ಪಕ್ಷದಿಂದ ಹೊರಹಾಕಲು ಡಾ.ಜಾಧವ್ ಸಾಮಾನ್ಯರಲ್ಲ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ್ ಅವರನ್ನು ಪಕ್ಷದಿಂದ ಯಾರೂ ಹೊರಹಾಕುವ ಪ್ರಯತ್ನ ನಡೆಸಿಲ್ಲ. ಅದು ಸಾಧ್ಯವೂ ಇಲ್ಲ. ಹೊರಹಾಕಲು ಅವರೇನೂ ಸಾಮಾನ್ಯರಲ್ಲ. ಲಕ್ಷಾಂತರ ಮತದಾರರಿಂದ ಗೆದ್ದು ಬಂದಿರುವ ಶಾಸಕರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ತಮ್ಮ ಕಚೇರಿಯಲ್ಲಿ ಶನಿವಾರ ಸಾರ್ವಜನಿಕರ ಅಹವಾಲು ಆಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, ಅವರನ್ನು ಪಕ್ಷದಿಂದ ಹೊರಹಾಕುವುದು ಹೇಗೆ ಎಂದು ಮರುಪ್ರಶ್ನೆ ಹಾಕಿದರು. ಅವರು ಸಾಮಾನ್ಯ ಕಾರ್ಯಕರ್ತರೇ? ಲಕ್ಷಾಂತರ ಮತದಾರರಿಂದ ಗೆದ್ದು ಬಂದಿರುವವರು. ಹಿಂದೆ ಸಂಸದೀಯ ಕಾರ್ಯದರ್ಶಿ ಆಗಿದ್ದವರು. ಈಗ ಸಂಪುಟ ದರ್ಜೆ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ ಎಂದರು.

ಕೆಲ ಬೆಳವಣಿಗೆಗಳಿಂದ ಅಸಮಾಧಾನಗೊಂಡಿರುವ ಡಾ.ಜಾಧವ್ ಅವರನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಇತರರು ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ. ನಾನು ಸಹ ಮೊನ್ನೆ ಅವರ ತಂದೆ ಪುಣ್ಯಸ್ಮರಣೆ ದಿನದಂದು ಅವರನ್ನು ಸಂಪರ್ಕಿಸಲು ಯತ್ನಿಸಿದ್ದೆ. ಆದರೆ ಸಾಧ್ಯವಾಗಲಿಲ್ಲ, ಅವರ ಸಹೋದರರ ಜತೆ ಮಾತನಾಡಿದ್ದೇನೆ. ಡಾ.ಜಾಧವ್ ಬೇಕಾದರೆ ಪಕ್ಷ ಬಿಟ್ಟು ಹೋಗಲಿ ಎಂದು ನಾನು ಎಲ್ಲೂ ಹೇಳಿಲ್ಲ. ಯಾವ ಕಾಲಕ್ಕೂ ಮಾಧ್ಯಮದವರನ್ನು ನಿಂದಿಸಿಲ್ಲ ಎಂದು ಪ್ರಿಯಾಂಕ್ ಸ್ಪಷ್ಟಪಡಿಸಿದರು.

ಸಮ್ಮಿಶ್ರ ಸರ್ಕಾರದಲ್ಲಿ ಕೆಲವು ಅಭಿವೃದ್ಧಿ ಕೆಲಸ ತಡವಾಗಿರಬಹುದು. ಸರ್ಕಾರ ಅಧಿಕಾರಕ್ಕೆ ಬಂದು ಆರೇಳು ತಿಂಗಳಾಗಿದೆ. ಆದರೆ ಶಾಸಕರು ಹೇಳಿರುವ ಎಲ್ಲ ಕೆಲಸಗಳಿಗೆ ಸ್ಪಂದಿಸುವ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡಿಕೊಂಡು ಬರುತ್ತಿದ್ದೇನೆ. ಉಸ್ತುವಾರಿ ಸಚಿವ ಅಂದರೆ ಸಕರ್ಾರ ಮತ್ತು ಜಿಲ್ಲಾಡಳಿತ ನಡುವಿನ ಸಂಪರ್ಕ ಕೊಂಡಿ ಇದ್ದಂತೆ. ಅದನ್ನು ನಿಭಾಯಿಸುತ್ತಿದ್ದೇನೆ. ಇದುವರೆಗೆ ಯಾವುದೇ ಶಾಸಕರ ಕ್ಷೇತ್ರದಲ್ಲಿ ತಾವು ಹಸ್ತಕ್ಷೇಪ ಮಾಡಿಲ್ಲ ಎಂದು ಹೇಳಿದರು.

ಡಾ.ಉಮೇಶ ಜಾಧವ್ ಹೇಳಿರುವಂತೆ ಸಕ್ಕರೆ ಕಾರ್ಖಾನೆ, ಏತ ನೀರಾವರಿ, ಪಾಲಿಟೆಕ್ನಿಕ್ ಕಾಲೇಜುಗಳೆಲ್ಲವೂ ಬೃಹತ್ ಯೋಜನೆಗಳು. ಸ್ವಲ್ಪ ಸಮಯ ಬೇಕಾಗುತ್ತದೆ, ಸಹಕರಿಸಬೇಕು. ಅವರು ಕ್ಷೇತ್ರಕ್ಕೆ ಕರೆದರೆ ಖುದ್ದು ಹೋಗುತ್ತೇನೆ ಎಂದರು.

ಜಿಪಂ ಸದಸ್ಯರಾದ ಶಿವಾನಂದ ಪಾಟೀಲ್, ಸಂತೋಷ ಪಾಟೀಲ್ ದಣ್ಣೂರ, ದಿಲೀಪ ಪಾಟೀಲ್, ಮುಖಂಡರಾದ ಮಾಪಣ್ಣ ಗಂಜಗೇರಿ, ಭೀಮಣ್ಣ ಸಾಲಿ, ಡಾ.ಕಿರಣ ದೇಶಮುಖ, ಮಜರ್ ಅಲಂಖಾನ್, ಪ್ರವೀಣ ಪಾಟೀಲ್ ಹರವಾಳ ಇತರರಿದ್ದರು.

ಶಾಸಕರು ಕರೆದಾಗ ಅವರ ಕ್ಷೇತ್ರಕ್ಕೆ ಹೋಗಿದ್ದೇನೆ. ಹೋಗುವ ಮುಂಚೆ ಅವರೊಂದಿಗೆ ಮಾತನಾಡಿ ಶಿಷ್ಟಾಚಾರ ಪಾಲಿಸಿದ್ದೇನೆ. ಹಿಂದೆ ಡಾ.ಉಮೇಶ ಜಾಧವ್ ಗಡಿ ಜಾಗ ಒತ್ತುವರಿ ಬಗ್ಗೆ ಹೇಳಿದ್ದರು. ಕೂಡಲೇ ನಾನು ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ತೆಲಂಗಾಣ ಮುಖ್ಯ ಕಾರ್ಯದರ್ಶಿ ಜತೆಗೆ ಮಾತನಾಡಿ ಪರಿಹರಿಸಿದ್ದೇನೆ. ಅವರು ಇಂತದ್ದೇ ಕೆಲಸ ಎಂದು ಹೇಳಿದರೆ, ಅದನ್ನು ಮಾಡಿಸಿಕೊಡುತ್ತೇನೆ.
| ಪ್ರಿಯಾಂಕ್ ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವ