಮ ಪ್ರಶಸ್ತಿ ಬರುವ ನಂಬಿಕೆ ಇದೆ ಎಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪದ್ಮನಾಭ್, ಕಳೆದ ವರ್ಷ ಕೈಗೊಂಡ ಅಭಿವೃದ್ಧಿ ಕಾರ್ಯಗಳ ವಿವರದ ಜತೆಗೆ ಪ್ರಗತಿಯಲ್ಲಿರುವ ಕಾರ್ಯಯೋಜನೆಗಳ ಮಾಹಿತಿ ನೀಡಿದರು.

ವಸತಿ ಯೋಜನೆಯಡಿ ಮನೆ ನಿರ್ವಣಕ್ಕೆ ಆಯ್ಕೆಯಾಗಿರುವ 61 ಫಲಾನುಭವಿಗಳ ಪೈಕಿ ಕೆಲವರಷ್ಟೇ ಮನೆ ನಿರ್ವಿುಸಿಕೊಂಡಿದ್ದು, ಉಳಿದ ಫಲಾನುಭವಿಗಳು ಈ ಯೋಜನೆ ಲಾಭ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ 20 ವರ್ಷ ಈ ಯೋಜನೆಯಿಂದ ವಂಚಿತರಾಗುತ್ತೀರಿ ಎಂದು ವಸತಿ ಯೋಜನೆ ನೋಡಲ್ ಅಧಿಕಾರಿ ಸಿದ್ದಮುನಿಯಪ್ಪ ಎಚ್ಚರಿಸಿದರು.

ಪಂಚಾಯಿತಿಯಿಂದ ಅಂಗವಿಕಲರಿಗೆ ಟ್ರೈಸಿಕಲ್, ಆಶಾ ಕಾರ್ಯಕರ್ತರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು. ಶಿಕ್ಷಣ, ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸೌಲಭ್ಯ ಮಾಹಿತಿ ನೀಡಿದರು.

ತಹಸೀಲ್ದಾರ್ ಕೆ.ಎನ್.ರಾಜಶೇಖರ್, ಪಂಚಾಯಿತಿ ನೋಡಲ್ ಅಧಿಕಾರಿ ಕೆ.ಬಿ.ಪ್ರಕಾಶ್, ಗ್ರಾಪಂ ಮಾಜಿ ಅಧ್ಯಕ್ಷ ಕರಿವರದಯ್ಯ, ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ನರಸಿಂಹರಾಜು, ವಿವೇಕಾನಂದ ಯುವ ಮೂಮೆಂಟ್ ಮುಖ್ಯಸ್ಥ ಪಾಷಾ, ಗ್ರಾಪಂ ಸದಸ್ಯರಾದ ಮಂಜುನಾಥ್, ಮಂಜಮ್ಮ ಮಾರೇಗೌಡ, ಮಂಜುಳಾಯಲ್ಲಪ್ಪ, ಮುನಿರಾಜು, ಶ್ರೀನಿವಾಸ್, ಭಾಗ್ಯಮ್ಮ ರಮೇಶ್, ಮೂರ್ತಿ, ರವಿ, ನರಸಿಂಹಮೂರ್ತಿ, ಮಾಜಿ ಅಧ್ಯಕ್ಷ ಶಶಿಧರ್, ಮಾಜಿ ಚೇರ್ಮನ್ ಕರಿವರದಯ್ಯ ಮತ್ತಿತರರು ಇದ್ದರು.